ಮಂಗಳವಾರ, ಅಕ್ಟೋಬರ್ 20, 2020
22 °C

ವಿಶ್ವ ಫೋಟೊಗ್ರಫಿ ದಿನ: ಕೊರೊನಾ ಕಾಲದ ಸ್ಫೂರ್ತಿಯ ಸೆಲೆ ಫೋಟೊಗ್ರಫಿ

ಶಾಹಿನ್ ಎಸ್. ಮೊಕಾಶಿ Updated:

ಅಕ್ಷರ ಗಾತ್ರ : | |

Prajavani

ದುಬಾರಿ ಬೆಲೆಯ ಮೊಬೈಲ್‌ಗಳು, ಅದಕ್ಕೆ ಹೊಂದುವಂತಹ ಹೈ-ರೆಸೊಲ್ಯೂಷನ್ ಕ್ಯಾಮೆರಾಗಳು ಇತ್ತೀಚಿನ ವರ್ಷಗಳಲ್ಲಿ ನಮ್ಮ ಜೇಬಿನಲ್ಲಿ ಜೋತಾಡ್ತಿರೋದು ಹೊಸ ಟ್ರೆಂಡ್. ಕೈಗೆಟಕುವ ಬೆಲೆಯಲ್ಲಿ ಸಿಗುವ ಸ್ಮಾರ್ಟ್ ಫೋನ್‌ಗಳಿಂದ ಇವತ್ತು ಎಲ್ಲರೂ ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿರೋದು ಸತ್ಯ. ಸುಮ್ಮನೆ ಏನೇ ಕಣ್ಣಿಗೆ ಬೀಳಲಿ, ಪೋರ್ಟ್ರೇಟ್ ಮೋಡ್, ಪನೋರಮಾದಲ್ಲಿ ಒಂದಿಷ್ಟು ಫೋಟೊ ಕ್ಲಿಕ್ಕಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಅಪ್‌ಲೋಡ್ ಮಾಡದೇ ಇರುವವರು ಬಹುಶಃ ಯಾರು ಇರಲಿಕ್ಕಿಲ್ಲ ಅಲ್ಲವೇ?

ಕಡಿಮೆಯಾಗುವ ಒತ್ತಡ

ಛಾಯಾಚಿತ್ರಗ್ರಹಣವೇ ಹಾಗೇ. ಒಂಥರಾ ಜಿಡ್ಡು ಹಿಡಿದಿರೋ ಮನಸ್ಸನ್ನು ಸ್ವಚ್ಛಗೊಳಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಸಮಯ ಕಳೆಯಲು ಛಾಯಾಗ್ರಹಣ ಮಾಡುತ್ತಿದ್ದ ನಾವು, ಲಾಕ್‌ಡೌನ್ ಸಮಯದಲ್ಲಿ ನಮ್ಮಲ್ಲಿ ಕರಗತವಾಗಿರುವ ಈ ಛಾಯಾಗ್ರಹಣದ ಕಲೆಯ ಪ್ರದರ್ಶನ ಪ್ರಾರಂಭಿಸಿದೆವು. ಅದಕ್ಕೆ ಹೊಸ ಮುನ್ನುಡಿ ಇಟ್ಟಿದ್ದು ನಮ್ಮ ವೃತ್ತಿಪರ ಛಾಯಾಗ್ರಾಹಕರು. ಜನತಾ ಕರ್ಫ್ಯೂ ದಿನ ನಾವೆಲ್ಲಾ ನಮ್ಮ ಜೀವಮಾನದಲ್ಲೇ ಎಂದಿಗೂ ಖಾಲಿಯಾಗಿ ಕಾಣದಂತಹ ರಸ್ತೆಗಳನ್ನು, ಮುಚ್ಚಿರುವ ಅಂಗಡಿ–ಮುಂಗಟ್ಟುಗಳನ್ನು, ಭಣಗುಡುತ್ತಿರುವ ನಗರ ಪ್ರದೇಶಗಳನ್ನು, ಬರಿದಾದ ಭಾವನೆಯನ್ನು ಬಿತ್ತಿ ಬಿತ್ತಿ ಸಾರುತ್ತಿರುವ ಪ್ರತಿಯೊಂದನ್ನೂ ಕಣ್ಣು ತುಂಬಿಕೊಂಡೆವು.

ಛಾಯಾಗ್ರಹಣದ ಛಾಯೆ...

ನಮ್ಮೆಲ್ಲರಲ್ಲಿ ಹುದುಗಿರುವ ಛಾಯಾಚಿತ್ರಗ್ರಾಹಕರು ಮೈಕೊಡವಿಕೊಂಡು ಮೇಲೇಳುವಂತೆ ಮಾಡಿದ್ದು ಕೊರೊನಾ ಪ್ರಾಪ್ತಿಯಿಂದ ಶುರುವಾದ ಇದೇ ಲಾಕ್‌ಡೌನ್. ಅಮ್ಮ ಅಥವಾ ಹೆಂಡತಿ ಮಾಡಿದ ಅಡುಗೆಯನ್ನು, ‘ವರ್ಕ್ ಫ್ರಮ್ ಹೋಮ್’ ಮಾಡುವಾಗ ಎದುರಾಗಿರುವ ವಿಭಿನ್ನ, ವಿಚಿತ್ರ, ಹಾಸ್ಯಾಸ್ಪದ ಘಟನೆಗಳನ್ನು, ಮನೆಯ ಗಾರ್ಡನ್‌ನಲ್ಲಿ ಅರಳುತ್ತಿರುವ ಹೂವುಗಳನ್ನು, ಸೂರ್ಯೋದಯ, ಸೂರ್ಯಾಸ್ತವನ್ನು ಅಥವಾ ನಾವು ಮನೆಯಲ್ಲಿ ಕೂತು ಕೂತು ಬೇಸರವಾದಾಗ, ವೆಬಿನಾರ್, ಆನ್‌ಲೈನ್ ಮೀಟಿಂಗ್‌ಗಳಿಂದ ಬಸವಳಿದಾಗ ಮೊಬೈಲ್‌ ಅನ್ನು ಕೈಗೆತ್ತಿಕೊಂಡು ನಮ್ಮ ಸೆಲ್ಫಿನೋ, ನಿಸರ್ಗ, ಮನೆಯವರ ಫೋಟೊ ಅಥವಾ ನಮ್ಮ ದೈನಂದಿನ ದಿನಚರಿಯನ್ನು ತೋರಿಸುವ ಫೋಟೊ ಕ್ಲಿಕ್ಕಿಸಿ ಅಚ್ಚಳಿಯದಂತೆ ನೆನಪಿನಲ್ಲಿ ಇಡುವಂತೆ ಮಾಡಿದ್ದು ಇದೇ ಲಾಕ್‌ಡೌನ್.

ವರ್ಚುವಲ್‌ ಫೋಟೊಗ್ರಫಿ

ನಟಿ ಟೀನಾ ದತ್ತ ಲಾಕ್‌ಡೌನ್ ಸಮಯದಲ್ಲಿ ಗೋವಾದಲ್ಲಿ ಉಳಿದಿದ್ದರಿಂದ ಛಾಯಾಗ್ರಾಹಕ ಅಮಿತ್ ಖನ್ನಾ ಅವರೊಂದಿಗೆ ವರ್ಚುವಲ್ ಫೋಟೊಶೂಟ್ ಮಾಡಿ ತಮ್ಮ ಅಭಿಮಾನಿಗಳಿಗೆ ಸಂಕಷ್ಟದ ಸಮಯದಲ್ಲೂ, ಪರಿಸ್ಥಿತಿ ಸರಿಯಿಲ್ಲದಿರುವಾಗಲೂ ಸಕಾರಾತ್ಮಕತೆಯಿಂದ ಇರಬೇಕು ಎನ್ನುವ ಸಂದೇಶವನ್ನು ನೀಡಿದ್ದು ಖುಷಿ ಕೊಡುವಂತಹದ್ದು.

ಮತ್ತೊಬ್ಬ ಛಾಯಾಗ್ರಾಹಕ ಸರ್ವೇಶ್ ನಾಗೇಕರ್ ಅವರು, ‘ಇಟಾಲಿಯನ್ ಛಾಯಾಚಿತ್ರಗ್ರಾಹಕ ಅಲೆಸ್ಸಿಯೋ ಅಲ್ಬಿ ಅವರ ವರ್ಚುವಲ್ ಫೋಟೊಗ್ರಾಫಿಯ ಕಲ್ಪನೆ ಈಗ ಸಾಕಾರವಾಗಿದೆ. ಕೊರೊನಾ ಸಾಂಕ್ರಾಮಿಕವು ಈ ವಿಶಿಷ್ಟ ಕಲೆಯನ್ನು ಗುರುತಿಸಲು ಪ್ರೇರಣೆ’ ಎನ್ನುತ್ತಾರೆ.

ಬೆಂಗಳೂರಿನ ಸೆಲೆಬ್ರಿಟಿ ಮತ್ತು ಫ್ಯಾಷನ್ ಫೋಟೊಗ್ರಾಫರ್ ಅರುಣ್ ದಾವಸ್ಕರ್ ಅವರು ಲಾಕ್‌ಡೌನ್ ಸಮಯದಲ್ಲಿ ಸೆಲಿಬ್ರಿಟಿ ಹಾಗೂ ಪ್ರೀ-ವೆಡ್ಡಿಂಗ್ ಫೋಟೊಶೂಟ್‌ಗಳನ್ನು ಗ್ರೀನ್ ಮ್ಯಾಟ್ ಶೂಟಿಂಗ್ ಮಾಡುವ ಮೂಲಕ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ‘ಇದು ಸರಳವಾದ ಕೆಲಸವಲ್ಲ. ಸದ್ಯಕ್ಕೆ ಕಡಿಮೆ ಬಜೆಟ್‌ನಲ್ಲಿ, ನಮ್ಮ ಅಕ್ಕಪಕ್ಕದಲ್ಲಿ ಚೆನ್ನಾಗಿರೋ ಸ್ಥಳಗಳನ್ನು ಹುಡುಕಿ, ತುಂಬಾ ಜಾಗೃತೆವಹಿಸಿ ಫೋಟೊಶೂಟ್ ಮಾಡುವುದು ಸವಾಲಿನ ಕೆಲಸವೇ ಆದರೂ ಇದೊಂದು ವಿಭಿನ್ನ ಅನುಭವ’ ಎನ್ನುತ್ತಾರೆ ಅರುಣ್.

ಇದು ವೃತ್ತಿಪರರ ಅನುಭವವಾದರೆ, ನಮ್ಮಂತ ಸಾಮಾನ್ಯ ಜನರು ಇತ್ತೀಚಿಗೆ ಹ್ಯಾಷ್ ಟ್ಯಾಗ್ ಹಾಕೊಂಡು ಅಮೆಚೂರ್ ಫೋಟೊಗ್ರಾಫರ್, #ಫ್ಯಾಷನ್ ಫೋಟೊಗ್ರಾಫರ್, #ನೇಚರ್ ಫೋಟೊಗ್ರಾಫರ್ ಅಂತ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ಟ್ವಿಟ್ಟರ್‌ನಲ್ಲಿ ಖುಷಿಪಡುತ್ತಿದ್ದೇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು