ಭಗವಾನ್ ಬುದ್ಧನಿಗೂ ಕಷ್ಟ ಬಂತು. ನಮಗೂ ಬುದ್ಧನಿಗೂ ವ್ಯತ್ಯಾಸ ಏನು ಅಂದ್ರೆ ಬುದ್ಧ ಕಷ್ಟ ಯಾಕೆ ಬಂತು ಅಂತ ತಿಳಿದುಕೊಳ್ಳಲು ಮನೆ ಬಿಟ್ಟ. ನಾವು ಕಷ್ಟ ತಡಕಳಕಾಗದೆ ಮನೆ ಬಿಡ್ತೀವಿ. ದುಃಖ ಅಂದರೆ ಏನಂತ ತಿಳಿದುಕೊಳ್ಳಾಕ ಬುದ್ಧ ಮನೆ ಬಿಟ್ಟ. ನಾವು ದುಃಖ ತಡೆದುಕೊಳ್ಳಲಾಗದ್ದಕ್ಕೆ ಮನೆ ಬಿಟ್ವಿ. ಹರಿಶ್ಚಂದ್ರನಿಗೆ ಬಂದ ಕಷ್ಟ ನಮಗೆ ಬಂತೇನು? ಆತನಿಗೆ ಒಂದು ಕಡೆ ಮಗನ ಹೆಣ, ಇನ್ನೊಂದು ಕಡೆ ಸತ್ಯಪರಿಪಾಲನೆ ಸಂಕಷ್ಟ. ರಾಮನಿಗೆ ಮದುವೆಯಾದ ತಕ್ಷಣ ಕಾಡಿಗೆ ಹೋಗುವ ಶಿಕ್ಷೆ. ನಮಗೆ ಅಂತಹ ಕಷ್ಟವೇನೂ ಬರಲಿಲ್ಲವಲ್ಲ?
ಕಷ್ಟ ಬಂತು ಅಂದ್ರ ನಾವು ದೇವರ ಗುಡಿಗೆ ಹೋಗ್ತೀವಿ. ರಾಮನ ಗುಡಿಗೆ ಹೋದ್ರ ರಾಮ ಅಂತಾನ, ‘ನಿಮದೇ ಚಲೋ ಐತಿ, 14 ವರ್ಷ ವನವಾಸಕ್ಕೆ ಹೋಗಿಬಂದ್ರೂ ಮುಗಿದಿಲ್ಲ ನಮ್ಮದು ಇನ್ನೂ ತ್ರಾಸ’ ಅಂತ. ಇದು ಬ್ಯಾಡ ಅಂತ ಮಾರುತಿ ಗುಡಿಗೆ ಹೋಗಿ ಇನ್ನೂ ಕನ್ಯಾ ಸಿಕ್ಕಿಲ್ಲ ಅಂತ ಕೇಳ್ತೀರಿ. ಅವ ಅಂತಾನ, ‘ಮೊದಲು ಕೆಳಗಿಳಿ, ಲಗ್ನ ಆದವರ ಜಗಳ ಬಿಡಸಾಕ ಹೋಗಿ ನಾವು ಹಾಂಗಾ ಕುಂತೀವಿ. ಹರ ಇಲ್ಲ ಶಿವ ಇಲ್ಲ’ ಅಂತ. ಗಣಪತಿ ಹತ್ತಿರ ಹೋದರ ‘ನಂದೇನಿಲ್ಲಪ, ನಾಕು ದಿನ ಅರಾಂ ಇದ್ದು ಒಂದಿನ ಹೋಗಿಬಿಡ್ತೀನಿ ಅಷ್ಟೆ’ ಅಂತಾನ.
ಗುರು ಅಂದರ ಕಾವಿ ಹಾಕಿರಬೇಕು ಅಂತೇನಿಲ್ಲ. ಹಿಮಾಲಯಕ್ಕೆ ಹೋಗಬೇಕಿಲ್ಲ. ಹಸಿದವರಿಗೆ ಒಂದು ತುತ್ತು ಅನ್ನ, ಬಾಯಾರಿದವರಿಗೆ ಒಂದು ಕಪ್ ನೀರು ಕೊಟ್ಟರೆ ಸಾಕು. ಯಾರು ದುಃಖದಿಂದ ಬರ್ತಾರ ಅವರ ಕಣ್ಣೀರು ಒರೆಸಿ ನಿಮ್ಮ ಜೊತೆ ನಾನಿದೀನಿ ಅಂತಾನ, ಅವನೇ ಗುರು. ‘ಅನ್ನವನು ಇಕ್ಕುವುದು, ನನ್ನಿಯನು ನುಡಿವುದು, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾವಕ್ಕು ಸರ್ವಜ್ಞ’.
ಬುದ್ಧನ ಕಾಲದಲ್ಲಿ ಉಪಗುಪ್ತ ಅಂತಾ ಒಬ್ಬ ಮಹಾರಾಜ ಇದ್ದ. ಅವನು ಎಲ್ಲಾ ಬಿಟ್ಟು ಭಿಕ್ಷು ಆದ. ಒಂದಿನ ಒಬ್ಬ ನರ್ತಕಿ ಮನೆ ಮುಂದೆ ನಿಂತು ಭಿಕ್ಷೆ ಬೇಡಿದ. ಈತನ ಸೌಂದರ್ಯಕ್ಕೆ ಮೆಚ್ಚಿದ ನರ್ತಕಿ ‘ನನ್ನ ಮನೆ ಮುಂದೆ ಎಂತೆಂತಹ ಶ್ರೀಮಂತರು ಬಂದು ನಿಂತರೂ ನಾನು ಮೆಚ್ಚಿಲ್ಲ. ನಿನ್ನ ಮೆಚ್ಚೇನಿ. ಮನಿ ಒಳಗ ಬಾ. ನೀ ಒಳಗೆ ಬಂದರೆ ನಾನೂ ನಿನ್ನವಳು, ಈ ಸಂಪತ್ತೂ ನಿನ್ನದು’ ಎಂದಳು. ಅದಕ್ಕೆ ಉಪಗುಪ್ತ, ‘ನಾನು ಈಗ ಬಂದಿರುವುದು ಕೇವಲ ಅನ್ನದ ಭಿಕ್ಷೆಗಾಗಿ. ಸಮಯ ಬಂದಾಗ ಬರುವೆ’ ಎಂದು ಹೇಳಿ ಹೋದ.
ಕೆಲವು ಸಮಯದ ನಂತರ ಆಕೆಗೆ ರೋಗ ಬಂತು. ಊರವರು ಆಕೆಗೆ ಕಲ್ಲು ತಗೊಂಡು ಹೊಡೆದರು. ಆಸ್ತಿ ಕಸಿದುಕೊಂಡರು. ಎಲ್ಲೋ ಒಂದು ದಾರಿಯಲ್ಲಿ ನರಳುತ್ತಾ ಬಿದ್ದಿದ್ದಳು. ಅದೇ ದಾರಿಯಲ್ಲಿ ಬಂದ ಉಪಗುಪ್ತ ಆಕೆಗೆ ಒಂದು ಗುಟುಕು ನೀರು ಕೊಟ್ಟ, ತುತ್ತು ಅನ್ನ ನೀಡಿ ತಲೆ ಮೇಲೆ ಕೈಯಾಡಿಸಿದ. ‘ನನ್ನ ಬಳಿ ಸೌಂದರ್ಯ ಇದ್ದಾಗ ಸಂಪತ್ತು ಇದ್ದಾಗ ಬಾ ಅಂದರೆ ಬರಲಿಲ್ಲ. ಈಗ್ಯಾಕೆ ಬಂದಿ’ ಎಂದು ನರ್ತಕಿ ಕೇಳಿದಳು. ‘ನಿನ್ನ ಹತ್ರ ಎಲ್ಲಾ ಇದ್ದಾಗ ಬಂದವ ಗುರು ಆಗೋದಿಲ್ಲ. ನೀನು ಬಿದ್ದಾಗ ಬಂದು ಎತ್ತೋವ ಗುರು ಆಗ್ತಾನ’ ಎಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.