ಚೀನಾದ ತತ್ವಜ್ಞಾನಿ ಲಾವೋತ್ಸೆ ಒಂದೆಡೆ ಹೇಳುತ್ತಾನೆ, ‘ಭೂಮಿ ವಿಶಾಲವಾಗಿರಬೇಕು, ಜನಸಂಖ್ಯೆ ಕಡಿಮೆ ಇರಬೇಕು, ಅನ್ನ, ನೀರಿಗೆ ಕೊರತೆ ಇರಬಾರದು, ಅಲ್ಲಿ ಎಲ್ಲ ಜಾತಿ ಜನಾಂಗದ ಜನ ಪ್ರೀತಿಯಿಂದ ಇರಬೇಕು, ಅದು ಸ್ವರ್ಗ’ ಅಂತ. ನಮ್ಮ ಜನ ಮಂಗಳ ಗ್ರಹಕ್ಕೆ ಹೋಗಿ ಬಂದರು. ಜಲಮಾರ್ಗದ ಮೂಲಕ ಹುಡುಕಾಟ ನಡೆಸಿದರು. ಆದರೂ ಭೂಮಿಯಂತಹ ಸ್ವರ್ಗ ಎಲ್ಲಿಯೂ ಸಿಗಲಿಲ್ಲ. ಇಲ್ಲಿರುವ ಪಶು ಪಕ್ಷಿ ಪ್ರಾಣಿಗಳೂ ಮನುಷ್ಯನಿಗೆ ಸಹಕಾರ ಕೊಟ್ಟಿವೆ. ಯಾಕೆ ಕೊಟ್ಟಿವೆ ಎಂದರೆ, ಮನುಷ್ಯ ಸಂತೋಷವಾಗಿ ಬದುಕಬೇಕು ಅಂತ. ನನ್ನ ಜೊತೆ ಎಲ್ಲರೂ ಬದುಕಬೇಕು ಎಂಬ ಭಾವ ಬಂತು ಅಂದ್ರ ಭೂಮಿ ದೊಡ್ಡದಾಗುತ್ತದೆ.
ಅಶೋಕ ಚಕ್ರವರ್ತಿ ಕಳಿಂಗ ಯುದ್ಧ ಗೆದ್ದ. ಯುದ್ಧ ಮುಗಿದ ನಂತರ ಯುದ್ಧಭೂಮಿಯನ್ನು ನೋಡಿ ಬರೋಣ ಅಂತ ಹೊರಟ. ಅಲ್ಲಿ ಸಾವಿರಾರು ಮಕ್ಕಳು ತಂದೆಯನ್ನು ಕಳೆದುಕೊಂಡು ಅಳುತ್ತಿದ್ದರು. ಸಾವಿರಾರು ಮಹಿಳೆಯರು ಗಂಡನನ್ನು ಕಳೆದುಕೊಂಡು ಗೋಳಿಡುತ್ತಿದ್ದರು. ಮಗನನ್ನು ಕಳೆದುಕೊಂಡು ಅಳುತ್ತಿದ್ದ ಒಂದು ಮುದುಕಿ ಅಶೋಕನಿಗೆ ‘ನೀನು ಯಾರು’ ಅಂತ ಕೇಳಿದಳು. ‘ಈ ಕಳಿಂಗ ಯುದ್ಧವನ್ನು ಗೆದ್ದೀನಲ್ಲ, ನಾನೇ ಅಶೋಕ’ ಎಂದು ಉತ್ತರಿಸಿದ ಚಕ್ರವರ್ತಿ.
‘ನೀನು ಅಶೋಕ ಹ್ಯಾಂಗ್ ಆಗತೀಯ. ಬರೀ ನಿನ್ನ ಹೆಸರು ಅಶೋಕ ಅಷ್ಟೆ. ಯಾರಿಗೆ ಅಶೋಕ ಎನಬೇಕು? ಯಾವ ವ್ಯಕ್ತಿ ಇರುವಲ್ಲಿ ಶೋಕ ಇರುವುದಿಲ್ಲವೋ ಅಂತಹ ವ್ಯಕ್ತಿಗೆ ಮಾತ್ರ ಅಶೋಕ ಎನಬೇಕು. ನೀ ಹ್ಯಾಂಗ ಅಶೋಕ ಆಗ್ತಿ. ನೀನು ಹೆಣಗಳ ದಿಬ್ಬಣದ ಮೇಲೆ ಸಾಮ್ರಾಜ್ಯ ಕಟ್ಟಿದಿ. ಸಾವಿರ ಸಾವಿರ ಅನಾಥ ಮಕ್ಕಳ ಗೋರಿಯ ಮೇಲೆ ಕಟ್ಟಿದ ಸಾಮ್ರಾಜ್ಯ ಉಳೀಲಿಕ್ಕೆ ಸಾಧ್ಯ ಅದ ಏನು? ಸಾವಿರ ಸಾವಿರ ಮಹಿಳೆಯರನ್ನು ವಿಧವೆಯರನ್ನಾಗಿ ಮಾಡಿದ ನಿನ್ನ ಸಾಮ್ರಾಜ್ಯ ಶಾಶ್ವತವೇನು? ಅಶೋಕ, ನೀನು ಯುದ್ಧದಲ್ಲಿ ಗೆದ್ದಿರಬಹುದು. ಆದರೆ ಜೀವನದಲ್ಲಿ ಸೋತಿದ್ದೀಯ’ ಎಂದಳು. ಆ ಮುದುಕಿಯ ಮಾತು ಅಶೋಕನಿಗೆ ನಾಟಿತು. ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ. ಯುದ್ಧಭೂಮಿಯಿಂದ ಬುದ್ಧಭೂಮಿಯತ್ತ ನಡೆದ. ಅದಕ್ಕಾಗಿ ಅವ ದೇವಾನಾಂಪ್ರಿಯ ಅಶೋಕ ಆದ.
ಮನುಷ್ಯನ ಆಸೆಗಳಿಂದ ಜಗತ್ತು ಸಣ್ಣದಾಗುತ್ತದೆ. ಮನುಷ್ಯ ಇರುವಿಕೆಗಿಂತ ತೋರುವಿಕೆಗೆ ಬಹಳ ಪ್ರೀತಿ ಮಾಡ್ತಾನ. ಆಡಂಬರದ ಬದುಕು ಅವನನ್ನ ಅಟ್ರಾಕ್ಟ್ ಮಾಡತೈತಿ. ಒಂದು ಹೆಣಮಗಳು ಮಗುನ ತೊಟ್ಲಾಗ ಹಾಕಿದ್ಲು. ಸಂಬಂಧಿಗಳೆಲ್ಲಾ ಬಂದಿದ್ದರು. ಮಗು ಅಳುತ್ತಿತ್ತು. ‘ಬಂಗಾರ ಹಾಕೇನಿ, ಹೂವು ಹಾಕೇನಿ, ಬಣ್ಣಬಣ್ಣದ ಬಲೂನು ಕಟ್ಟೇನಿ, ಆದರೂ ಮಗು ಯಾಕೆ ಅಳತೈತಿ’ ಎಂದು ಕೇಳಿದಳಂತೆ. ಅದಕ್ಕೆ ಮುದುಕಿಯೊಬ್ಬಳು ‘ಬಂಗಾರದ ತೊಟ್ಟಿಲು, ಬೆಳ್ಳಿ ಕಾಲಕಡಗ ಹಾಕಿದಿ. ತೋರಣ ಕಟ್ಟೀದಿ. ಆದರೆ ಮಗುವಿಗೆ ಹಾಲು ಕುಡಿಸಿದಿಯೋ ಇಲ್ಲೋ’ ಎಂದು ಕೇಳಿದಳಂತೆ. ‘ಇಲ್ಲ ಅದನ್ನೇ ಮರೆತೇನಿ’ ಅಂದಳಂತೆ ತಾಯಿ. ಅಂದ್ರ ಯಾವುದಕ್ಕೆ ಬೆಲೆ ಕೊಡಬೇಕಿತ್ತೋ ಅದಕ್ಕೆ ಬೆಲೆ ಇಲ್ಲ; ತೋರಿಕೆಗೆ ಬೆಲೆ.
ಕನ್ಯಾ ನೋಡಾಕ, ವರನ್ನ ನೋಡಾಕ ಹೋಗ್ತಾರ. ಬಂದವರು ಹೇಳ್ತಾರ, ‘ನೂರು ಎಕರಿ ಹೊಲ ಐತಿ, ಕಾಂಪ್ಲೆಕ್ಸ್ ಐತಿ, ಕಾರು ಐತಿ’ ಅಂತ. ಅದಕ್ಕ ಹುಡುಗಿ ಕೇಳ್ತು, ‘ನನಗೇನು ಕಾರು ಕೂಡ ಮದುವೆ ಮಾಡಸ್ತೀಯಾ ಇಲ್ಲ ಹುಡುಗನ ಕೂಡಾ ಮದುವೆ ಮಾಡಸ್ತೀಯಾ’ ಅಂತ. ಹಣ ಇದ್ದವರು ದೊಡ್ಡವರಾಗಲ್ಲ; ಗುಣ ಇದ್ದವರು ದೊಡ್ಡವರಾಗುತ್ತಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.