ಇವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ಸಚಿವರಾಗಿದ್ದ ದಿನಗಳು. ಪರಿಚಿತರೊಬ್ಬರ ಮಗ ತನ್ನ ಗೆಳೆಯನ ಜೊತೆಯಲ್ಲಿ ಇವರನ್ನು ಕಾಣಲು ಬಂದು ‘ನನ್ನ ಮಿತ್ರನಾದ ಇವನು ಬಡವ, ದಲಿತ. ಹಾಜರಾತಿ ಕಡಿಮೆ ಇರುವ ಕಾರಣಕ್ಕೆ ಇವನಿಗೆ ಪರೀಕ್ಷೆ ಬರೆಯಲು ಅನುಮತಿ ಸಿಕ್ಕಿಲ್ಲ. ನೀವು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಹೇಳಿ ಅನುಮತಿ ಕೊಡಿಸಬೇಕು’ ಅಂತ ಮನವಿ ಮಾಡಿದರು. ಕುಲಸಚಿವರು ಮುಜುಗರ ಪಟ್ಟುಕೊಳ್ಳಬಹುದು, ನನ್ನ ಮಾತನ್ನು ಕೇಳಲೂಬಹುದು. ಆದರೆ ಮಂತ್ರಿಗಳು ಹೀಗೆ ಹೇಳಿದರಲ್ಲಾ ಅನ್ನುವ ಭಾವನೆಯೊಂದು ಅವರಲ್ಲಿ ಕಡೆಯವರೆಗೂ ಉಳಿದುಬಿಡುತ್ತದೆ ಎಂದು ಯೋಚಿಸಿದ ಮಂತ್ರಿಗಳು ‘ಒಂದು ಕೆಲಸ ಮಾಡಿ. ನೀವು ಮುಂದಿನ ವರ್ಷ ಮತ್ತೆ ತರಗತಿಗೆ ತಪ್ಪದೆ ಹೋಗಿ ಪರೀಕ್ಷೆ ಕಟ್ಟಿ ಬರೆಯಿರಿ. ನಿಮ್ಮ ಒಂದು ವರ್ಷದ ಊಟ ವಸತಿ ಪರೀಕ್ಷೆ ಫೀಜು ಸೇರಿದಂತೆ ಎಲ್ಲ ವೆಚ್ಚವನ್ನು ಪೂರ್ತಿಯಾಗಿ ನಾನು ಭರಿಸುತ್ತೇನೆ’ ಎಂದು ಹೇಳಿ ಅದರಂತೆ ನಡೆದುಕೊಂಡರು.

ಮುಂದೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಇವರು ಮತಯಾಚನೆ ಮಾಡುತ್ತಾ ಧನಿಕರೊಬ್ಬರ ಮನೆಗೆ ಬಂದರು. ತಮ್ಮ ವಿಶಾಲವಾದ ಮನೆಯ ಜಗಲಿಯಲ್ಲಿ ಕುಳಿತಿದ್ದ ಶ್ರೀಮಂತರು ಇವರನ್ನು ನೋಡಿ, ‘ಬಾರಪ್ಪಾ ಬಾ, ಬಹಳ ದಿನಗಳ ಮೇಲೆ ಬಂದೆಯಲ್ಲಾ ಏನು ಸಮಾಚಾರ?' ಎಂದರು. ಅದಕ್ಕೆ ಅಭ್ಯರ್ಥಿಯು, ‘ನಮ್ಮಂಥವರು ಯಾಕ್ ಬರ್ತಾರಪ್ಪಾ, ಚುನಾವಣೆ ಬಂತಲ್ಲಾ, ಓಟು ಕೇಳೋಕೆ ಬಂದಿದೀನಿ’ ಅಂದರು. ತಕ್ಷಣ ಆ ಧನಿಕರು ‘ಅಯ್ಯಯ್ಯೋ, ಎಂಥ ಕೆಲಸ ಆಯ್ತಲ್ಲ ಮಾರಾಯ, ನಿನ್ನೆದುರಿಗೆ ಯಾರೋ ನಿಂತಿದಾನಂತಲ್ಲಾ, ಅವನು ಬಂದಿದ್ದ, ಅವನಿಗೆ ಓಟು ಕೊಡ್ತೀನಿ ಅಂತ ಮಾತು ಕೊಟ್ಟುಬಿಟ್ಟೆನಲ್ಲಪ್ಪಾ’ ಅಂದರು. ಆ ಧನಿಕರನ್ನು ಬಾಚಿ ತಬ್ಬಿಕೊಂಡು ಬೆನ್ನು ತಟ್ಟುತ್ತಾ ‘ನಿನ್ನ ಮಾತು ಉಳಿಸಿಕೋ, ಅವನಿಗೇ ಓಟು ಕೊಡು’ ಎಂದು ಗೆಲುವಾದ ಮುಖದಿಂದ ಮುಂದಿನ ಮನೆಗಳತ್ತ ತಮ್ಮ ಮತಯಾಚನೆ ಕಾರ್ಯವನ್ನು ಮುಂದುವರಿಸಿದರು. ಆ ಚುನಾವಣೆಯಲ್ಲಿ ಇವರು ಗೆದ್ದು ಲೋಕಸಭೆ ಪ್ರವೇಶಿಸಿದರು. ಇವರು ಜಗಳೂರು ಮಹಮದ್ ಇಮಾಂ.

ಹೋಟೆಲ್, ಮಾರ್ಕೆಟ್, ಬಸ್ ನಿಲ್ದಾಣ ಎಲ್ಲೇ ಇರಲಿ, ಜನ ರಾಜಕೀಯವನ್ನೇ ಮಾತಾಡುತ್ತಿರುತ್ತಾರೆ. ಒಂದು ಜಾತಿಗೆ ಸೇರಿದವರು ತಂತಮ್ಮ ಜಾತಿಯ ನಾಯಕನ ಪ್ರಭಾವ, ಸಂಪತ್ತನ್ನು ಕುರಿತು ಅಭಿಮಾನದಿಂದ ಹೇಳುತ್ತಾ ಅನ್ಯಜಾತಿಯ ನಾಯಕರನ್ನು ಬಯ್ಯುತ್ತಾ ಖುಷಿಪಡುತ್ತಾರೆ. ಆ ಗುಂಪಿನಲ್ಲಿ ಬೇರೆ ಜಾತಿ, ಧರ್ಮದವರು ಇದ್ದರೆ ಅವರ ಚರ್ಚೆ ಜಾತಿ ಧರ್ಮ ಮೀರಿ ವಿಶ್ವಮಾನವನ ಸಂದೇಶ ಸಾರುತ್ತದೆ. ಇಂತಹ ಆಷಾಢಭೂತಿಗಳನ್ನು ಇಂದಿನ ರಾಜಕಾರಣ ರೂಪಿಸಿಬಿಟ್ಟಿದೆ.

ಅದೊಂದು ಕಾಲವಿತ್ತು. ರಾಜಕಾರಣವನ್ನು ಜನರ ಸೇವೆಗೆ ಮೀಸಲಾಗಿಟ್ಟ, ರಾಜ್ಯಾಧಿಕಾರವನ್ನು ಸ್ವಜನಪಕ್ಷಪಾತದಿಂದ ದೂರವಿಟ್ಟ ಕಾಲ. ಸಾರ್ವಜನಿಕ ಹಣಕಾಸನ್ನು ಲೋಕದ ಜನರಿಗಾಗಿಯೇ ಬಳಸುತ್ತಿದ್ದ ಕಾಲ. ಕುಟುಂಬದ ಮತ್ತೊಬ್ಬರನ್ನು ರಾಜಕಾರಣದ ಬಾಗಿಲಿಗೆ ತರಲು ಹೇಸುತ್ತಿದ್ದ ಕಾಲ. ಚರಿತ್ರೆ, ರಾಜನೀತಿ, ಸಾಹಿತ್ಯ, ತತ್ವಜ್ಞಾನಗಳನ್ನೆಲ್ಲ ಓದುತ್ತಾ ರಾಜಕೀಯಕ್ಕೆ ಬೌದ್ಧಿಕ ಘನತೆ ತುಂಬುತ್ತಿದ್ದ ಕಾಲ.

ಇಮಾಂ ಅವರ ಸಮಕಾಲೀನ ರಾಜಕಾರಣ ಹೀಗೆಯೇ ಇತ್ತು. ಯಾವಾಗಲೂ ವಿರೋಧ ಪಕ್ಷದಲ್ಲಿದ್ದ ಅವರನ್ನು ರಾಜ್ಯಪಾಲರನ್ನಾಗಿ ಮಾಡುತ್ತೇವೆ ಎಂದರೆ ನಯವಾಗಿ ನಿರಾಕರಿಸಿದರು. ಜಾತ್ಯತೀತತೆಯ ಮಾದರಿಯಂತಿದ್ದ ಅವರು ಆಸ್ಪತ್ರೆಯಲ್ಲಿದ್ದಾಗ ತರಳಬಾಳು ಹಿರಿಯ ಗುರುಗಳು ಆರೋಗ್ಯ ವಿಚಾರಿಸಲು ಬಂದು ‘ಈಗಿನ ರಾಜಕಾರಣದ ಬಗ್ಗೆ ನಿಮಗೇನನ್ನಿಸುತ್ತದೆ?' ಅಂತ ಕೇಳುತ್ತಾರೆ. ‘ಕ್ಯಾಕರಿಸಿ ಉಗೀಬೇಕು ಅನಿಸುತ್ತೆ’ ಎನ್ನುತ್ತಾರೆ ಇಮಾಂ. ಎಂಬತ್ತರ ದಶಕದಲ್ಲಿ ಆಡಿದ ಈ ಮಾತು ಇಮಾಂ ಅವರ ಸಾತ್ವಿಕ ಸಿಟ್ಟಿನ ಪ್ರತೀಕ, ನೈತಿಕ ನೋವಿನ ಸಂಕೇತ. ನಾವು ನಮ್ಮ ರಾಜಕಾರಣವನ್ನು ಮತ್ತೆ ಮಾನವೀಯಗೊಳಿಸಲು ಇಮಾಂ ಅಂತಹವರ ಇತಿಹಾಸವನ್ನು ನೆನೆಯುತ್ತಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.