ಮಂಗಳವಾರ, ಸೆಪ್ಟೆಂಬರ್ 22, 2020
26 °C
ಇನ್ನಷ್ಟು ನ್ಯಾಯಯುತ, ಸುಸ್ಥಿರ ಹಾಗೂ ಎಲ್ಲರ ಒಳಿತು ಬಯಸುವ ವ್ಯವಸ್ಥೆ ಇಂದಿನ ಅಗತ್ಯ

ಹೊಸ ಬಂಡವಾಳಶಾಹಿ ವ್ಯವಸ್ಥೆ ಬೇಕು

ಮಾರ್ಕ್‌ ಬೆನಿಯಾಫ್‌ Updated:

ಅಕ್ಷರ ಗಾತ್ರ : | |

Prajavani

ಬಂಡವಾಳಶಾಹಿ ವ್ಯವಸ್ಥೆಯು ನನಗೆ ಒಳ್ಳೆಯದನ್ನೇ ಮಾಡಿದೆ. ನಾನು ಸಹಸ್ಥಾಪಕ ಆಗಿರುವ ಸೇಲ್ಸ್‌ಫೋರ್ಸ್‌ ಕಂಪನಿಯು ಕಳೆದ 20 ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಲಾಭ ಗಳಿಸಿದೆ, ನನ್ನನ್ನು ಶ್ರೀಮಂತನನ್ನಾಗಿ
ಸಿದೆ. ಹೀಗಿದ್ದರೂ, ಬಂಡವಾಳಶಾಹಿ ವ್ಯಕ್ತಿಯಾಗಿ, ನಮಗೆ ಸತ್ಯವೆಂದು ಗೊತ್ತಾಗಿರುವ ವಿಚಾರವನ್ನು ಗಟ್ಟಿಯಾಗಿ ಹೇಳಬೇಕಾದ ಸಂದರ್ಭ ಬಂದಿದೆ: ಅಂದರೆ, ನಾವು ತಿಳಿದಿರುವ ರೀತಿಯ ಬಂಡವಾಳಶಾಹಿ ವ್ಯವಸ್ಥೆ ಸತ್ತಿದೆ!

ಹೌದು, ಮುಕ್ತ ಮಾರುಕಟ್ಟೆ ವ್ಯವಸ್ಥೆಗಳು ಹೊಸ ಕೈಗಾರಿಕೆಗಳನ್ನು ಬೆಳೆಸಿವೆ, ಲಕ್ಷಾಂತರ ಜನರ ಜೀವ ಉಳಿಸುವುದಕ್ಕೆ ಕಾರಣವಾದ ಔಷಧಗಳನ್ನು ಕಂಡುಹಿಡಿದಿವೆ, ಕೋಟ್ಯಂತರ ಜನರನ್ನು ಬಡತನದಿಂದ ಮೇಲೆತ್ತಿವೆ. ವೈಯಕ್ತಿಕವಾಗಿ ಹೇಳಬೇಕೆಂದರೆ, ನಾನು ಸಾಧಿಸಿದ ಯಶಸ್ಸಿನ ಕಾರಣದಿಂದಾಗಿ ನನಗೆ ದಾನ
ಧರ್ಮಗಳನ್ನು ಮಾಡಲು ಸಾಧ್ಯವಾಗಿದೆ.

ಆದರೆ, ಈಚಿನ ದಶಕಗಳಲ್ಲಿ ಚಾಲ್ತಿಯಲ್ಲಿದ್ದ ಬಂಡವಾಳಶಾಹಿ ವ್ಯವಸ್ಥೆಯು– ಅಂದರೆ, ಷೇರುದಾರರ ಲಾಭವನ್ನು ಹೆಚ್ಚು ಮಾಡುವುದರತ್ತಲೇ ಅತಿಯಾಗಿ ಗಮನ ನೀಡುವುದು– ಭಯಂಕರ ಅಸಮಾನತೆಗೂ ಕಾರಣವಾಗಿದೆ. ಈ ಸಂದರ್ಭದಲ್ಲಿ, ಅತ್ಯಂತ ಬಡವರಾದ 380 ಕೋಟಿ ಜನರ ಬಳಿ ಇರುವಷ್ಟು ಸಂಪತ್ತು ವಿಶ್ವದ 26 ಜನ ಅತಿ ಶ್ರೀಮಂತರ ಬಳಿಯಲ್ಲೇ ಇದೆ. ಇಂಗಾಲದ ಡೈ ಆಕ್ಸೈಡ್‌ ಅನ್ನು ಚೂರೂ ಬಿಡುವಿಲ್ಲದೆ ಹೊರ
ಸೂಸುತ್ತಿರುವುದರ ಕಾರಣದಿಂದ ವಿಶ್ವವು ವಿನಾಶಕಾರಿ ಹವಾಮಾನ ಬದಲಾವಣೆಯ ಅಂಚಿಗೆ ಬಂದು ನಿಂತಿದೆ. ಅಮೆರಿಕದಲ್ಲಿ ಆದಾಯ ಅಸಮಾನತೆಯು ಕನಿಷ್ಠ 50 ವರ್ಷಗಳಲ್ಲಿ ಅತಿಹೆಚ್ಚಿನ ಮಟ್ಟವನ್ನು ತಲುಪಿದೆ– ಶೇಕಡ 20ರಷ್ಟು ಸಂಪತ್ತು ಶೇ 0.1ರಷ್ಟು ಜನರ ಕೈಯಲ್ಲಿದೆ. ಬಂಡವಾಳಶಾಹಿ ವ್ಯವಸ್ಥೆ ಪರ ಒಲವು ಕಡಿಮೆಆಗಿರುವುದರಲ್ಲಿ– ಅದರಲ್ಲೂ ಮುಖ್ಯವಾಗಿ ಯುವಕರ ನಡುವೆ– ಆಶ್ಚರ್ಯದ ಸಂಗತಿ ಏನೂ ಇಲ್ಲ.

ನಾವು ನಮ್ಮ ಜವಾಬ್ದಾರಿಗಳಿಂದ ಇನ್ನು ನುಣುಚಿಕೊಳ್ಳಲಾಗದು ಎಂದು ನಾನು ಉದ್ಯಮಗಳ ನಾಯಕರಿಗೆ, ಕೋಟ್ಯಧಿಪತಿಗಳಿಗೆ ಹೇಳುತ್ತಿರುತ್ತೇನೆ. ಹೌದು, ಲಾಭ ಮಾಡುವುದು ಮುಖ್ಯ. ಹಾಗೆಯೇ, ನಮ್ಮ ಸಮಾಜ ಕೂಡ ಮುಖ್ಯ. ಹೆಚ್ಚಿನ ಲಾಭಕ್ಕಾಗಿ ನಾವು ಮಾಡುವ ಕೆಲಸಗಳಿಂದ ವಿಶ್ವ ಹಿಂದಿಗಿಂತಲೂ ಹಾಳಾಗುತ್ತ ಹೋದರೆ, ನಾವು ನಮ್ಮ ಮಕ್ಕಳಿಗೆ ದುರಾಸೆಯ ಶಕ್ತಿಯನ್ನು ಕಲಿಸಿಕೊಟ್ಟಂತೆ ಆಗುತ್ತದೆ. ಇನ್ನಷ್ಟು ನ್ಯಾಯಯುತವಾದ, ಸುಸ್ಥಿರವಾದ ಹಾಗೂ ಎಲ್ಲರಿಗಾಗಿ ಕೆಲಸ ಮಾಡುವ ಬಂಡವಾಳಶಾಹಿ ವ್ಯವಸ್ಥೆ ರೂಪಿಸುವ ಕಾಲ ಬಂದಿದೆ. ಈ ವ್ಯವಸ್ಥೆಯಲ್ಲಿ ವಾಣಿಜ್ಯೋದ್ಯಮಗಳು ಸಮಾಜದಿಂದ ಪಡೆದುಕೊಳ್ಳುವುದು ಮಾತ್ರವೇ ಅಲ್ಲ, ಸಮಾಜಕ್ಕೆ ಒಂದಿಷ್ಟು ಮರಳಿ ಕೊಡಬೇಕು ಸಹ.

ಮೊದಲ ಹೆಜ್ಜೆಯಾಗಿ, ಉದ್ಯಮಗಳ ನಾಯಕರು ತಮ್ಮ ಜವಾಬ್ದಾರಿಗಳನ್ನು ಇನ್ನಷ್ಟು ವಿಸ್ತೃತಗೊಳಿಸಿಕೊಳ್ಳ
ಬೇಕು. ಷೇರುದಾರರಿಗೆ ಎಷ್ಟು ಲಾಭ ಬರುತ್ತದೆ ಎಂಬುದನ್ನು ಮೀರಿ ಆಲೋಚಿಸಬೇಕು. ಭಾಗೀದಾರರ (stakeholders) ಬಗ್ಗೆಯೂ– ಅಂದರೆ, ನೌಕರರು, ಗ್ರಾಹಕರು, ಸಮುದಾಯಗಳು ಮತ್ತು ಭೂಮಿ ಎಂಬ ಗ್ರಹದ ಬಗ್ಗೆ– ಆಲೋಚಿಸಬೇಕು. ಅದೃಷ್ಟವಶಾತ್, ಈ ಆಲೋಚನೆಗಳ ಸಾಕಾರಕ್ಕೆ ತಮ್ಮ ಕಂಪನಿಗಳು ಬದ್ಧವಾಗಿ ಇರಲಿವೆ ಎಂದು ‘ಬ್ಯುಸಿನೆಸ್ ರೌಂಡ್‌ಟೇಬಲ್‌’ನ (ಅಮೆರಿಕದ ಲಾಭದ ಉದ್ದೇಶವಿಲ್ಲದ ಸಂಘಟನೆ) 200 ಕಂಪನಿ ಗಳ ಪ್ರತಿನಿಧಿಗಳು ಹೇಳಿದರು. ‘ಕಾರ್ಪೊರೇಟ್ ಸಂಸ್ಥೆಗಳ ಉದ್ದೇಶಗಳಲ್ಲಿ, ಭಾಗೀದಾರರಿಗೆ ಬದ್ಧತೆ ತೋರಿಸುವುದೂ ಬಹುಮುಖ್ಯ’ ಎಂದು ಅವರು ಹೇಳಿದರು.

ಆದರೆ, ದುರದೃಷ್ಟದ ಸಂಗತಿಯೆಂದರೆ, ಈ ವಿಚಾರದಲ್ಲಿ ಎಲ್ಲರೂ ಸಹಮತ ಹೊಂದಿಲ್ಲ. ಈ ತೀರ್ಮಾನಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ‘ಸಾಮಾಜಿಕ ಗುರಿಗಳನ್ನು ಗುರುತಿಸಿ, ಆ ನಿಟ್ಟಿನಲ್ಲಿ ಕೆಲಸ ಮಾಡುವ ಹೊಣೆ ಸರ್ಕಾರದ್ದೇ ವಿನಾ ಕಂಪನಿಗಳದ್ದಲ್ಲ’ ಎಂದು ‘ಸಾಂಸ್ಥಿಕ ಹೂಡಿಕೆದಾರರ ಮಂಡಳಿ’ ವಾದಿಸಿತು. ಕಂಪನಿಗಳು ಎಲ್ಲ ಭಾಗೀದಾರರಿಗಾಗಿ ಕೆಲಸ ಮಾಡಬೇಕೇ, ಬಂಡವಾಳಶಾಹಿ ವ್ಯವಸ್ಥೆ ಕಾಲಕ್ಕೆ ತಕ್ಕಂತೆ ಸುಧಾರಿಸಬೇಕೇ ಎಂದು ಕೇಳಿದಾಗ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ‘ಎಡಪಂಥೀಯ ನೀತಿಗಳ ವಿಚಾರದಲ್ಲಿ ಎಚ್ಚರದಿಂದಿರಿ’ ಎಂದರು.

ಸರ್ಕಾರಕ್ಕೆ ಕೆಲಸ ಮಾಡಲು ಆಗದಿದ್ದರೆ ಅಥವಾ ಮಾಡುವ ಸ್ಥಿತಿಯಲ್ಲಿ ಅದು ಇಲ್ಲದಿದ್ದರೆ, ಉದ್ದಿಮೆಗಳು ಯಾರಿಗೂ ಕಾಯ್ದು ಕುಳಿತುಕೊಳ್ಳಬಾರದು. ಉದ್ದಿಮೆಗಳು ಬದಲಾವಣೆಯ ಬಹುದೊಡ್ಡ ವೇದಿಕೆಗಳಾಗ
ಬಹುದು ಎಂಬುದನ್ನು ನಮ್ಮ ಅನುಭವ ಕಲಿಸಿಕೊಟ್ಟಿದೆ. ‘ಸಮಾನ ವೇತನ ಕಾಯ್ದೆ’ಯಲ್ಲಿನ ಲೋಪಗಳನ್ನು ಸರಿಪಡಿಸುವ ಮಸೂದೆ ಅಮೆರಿಕದ ಕಾಂಗ್ರೆಸ್ಸಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇಂದು ಮಹಿಳೆಯರು, ಪುರುಷರು ಸಂಪಾದಿಸುತ್ತಿರುವ ಸರಾಸರಿ ಶೇಕಡ 80ರಷ್ಟನ್ನು ಮಾತ್ರ ಸಂಪಾದಿಸುತ್ತ ಇದ್ದಾರೆ. ಆದರೆ, ಕಾನೂನು ರೂಪುಗೊಂಡಿಲ್ಲ ಎಂದಮಾತ್ರಕ್ಕೆ ಕಂಪನಿಗಳು ತಾವು ಜವಾಬ್ದಾರಿ ನಿಭಾಯಿಸಬಾರದು ಎಂದೇನೂ ಇಲ್ಲ. ನಮ್ಮ ಕಂಪನಿಯಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ ಎಂಬುದು ಗೊತ್ತಾದ ನಂತರ, ವೇತನ ವ್ಯತ್ಯಾಸ ಸರಿಪಡಿಸಲು ಕ್ರಮ ಜರುಗಿಸಲಾಯಿತು. ನಾವು ಇಂದು ಸಮಾನ ವೇತನ ಪಾವತಿ ಆಗಬೇಕು ಎಂದು ವಾರ್ಷಿಕ ಲೆಕ್ಕಪತ್ರ ತಪಾಸಣೆ ಕೂಡ ನಡೆಸುತ್ತೇವೆ.

ಸಮಾಜಕ್ಕೆ ಒಂದಿಷ್ಟನ್ನು ಮರಳಿ ಕೊಡುವುದು ಎಂಬ ಪರಿಕಲ್ಪನೆ ಹಲವು ಕಂಪನಿಗಳ ಪಾಲಿಗೆ ನಂತರದಲ್ಲಿ ಬರುವಂಥದ್ದು. ತಾವು ಲಾಭದತ್ತ ತಿರುಗಿದ ನಂತರವಷ್ಟೇ ಅವು ಈ ನಿಟ್ಟಿನಲ್ಲಿ ಕ್ರಿಯಾಶೀಲ ಆಗುತ್ತವೆ. ಆದರೆ ನಾವು ನಮ್ಮ ಕಂಪನಿಯ ಆರಂಭದ ದಿನದಿಂದಲೂ ದಾನವನ್ನು ನಮ್ಮ ಸಂಸ್ಕೃತಿಯ ಭಾಗವಾಗಿಸಿಕೊಂಡಿದ್ದೆವು. ನಮ್ಮ ಷೇರುಗಳ ಮೊತ್ತ, ಸಮಯ ಹಾಗೂ ತಂತ್ರಜ್ಞಾನದಶೇಕಡ 1ರಷ್ಟು ಭಾಗವನ್ನು ನಾವು ಸಮಾಜಕ್ಕೆ ಕೊಡುತ್ತ ಬಂದೆವು. ನನ್ನ ಪಾಲಿಗೆ ಸ್ಥಳೀಯ ಶಾಲೆಗಳಲ್ಲಿನ ಮಕ್ಕಳು, ಬೀದಿಬದಿಯಲ್ಲಿ ವಾಸಿಸುವವರು ಕೂಡ ನಮ್ಮ ಭಾಗೀದಾರರು. ಅದ್ಭುತ ಎನ್ನುವ ವಸ್ತುಗಳನ್ನು ಅಭಿವೃದ್ಧಿಪಡಿಸಲು ಆಲೋಚಿಸುತ್ತಿರುವ ಉದ್ಯಮಿಗಳು ತಮ್ಮ ಷೇರು ಬಂಡವಾಳ, ಸಮಯ ಮತ್ತು ಉತ್ಪನ್ನಗಳ ಶೇಕಡ 1ರಷ್ಟನ್ನು ಸಮಾಜಕ್ಕೆ ನೀಡುವ ಅಭಿಯಾನ ಸೇರಿಕೊಳ್ಳಬಹುದು.

ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಕೆಲವು ದೇಶಗಳು ಮಾತ್ರ ನಿಗದಿತ ಗುರಿ ತಲುಪುತ್ತಿವೆ. ಜಾಗತಿಕ ಮಟ್ಟದಲ್ಲಿ ವಿಷಕಾರಿ ಅನಿಲಗಳ ಹೊರಸೂಸುವಿಕೆ ಹೆಚ್ಚುತ್ತಿದ್ದರೂ, ಅಮೆರಿಕದ ಈಗಿನ ಸರ್ಕಾರವು ಪ್ಯಾರಿಸ್ ಒಪ್ಪಂದದಿಂದ ಹೊರನಡೆಯುವ ತೀರ್ಮಾನಕ್ಕೆ ಅಂಟಿಕೊಂಡಿದೆ. ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗದಂತೆ ತಡೆಯಲು ಸಮಯ ಇದೆ. ಹಾಗಾಗಿ, ಈ ಹಂತದಲ್ಲಿ ಉದ್ದಿಮೆಗಳು ಕೆಲವು ಹೆಜ್ಜೆಗಳನ್ನು ಇರಿಸಬಹುದು.

ಲಾಭಕ್ಕಿಂತ ಮಿಗಿಲಾದ ಉದ್ದೇಶಗಳನ್ನು ಹೊಂದಿದ್ದರೆ ಉದ್ದಿಮೆಯ ‘ಲಾಭ-ನಷ್ಟದ ಲೆಕ್ಕಾಚಾರ’ ತಲೆಕೆಳಗಾಗುತ್ತದೆ ಎಂದು ಹೇಳುವ ಉದ್ಯಮಿಗಳು, ಅಂಕಿ-ಅಂಶಗಳನ್ನು ಗಮನಿಸಬೇಕು. ವಿಶಾಲ ಉದ್ದೇಶಗಳನ್ನು ಹೊಂದಿರುವ ಕಂಪನಿಗಳು, ಆ ಉದ್ದೇಶಗಳನ್ನು ತಮ್ಮ ಕಾರ್ಪೊರೇಟ್ ಸಂಸ್ಕೃತಿಯ ಭಾಗ ಮಾಡಿಕೊಂಡ ಕಂಪನಿಗಳು, ತಮ್ಮ ಕ್ಷೇತ್ರದ ಇತರ ಕಂಪನಿಗಳಿಗಿಂತ ಹೆಚ್ಚು ಉತ್ತಮ ಸಾಧನೆ ತೋರುತ್ತವೆ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ. ಹೊಸ ಮಾದರಿಯ ಬಂಡವಾಳಶಾಹಿ ವ್ಯವಸ್ಥೆ ಬೆಳೆಯಬಹುದು ಹಾಗೂ ಅದರಿಂದ ಎಲ್ಲರಿಗೂ ಪ್ರಯೋಜನ ಆಗಬಹುದು ಎಂಬ ಮಾತಿಗೆ ಸೇಲ್ಸ್‌ಫೋರ್ಸ್‌ ಕಂಪನಿಯೇ ಜೀವಂತ ಉದಾಹರಣೆ.

ಲಾಭಕರವಾಗಿ ಕಂಪನಿ ನಡೆಸುವುದೋ, ಒಳ್ಳೆಯದನ್ನು ಮಾಡುವಂತೆ ಕಂಪನಿ ನಡೆಸುವುದೋ ಎಂಬ ಗೊಂದಲ ನಮ್ಮಲ್ಲಿ ಇಲ್ಲ. ಎರಡೂ ರೀತಿ ಕಂಪನಿಯನ್ನು ಏಕಕಾಲದಲ್ಲಿ ನಡೆಸಬಹುದು. 2004ರಲ್ಲಿ ತನ್ನ ಷೇರುಗಳನ್ನು ಸಾರ್ವಜನಿಕರು ಖರೀದಿ ಮಾಡಬಹುದು ಎಂದು ಹೇಳಿದ ನಂತರ, ಸೇಲ್ಸ್‌ಫೋರ್ಸ್‌ ಕಂಪನಿಯು ಷೇರುದಾರರಿಗೆ ಶೇಕಡ 3,500ರಷ್ಟು ಲಾಭ ನೀಡಿದೆ. ವಾಸ್ತವದಲ್ಲಿ, ಮೌಲ್ಯಗಳನ್ನು ಪಾಲಿಸುವುದರಿಂದ ಮೌಲ್ಯ ಇನ್ನಷ್ಟು ಹೆಚ್ಚುತ್ತದೆ.

ಲೇಖಕ: ಸೇಲ್ಸ್‌ಫೋರ್ಸ್‌ ಕಂಪನಿಯ ಅಧ್ಯಕ್ಷ (ದಿ ನ್ಯೂಯಾರ್ಕ್‌ ಟೈಮ್ಸ್‌)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು