7

ಇವತ್ತಿನ ರಾಜಕಾರಣದ ಸಂಕಟ ಮತ್ತು ಕಾಂಗ್ರೆಸ್‌

Published:
Updated:
ಸಾಂದರ್ಭಿಕ ಚಿತ್ರ

ಕರ್ನಾಟಕದ ವಿಧಾನಸಭಾ ಚುನಾವಣೆ ನಡೆದ ರೀತಿ, ಅದರ ಫಲಿತಾಂಶ ಮತ್ತು ಆ ಫಲಿತಾಂಶವನ್ನು ಇಲ್ಲಿಯ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ನಿರ್ವಹಿಸಿದ ಕ್ರಮಗಳು ಪ್ರಜಾಸತ್ತೆಯ ಬಗ್ಗೆ, ಪ್ರಜಾತಂತ್ರದ ಬಹುಮುಖ್ಯ ಆಯಾಮವಾದ ಪ್ರಾತಿನಿಧ್ಯದ ಬಗ್ಗೆ ಹಾಗೂ ಮೌಲಿಕ ರಾಜಕಾರಣದ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿವೆ. ಈ ಪ್ರಶ್ನೆಗಳನ್ನು ಬಿಡಿಬಿಡಿಯಾಗಿ ಎತ್ತುವುದೂ ಒಂದೇ ಅಥವಾ ಈ ಎಲ್ಲ ಪ್ರಶ್ನೆಗಳನ್ನು ಒಂದು ಕಟ್ಟಿನಲ್ಲಿ ಹಿಡಿದು ಕಾಂಗ್ರೆಸ್ಸಿಗೇನಾಗಿದೆ...? ಎಂದು ಕೇಳುವುದೂ ಒಂದೇ.

ಕಾಂಗ್ರೆಸ್ಸೇ ಯಾಕೆ? ರಾಜಕಾರಣದ ನೈತಿಕ ಪತನಕ್ಕೆ ಇತರೆ ರಾಜಕೀಯ ಪಕ್ಷಗಳೂ ಕಾರಣವಾಗಿಲ್ಲವೇ ಎಂದು ನಮ್ಮನ್ನು ಯಾರಾದರೂ ಕೇಳಿಯಾರು.

ನಿಜ. ಧರ್ಮ- ಜಾತಿ- ಪಂಥ ಇತ್ಯಾದಿ ಹಿತಾಸಕ್ತಿಗಳ ಹಣಾಹಣಿಯಾಗಿರುವ ಭಾರತದ ರಾಜಕಾರಣದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ವಿರೂಪಗೊಂಡಿವೆ. ಯಾವ ಪಕ್ಷವೂ ತನ್ನ ತಾತ್ತ್ವಿಕ ನೆಲೆಗಟ್ಟುಗಳ ಸ್ಪಷ್ಟತೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಸೈದ್ಧಾಂತಿಕ ನಿಷ್ಠೆ ಕೇವಲ ಸಾರ್ವಜನಿಕ ಉಪಭೋಗಕ್ಕಷ್ಟೇ ಎಂದು ಎಲ್ಲ ಪಕ್ಷಗಳೂ ತಿಳಿದುಕೊಂಡಂತಿವೆ. ಆದುದರಿಂದ ಕಾಂಗ್ರೆಸ್‌ನ ಮೇಲೇಯೇ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದ ಎಲ್ಲ ಅಪಚಾರಗಳ ಹೊಣೆ ಹೊರಿಸಿ ಕಟಕಟೆಯಲ್ಲಿ ನಿಲ್ಲಿಸುವುದು ಅಷ್ಟೇನೂ ಸರಿಯಾದ ನಿಲುವಲ್ಲ. ಆದರೆ, ಈಗಿನ ರಾಷ್ಟ್ರೀಯ ಕಾಂಗ್ರೆಸ್ ಒಂದು ಕಾಲದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಿದ್ದ ಕಾಂಗ್ರೆಸ್ ಎಂಬ ಜನಸಾಮಾನ್ಯರ ವೇದಿಕೆಯ ಜೊತೆಗೆ ಸಂಬಂಧವನ್ನು ಹೊಂದಿದ್ದ ಪಕ್ಷವಾಗಿದೆ. ಸ್ವಾತಂತ್ರ್ಯ ಹೋರಾಟದ ಕಷ್ಟ- ಕಾರ್ಪಣ್ಯಗಳನ್ನು ಕಾಂಗ್ರೆಸ್ ಈಗಲೂ ಮೆಲುಕು ಹಾಕುತ್ತದೆ. ತನ್ನ ರಾಜಕೀಯ ವಿರೋಧಿಯಾದ ಬಿಜೆಪಿಯನ್ನು ಕಿಚಾಯಿಸುವಾಗಲೂ ‘ಸ್ವಾತಂತ್ರ್ಯ ಹೋರಾಟದಲ್ಲಿ ನಿಮ್ಮ ಮನೆಯ ಒಂದು ನಾಯಿಯಾದರೂ ಸತ್ತಿದೆಯೇ...?’ ಎಂಬುದನ್ನು ಅದು ಕೇಳುತ್ತಲೇ ಬಂದಿದೆ. ಇಷ್ಟು ಮಾತ್ರವಲ್ಲದೆ ಕಾಂಗ್ರೆಸ್, ನಮ್ಮ ದೇಶ ಒಂದು ಪ್ರಜಾತಾಂತ್ರಿಕ ಸೆಕ್ಯುಲರ್ ವ್ಯವಸ್ಥೆಯಾಗಿ ರೂಪುಗೊಂಡಿರುವುದಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿರುವ ರಾಜಕೀಯ ಪಕ್ಷವೂ ಆಗಿದೆ. ಇದರ ಅನೇಕ ನಾಯಕರು ಸ್ವಾತಂತ್ರ್ಯಪೂರ್ವದಲ್ಲೇ ನಾವು ಇಂದು ಯಾವುದನ್ನು ಪ್ರಜಾಸತ್ತಾತ್ಮಕವಾದ ಮೌಲ್ಯಗಳೆಂದು ತಿಳಿದಿದ್ದೇವೋ ಅವನ್ನು ಪ್ರತಿನಿಧಿಸಿದವರಾಗಿದ್ದಾರೆ.

ಸ್ವಾತಂತ್ರ್ಯೋತ್ತರದ ಆರಂಭದ ಎರಡು ದಶಕಗಳಲ್ಲೂ ಕಾಂಗ್ರೆಸ್‌ನ ಧೀಮಂತ ನಾಯಕರು ತಮ್ಮ ನಾಯಕತ್ವದ ದಿನಗಳಲ್ಲಿ ಸಾಂವಿಧಾನಿಕವಾದ ಸಂಸ್ಥೆಗಳ, ಪ್ರಜಾಸತ್ತಾತ್ಮಕವಾದ ರಚನೆಗಳ ಘನತೆಗೆ ಚ್ಯುತಿ ಬರದಂತೆ ನಡೆದುಕೊಂಡವರು. ಪ್ರಜಾತಂತ್ರದ ಮೌಲ್ಯಗಳು ಫಳಫಳ ಹೊಳೆದದ್ದು ಈ ನಾಯಕರ ಕಾಲದಲ್ಲೇ. ಇಂದು ಶಾಲೆಯಲ್ಲಿ ಸಣ್ಣ ಹುಡುಗರು ಚಡ್ಡಿಯಲ್ಲಿ ಉಚ್ಚೆ ಹೊಯ್ದುಕೊಂಡದ್ದಕ್ಕೂ ‘ನೆಹರೂ ಕಾರಣ’ ‘ಕಾಂಗ್ರೆಸ್ಸು ಕಾರಣ’ ಎಂದು ಬೊಬ್ಬಿರಿಯುವ ನಮ್ಮ ಕಾಲದ ಮದೋನ್ಮತ್ತ ರಾಜಕಾರಣಿಗಳಿಗೆ ಸ್ವತಂತ್ರ ಭಾರತದ ಆರಂಭದ ದಿನಗಳಲ್ಲಿ ಪ್ರಜಾತಂತ್ರದ ಮೌಲ್ಯಗಳು ಆಳವಾಗಿ ಬೇರೂರುವುದಕ್ಕೆ ಕಾಂಗ್ರೆಸ್ ಎಷ್ಟು ಕಾರಣ ಎಂಬ ತಿಳಿವಳಿಕೆಯೇ ಇಲ್ಲ. ಆ ತಿಳಿವಳಿಕೆ ಇಂದಿನ ಅನೇಕ ಕಾಂಗ್ರೆಸಿಗರಿಗೂ ಇಲ್ಲ ಬಿಡಿ.

ಅಂತಹ ಘನ ರಾಜಕೀಯ ಸಂಸ್ಕೃತಿಯ ಕಾಂಗ್ರೆಸ್ ಇಂದು ಎದುರಿಸುತ್ತಿರುವ ಸಂಕಟ ಒಂದರ್ಥದಲ್ಲಿ ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯ ಸಂಕಟವೂ ಹೌದು. ಈ ಸಂಕಟಗಳನ್ನು ಅರ್ಥ ಮಾಡಿಕೊಳ್ಳುವುದೆಂದರೆ ಭಾರತೀಯ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿರುವ ಬಿರುಕುಗಳನ್ನು ವಿವರಿಸುವುದೇ ಆಗಿದೆ.

ಇದನ್ನು ಗುರುತಿಸುವುದಕ್ಕಾಗಿ ಕರ್ನಾಟಕದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಫಲಿತಾಂಶ ಬಂದ ನಂತರದಲ್ಲಿ ಕಾಂಗ್ರೆಸ್ ತನ್ನನ್ನು ತಾನು ನಿರ್ವಹಿಸಿಕೊಂಡ ಬಗೆಯನ್ನು ಪ್ರಸ್ತಾಪಿಸುತ್ತ ಕೆಲವು ನಿದರ್ಶನಗಳನ್ನು ಉಲ್ಲೇಖಿಸಿ ಅದನ್ನು ಕಟುವಾಗಿ ವಿಮರ್ಶಿಸುವುದು ಮತ್ತು ಆ ಮೂಲಕ ಭಾರತದ ರಾಜಕಾರಣದ ಸಂಕಟಗಳನ್ನು ಅರಿಯುವ ಪ್ರಯತ್ನವನ್ನು ಮಾಡುವುದು ಈ ಲೇಖನದ ಉದ್ದೇಶ.

ಈ ಬಾರಿಯ ಕರ್ನಾಟಕದ ಚುನಾವಣೆಯಲ್ಲಿ ಜನರು ಬಹಳ ಸ್ಪಷ್ಟವಾಗಿ ಛಿದ್ರ ಜನಾದೇಶವನ್ನು ನೀಡಿದ್ದಾರೆ. ಶತಮಾನಗಳ ಹೋರಾಟದ ಇತಿಹಾಸದ ವರ್ಣತಂತುವನ್ನು ಹೊಂದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಂಗ್ರೆಸ್ ಈ ಫಲಿತಾಂಶ ಬಂದ ನಂತರದಲ್ಲಿ ಹೆಚ್ಚು ಜವಾಬ್ದಾರಿ ಮತ್ತು ಹೆಚ್ಚು ಘನತೆಯಿಂದ ತನ್ನನ್ನು ತಾನು ನಿರ್ವಹಿಸಿಕೊಳ್ಳಬೇಕಿತ್ತು. ಆದರೆ ಅದು ಹಾಗೆ ಮಾಡಲಿಲ್ಲ.

ಅಧಿಕಾರ ರಾಜಕಾರಣಕ್ಕೆ ಬೇಕಾದ ತಂತ್ರಗಾರಿಕೆಗಳನ್ನು ನಡೆಸಲು ರಾಜಕೀಯ ಪಕ್ಷಗಳಿಗೆ ಸ್ವಾತಂತ್ರ್ಯ ಇದೆ. ಭಾರತದ ಸಂವಿಧಾನವೂ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಪಕ್ಷಕ್ಕೆ ಅಧಿಕಾರ ಸಿಕ್ಕರೆ ಸಾಲದು, ವೈಯಕ್ತಿಕವಾಗಿ ತನಗೂ ಅಧಿಕಾರ ಬೇಕು ಎಂದು ಕಾಂಗ್ರೆಸ್‌ನ ಕೆಲವು ನಾಯಕರು ಪಡುವ ಪಡಿಪಾಟಲುಗಳು, ಮಾಡುವ ಮಸಲತ್ತುಗಳು ಎಷ್ಟು ಶೋಚನೀಯವೂ ಅಸಹನೀಯವೂ ಆಗಿವೆಯೆಂದರೆ ಕಾಂಗ್ರೆಸ್ ಪ್ರತಿಪಾದಿಸುವ ಸಾಮಾಜಿಕ ನ್ಯಾಯ ಇತ್ಯಾದಿ ಪರಿಕಲ್ಪನಾತ್ಮಕ ಮಾತುಗಳು ಸಾರ್ವಜನಿಕವಾಗಿ ಜುಗುಪ್ಸೆ ಹುಟ್ಟಿಸುವಂತಿವೆ.

ಮೊದಲನೆಯದಾಗಿ ಕಾಂಗ್ರೆಸ್‌ನ ಕೆಲವು ಹಿರಿಯ ಮುಖಂಡರು ಸಚಿವರಾಗಲು ಅಥವಾ ತಮಗೆ ಬೇಕಾದ ಖಾತೆ ಪಡೆಯಲು ಪ್ರಯತ್ನ ಪಟ್ಟ ಬಗೆಯನ್ನು ನೋಡಿ. ಇವರು ನಿಜಕ್ಕೂ ನಾಯಕರೇ ಆಗಿರುತ್ತಿದ್ದರೆ ‘ತಾವೇ ಸಚಿವರಾಗಿದ್ದ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ. ಹಾಗಾಗಿ ಈ ಸಮ್ಮಿಶ್ರ ಸರಕಾರದಲ್ಲಿ ನಮ್ಮ ಪಕ್ಷದ ಹೊಸಬರಿಗೆ ಅವಕಾಶ ಸಿಗಲಿ’ ಎಂದು ಉಳಿದವರಿಗೆ ಅನುವು ಮಾಡಿಕೊಡುತ್ತಿದ್ದರು. ಜೊತೆಗೆ ಲೆಕ್ಕಾಚಾರದ ಮೇಲೆ ನಿಂತಿರುವ ಸಮ್ಮಿಶ್ರ ಸರ್ಕಾರದ ಸೂಕ್ಷ್ಮ ನಡಿಗೆಗೆ ಬೆಂಗಾವಲಾಗಿರುತ್ತಿದ್ದರು. ಆದರೆ ಅವರು ಯಾವ ದುರವಸ್ಥೆ ತಲುಪಿದ್ದಾರೆ ಎಂದರೆ ಒಂದು ವೇಳೆ ಇನ್ನು ಇಪ್ಪತ್ತು ವರ್ಷಗಳ ನಂತರ ಆಗಲೂ ಇದೇ ರೀತಿಯಲ್ಲಿ ಸಮ್ಮಿಶ್ರ ಸರ್ಕಾರ ಬಂದು, ಪ್ರಜ್ವಲ್ ರೇವಣ್ಣನಂತಹವರು ಮುಖ್ಯಮಂತ್ರಿಯಾದರೆ ಅಲ್ಲೂ ಕಾಂಗ್ರೆಸ್ಸಿನ ಈ ಅತೀ ಹಿರಿಯರು ಸಂಪುಟ ಸಚಿವರಾಗುವುದಕ್ಕೆ ಲಾಬಿ ಮಾಡುವುದನ್ನು ಕರ್ನಾಟಕದ ಜನತೆ ಕಣ್ದಣಿಯೆ ನೋಡಬಹುದಾಗಿದೆ. ಅಂದರೆ ‘ಶತಮಾನದ ಇತಿಹಾಸದ ಕಾಂಗ್ರೆಸ್ ಪಕ್ಷದ ಧುರೀಣರು ನಾವು’ ಎಂದು ಎದೆ ತಟ್ಟಿ ಹೇಳುವ ಈ ಹಿರಿಯ ಮುಖಂಡರು; ಯೋಗ್ಯ ನಾಯಕರಾಗಲು ದೀರ್ಘಾವಧಿ ಪ್ರಯತ್ನ ಪಡುವ ಭಗೀರಥರಾಗುವುದಕ್ಕಿಂತ, ತತ್ಕಾಲೀನ ಲಾಭದತ್ತ ಮುಖ ಮಾಡಿ ನಿಂತಿರುವ ಷೇರು ದಲ್ಲಾಳಿಗಳಾಗುವುದು ಹೆಚ್ಚು ಉಪಯುಕ್ತ ಎಂದು ಭಾವಿಸಿರುವ ಪುಢಾರಿಗಳಾಗಿದ್ದಾರೆ.

ಎರಡನೆಯದಾಗಿ ಎಂ.ಬಿ ಪಾಟೀಲರ ಪ್ರಕರಣವನ್ನೇ ನೋಡೋಣ. ಕರ್ನಾಟಕದಲ್ಲಿ ಚಾರಿತ್ರಿಕವಾಗಿ ಬಹಳ ಮಹತ್ವದ್ದಾದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರು ಅವರು. ಆ ಹೋರಾಟದ ಸರಿ- ತಪ್ಪುಗಳ ಪ್ರಶ್ನೆಯನ್ನು ನಾವಿಲ್ಲಿ ಎತ್ತುತ್ತಿಲ್ಲ. ಆದರೆ ಅಂತಹ ಪಾಟೀಲರು ಕೇವಲ ಒಂದು ಮಂತ್ರಿ ಸ್ಥಾನಕ್ಕಾಗಿ ಮಾಡುತ್ತಿರುವ ಹರಸಾಹಸಗಳನ್ನು ಗಮನಿಸಿದರೆ ಪ್ರತ್ಯೇಕ ಧರ್ಮದ ಹೋರಾಟದ ವಿಷಯವನ್ನು ಅವರು ಕರ್ನಾಟಕದ ಲಿಂಗಾಯತ ಸಮುದಾಯದ ಅನಭಿಷಿಕ್ತ ದೊರೆಯಾಗುವುದಕ್ಕಾಗಿ ಬಳಸಿಕೊಂಡರೋ ಎಂಬ ಅನುಮಾನ ದಟ್ಟವಾಗುತ್ತದೆ. ತಾನೇ ಮುಂದೆ ನಿಂತು ಚುರುಕುಗೊಳಿಸಿದ ಹೋರಾಟದ ವಿಷಯದಲ್ಲಿ ಸ್ವತಃ ಅವರೇ ಪ್ರಾಮಾಣಿಕರಾಗಿರಲಿಲ್ಲ ಎನ್ನುವುದನ್ನು ಅವರ ಇಂದಿನ ಈ ಪರದಾಟ- ಅರಚಾಟ ಸಾರಿ ಹೇಳುವಂತಿದೆ.

ಕರ್ನಾಟಕ ಎಂಬ ದೇಶದಲ್ಲಿ, ಸುಮಾರು 12ನೇ ಶತಮಾನ ಎಂಬ ಕಾಲದಲ್ಲಿ ಉದಾತ್ತವಾದ ಹಾಗೂ ಸಂಸ್ಕೃತಿ ವಿಶಿಷ್ಟ ನೆಲೆಯಲ್ಲಿ ಒಡಮೂಡಿದ ಶರಣ ಧರ್ಮದ ತಿರುಳನ್ನು ತಿಪ್ಪೆಗೆಸೆದು ಅದರ ಸಿಪ್ಪೆಯನ್ನು ಮಾತ್ರ ಎತ್ತಿ ಹಿಡಿದ ಕಾಂಗ್ರೆಸ್‌ಗೂ; ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ತಮ್ಮ ಚುನಾವಣಾ ಏಜೆಂಟನನ್ನಾಗಿ ಮಾಡಿ ನಾಥೂರಾಮನಂಥವರನ್ನು ಎತ್ತಿ ಹಿಡಿದಿರುವಂತಹ ಕಾಂಗ್ರೆಸ್‌ನ ರಾಜಕೀಯ ವಿರೋಧಿ ಪಕ್ಷಕ್ಕೂ ಏನು ವ್ಯತ್ಯಾಸ? ಕಾಂಗ್ರೆಸ್‌ನ ಸದ್ಯದ ಪ್ರಧಾನ ಎದುರಾಳಿ ಪಕ್ಷವಾದ ಬಿಜೆಪಿಮತ್ತು ಅದರ ಪರಿವಾರ ಸಂಘಟನೆಗಳು ಈಗಲೂ ನಡೆಸುತ್ತಿರುವ ‘ಅಧಾರ್ಮಿಕ ರಾಜಕಾರಣ’ದ ಮಾದರಿಯಲ್ಲೇ ಕಾಂಗ್ರೆಸ್ ಕೂಡ ತನ್ನ ರಾಜಕೀಯ ದೇಹದಾರ್ಢ್ಯತೆಯನ್ನು ವರ್ಧಿಸಲು ಪ್ರತ್ಯೇಕ ಧರ್ಮದ ಪ್ರಶ್ನೆಯನ್ನು ಶಕ್ತಿವರ್ಧಕ ಪೇಯವಾಗಿಸಿ ಕುಡಿದು ಪ್ರತಿಕ್ರಿಯಾತ್ಮಕ ರಾಜಕಾರಣದಲ್ಲೇ ತೊಡಗಿರುವುದು ಚಾರಿತ್ರಿಕ ವ್ಯಂಗ್ಯವಾಗಿದೆ.

ಸುದೀರ್ಘ ಇತಿಹಾಸದ ಪಕ್ಷವೊಂದು ತನ್ನ ಕಣ್ಣಮುಂದೆ ಅಂಬೆಗಾಲಿಕ್ಕಿ ನಡೆದ ಪಕ್ಷ ಹಾಕುತ್ತಿರುವ ಪಟ್ಟುಗಳನ್ನು ಎದುರಿಸಲಾಗದೆ ತನ್ನ ಅಸ್ತಿತ್ವಕ್ಕಾಗಿ ಅದೇ ಮಾದರಿಯನ್ನು ಅನುಸರಿಸುವಷ್ಟು ಯೋಚನಾದಾರಿದ್ರ್ಯಕ್ಕೀಡಾಗುವುದು ಭಾರತದ ರಾಜಕಾರಣದ ದುರಂತವಲ್ಲದೆ ಇನ್ನೇನು...? ಈ ಮಾದರಿಯನ್ನು ಅನುಸರಿಸುವ ಮೂಲಕ ಭಾರತದ ರಾಜಕಾರಣವನ್ನು ಯಾವುದೇ ತಾತ್ತ್ವಿಕತೆಯ ಸ್ಪರ್ಶವಿಲ್ಲದೆ, ಮೌಲ್ಯಗಳ ಅರಿವಿಲ್ಲದೆ ಕೇವಲ ಜಾತಿ ಮತ್ತು ಸಮುದಾಯಗಳ ಹಿತಾಸಕ್ತಿಗಳ ನೆಲೆಯಲ್ಲಿ ನಡೆಸಬಹುದು ಎನ್ನುವುದನ್ನು ಕಾಂಗ್ರೆಸ್ ಕರ್ನಾಟಕದಲ್ಲಿ ತಾನು ನಡೆಸಿದ ರಾಜಕಾರಣದ ಮೂಲಕ ನಮಗೆ ತೋರಿಸಿಕೊಟ್ಟಿದೆ.

ರಾಜಕಾರಣವೆಂದರೆ ಹೀಗೆಯೇ ಸ್ವಾಮಿ. ಅಲ್ಲಿ ಜಾತಿ- ಮತ- ಪಂಥ- ಪ್ರದೇಶ ಮೊದಲಾದ ಲೆಕ್ಕಾಚಾರಗಳಲ್ಲಿ ಅಧಿಕಾರವನ್ನು ಹಂಚುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿ ಪ್ರಜಾತಂತ್ರ- ಸೆಕ್ಯುಲರ್ ಧರ್ಮ- ಸಮಾನತೆ ಮೊದಲಾದ ತಾತ್ತ್ವಿಕ ವಿಚಾರಗಳು ಪ್ರಯೋಜನಕ್ಕೆ ಬರುವುದಿಲ್ಲ ಎಂದು ನಿಜವಾಗಿ ನಂಬುವ ಬಹಳಷ್ಟು ಜನರು ಈ ದೇಶದಲ್ಲಿದ್ದಾರೆ. ಆದರೆ ಭಾರತ ಒಂದು ಸುದೀರ್ಘವಾದ ಸಮಾಜ ಸುಧಾರಣಾ ಹೋರಾಟ ಹಾಗೂ ಸ್ವಾತಂತ್ರ್ಯ ಸಂಗ್ರಾಮಗಳ ಮೂಲಕ ಪ್ರಜಾತಾಂತ್ರಿಕ ಗಣರಾಜ್ಯವೊಂದನ್ನು ಗಳಿಸಿಕೊಂಡಿದೆ. ಈ ಪ್ರಜಾತಾಂತ್ರಿಕ ಗಣರಾಜ್ಯದ ಪಠ್ಯರೂಪವಾದ ಸಂವಿಧಾನ ಕೆಲವು ನೀತಿ- ನಿಯಮಗಳನ್ನು ನಮಗೆ ಬೋಧಿಸುತ್ತದೆ. ಅಷ್ಟು ಮಾತ್ರವಲ್ಲದೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಸ್ತಿತ್ವಕ್ಕಾಗಿ, ಅಸ್ಮಿತೆಗಾಗಿ, ಉದಾತ್ತ ಆಶೋತ್ತರಗಳಿಗಾಗಿ ವಿವಿಧ ಬಗೆಯ ಹೋರಾಟಗಳನ್ನು ನಾವು ನಡೆಸಿದ್ದೇವೆ ಮತ್ತು ಈ ಹೋರಾಟಗಳ ಮುಂದಾಳತ್ವವನ್ನು ವಹಿಸಿದ ನಮ್ಮ ಅನೇಕ ನಾಯಕರು ನಮಗೆ ಹಿನ್ನೆಲೆಯಾಗಿ ರಾಜಕಾರಣವನ್ನು ಸಭ್ಯತೆಯಿಂದ, ಪ್ರಜಾತಾಂತ್ರಿಕ ನೀತಿ- ನಿಯಮಗಳಿಗೆ ಅನುಗುಣವಾಗಿ ನಡೆಸಬೇಕು ಎಂದು ನಮ್ಮನ್ನು ಪರೋಕ್ಷವಾಗಿ ಒತ್ತಾಯಿಸುತ್ತಿದ್ದಾರೆ.

ಈ ಪರಿಪ್ರೇಕ್ಷ್ಯದಲ್ಲಿ ನೋಡುವುದಾದರೆ ನಮ್ಮ ದೇಶದ ರಾಜಕಾರಣವೆಂದರೆ ಪಕ್ಷ ರಾಜಕಾರಣ ಎನ್ನುವುದಕ್ಕಷ್ಟೇ ಸೀಮಿತಗೊಂಡಿದೆ. ಕಾಂಗ್ರೆಸ್ಸನ್ನೂ ಒಳಗೊಂಡಂತೆ ಈ ದೇಶದ ಪಕ್ಷ ರಾಜಕಾರಣಕ್ಕೆ ಹೇಗಾದರೂ ಸರಿ ಅಧಿಕಾರವನ್ನು ವಶಪಡಿಸಿಕೊಳ್ಳುವ ವಾಂಛೆ ಬೆಳೆದಿದೆ. ಆದುದರಿಂದ ಈ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ನಡೆಸುವ ಸೆಣಸಾಟದ ಪ್ರಕ್ರಿಯೆಯಲ್ಲಿ ಅವುಗಳು ಪಥಭ್ರಷ್ಟಗೊಳ್ಳುವುದನ್ನು ಮತ್ತು ಸಂಭವಿಸಬಹುದಾದ ಅನಾಹುತಗಳನ್ನು ನಾವು ಗುರುತಿಸಬೇಕಾಗುತ್ತದೆ.

ಮೊದಲನೆಯದಾಗಿ ರಾಜಕೀಯ ಪಕ್ಷಗಳ ಅಧಿಕಾರಾಸಕ್ತ ರಭಸದಿಂದ ಮೌಲ್ಯಾಧಾರಿತ ರಾಜಕಾರಣ ಒಂದು ಹಾಸ್ಯಾಸ್ಪದ ವಿಷಯವಾಗಿ ಕಾಣಿಸುತ್ತಿದೆ. ಪಕ್ಷ ರಾಜಕಾರಣದ ಮುನ್ನುಗ್ಗುವಿಕೆ, ಅಧಿಕಾರಶಾಹಿ ಮನೋಭಾವ ಮತ್ತು ಪಕ್ಷದೊಳಗೆ ಹಾಗೂ ಸರ್ಕಾರದೊಳಗೆ ಕೇಂದ್ರೀಕರಣದ ವ್ಯಾಮೋಹ ಈ ಮೂರು ಪ್ರಧಾನ ಸಂಗತಿಗಳು ಭಾರತದ ರಾಜಕೀಯ ಪಕ್ಷಗಳಲ್ಲಿ ಮೇಳೈಸಿ ಪ್ರಜಾಸತ್ತೆಯ ಮೂಲಮಾತೃಕೆಗಳನ್ನು ದುರ್ಬಲಗೊಳಿಸಿವೆ ಮತ್ತು ರಾಜಕಾರಣವನ್ನು ಪ್ರಯೋಜನವಾದೀ ದಂಧೆಯಾಗಿ ಪರಿವರ್ತಿಸಿವೆ.

ಅಧಿಕಾರಶಾಹಿ ಪ್ರವೃತ್ತಿಯಿಂದಲಾಗಿ ಮತ್ತು ಕೇಂದ್ರೀಕರಣದ ಪ್ರಕ್ರಿಯೆಗಳಿಂದಾಗಿ ರಾಜಕೀಯ ಪಕ್ಷಗಳಿಗೆ ಮತ್ತು ಅದರ ಮುಖಂಡರಿಗೆ ಅವರವರ ವೈಯಕ್ತಿಕ ಹಿತಾಸಕ್ತಿಗಳನ್ನು ಮುಂಚಾಚಿ ಅವುಗಳನ್ನು ಕ್ರಮಬದ್ಧಗೊಳಿಸುವುದೇ ರಾಜಕಾರಣವೆಂದಾಗಿದೆ. ಇದರಿಂದಾಗಿ ಪ್ರಜಾತಂತ್ರದ ಮೌಲ್ಯಗಳು ಗೌಣವಾಗಿ ರಾಜಕಾರಣ ವ್ಯಾಪಾರಿಗಳ ಆಡುಂಬೊಲವಾಗಿದೆ.

ಭಾರತದ ರಾಜಕಾರಣದಲ್ಲಿ ಅಧಿಕಾರವನ್ನು ಹಂಚಿಕೊಳ್ಳುವುದು ಎಂಬ ಮಾತು ಅಧಿಕಾರ ದಾಹದಿಂದ ಬಂದಿರುವಂತಹುದಾಗಿದೆ. ಈ ಹಂಚಿಕೆಯನ್ನು ನಡೆಸುವುದಕ್ಕಾಗಿ ರಾಜಕಾರಣದಲ್ಲಿ ಬಹಳ ಘನವಾದ ಅರ್ಥವುಳ್ಳ ಪ್ರಾತಿನಿಧ್ಯದ ಪ್ರಶ್ನೆಯನ್ನು ನಮ್ಮ ದೇಶದ ಈ ಪಕ್ಷ ರಾಜಕಾರಣದ ಪ್ರಭೃತಿಗಳು ಬಹಳ ಸಂಕುಚಿತವಾದ ಜಾತಿ ಲೆಕ್ಕಾಚಾರಕ್ಕೆ ಇಳಿಸಿದ್ದಾರೆ. ಇದು ಭಾರತದ ಎಲ್ಲ ಪಕ್ಷಗಳಿಗೂ ಬಡಿದಿರುವ ರೋಗ. ಈ ಸಾಂಕ್ರಾಮಿಕ ರೋಗವನ್ನು ಕಾಂಗ್ರೆಸ್ಸು ಎಲ್ಲ ರಾಜಕೀಯ ಪಕ್ಷಗಳಿಗೂ ಹಂಚುವುದರಲ್ಲಿ ಯಶಸ್ವಿಯಾಗಿದೆ. ಈಗ ಈ ಜಾತಿ ಲೆಕ್ಕಾಚಾರವನ್ನು ಯಾವ ಪಕ್ಷ ಅತಿ ಹೆಚ್ಚು ಕಾರ್ಪೊರೇಟ್ ದಕ್ಷತೆಯಿಂದ ನಿರ್ವಹಿಸುತ್ತದೋ ಅದು ಅಧಿಕಾರದ ಓಟದಲ್ಲಿ ಮುಂಚೂಣಿಯಲ್ಲಿರುತ್ತದೆ. ರಾಜಕೀಯ ಎನ್ನುವುದು ಹಿತಾಸಕ್ತಿಗಳ ಹಣಾಹಣಿಯಾಗಿ ಸಂಪೂರ್ಣವಾಗಿ ಮೌಲ್ಯರಹಿತಗೊಂಡಿರುವುದರಿಂದ ಭಾರತದ ಪ್ರಜಾಸತ್ತಾತ್ಮಕ ರಾಜಕಾರಣ ಗಂಭೀರವಾದ ಅಪಾಯಕ್ಕೆ ತುತ್ತಾಗಿದೆ ಎಂಬುದನ್ನು ಬಹಳ ಸ್ಪಷ್ಟವಾಗಿ ಮತ್ತು ಒತ್ತಿ ಹೇಳಬೇಕಾಗಿದೆ.

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 5

  Frustrated
 • 3

  Angry

Comments:

0 comments

Write the first review for this !