ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು–34: ಧರ್ಮಕ್ಷೇತ್ರ ಕುರುಕ್ಷೇತ್ರ ಆಗಬಾರದು!

Published : 30 ಸೆಪ್ಟೆಂಬರ್ 2024, 23:30 IST
Last Updated : 30 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ನಮ್ಮ ದೇಶದಲ್ಲಿ ನಳಂದ ವಿಶ್ವವಿದ್ಯಾಲಯ ಅಂತಾ ಇತ್ತು. ಅಲ್ಲಿ ಎರಡು ಸಾವಿರ ಪರಿಣಿತ ಅಧ್ಯಾಪಕರಿದ್ದರು. 20 ಸಾವಿರ ವಿದ್ಯಾರ್ಥಿಗಳಿದ್ದರು. ಪರ್ಷಿಯಾ, ಚೀನಾ, ಬರ್ಮಾದಿಂದ ವಿದ್ಯಾರ್ಥಿಗಳು, ಅಧ್ಯಾಪಕರು ಬರುತ್ತಿದ್ದರು. 90 ಲಕ್ಷ ಪುಸ್ತಕಗಳಿದ್ದವು. ಅಂತಹ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದಾಗ ಭಾರತದ ಜ್ಞಾನ ಸಂಪತ್ತು ಮೂರು ತಿಂಗಳು ಉರಿದಿತ್ತಂತೆ.  ಗ್ರಂಥಾಲಯವನ್ನು, ಪುಸ್ತಕಗಳನ್ನು ಬೆಂಕಿ ಸುಡಲಿಲ್ಲ, ಎದೆಯೊಳಗಿನ ದ್ವೇಷ ಸುಟ್ಟಿತ್ತು. ಯಾವಾಗ ಪ್ರೇಮ ಕಳೆದು ಹೋಗತ್ತೋ ಆವಾಗ ಧರ್ಮಕ್ಷೇತ್ರ ಕುರುಕ್ಷೇತ್ರ ಆಗತೈತಿ.

ಧೃತರಾಷ್ಟ್ರನಿಗೆ ಎಲ್ಲವೂ ಇತ್ತು. ನೂರು ಮಕ್ಕಳಿದ್ದರು. ಪಾಂಡವರೂ ನಮ್ಮವರೇ, ಕೂಡಿರಲಿ ಎಂದಿದ್ದರೆ ಧರ್ಮಕ್ಷೇತ್ರ ಧರ್ಮಕ್ಷೇತ್ರವಾಗೇ ಇರುತ್ತಿತ್ತು. ಅವರು ಬ್ಯಾರೆ, ಇವರು ಬ್ಯಾರೆ ಅಂತಾ ದ್ವೇಷ ಮಾಡಿದ್ದಕ್ಕೆ ಧರ್ಮಕ್ಷೇತ್ರ ಕುರುಕ್ಷೇತ್ರ ಆಯಿತು. ನಮ್ಮ ಮನ್ಯಾಗೂ ಪ್ರೇಮ ಕಡಿಮ್ಯಾತು ಅಂದ್ರ ಮನೆ ಕುರುಕ್ಷೇತ್ರ ಆಗತೈತಿ. ಮನೆ ಧರ್ಮಕ್ಷೇತ್ರ ಆಗಬೇಕು.

ರಾಮನಿಂದ ಸೋತು ರಾವಣ ಕೆಳಗ ಬಿದ್ದಿದ್ದ. ಆಗ ರಾಮ ರಾವಣನಿಗೆ ‘ನಿನಗೆ ಹತ್ತು ತಲಿ, 20 ಕೈಗಳಿದ್ದವು. ದೇವನಿಂದ ಆತ್ಮಲಿಂಗವನ್ನೇ ತಂದವನು ನೀನು. ನಿನ್ನದೇ ಸಾಮ್ರಾಜ್ಯ ಇತ್ತು. ನನ್ನ ಬಳಿ ಏನೂ ಇರಲಿಲ್ಲ. ಆದರೂ ನಿನಗೆ ಸೋಲಾಯಿತು. ನನಗೆ ಗೆಲುವಾಯಿತು. ಯಾಕ?’ ಅಂತ ಕೇಳಿದ. ಅದಕ್ಕೆ ರಾವಣ, ‘ನನ್ನ ಕಷ್ಟದ ಕಾಲದಾಗ ನನ್ನ ತಮ್ಮ, ನನ್ನ ಬಿಟ್ಟು ದೂರ ಆದ. ಅದಕ್ಕ ನನಗೆ ಸೋಲಾತು. ನಿನ್ನ ಕಷ್ಟ ಕಾಲದಾಗ ನಿನ್ನ ತಮ್ಮ ನಿನ್ನ ಜೊತೆಗೇ ಇದ್ದ. ಅದಕ್ಕ ನಿನಗೆ ಗೆಲುವಾತು’ ಎಂದು ಉತ್ತರಿಸಿದ.

ಕೂಡಿ ಇರಬೇಕು. ಸಂಸಾರ ಅಂದ ಮ್ಯಾಲ ಬ್ಯಾರೆಯಾಗೋದು ಇದ್ದೇ ಇರ್ತದ. ಆದರೆ ಮನೆ ಬ್ಯಾರೆ ಆದರೂ ಪರವಾಗಿಲ್ಲ, ಮನಸ್ಸು ಬೇರೆಯಾಗಬಾರದು. ಈಗ ಒಂದು ಕಸಬರಗಿ ಇರತೈತಿ. ಎಲ್ಲಾ ಕಡ್ಡಿಗಳೂ ಕೂಡಿದ್ದಾಗ ಅದು ಕಸಬರಗಿ. ಒಂದು ಕಡ್ಡಿ ಕೆಳಕ್ಕೆ ಬಿದ್ದರೂ ಅದೇ ಕಸ ಆಗತೈತಿ. ಅದನ್ನ ತಿಳ್ಕೊಬೇಕು.

ದೊಡ್ಡ ಮನೆ ಕಟ್ಟಿದ್ದೀರಿ. ದೊಡ್ಡ ದೊಡ್ಡ ಕೋಣೆಗಳಿದಾವೆ ಅಂದ್ರ ಅದು ಲಾಡ್ಜ್ ಆತು ಮನೆಯಲ್ಲ. ವಿಶಾಲ ಅಡುಗೆ ಮನೆ, ಓಪನ್ ಕಿಚನ್ ಅಂತೆಲ್ಲಾ ಇದ್ರ ಅದು ಹೊಟೇಲ್ ಆತು ಮನೆಯಲ್ಲ. ವಿದೇಶಿ ವಸ್ತುಗಳನ್ನು ತಂದಿಟ್ಟೀನಿ, ಅಂದ್ರೆ ಅದು ಮ್ಯೂಜಿಯಂ ಆತು. ಬೆಕ್ಕು, ನಾಯಿ ಎಲ್ಲಾ ಸಾಕೇನಿ ಅಂದ್ರೆ ಅದು ಪ್ರಾಣಿ ಸಂಗ್ರಹಾಲಯ ಆತು. ಮನೆಯಲ್ಲಿ ವಸ್ತುಗಳಿದ್ರ ಮನೆಯಾಗೋದಿಲ್ಲ. ಮನ್ಯಾಗ ಪ್ರೇಮ ಇದ್ರ ಮಾತ್ರ ಅದು ಮನೆಯಾಗತೈತಿ.

ಆಕಾಶದಲ್ಲಿ ಎಲ್ಲೋ ಇರುವ ಗ್ರಹಗಳನ್ನು ನಂಬುತ್ತೀವಿ. ಆದರೆ, ಮನೆಯಲ್ಲಿ ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ನಂಬದೇ ಇದ್ದರೆ ಅದನ್ನು ಮನೆ ಅನ್ನೋಕೆ ಆಗಲ್ಲ. ಗಂಡ, ಹೆಂಡತಿ ಮಕ್ಕಳಲ್ಲಿ ಪರಸ್ಪರ ಪ್ರೇಮ ಇರಬೇಕು. ಅದು ಮನೆ. ಅಭಿಷೇಕ ಮಾಡಿದರೆ ದೇವರು ಪ್ರಿಯ ಆಗಲ್ಲ, ಯಾಕಂದ್ರ ಸಪ್ತಸಾಗರಗಳನ್ನು ಸೃಷ್ಟಿಮಾಡಿದವನು ದೇವರು. ತುಪ್ಪದ ದೀಪ ಹಚ್ಚಿದ್ರ ದೇವರು ಪ್ರಿಯನಾಗಲ್ಲ, ಯಾಕಂದ್ರ ಸೂರ್ಯಚಂದ್ರರನ್ನು ಆಕಾಶದಲ್ಲಿ ತೇಲಿಬಿಟ್ಟವನು ಅವನು. ನೈವೇದ್ಯ ಇಡ್ತೀನಿ ಅಂದರೆ ಸಕಲ ಜೀವರಾಶಿಗಳನ್ನು ಸಲಹಿದಾತ ದೇವರು. ಯಾರ ಹೃದಯದಲ್ಲಿ ಪ್ರೇಮ ಇದೆಯೋ ಅವರನ್ನು ಸಲಹುತ್ತಾನೆ ದೇವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT