ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಗೆಲುವಿಲ್ಲದ ಪಂದ್ಯ

Last Updated 16 ಅಕ್ಟೋಬರ್ 2019, 19:17 IST
ಅಕ್ಷರ ಗಾತ್ರ

ಶಂಕ್ರಿ– ಸುಮಿ ನಡುವೆ ಜಗಳವಾಗಿ ಅವಳ ಮುಖ ಅತ್ತ, ಅವನ ಮುಖ ಇತ್ತ ಆಗಿತ್ತು.

‘ಗಂಡ– ಹೆಂಡತಿ ಜಗಳ ಉಂಡು ಮಲಗುವತನಕ, ಇಬ್ಬರೂ ಉಂಡು ತೆಪ್ಪಗೆ ಮಲಗಬೇಕಾಗಿತ್ತು...’ ಬುದ್ಧಿ ಹೇಳಿದೆ.

‘ಉಣ್ಣಲು ಯಾರು ಅಡುಗೆ ಮಾಡಬೇಕು ಎನ್ನೋ ವಿಚಾರಕ್ಕೆ ಜಗಳ ಮುಂದುವರಿಯಿತು’ ಸುಮಿ ಕಣ್ಣು ಒರೆಸಿಕೊಂಡಳು.

‘ಜಗಳದಲ್ಲಿ ಯಾರು ಗೆದ್ದಿರಿ?’

‘ಗಂಡ– ಹೆಂಡತಿ ಜಗಳದಲ್ಲಿ ಗೆದ್ದು ಪದಕ, ಪುರಸ್ಕಾರ ಪಡೆದವರು ಜಗತ್ತಿನಲ್ಲಿ ಇದ್ದಾರಾ?’ ಅಂದ ಶಂಕ್ರಿ.

‘ಅದ್ಸರಿ, ಜಗಳಕ್ಕೆ ಕಾರಣವೇನು?’

‘ಸಿದ್ದಣ್ಣ, ಈಶಣ್ಣನ ಸದನ ಕದನ...’ ಶಂಕ್ರಿ ಹೇಳಿದ.

‘ಹೌದು, ಟಿ.ವಿ. ಸೀರಿಯಲ್‍ನಲ್ಲಿ ಅತ್ತೆ– ಸೊಸೆ ಜಗಳ ನೋಡುತ್ತಿದ್ದೆ, ಸಿದ್ದಣ್ಣ, ಈಶಣ್ಣನ ಜಗಳ ನೋಡಬೇಕು ಅಂತ ಚಾನೆಲ್ ಚೇಂಜ್ ಮಾಡಿದಾಗ ಜಗಳ ಶುರುವಾಯ್ತು’- ಸುಮಿ.

‘ಶತಮಾನಗಳಿಂದಲೂ ಅದೇ ಅತ್ತೆ– ಸೊಸೆ ಜಗಳ... ಸದನ ಕಲಹದಲ್ಲಿ ಆಡಳಿತ, ವಿರೋಧ ಪಕ್ಷದ ನಾಯಕರಾಗಿ ಈಶಣ್ಣ, ಸಿದ್ದಣ್ಣ ಅದ್ಭುತ ಪ್ರದರ್ಶನ ನೀಡಿದರು. ತಮ್ಮ ಪಾತ್ರಕ್ಕೆ ಜೀವ ತುಂಬಿ, ನ್ಯಾಯ ಒದಗಿಸಿದ್ದರು’ ಶಂಕ್ರಿ ಸಮರ್ಥಿಸಿಕೊಂಡ.

‘ಅಲ್ಲಿ ರಿಚ್ ಕಾಸ್ಟ್ಯೂಮ್ ಇಲ್ಲ, ಪಂಚ್ ಡೈಲಾಗ್ ಇಲ್ಲ’ ಸುಮಿಗೆ ಬೇಸರ.

‘ಪಾತ್ರಧಾರಿಗಳು ಕಿರೀಟ ಧರಿಸಿ, ಕತ್ತಿ-ಗುರಾಣಿ, ಬಿಲ್ಲು-ಬಾಣ ಹಿಡಿಯಲು ಸದನ ಕಲಹ ಪೌರಾಣಿಕವಲ್ಲ, ಶುದ್ಧ ಸಾಮಾಜಿಕ’ ಕ್ಲಾರಿಫೈ ಮಾಡಿದೆ.

‘ಸಿದ್ದಣ್ಣ, ಈಶಣ್ಣ ನಡುವಿನ ಡೈಲಾಗು, ಕೌಂಟರ್‌ ಡೈಲಾಗ್ ಕೇಳಿ ಸದನದ ಸದಸ್ಯರೆಲ್ಲಾ ನಕ್ಕು ಚಪ್ಪಾಳೆ ತಟ್ಟಿ ಆನಂದಪಟ್ಟರು ಗೊತ್ತಾ...’ ಎಂದ ಶಂಕ್ರಿ.

‘ಹುಷಾರು! ನಿಮ್ಮ ಜಗಳಕ್ಕೆ ಸಿದ್ದಣ್ಣ, ಈಶಣ್ಣನ ಜಗಳ ಕಾರಣ ಅಂತ ನ್ಯೂಸ್ ಚಾನೆಲ್‍
ನವರಿಗೆ ಗೊತ್ತಾಗಿಬಿಟ್ಟರೆ, ಬಂದು ಸಂದರ್ಶನ ಮಾಡಿ ನಿಮ್ಮ ಜಗಳವನ್ನು ಜಗಜ್ಜಾಹೀರು ಮಾಡಿಬಿಡುತ್ತಾರೆ, ಎಚ್ಚರ...!’ ಹೆದರಿಸಿದೆ.

ಶಂಕ್ರಿ– ಸುಮಿ ದಿಗಿಲುಬಿದ್ದು, ಜಗಳ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT