ದಂಡಿನ ಹಿರೇಹಾಳ ಎಂಬ ಹಳ್ಳಿಯ ಸಾಮಾನ್ಯ ದೂದೇಕುಲ ಕುಟುಂಬದಲ್ಲಿ ಹುಟ್ಟಿದ ಹುಡುಗನೊಬ್ಬ ಹೊಟ್ಟೆ ಹೊರೆಯುವ ಸಲುವಾಗಿ ಊರೂರು ಅಲೆದು ಶಿವಮೊಗ್ಗಕ್ಕೆ ಬಂದು ನೆಲಸಿ ಕಟ್ಟಿದ ಕಸ್ತೂರಿ ನಿವಾಸದ ಕಥೆ 'ಕೊಡುವ ಸಡಗರ'ಕ್ಕೆ ಸಾಕ್ಷಿಯಾಗಿದೆ. ಇಬ್ರಾಹಿಂ ಸಾಹೇಬರು ತಮ್ಮ ವ್ಯವಹಾರದಿಂದ ಬಂದ ಲಾಭದ ಸಣ್ಣ ಭಾಗವನ್ನೂ ಸ್ವಂತಕ್ಕೆ ಬಳಸದೆ ಬಡ ವಿದ್ಯಾರ್ಥಿಗಳು, ಹಾಸ್ಟೆಲ್, ಸಾಮಾಜಿಕ ಸೇವಾನಿರತ ಸಂಘ ಸಂಸ್ಥೆಗಳು ಯಾರೇ ಬರಲಿ ಕೇಳಿದಂತೆಲ್ಲಾ ಕೇಳಿದಷ್ಟನ್ನು ಕೊಟ್ಟು ಕಳಿಸುವ ಕಕ್ಕುಲಾತಿಯವರು. ಎಷ್ಟೋ ಸಲ ಕೊಡುವಾಗ ಪಡೆದುಕೊಳ್ಳುವವರ ವಿವರ ತಿಳಿದು ಅಗತ್ಯ ಬಿದ್ದರೆ ಕೇಳಿದ್ದಕ್ಕಿಂತ ಹೆಚ್ಚೇ ಕೊಟ್ಟು ಕರಗಿದವರು. ಕೈಚಾಚಿ ಕೊಡುವಾಗ ಅವರ ಮುಖದ ತುಂಬ ಅರಳುತ್ತಿದ್ದ ನಗು, ಮೆದುವಾದ ಮಾತುಗಳು ಅವರ ಆಳದ ಚೈತನ್ಯವನ್ನು ಸೂಚಿಸುತ್ತಿದ್ದವು. ಅವರಿಗಿದ್ದ ತೀವ್ರ ಕಲಾಸಕ್ತಿಯ ಕಾರಣಕ್ಕೆ ಶಿವಮೊಗ್ಗ ಕವಿ ಕಲಾವಿದರಿಂದ ತುಂಬಿ ತುಳುಕುತ್ತಿತ್ತು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಗಾಯಕರ ಕಾರ್ಯಕ್ರಮಗಳಿಂದ ಹಿಡಿದು ಇಡೀ ಕನ್ನಡ ಸಾಹಿತ್ಯ ಮತ್ತು ತತ್ವಪದಗಳವರೆಗೆ ವಿಚಾರಸಂಕಿರಣಗಳಿಗೆ, ರಂಗ ಪ್ರದರ್ಶನಕ್ಕೆ ಅವರು ಕಾಯಂ ಪ್ರಾಯೋಜಕರಾಗಿದ್ದರು. ವೇದಿಕೆಯಿಂದ ದೂರವಿದ್ದು ಅವರು ನಿರ್ವಹಿಸಿದ ಕಾರ್ಯಕ್ರಮಗಳು ಅಚ್ಚುಕಟ್ಟುತನಕ್ಕೆ, ಅದ್ದೂರಿಗೆ ಸಾಕ್ಷಿಯಾಗಿದ್ದವು.

ಅವರ ಮನೆಯ ಗೋಡೆಗಳನ್ನು ಅನ್ಯಮತದ ದೇವರ ದೊಡ್ಡ ಗಾತ್ರದ ಫೋಟೋಗಳು ಅಲಂಕರಿಸಿದ್ದವು. ಮಾತ್ರವಲ್ಲ, ನಿತ್ಯವೂ ಆ ದೇವರ ಪೂಜೆ ಸಾಂಗವಾಗಿ ನಡೆಯುತ್ತಿತ್ತು. ಸದಾ ಜನರಿಂದ ತುಂಬಿರುತ್ತಿದ್ದ ಆ ಕಸ್ತೂರಿ ನಿವಾಸದಲ್ಲಿ ಸೌಹಾರ್ದ ಎಂಬುದು ಬರೀ ಪದವಾಗಿಯಲ್ಲ, ಕ್ರಿಯೆಯಾಗಿತ್ತು. ಸಾಮರಸ್ಯ ಇಬ್ರಾಹಿಂ ಸಾಹೇಬರ ವ್ಯಕ್ತಿ ಪ್ರಜ್ಞೆಯ ಭಾಗವಾಗಿತ್ತು. ಪಿಂಜಾರ ಸಮುದಾಯದ ಜೀವಧಾತುವಿನಂತಿರುವ ಧರ್ಮ ಸಮನ್ವಯದಿಂದಾಗಿ ಉದ್ದಕ್ಕೂ ಅವರು ಎಲ್ಲ ಉತ್ತಮಗಳ ಮೊತ್ತದಂತಿದ್ದರು. ಕೊಡುವುದರಲ್ಲಿನ ಖುಷಿಗೆ ಯಾವುದೂ ಸಾಟಿಯಿಲ್ಲ. ಅದು ಬೇರೆ ಯಾವುದರಿಂದಲೂ ಸಿಗುವುದಿಲ್ಲ ಎಂದು ಅವರು ನಂಬಿ ಬದುಕಿದ್ದರು. ಕೊಟ್ಟು ಕೊಟ್ಟು ಬರಿಗೈಯಾಗುವ ಅಳುಕಿಲ್ಲದೆ ಕೊಡುತ್ತಲೇ ಹೋದರು. ಮನುಷ್ಯ ಜೀವನವನ್ನು ಇಷ್ಟು ನಿಸ್ವಾರ್ಥದಿಂದ ಬದುಕಬಹುದು ಎಂಬುದನ್ನು ಅವರ ಬಾಳಿನ ಭವ್ಯತೆಯೇ ಹೇಳುತ್ತದೆ.

ಕಸ್ತೂರಿ ನಿವಾಸ ಸಿನಿಮಾದ ನಾಯಕನೂ ಹಾಗೆಯೇ. ಯಾರಿಗೇ ಆಗಲಿ, ಎಂಥದ್ದೇ ಸಂದರ್ಭ ಬರಲಿ ವಿಚಲಿತನಾಗದೆ ಧಾರಾಳವಾಗಿ ಕೊಡುತ್ತಲೇ ಹೋಗುತ್ತಾನೆ. ಕೊಡುವುದು ಅವನಿಗೆ ಸಂತೋಷ ತರುತ್ತದೆ ಮಾತ್ರವಲ್ಲ, ಅದು ಆತನ ಪ್ರತಿಷ್ಠೆ ಕೂಡ. ಕೊಡುವಾಗಲೆಲ್ಲಾ ನಾಯಕನಿಂದ ‘ಕಸ್ತೂರಿ ನಿವಾಸದ ವಂಶದ ಕೈ ಯಾವಾಗಲೂ ಭೂಮಿಯನ್ನು ನೋಡುತ್ತದೆಯೇ ಹೊರತು ಆಕಾಶವನ್ನು ನೋಡುವುದಿಲ್ಲ’ ಎಂಬ ತುಂಬಾ ಜನಪ್ರಿಯವಾದ ಡೈಲಾಗ್ ಬರುತ್ತದೆ. ಕೊಟ್ಟು ಕೊಟ್ಟು ಬರಿಗೈಯಾಗಿ ಕಡೆಯಲ್ಲಿ ನಾಯಕ ನಿಧಾನವಾಗಿ ನೆಲಕ್ಕೆ ಬಿದ್ದ ಬಗೆಯನ್ನು ಆತನ ನಿಷ್ಠಾವಂತ ಸೇವಕ ‘ನೋಡಿ ಆ ಕೈನಾ, ಈಗಲೂ ಭೂಮಿನೇ ನೋಡ್ತಾ ಇದೆ’ ಎಂದು ಸಂಕಟಪಡುತ್ತಾನೆ.

ಹಿರೇಹಾಳದ ಇಬ್ರಾಹಿಂ ಸಾಹೇಬರ ಅಸಂಖ್ಯಾತ ಅಭಿಮಾನಿಗಳ ಸಂಕಟ ಈ ಬಗೆಯದ್ದೇ ಆಗಿದೆ. ಅವರು ಎಲ್ಲೇ ಇರಲಿ, ಹೇಗೇ ಇರಲಿ ಅವರ ಕೊಡುವ ಕೈ ನೆಲ ನೋಡುತ್ತದೆ. ಕೊಟ್ಟು ಕೊಟ್ಟು ಅವರು ಪಡೆದುಕೊಂಡದ್ದು ಏನು ಅಂತ ಅವರಿಂದ ಆಶ್ರಿತರಾದವರ ಕಣ್ಣಹನಿಗಳನ್ನು ನೋಡಿದರೆ ತಿಳಿಯುತ್ತದೆ. ಅದೊಂದು ಬಗೆಯ ಧನ್ಯತೆ. ಸಾರ್ಥಕ ಜೀವನಯಾನದ ಭವ್ಯತೆ.
ನಾವು ಎಷ್ಟು ಗಳಿಸುತ್ತಿದ್ದೇವೆ? ಅನ್ನುವುದಕ್ಕಿಂತ ಹೇಗೆ ಗಳಿಸುತ್ತಿದ್ದೇವೆ ಅನ್ನುವುದು ಮುಖ್ಯ. ಹಾಗೆಯೇ ನಮ್ಮ ಗಳಿಕೆಯ ಉಪಯೋಗ ಯಾರಿಗೆ ಹೇಗೆ ಆಗುತ್ತಿದೆ ಎನ್ನುವುದು ಅದಕ್ಕಿಂತ ಮಹತ್ವದ್ದು. ನಾವು ಕಟ್ಟುವ ಕಸ್ತೂರಿ ನಿವಾಸದ ಭೌತಿಕ ಸ್ವರೂಪ ಶಾಶ್ವತವಲ್ಲ, ಅದರ ಆಂತರಿಕ ಆಶಯಗಳು ಮಾತ್ರ ಜೀವಂತವಾಗಿ ಉಪಯುಕ್ತವಾಗಿ ಇರುವಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.