ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್ ದುಬಾರಿಯಾದದ್ದು ಏಕೆ? ಉತ್ತರ ಇಲ್ಲಿದೆ

Last Updated 18 ಜನವರಿ 2019, 12:15 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಾಯುಪಡೆಯ ಬೇಡಿಕೆಯಂತೆ 36 ಯುದ್ಧ ವಿಮಾನಗಳಲ್ಲಿ 13 ಅಂಶಗಳ ಮೌಲ್ಯವರ್ಧನೆಗೆ(Enhancements)ರಫೇಲ್ ಮುಂದಿಟ್ಟ 1.3 ಶತಕೋಟಿ ಯೂರೊ (₹1.05 ಲಕ್ಷ ಕೋಟಿ) ಬೇಡಿಕೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದರಿಂದಲೇ ಯುದ್ಧವಿಮಾನಗಳ ಬೆಲೆಹೆಚ್ಚಾಯಿತು ಎಂದು ಶುಕ್ರವಾರ ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಎನ್.ರಾಮ್ ಅವರ ಸುದೀರ್ಘ ಲೇಖನ ತಿಳಿಸಿದೆ.

ಎರಡೂ ದೇಶಗಳ ಸರ್ಕಾರಗಳ ನಡುವಿನಒಪ್ಪಂದ ಕುರಿತಂತೆ ನರೇಂದ್ರ ಮೋದಿ ಅವರು ಮಾಡಿದ ಘೋಷಣೆಯಿಂದಾಗಿ ಪ್ರತಿ ಯುದ್ಧವಿಮಾನದ ಬೆಲೆ ಶೇ 41.42ರಷ್ಟು ಹೆಚ್ಚಾಯಿತು. 2007ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 126 ಯುದ್ಧವಿಮಾನಗಳ ಖರೀದಿಗಾಗಿ ನಡೆಸಿದ್ದ ಮಾತುಕತೆಯನ್ನು ಬದಿಗಿರಿಸಿದ ಪ್ರಧಾನಿ,36 ಸಂಪೂರ್ಣ ಸನ್ನದ್ಧ ಯುದ್ಧ ವಿಮಾನಗಳ ಖರೀದಿಯ ಘೋಷಣೆಯನ್ನುಏಪ್ರಿಲ್ 10, 2015ರ ತಮ್ಮ ಪ್ಯಾರೀಸ್ ಭೇಟಿ ವೇಳೆ ಪ್ರಕಟಿಸಿಯೇ ಬಿಟ್ಟರು. ಆದರೆ, ಈ ಹೊಸ ಒಪ್ಪಂದದ ಬಹುತೇಕ ಅಂಶಗಳು ಹಿಂದಿನ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದವನ್ನೇ ಹೋಲುತ್ತಿದ್ದವು.

ಆರು ಸ್ಕ್ವಾರ್ಡನ್‌ಗಳಿಗಾಗಿ (ತುಕಡಿ) 126 ರಫೇಲ್‌ ವಿಮಾನಗಳು ಬೇಕು ಎಂದು ಭಾರತೀಯ ವಾಯುಪಡೆ ಬೇಡಿಕೆ ಇಟ್ಟಿತ್ತು. ಇದರನ್ವಯ ಯುಪಿಎ ಸರ್ಕಾರ ಜಾಗತಿಕ ಟೆಂಡರ್ ಕರೆದಿತ್ತು. ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಅತಿ ಕಡಿಮೆ ಮೊತ್ತ ನಮೂದಿಸುವ ಮೂಲಕ ಟೆಂಡರ್ ತನ್ನದಾಗಿಸಿಕೊಂಡಿತ್ತು. ಸನ್ನದ್ಧ ಸ್ಥಿತಿಯಲ್ಲಿರುವ 18 ಯುದ್ಧವಿಮಾನಗಳನ್ನು ಸರಬರಾಜು ಮಾಡಲು ಮತ್ತು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) ಲೈಸೆನ್ಸ್ ನೀಡುವ ಮೂಲಕ 108 ಯುದ್ಧ ವಿಮಾನಗಳನ್ನು ತಯಾರಿಸಿಕೊಡಲು ಡಸಾಲ್ಟ್ ಒಪ್ಪಿಕೊಂಡಿತ್ತು. 2007ರಲ್ಲಿ ಪ್ರಾಥಮಿಕ ಹಂತದಲ್ಲಿರುವ, (bare-bones aircraft) ಕೇವಲ ಹಾರಾಟದ ಸಾಮರ್ಥ್ಯವಿರುವ ಪ್ರತಿ ವಿಮಾನಕ್ಕೆ 79.3 ದಶಲಕ್ಷ ಯೂರೊ (₹642 ಕೋಟಿ) ಬೆಲೆ ನಿಗದಿಪಡಿಸಿತ್ತು. 2011ರಲ್ಲಿ ಬೆಲೆ 100 ದಶಲಕ್ಷ ಯೂರೊಗೆ (₹811 ಕೋಟಿ) ಹೆಚ್ಚಿಸಿತ್ತು.

2016ರಲ್ಲಿ ಪ್ರತಿ ವಿಮಾನದ ಬೆಲೆಯನ್ನು ಶೇ9ರ ರಿಯಾಯ್ತಿ ಘೋಷಿಸಿ 91.75 ದಶಲಕ್ಷ ಯೂರೊಗೆ (₹744 ಕೋಟಿ) ಇಳಿಸಿತು. ಭಾರತೀಯ ವಾಯುಪಡೆ ಕೋರಿರುವ ನಿರ್ದಿಷ್ಟ ಮೌಲ್ಯವರ್ಧನೆ (enhancements) ಮಾಡಿಕೊಡಲು 140 ಕೋಟಿ ಯೂರೊ (₹11.36 ಸಾವಿರ ಕೋಟಿ) ತೆರಬೇಕು ಎಂದು ಡಸಾಲ್ಟ್ ತಿಳಿಸಿತು. ಮಾತುಕತೆಗಳ ನಂತರ ಈ ಮೊತ್ತವನ್ನು 130 ಕೋಟಿ ಯೂರೊಗೆ (₹10.54 ಸಾವಿರ ಕೋಟಿ) ಇಳಿಸಿತು. 36 ರಫೇಲ್ ಯುದ್ಧವಿಮಾನಗಳಿಗೆ 2007ರಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿ ಶುಲ್ಕ 11.11 ದಶಲಕ್ಷ ಯೂರೊ (₹89 ಕೋಟಿ)ಇತ್ತು. ಹೊಸ ಒಪ್ಪಂದದಲ್ಲಿ ಈ ಮೊತ್ತ 36.11 ದಶಲಕ್ಷ ಯೂರೊಗೆ (₹292 ಕೋಟಿ) ಮುಟ್ಟಿತು.

ವಾಯುಪಡೆಯ ಬೇಡಿಕೆಯಂತೆ ಮೌಲ್ಯವರ್ಧನೆ ಮಾಡಿಕೊಡಲು ರಫೇಲ್ ವಿಧಿಸಿದ್ದ ಶುಲ್ಕವನ್ನು ಮಾತುಕತೆ ಸಮಿತಿಯಲ್ಲಿದ್ದ ಮೂವರು ರಕ್ಷಣಾ ಇಲಾಖೆ ಅಧಿಕಾರಿಗಳು ವಿರೋಧಿಸಿದ್ದರು. ವಾಯುಪಡೆಯ ಉಪಮುಖ್ಯಸ್ಥರೂ ಸೇರಿದಂತೆ ಸಮಿತಿಯಲ್ಲಿದ್ದ ಇತರ ನಾಲ್ವರು ಸದಸ್ಯರು ಈ ವಿರೋಧವನ್ನು ತಳ್ಳಿಹಾಕಿದರು ಎಂದು ‘ಹಿಂದೂ’ ವರದಿ ತಿಳಿಸಿದೆ.

ರಫೇಲ್ ವಿಮಾನ ಖರೀದಿಗೆ ಸಂಬಂಧಿಸಿದ ಪ್ರಸ್ತಾವದಲ್ಲಿದ್ದ ಹಲವು ನ್ಯೂನತೆಗಳನ್ನು ಸರಿಪಡಿಸಿದ ನಂತರ ಮಾತುಕತೆ ಸಮಿತಿಯು ಆಗಸ್ಟ್ 4, 2016ರಂದು ವರದಿಯನ್ನು ಸಲ್ಲಿಸಿತು. ಅಂದಿನ ರಕ್ಷಣಾ ಸಚಿವ ಮನೋಹರ್ ಪರ‍್ರೀಕರ್ ನೇತೃತ್ವದ ರಕ್ಷಣಾ ಉಪಕರಣ ಖರೀದಿ ಮಂಡಳಿ ಆ ವರದಿ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ. ಅದನ್ನು ಪ್ರಧಾನಿ ನೇತೃತ್ವದ ರಕ್ಷಣಾ ವಿಚಾರಗಳ ಸಂಪುಟ ಸಮಿತಿಗೆ ವರ್ಗಾಯಿಸಿತು. ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಈ ವಿಷಯ ನಮೂದಿಸಿದೆ.

ಯೂರೊಫೈಟರ್ ಟೈಫೂನ್ ಜೆಟ್

2016ರಲ್ಲಿ ಜರ್ಮನಿ, ಬ್ರಿಟನ್, ಇಟಲಿ ಮತ್ತು ಸ್ಪೇನ್‌ನಲ್ಲಿರುವ ವಿವಿಧ ವೈಮಾನಿಕ ಕಂಪನಿಗಳ ಒಕ್ಕೂಟ ‘ಯೂರೋಫೈಟರ್ ಟೈಫೂನ್’ ಹೆಸರಿನ ವಿಮಾನಗಳನ್ನುರಫೇಲ್‌ ವಿಮಾನಗಳಿಗಿಂತ ಕಡಿಮೆ ದರದಲ್ಲಿ ಪೂರೈಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿತ್ತು. ಈ ಪ್ರಸ್ತಾವವನ್ನು ಎನ್‌ಡಿಎ ಸರ್ಕಾರ ತಳ್ಳಿಹಾಕಿತ್ತು. 2012ರಲ್ಲಿ ರಫೇಲ್ ಮತ್ತು ಯೂರೋಪಿಯನ್ ಟೈಫೂನ್ ಕಂಪನಿಗಳು ಭಾರತೀಯ ವಾಯುಪಡೆ ಪಟ್ಟಿ ಮಾಡಿದ್ದ ಅವಶ್ಯಕತೆಗಳನ್ನು ಪೂರೈಸಲು ಶಕ್ತವಾಗಿವೆ ಎಂದು ಹೇಳಲಾಗಿತ್ತು. ಆದರೆ, ಟೆಂಡರ್‌ನಲ್ಲಿ ಕಡಿಮೆ ದರ ನಮೂದಿಸಿದ ಕಾರಣ ಡಸಾಲ್ಟ್ ಜೊತೆಗೆ ಖರೀದಿ ಮಾತುಕತೆ ಅರಂಭಿಸಲಾಯಿತು.

2014ರ ಜುಲೈನಲ್ಲಿ ಅಂದಿನ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರಿಗೆ ಬರೆದಿದ್ದ ಪತ್ರದಲ್ಲಿ ಏರ್‌ಬಸ್ ವೈಮಾನಿಕ ಸಂಸ್ಥೆಯ ಮಿಲಿಟರಿ ಏರ್‌ಕ್ರಾಫ್ಟ್‌ ವಿಭಾಗದ ಮುಖ್ಯಸ್ಥ ಡೊಮಿಂಗೊ ಉರೆನಾ ರಸೊ ಮತ್ತೊಂದು ಪರಿಷ್ಕೃತ ಪ್ರಸ್ತಾವವನ್ನು ಮುಂದಿಟ್ಟರು. ಯೂರೋಫೈಟರ್‌ ಒಕ್ಕೂಟವನ್ನು ಏರ್‌ಬಸ್‌ ಪ್ರತಿನಿಧಿಸಿತ್ತು. ಈ ಹಿಂದೆ ಹೇಳಿದ್ದ ಬೆಲೆಯ ಆಧಾರದ ಮೇಲೆ 126 ಯೂರೊಫೈಟರ್‌ ಟೈಫೂನ್‌ ಯುದ್ಧವಿಮಾನಗಳಿಗೆ ಶೇ 20ರಷ್ಟು ಬೆಲೆ ಕಡಿತ ಮಾಡುವುದಾಗಿ ಏರ್‌ಬಸ್ ಹೇಳಿತ್ತು.

ಭಾರತ ಸರ್ಕಾರವು ನಮ್ಮ ಪ್ರತಿಸ್ಪರ್ಧಿ ಕಂಪನಿಯ ಪ್ರಸ್ತಾವವನ್ನು ಅಂತಿಮಗೊಳಿಸಿರಬಹುದು ಎಂದು ಹೇಳಿದ ಉರೆನಾ ರಸೊ, ‘ವಾಯುಪಡೆಯನ್ನು ಆಧುನೀಕರಣಗೊಳಿಸುವ ಭಾರತ ಸರ್ಕಾರದ ಪ್ರಯತ್ನ ಆರಂಭದ ದಿನಗಳಿಂದಲೂ ನಮ್ಮ ಗಮನ ಸೆಳೆದಿದೆ. ಭಾರತ ಸರ್ಕಾರವು ನಮ್ಮ ದೇಶದ ರಾಯಭಾರಿಯ ಮೂಲಕ ನೀಡುವ ಯಾವುದೇ ಪ್ರತಿಕ್ರಿಯೆಯನ್ನು ನಾವು ಖುಷಿಯಿಂದ ಎದುರು ನೋಡುತ್ತೇವೆ’ ಎಂದು ಪತ್ರದಲ್ಲಿ ತಿಳಿಸಿದ್ದರು.

ಆದರೆ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಪ್ರಸ್ತಾವ ಸಲ್ಲಿಸುವುದು ಕೇಂದ್ರ ಜಾಗೃತ ಆಯೋಗದ ನಿಯಮಾವಳಿಗೆ ವಿರುದ್ಧ ಎಂದು ಭಾರತ ಸರ್ಕಾರ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು ಎಂದು ‘ಹಿಂದೂ‘ ವರದಿ ಹೇಳಿದೆ.

ಬೋಫೋರ್ಸ್ ಮತ್ತು ರಫೇಲ್

ರಫೇಲ್ ಒಪ್ಪಂದವನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರು ಪದೇಪದೆ ಬೋಫೋರ್ಸ್‌ ಹಗರಣವನ್ನು ನೆನಪಿಸಿಕೊಳ್ಳುತ್ತಿದ್ದಾರೆ.ರಫೇಲ್ ಒಪ್ಪಂದ ಅಂತಿಮಗೊಂಡ 2015–16ರ ಕಾಲಾವಧಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಗಮನಿಸಿದಾಗ ಅದು 1985–86ರಲ್ಲಿ ಬೋಫೋರ್ಸ್‌ ಒಪ್ಪಂದದ ವೇಳೆಯ ವಿದ್ಯಮಾನಗಳನ್ನು ಹೋಲುತ್ತವೆ ಎಂದು ಕೆಲವರಿಗೆ ಅನ್ನಿಸಿದ್ದಿದೆ. ಆದರೆ ಬೋಫೋರ್ಸ್‌ ಒಪ್ಪಂದದ ವೇಳೆ ಸ್ವಿಸ್ ಬ್ಯಾಂಕ್‌ನ ಖಾತೆಗಳಿಗೆ ರಹಸ್ಯವಾಗಿ ಹಣ ಪಾವತಿಯಾದ ಮಾಹಿತಿಯನ್ನು ಬಯಲಿಗೆಳೆಯುವಲ್ಲಿ ಪತ್ರಿಕೋದ್ಯಮದ ತನಿಖೆಗಳು ಯಶಸ್ವಿಯಾಗಿದ್ದವು. ಆದರೆ ರಫೇಲ್ ಒಪ್ಪಂದದಲ್ಲಿ ಹಣದ ಹರಿವನ್ನು, ಅದು ಕೈಬದಲಿಯಾದ ಬಗೆಯನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ರಫೇಲ್‌ ಒಪ್ಪಂದದಲ್ಲಿ ಹಗರಣದ ಮಾತು ಇನ್ನೂ ನಿಂತಿಲ್ಲ ಎಂದು ವರದಿ ಅಭಿಪ್ರಾಯಪಟ್ಟಿದೆ.

ಇವನ್ನೂ ಓದಿ

ಶೇಖರ್ ಗುಪ್ತ ಅಂಕಣ ಬರಹಗಳು

ಸುದೀರ್ಘ ಕಥನ

ಇತರ ಸುದ್ದಿಗಳು

ಸುದೀರ್ಘ ಕಥನ

ಇತರ ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT