ನಾವು ಯಾರೂ ನಿಸರ್ಗ ಕೆಡಿಸಬಾರದು. ನಿಸರ್ಗ ಒಂದು ಅದ್ಭುತ. ಅದಕ್ಕ ಬ್ರಹ್ಮಾಂಡ ಅಂತ ಕರೀತಾರ. ನಮ್ಮ ದೇಹ ಇದೆಯಲ್ಲ ಅದಕ್ಕ ಪಿಂಡಾಂಡ ಅಂತಾರ. ಈ ಪಿಂಡಾಂಡ ಬ್ರಹ್ಮಾಂಡದಿಂದಲೇ ಆಗೈತಿ. ಬ್ರಹ್ಮಾಂಡ ಕೆಟ್ಟಿತು ಅಂದರ ಪಿಂಡಾಂಡವೂ ಕೆಡುತ್ತದ. ಅದಕ್ಕೆ ಅದನ್ನು ಕೆಡಿಸಬಾರದು. ಗಿಡ ಹಚ್ಚಬೇಕು. ಭೂಮಿಯೊಳಗ ವಿಷ ಹಾಕಬಾರದು. ನೀರು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಕ್ರೊವೇಷಿಯಾ ಅಂತ ಒಂದು ದೇಶ ಅದ. ಅಲ್ಲಿ ಮದುವೆಯಾಗಬೇಕು ಅಂದರ ನೂರು ಗಿಡ ನೆಟ್ಟು ಬೆಳೆಸಿದರೆ ಮಾತ್ರ ಅನುಮತಿ ಕೊಡ್ತಾರ. ಇಲ್ಲದಿದ್ದರೆ ಮದುವಿ ಇಲ್ಲ. ಇದು ನಮ್ಮ ಇಂಡಿಯಾದಲ್ಲೂ ಜಾರಿಯಾಗಬೇಕು. ಇಲ್ಲಿ ಕನ್ಯಾ ನೋಡೇ ಮುಗಿಯೋದಿಲ್ಲ. ಇನ್ನು ಗಿಡ ನೆಡೋದಕ್ಕೆ ಸಮಯ ಎಲ್ಲಿ? ದೇವರ ಪೂಜೆ ಎಂದರೆ ಏನು ಅಂದರ, ಲಕ್ಷ ದೀಪ ಹಚ್ಚಿ ಪೂಜಿಸೋದು ದೇವರ ಪೂಜೆ ಅಲ್ಲ. ವೃಕ್ಷದೀಪಗಳಿಂದ ದೇವರ ಪೂಜೆ ಮಾಡಬೇಕು. ಲಕ್ಷ ದೀಪೋತ್ಸವ ಅಲ್ಲ, ವೃಕ್ಷ ದೀಪೋತ್ಸವ ಮಾಡಬೇಕು. ಇದಕ್ಕ ಯಜ್ಞ ಅಂತ ಕರೀತಾರ. ನಾವು ಯಜ್ಞ ಅಂದರ ಏನ ತಿಳಕೊಂಡೀವಿ ಅದೇ ನಿಜವಾದ ಯಜ್ಞ ಅಲ್ಲ. ಕುಂಡ ಮಾಡಿರ್ತಾರ, ಅದರೊಳಗೆ ತುಪ್ಪ, ಕಟಗಿ ಹಾಕಿರ್ತಾರ ಅದೇ ಯಜ್ಞ ಅನಕೊಂಡೀವಿ.
ಬಸವಣ್ಣವರು ಎಷ್ಟು ಚಂದ ಹೇಳ್ತಾರ ನೋಡಿ. ‘ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು ಕಿಚ್ಚೆದ್ದು ಸುಡುವಾಗ ಬಚ್ಚಲ ನೀರು ಬೀದಿಯ ಧೂಳು ಹೊಯ್ದು ಬೊಬ್ಬಿಟ್ಟಿಲ್ಲರ ಕರೆವರಯ್ಯ ಕೂಡಲ ಸಂಗಮದೇವ ವಂದನೆಯ ಮರೆದು ನಿಂದಿಸುವರಯ್ಯ’.
ಕುಂಡದೊಳಗಿನ ಯಜ್ಞವೇ ಮನೆಗೆ ತಾಗಿದರೆ ಅದನ್ನು ನಿಂದಿಸುತ್ತೇವೆ. ಹಾಗಲ್ಲ. ಈ ವಿಶ್ವವೇ ಒಂದು ಯಜ್ಞ ಕುಂಡ. ನಮ್ಮ ಇಂದ್ರಿಯಗಳೇ ಹವಿಸ್ಸಾಗಿ ಅರ್ಪಿಸಬೇಕು. ಅದು ನಿಜವಾದ ಯಜ್ಞ.
ಜಗತ್ತು ವಿಕಾಸ ಆಗಬೇಕಲ್ಲ? ಅದಕ್ಕೆ ಒಂದಿಷ್ಟು ಕೆಲಸ ಮಾಡಬೇಕು. ನಾವು ಒಂದು ವಿಷಯ ತಿಳಕೋಬೇಕು, ನಮ್ಮೊಳಗೆ ಶಕ್ತಿ ಬಹಳ ಇದೆ. ಆದರ, ಸಮಯ ಕಡಿಮೆ ಇದೆ. ದೇವರು ನಮಗ ಆಯುಷ್ಯ ಕಡಿಮೆ ಕೊಟ್ಟಾನ. ಆದರ ನಮ್ಮೊಳಗ ಶಕ್ತಿ ಬಹಳ ಇಟ್ಟಾನ. ಕಡಿಮೆ ಸಮಯದೊಳಗೆ ಕೂಡಲಸಂಗಮ ದೇವ ಮೆಚ್ಚಿ ಅಹುದಹುದು ಎನುವಂತೆ ನಾವು ಕೆಲಸ ಮಾಡಬೇಕು. ಚಲೋ ಕೆಲಸ ಮಾಡಿದಿರಿ ಅಂದ್ರ ಮನುಷ್ಯನ ಜೀವನವೇ ಒಂದು ಯೋಗ ಆಗತೈತಿ.
ಮಂಗಳೂರಿನಲ್ಲಿ ಹಾಜಪ್ಪ ಅಂತ ಒಬ್ಬ ಇದ್ದಾನ. ಹಣ್ಣು ಮಾರೋನು. ದಿನಕ್ಕೆ ನೂರೈವತ್ತು ರೂಪಾಯಿ ಕೂಡಿಸಿ ತಾನು ಓದಿಲ್ಲದಿದ್ದರೂ ಊರಿಗೆ ಒಂದು ಶಾಲೆ ಮಾಡಿದ. ಅದು ವಿಕಾಸಕ್ಕೆ ಮಾಡುವ ಕೆಲಸ. ಅದೇ ನಿಜವಾದ ಪೂಜೆ. ನಮಗೆ ಎರಡು ಮಕ್ಕಳಿದ್ದರೆ ಭಾರಿ ಟೆನ್ಷನ್. ಆದರ, ಸಿದ್ದಗಂಗಾಮಠದ ಸ್ವಾಮೀಜಿ 10 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಕೇವಲ ಜೋಳಿಗೆ ಇಟ್ಟುಕೊಂಡು ಸಾಕಿದರು. ಮಹಾಪುರುಷರಾದರು. ಅದು ವಿಕಾಸಕ್ಕೆ ಮಾಡಿದ ಕಾರ್ಯ. ಅಬ್ದುಲ್ ಕಲಾಂ ಅವರನ್ನು ಯಾರೋ ಕೇಳಿದರಂತೆ. ‘ನಾವು ನಿಮ್ಮ ಜನ್ಮ ದಿನ ಮಾಡ್ತೀವಿ’ ಅಂತ. ಅದಕ್ಕೆ ಕಲಾಂ ಅವರು ‘ಜನ್ಮದಿನ ಅಂತ ಸೂಟಿ ಕೊಡಬೇಡಿ. ಒಂದು ತಾಸು ಹೆಚ್ಚಿಗೆ ಕೆಲಸ ಮಾಡಿ’ ಅಂದರಂತೆ. ಅದು ದೇಶ ಕಟ್ಟೋ ಕೆಲಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.