ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನ ವ್ಯಾಖ್ಯೆ: ಸೇನ್‌ರಿಂದ ಬ್ಯಾನರ್ಜಿವರೆಗೆ

ಈ ತಜ್ಞರ ವಿಚಾರವನ್ನು ಜಗತ್ತೇ ಪುರಸ್ಕರಿಸಿರುವಾಗ, ಭಾರತಕ್ಕೇಕೆ ತಿರಸ್ಕರಿಸುವ ಮೊಂಡುತನ?
Last Updated 25 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಭಾರತೀಯ ಸಂಜಾತ ಅಮರ್ತ್ಯ ಸೇನ್‌ ಅವರಿಗೆ ‘ಸೋಷಿಯಲ್ ಚಾಯ್ಸ್‌ ಥಿಯರಿ’ಗಾಗಿ (ಸಾಮಾಜಿಕ ಆಯ್ಕೆಯ ಸಿದ್ಧಾಂತ) 1998ರಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿತ್ತು. ‘ಬಡತನ ಮತ್ತು ಬರ’ದ ಮೇಲಿನ ಅವರ ಕೆಲಸಗಳನ್ನು, ಬರವಣಿಗೆಯನ್ನು ಗುರುತಿಸಿ ನೊಬೆಲ್ ಸಮಿತಿಯು ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿತ್ತು.

1943ರ ಬಂಗಾಳದ ಭೀಕರ ಬರಗಾಲದ ಚಿತ್ರಗಳು, ಆಗಿನ್ನೂ ಒಂಬತ್ತು ವರ್ಷದ ಬಾಲಕನಾಗಿದ್ದ ಅಮರ್ತ್ಯರ ಮನಸ್ಸಿನಲ್ಲಿ ಅಚ್ಚೊತ್ತಿದ್ದವು. ದೇಶ– ವಿದೇಶಗಳವಿಶ್ವವಿದ್ಯಾಲಯಗಳನ್ನು ಸುತ್ತಿದರೂ ಆ ಭೀಕರ ನೆನಪು ಅವರ ಮನದಿಂದ ಮಾಸಿರಲಿಲ್ಲ. ಆಗಿದ್ದ ಗಾಯ ಮಾಗಿರಲಿಲ್ಲ. ಮುಂದೆ ಅರ್ಥಶಾಸ್ತ್ರದ ಓದಿನಲ್ಲಿ ನೆಲೆನಿಂತ ಅವರು, ಬರಗಾಲಕ್ಕೆ ಬೇರೆಯದೇ ವ್ಯಾಖ್ಯೆಯನ್ನು ನೀಡಿದರು. ಆಹಾರ ವಸ್ತುಗಳ ಕೊರತೆಯಿಂದ ಬರಗಾಲ ಉಂಟಾಗುತ್ತದೆ ಎನ್ನುವ ಎಂದಿನ ನಂಬಿಕೆಗೆ ಸವಾಲೆಸೆದು, ಬರಗಾಲಕ್ಕೆ ಆಹಾರದ ಕೊರತೆಯಲ್ಲ, ವಿತರಣೆಯಲ್ಲಿನ ದೋಷಗಳು ಕಾರಣ ಎಂದರವರು. ರೈತರು ಬೆಳೆದ ಆಹಾರ ಪದಾರ್ಥಗಳನ್ನು ಗೋದಾಮುಗಳಲ್ಲಿ ಹಾಕಿಟ್ಟು, ಕೀಲಿ ಜಡಿದು ಜನರಿಗೆ ಸಿಗದಿರುವಂತೆ ಮಾಡುವ ಕಾರಣಗಳು ಬರಗಾಲವನ್ನು ಸೃಷ್ಟಿಸಬಲ್ಲವು ಎಂದಿದ್ದರು. ‘ಬಡತನ ರೇಖೆಯ ಕೆಳಗೆ ಎಷ್ಟು ಜನರಿದ್ದಾರೆ ಎಂದು ತಲೆ ಎಣಿಸುವುದಲ್ಲ, ಒಬ್ಬೊಬ್ಬರ ಬಡತನದ ಪ್ರಮಾಣವೆಷ್ಟು, ಅವರಿಗೆ ಸಂಪನ್ಮೂಲಗಳ ಹಂಚಿಕೆ ಅದೆಷ್ಟು ಸುಗಮವಾಗಿ ಇದೆ ಎನ್ನುವುದು ಮುಖ್ಯ’ ಎಂದರು.

ಭಾರತವೂ ಸೇರಿದಂತೆ ಜಗತ್ತಿನ ಬಡತನದ ಬಗ್ಗೆ ಮತ್ತು ಸಂಪನ್ಮೂಲಗಳ ಅಸಮಾನ ಹಂಚಿಕೆಯ ಬಗ್ಗೆ ಮಾತನಾಡಿ, ವಿಶ್ವದ ಅತಿಶ್ರೇಷ್ಠ ಆರ್ಥಿಕತಜ್ಞ ಎಂಬ ಪುರಸ್ಕಾರಕ್ಕೆ ಅರ್ಹರಾದರು. ಈಗ ಇಪ್ಪತ್ತು ವರ್ಷಗಳ ನಂತರ ಮತ್ತೊಮ್ಮೆ ಭಾರತದ ಬಡತನ, ಆರ್ಥಿಕ ನೀತಿಗಳ ಬಗ್ಗೆ ಮಾತನಾಡುವ ಇನ್ನೊಬ್ಬ ತಜ್ಞ ಅಭಿಜಿತ್ ಬ್ಯಾನರ್ಜಿ ಅವರನ್ನು ಅದೇ ಪುರಸ್ಕಾರ ಹುಡುಕಿಕೊಂಡು ಬಂದಿದೆ. ಆ ಮೂಲಕ ಭಾರತದ ಬಡತನವು ಮತ್ತೊಮ್ಮೆ ವಿಶ್ವದಾದ್ಯಂತ ಸುದ್ದಿ ಮಾಡಿದೆ, ಚರ್ಚೆಗೆಳೆದಿದೆ.

ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿನ ಅನಿವಾಸಿ ಭಾರತೀಯರು ‘ಹೌಡಿ ಮೋದಿ’ ಎಂಬ ಕಾರ್ಯಕ್ರಮ ಆಯೋಜಿಸಿದ್ದು ಭಾರತದ ಮಾಧ್ಯಮಗಳಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’ ಎಂದು ನಮ್ಮ ಪ್ರಧಾನಿ ಸಂದೇಶ ಬೀರಿ ಬಂದಿದ್ದರು. ಆ ಪ್ರಚಾರದ ವೈಭವ, ನೋಡಿದವರೆಲ್ಲರೂ ಮರುಳಾಗುವಂತಿತ್ತು. ನಿಜಸ್ಥಿತಿ ಗೊತ್ತಿದ್ದವರೆಲ್ಲ ‘ಇದೆಂಥ ಮರುಳು’ ಎಂದು ಉದ್ಗಾರ ತೆಗೆಯುವಂತೆಯೂ ಮಾಡಿತ್ತು.

ಇದಾದ ಕೆಲವೇ ದಿನಗಳ ಅಂತರದಲ್ಲಿ, ಭಾರತ ಸಂಜಾತ ಅಭಿಜಿತ್ ಅವರಿಗೆ ನೊಬೆಲ್ ಪ್ರಶಸ್ತಿ ಘೋಷಣೆ, ಅವರ ವಿಚಾರಗಳ ಚರ್ಚೆ. ಅಷ್ಟರಲ್ಲಿ ಪ್ರಕಟವಾದ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನವು ನಿಜಸ್ಥಿತಿಯನ್ನು ಬಯಲಿಗೆಳೆದಿದೆ. ‘ಹೌಡಿ ಮೋಡಿ’ಯ ಮುಸುಕನ್ನು ಹರಿದೊಗೆದು, ದೇಶದ ಬಡತನ, ಹಸಿವಿನ ಹಾಹಾಕಾರದ ನಿಜಸ್ವರೂಪವನ್ನು ಬಿಚ್ಚಿಟ್ಟಿದೆ.

‘ಆಹಾರದ ಹಕ್ಕಿಗಾಗಿ ಆಂದೋಲನ’ವು 2000ನೇ ಇಸವಿಯಿಂದಲೂ ಹಳ್ಳಿ ಹಳ್ಳಿಗಳ, ವಲಸೆ ಹೋಗುತ್ತಿರುವ ಜನರ, ಆದಿವಾಸಿಗಳ ಆಹಾರದ ಪರಿಸ್ಥಿತಿಯ ಚಿತ್ರವನ್ನು ಸರ್ಕಾರಕ್ಕೆ ನೀಡುತ್ತಲೇ ಬಂದಿದೆ. ಸೇನ್ ಅವರು ಹೇಳುವಂತೆ ಒಂದೋ, ಜನರಿಗೆ ಆಹಾರವನ್ನು ಖರೀದಿಸುವ ಸಾಮರ್ಥ್ಯವಿರಬೇಕು, ಇಲ್ಲವೇ ಆಹಾರವು ಹಕ್ಕಾಗಿ ಜನರಿಗೆ ಸಿಗಬೇಕು. ಇಪ್ಪತ್ತು ವರ್ಷಗಳಾದರೂ ಇಂದಿಗೂ ಸ್ಥಿತಿ ಸ್ವಲ್ಪವೂ ಸುಧಾರಿಸಿಲ್ಲದಿರುವುದು, ಬದಲಿಗೆ ಮತ್ತೂ ಗಂಭೀರವಾಗುತ್ತಲೇ ಹೊರಟಿರುವುದು ಕಳವಳಕಾರಿ.

ಸೇನ್ ಅವರು ಹೇಳುವಂತೆ, ಇದು ಆಹಾರದ ಕೊರತೆಯಿಂದ ಆಗುತ್ತಿರುವ ಹಸಿವಲ್ಲ. ಇರುವ ಆಹಾರ ಪದಾರ್ಥವು ಜನರಿಗೆ ಲಭ್ಯವಾಗದಂತೆ ತಡೆಹಿಡಿದಿಟ್ಟಿರುವುದರ ಫಲ. ಹಸಿವಿನ ಸೂಚ್ಯಂಕ ಪ್ರಕಟವಾಗುವ ಒಂದೆರಡು ದಿನ ಮೊದಲಷ್ಟೇ ಆಹಾರ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ‘ಆಹಾರ ಸಂಗ್ರಹ ಬಹಳವಾಗಿದೆ. ಇರಿಸಿಕೊಳ್ಳಲು ಜಾಗವಿಲ್ಲ. ಹೊರದೇಶಕ್ಕೆ ಸಾಗಿಸಲಿಕ್ಕಾದರೂ ಅನುಮತಿ ಕೊಡಿ’ ಎಂದು ಕೇಳಿಕೊಂಡಿತ್ತು. ಇನ್ನೂ ಸುಗ್ಗಿಯ ಕಾಲ ಬರುವ ಮೊದಲೇ 307 ಲಕ್ಷ ಟನ್ ಭರಿಸಬೇಕಾಗಿದ್ದ ನಮ್ಮ ಆಹಾರ ನಿಗಮದ ಗೋದಾಮುಗಳಲ್ಲಿ 660 ಲಕ್ಷ ‍ಟನ್‌ಗೂ ಮೀರಿ ಆಹಾರ ಸಂಗ್ರಹ ಆಗಿಬಿಟ್ಟಿದೆ. ಇಟ್ಟುಕೊಳ್ಳಲು ಜಾಗವಿಲ್ಲದೆ ಬಟಾಬಯಲಿನಲ್ಲಿ ಮಳೆ, ಗಾಳಿಗೆ ಒಡ್ಡಿ ಅವನ್ನು ಇರಿಸಬೇಕಾದ ಸ್ಥಿತಿ ಇದೆ.

ಸಂಗ್ರಹಿಸಿಟ್ಟ ಆಹಾರವನ್ನು ಕೊಳೆಸಬೇಡಿ, ಹಂಚಿ ಎಂದು ಸುಪ್ರೀಂ ಕೋರ್ಟ್‌ ಹೇಳಿದರೂ ಹಂಚಲು ಅಷ್ಟು ಹಣವಿಲ್ಲವೆಂದು ಹಣಕಾಸು ಸಚಿವಾಲಯ ಮೂಗೆಳೆಯುತ್ತದೆ. ಜನರಿಗೆ ಉದ್ಯೋಗ ನೀಡುವ ಉದ್ಯೋಗ ಖಾತರಿಯಲ್ಲಿ ಕೂಲಿ ದರವನ್ನು ಹೆಚ್ಚು ಮಾಡಿ ಎನ್ನುತ್ತಿದ್ದಾರೆ ಬ್ಯಾನರ್ಜಿ. ಉದ್ಯೋಗ ಖಾತರಿಯಲ್ಲಿ ಕೂಲಿ ದರವು ಸರ್ಕಾರವೇ ಘೋಷಿಸಿರುವ ಕನಿಷ್ಠ ಕೂಲಿ ದರಕ್ಕಿಂತ ಕಡಿಮೆ ಇದೆ. ಅದನ್ನು ಏರಿಸುವ ವಿಚಾರವನ್ನೂ ಸರ್ಕಾರ ಮಾಡುತ್ತಿಲ್ಲ, ಉದ್ಯೋಗ ಖಾತರಿಗೆ ಬೇಕಾದಷ್ಟು ಹಣವನ್ನು ಇರಿಸುವ ಪ್ರಯತ್ನ
ವನ್ನೂ ಮಾಡುತ್ತಿಲ್ಲ. ಬದಲಿಗೆ, ಕಡಿಮೆ ಮಾಡುತ್ತ ಮಾಡುತ್ತ ಆ ಕಾನೂನನ್ನೇ ತೆಗೆದುಹಾಕುವ ವಿಚಾರದಲ್ಲಿರುವಂತಿದೆ ಅದು. ಗ್ರಾಮೀಣ ಉದ್ಯೋಗದಲ್ಲಿ ಕನಿಷ್ಠ ಕೂಲಿಯನ್ನೂ ಕೊಡದಿದ್ದರೆ ಅವರ ಖರೀದಿ ಸಾಮರ್ಥ್ಯವಾದರೂ ಏರುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಬ್ಯಾನರ್ಜಿ.

ದೇಶದ ಶೇ 70ರಷ್ಟು ಜನ ಗ್ರಾಮವಾಸಿಗಳಾಗಿದ್ದರು. ಆದರೆ ನಗರ ಕೇಂದ್ರಿತ ಅಭಿವೃದ್ಧಿ ನೀತಿಗಳನ್ನು ಕೈಗೊಂಡ ಭಾರತ, ಗ್ರಾಮವಾಸಿಗಳನ್ನೆಲ್ಲ ಶಹರದತ್ತ ಮುಖ ಮಾಡಿಸಿತು. ಇಂದು ಬಹುಪಾಲು ಹಳ್ಳಿಗಳು ಬರಿದು, ಇಲ್ಲವೇ ವೃದ್ಧರಿಂದ ತುಂಬಿವೆ. ಸುರಕ್ಷಿತ ಜೀವನವಿದ್ದೆಡೆ ಜನರಿಲ್ಲ, ಜನರಿದ್ದೆಡೆ ಸಾಮಾಜಿಕ ಸುರಕ್ಷೆ ಇಲ್ಲ.

ಕೃಷಿಯನ್ನು ಕಡೆಗಣಿಸಿರುವುದರ ಫಲವಾಗಿ ಇಂದು ‘ಉದ್ಯೋಗ ಖಾತರಿ’, ‘ಕನಿಷ್ಠ ಕೂಲಿ’ ಮತ್ತು ‘ರಾಷ್ಟ್ರೀಯ ಆಹಾರ ಭದ್ರತಾ ಕಾನೂನು’ಗಳಿಗೆ ಗ್ರಾಮೀಣ ಜೀವನದ ಘನತೆ ಅಂಟಿಕೊಂಡಿದೆ. ಇವುಗಳಲ್ಲಿ ಯಾವೊಂದರ ಸುಧಾರಣೆ ಆದರೂ ಗ್ರಾಮೀಣರಿಗೆ ಬಹುಬಲ ಬಂದುಬಿಡುತ್ತದೆ. ಕನಿಷ್ಠ ಕೂಲಿ ಹೆಚ್ಚಾಗಿ, ಅಷ್ಟೇ ಕೂಲಿ ದರವನ್ನು ಉದ್ಯೋಗ ಖಾತರಿಯಲ್ಲಿ ಕೊಟ್ಟುಬಿಟ್ಟರೆ, ಗ್ರಾಮಸ್ಥರು ಇಟ್ಟಿಗೆ ಭಟ್ಟಿಗಳಿಗಾಗಲೀ, ಕಟ್ಟಡ ಕಾರ್ಮಿಕರಾಗಿಯಾಗಲೀ ಶಹರಗಳಿಗೆ ವಲಸೆ ಹೋಗುವುದಿಲ್ಲ.

ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನಲ್ಲಿ ಜನರಿಗೆ ಹೆಚ್ಚು ಕಾಳನ್ನು, ಪೌಷ್ಟಿಕ ಆಹಾರವನ್ನು, ಸಾಮಾಜಿಕ ಸುರಕ್ಷತೆ
ಯನ್ನು, ಮಾತೃತ್ವ ಸಹಯೋಗವನ್ನು ಕೊಟ್ಟಿದ್ದಾದರೆ, ಅವನ್ನು ಪಡೆಯುವುದಕ್ಕೆ ‘ಆಧಾರ್‌’ನ ತಡೆಗೋಡೆ ನಿರ್ಮಿಸದಿದ್ದರೆ ಅವರು ಹಳ್ಳಿಗಳಲ್ಲೇ ನೆಮ್ಮದಿಯ ಬದುಕನ್ನು ಕಾಣುತ್ತಿದ್ದರು. ಬಹುಶಃ ನೊಬೆಲ್ ಪ್ರಶಸ್ತಿ ಪುರಸ್ಕೃತರ ಸಲಹೆಗಳನ್ನು ಸರ್ಕಾರ ಒಪ್ಪದಿರುವುದಕ್ಕೂ ಇದೇ ಕಾರಣವೇನೊ. ಹಳ್ಳಿಗರು ವಲಸೆ ಹೋಗದಿದ್ದರೆ ಶಹರಗಳನ್ನು ಬೆಳೆಸುವ, ರಸ್ತೆ ಅಗಲ ಮಾಡುವ, ಸ್ಟೀಲ್ ಬ್ರಿಜ್ ಕಟ್ಟುವ ಗುತ್ತಿಗೆದಾರರ ಯೋಜನೆಗಳಿಗೆ ಕಡಿಮೆ ಬೆಲೆಯಲ್ಲಿ ಕೂಲಿಕಾರರು ಸಿಕ್ಕುವುದಿಲ್ಲ. ಗುತ್ತಿಗೆದಾರರೇ ರಾಜಕಾರಣಿಗಳಾಗಿರುವ ನಮ್ಮ ದೇಶದಲ್ಲಿ ರಸ್ತೆ, ಗಗನಚುಂಬಿ ಕಟ್ಟಡ, ಮಾಲ್‍ಗಳೇ ಅಭಿವೃದ್ಧಿಯ ಸಂಕೇತಗಳಾಗಿ ಅವರಿಗೆ ತೋರುತ್ತಿರುವಾಗ, ಸೇನ್ ಅವರು ಹೇಳಿದ ಆಹಾರದ ಹಕ್ಕಾಗಲೀ, ಅಭಿಜಿತ್ ಅವರು ಹೇಳುತ್ತಿರುವಂತೆ ಖರೀದಿ ಸಾಮರ್ಥ್ಯ ಹೆಚ್ಚಿಸುವುದನ್ನಾಗಲೀ ಒಪ್ಪುವುದೆಂತು?

ಆದರೆ ನಿಮ್ಮ ಅಭಿವೃದ್ಧಿ ನೀತಿಯಲ್ಲಿ ಹಸಿವಿನಿಂದ ಜನರು ಸಾಯುತ್ತಿರುವುದು ನಮಗೆ ಕಾಣಿಸುತ್ತಿದೆ. ಎರಡರಲ್ಲಿ ಒಂದು ಮಗು ಅಪೌಷ್ಟಿಕವಾಗಿರುವುದು ನಮಗಷ್ಟೇ ಅಲ್ಲ, ಇಡೀ ಜಗತ್ತಿಗೂ ಕಾಣುತ್ತಿದೆ. ಹಸಿವಿನ ಸೂಚ್ಯಂಕದಲ್ಲಿ ದೇಶ ಜರ‍್ರನೆ ಇಳಿಯುತ್ತಿದ್ದರೆ, ಜನಸಾಮಾನ್ಯರು ಪ್ರಪಾತಕ್ಕೇ ಬೀಳುತ್ತಿದ್ದಾರೆ, ತಮ್ಮದಲ್ಲದ ತಪ್ಪಿಗೆ ಸಾವನ್ನಪ್ಪುತ್ತಿದ್ದಾರೆ. ನಮ್ಮ ಅಭಿವೃದ್ಧಿ, ನಿಮ್ಮ ಅಭಿವೃದ್ಧಿ ನಡುವಿನ ಈ ಕಂದರವನ್ನು ತುಂಬುವುದೆಂತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT