ಒಂದು ಸಣ್ಣ ಪರ್ವತಪ್ರದೇಶದ ಹಳ್ಳಿಯ ಅಂಚಿನಲ್ಲಿ ಛಾಯಾ ಎಂಬ ತರುಣಿ ವಾಸಿಸುತ್ತಿದ್ದಳು. ಅವಳಿಗೆ ಮಡಕೆ ಮಾಡುವುದೆಂದರೆ ಇಷ್ಟ. ಅದನ್ನೇ ಉದ್ಯೋಗವಾಗಿಸಿಕೊಂಡಿದ್ದಳು ಕೂಡ. ಸರಳವಾದ, ಬಾಳಿಕೆ ಬರುವ ಮಡಕೆಗಳನ್ನು ತಯಾರಿಸುತ್ತಿದ್ದಳು. ಒಂದು ಸಲ ಆ ಊರಿಗೆ ಒಬ್ಬ ವ್ಯಾಪಾರಿ ಬಂದನು. ಅವನು ತಂದಿದ್ದ ಬಣ್ಣಬಣ್ಣದ, ಹೊಳೆಯುವ ಪಾತ್ರೆಗಳು ಎಲ್ಲರ ಕಣ್ಣು ಸೆಳೆದವು. ಹಳ್ಳಿಯವರು ಅವುಗಳನ್ನು ಬಳಸಲು ಆರಂಭಿಸಿದರು. ಸಹಜವಾಗಿ ಛಾಯಾಳ ವ್ಯಾಪಾರ ಕಡಿಮೆಯಾಯಿತು. ಏನು ಮಾಡುವುದೆಂದು ತೋಚದೇ ಚಡಪಡಿಸತೊಡಗಿದಳು ಆಕೆ.

ಹೀಗೆಯೇ ಒಂದು ದಿನ ಮೊಬೈಲ್ ನೋಡುತ್ತಿರುವಾಗ ಒಡೆದ ಮಡಕೆಯನ್ನು ಜೋಡಿಸಿ ಆ ಬಿರುಕುಗಳನ್ನು ಚಿನ್ನದ ಪುಡಿ ಉಪಯೋಗಿಸಿ ಅಲಂಕರಿಸುವ ಜಪಾನಿನ ‘ಕಿಂಟ್ಸುಗಿ’ ಎಂಬ ವಿಧಾನದ ಬಗ್ಗೆ ಅವಳಿಗೆ ಗೊತ್ತಾಯಿತು. ಅಮ್ಮ ತನಗೆ ಮಡಕೆ ಮಾಡುವುದನ್ನು ಕಲಿಸಿದಾಗ ಮಾಡಿದ ಒಂದು ಮಡಕೆ ಒಡೆದು ಹೋಗಿತ್ತು. ಅಮ್ಮನ ನೆನಪಿಗೆ ಅದನ್ನು ಹಾಗೆಯೇ ಇಟ್ಟಿದ್ದಳಾಕೆ. ಆ ಮಡಕೆಯನ್ನು ತೆಗೆದಳು. ಆ ಭಾಗದಲ್ಲಿ ಸಿಗುವ ಬಣ್ಣಬಣ್ಣದ ಕಲ್ಲುಗಳ ಪುಡಿಯ ಒಂದು ವಿಶೇಷ ಲೇಪನ ತಯಾರಿಸಿದಳು. ಕಾರಣ ಚಿನ್ನದ ಪುಡಿ ಉಪಯೋಗಿಸುವುದು ಅವಳಿಗೆ ಸಾಧ್ಯವಿರಲಿಲ್ಲ. ಆ ಲೇಪನದಿಂದ ಬಿರುಕು ತುಂಬಿದಳು. ಸೂರ್ಯನ ಬೆಳಕು ಅದರ ಮೇಲೆ ಬಿದ್ದಾಗ, ಆ ಗೆರೆ ಬಿಸಿಲಿಗೆ ಹೊಳೆಯುವ ನದಿಯಂತೆ ಆಕರ್ಷಕವಾಗಿ ಕಂಡಿತು. ಮೊದಲು ಮಡಕೆಯಲ್ಲಿ ಬಿರುಕು ಇದ್ದ ಕಾರಣ ಅದು ಅನುಪಯುಕ್ತವಾಗಿತ್ತು. ಆದರೆ ಈಗ ಈ ಲೇಪನದ ನಂತರ ಆ ಬಿರುಕೇ ಆ ಮಡಕೆಯ ಆಕರ್ಷಣೆಯ ಕಾರಣವಾಯಿತು.

ಸಂಜೆ ಅಂಗಡಿಗೆ ಬಂದ ಪಕ್ಕದ ಮನೆಯ ಅಜ್ಜ ರಿಪೇರಿಯಾದ ಮಡಕೆ ನೋಡಿ ಖುಷಿ ಪಟ್ಟು ಮೊಮ್ಮಗಳಿಗೆ ಅನ್ನಪ್ರಾಶನ ಮಾಡಿಸಿದ ಮಣ್ಣಿನ ತಟ್ಟೆಯನ್ನು ತಂದು ಕೊಟ್ಟರು. ಅದು ಒಡೆದಿತ್ತು. ರಿಪೇರಿಯಾದ ಮೇಲೆ ಬಹಳ ಖುಷಿಯಿಂದ ಊರೆಲ್ಲ ಹೇಳಿದರು. ಜನರು ತಮ್ಮ ಕುಟುಂಬದ ಅಮೂಲ್ಯ ನೆನಪುಗಳ ಪಾತ್ರೆಗಳನ್ನು ತಂದರು. ಪ್ರತಿಯೊಂದು ಮಡಕೆಯ ಹಿಂದೆ ಒಂದು ಕಥೆ ಇತ್ತು. ಮದುವೆಯಲ್ಲಿ ಬಳಸಿದ ಬಟ್ಟಲು, ಮೊಟ್ಟ ಮೊದಲು ಖರೀದಿಸಿದ್ದು, ಮಕ್ಕಳ ಆಟಿಕೆಯದ್ದು... ಹೀಗೆ.

ಸ್ವಲ್ಪ ದಿನಗಳಲ್ಲಿಯೇ ಛಾಯಾಳ ಕೆಲಸ ಜನಪ್ರಿಯತೆ ಪಡೆಯಲಾರಂಭಿಸಿತು. ಜನರು ಸುಂದರ ನೆನಪುಗಳನ್ನು ಹೊಂದಿದ ಪಾತ್ರೆಗಳ ಮೌಲ್ಯವನ್ನು ಕಾಪಿಟ್ಟುಕೊಳ್ಳಬಯಸಿದರು. ಬಣ್ಣದ ಗೆರೆಗಳಿಂದ ಅಲಂಕರಿಸಲ್ಪಟ್ಟ ರಿಪೇರಿಯಾದ ಮಡಕೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ಒಂದು ದಿನ ಆ ವ್ಯಾಪಾರಿ ಮತ್ತೆ ಹಳ್ಳಿಗೆ ಬಂದವನು ಹೇಗೆ ಇದು ಸಾಧ್ಯವಾಯಿತು ಎಂದು ಕೇಳಿದ. ಆಕೆ ಒಂದು ಸರಿಪಡಿಸಿದ ಮಡಕೆಯನ್ನು ತೋರಿಸಿ, ‘ಏನಿಲ್ಲ, ಇದರ ಮೌಲ್ಯವನ್ನು ಮತ್ತೆ ನೆನಪು ಮಾಡಿಕೊಟ್ಟೆ ಅಷ್ಟೇ’ ಅಂದಳು. ವ್ಯಾಪಾರಿ ಅವಳ ಜಾಣತನಕ್ಕೆ ತಲೆದೂಗಿದ.

ನಾವೆಲ್ಲ ಇಂದು ಪರಿಪೂರ್ಣತೆಯ ಕಡೆ ಓಡುತ್ತಿದ್ದೇವೆ. ಆದರೆ ಯಾವ ಸಂಗತಿಯೂ ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಯಾವ ಮನುಷ್ಯನೂ ಪರಿಪೂರ್ಣನಲ್ಲ. ಎಲ್ಲರಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆ. ಅದು ಅತ್ಯಂತ ಸಹಜವಾದದ್ದು. ‘ಗಾಯ ಎಂದರೆ ಬೆಳಕು ನಮ್ಮೊಳಗನ್ನು ಪ್ರವೇಶಿಸುವ ಜಾಗ’ ಎಂದು ಸೂಫಿ ಕವಿ ರೂಮಿ ಹೇಳಿದ್ದು ಬಹು ಅರ್ಥಪೂರ್ಣ. ಹೀಗಾಗಿ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು. ಕಾರಣ ತಪ್ಪುಗಳಿಂದ ಕಲಿತ ಪಾಠ ಅಮೂಲ್ಯವಾಗಿರುತ್ತದೆ, ಒಡೆದ ಮಡಕೆಯ ಹೊಳೆವ ಬಿರುಕಿನ ಚೆಲುವಿನಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.