ತೋರಹ ಅಂತಾ ಒಂದು ಜೆವಿಶ್ ಧರ್ಮ ಗ್ರಂಥ ಇದೆ. ಹೆಲಿನ್ ಅಂತಾ ಒಬ್ಬ ಧರ್ಮಗುರು ಇದ್ದ. ಅವನಲ್ಲಿಗೆ ಒಬ್ಬ ಶಿಷ್ಯ ಬಂದು ‘ತೋರಹ ಧರ್ಮಗ್ರಂಥದ ಸಾರವನ್ನು ಎರಡು ಸಾಲಿನಲ್ಲಿ ಹೇಳಿ’ ಎಂದು ಕೇಳಿದ. ‘ಸಾವಿರಕ್ಕೂ ಹೆಚ್ಚು ಪುಟಗಳಲ್ಲಿ ಇರುವ ಅಂಶವನ್ನು ಎರಡು ಸಾಲಿನಲ್ಲಿ ಹೇಳೋದು ಹೇಗೆ?’ ಎಂದು ಗುರು ಪ್ರಶ್ನೆ ಮಾಡಿದ. ಅದಕ್ಕೆ ಶಿಷ್ಯ, ‘ನೀವು ಈ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೀರಿ. ಆದರೂ ಅದರ ಸಾರವನ್ನು ಎರಡು ಸಾಲಿನಲ್ಲಿ ಹೇಳಾಕ ಬರಲಿಲ್ಲ ಅಂದ್ರ ನಾವು ನಿಮ್ಮನ್ನು ಗುರು ಅಂತ ಯಾಕ ಅನಬೇಕು’ ಎಂದ. ಆಗ ಹೆಲಿನ್, ‘ನಿನಗೆ ಯಾರಾದರೂ ನಮಸ್ಕಾರ ಮಾಡಬೇಕು ಅಂತಾ ಇದ್ರೆ ನೀನು ಅವರಿಗೆ ಮೊದಲು ನಮಸ್ಕಾರ ಮಾಡೋದನ್ನು ಕಲಿ. ನೀನು ಯಾರದ್ದಾದರೂ ಮನಿಗೆ ಹೋದಾಗ ಅವರು ಬರ್ರೀ, ಕೂಡ್ರೀ, ಊಟ ಮಾಡ್ರಿ ಅನಬೇಕು ಅಂತಾ ಇದ್ದರೆ ನೀನು ನಿಮ್ಮ ಮನೆಗೆ ಬಂದವರಿಗೆ ಹಾಗೆ ಹೇಳೋದನ್ನು ಕಲಿ. ಮಂದಿ ನಿನಗೆ ಟೀಕೆ ಮಾಡಬಾರದು ಅಂತಾ ಇದ್ದರೆ ನೀನು ಇನ್ನೊಬ್ಬರನ್ನು ಟೀಕೆ ಮಾಡುವುದನ್ನು ಬಿಡಬೇಕು. ನೋಡಪ. ಧರ್ಮ ಅಂದರೆ, ಪ್ರೇಮ ಅಂದರೆ, ಜೀವನ ದರ್ಶನ ಅಂದರೆ ಇದೆ. ಅದನ್ನೇ ತೋರಹ ಹೇಳಿದೆ’ ಎಂದ.
ಪ್ರೇಮವೇ ಧರ್ಮ. ಯಾವ ಧರ್ಮ ಕೊಲೆ ಮಾಡು ಅಂತಾ ಹೇಳಿದೆ? ಮಂದಿಗೆ ಕೊಲೆ ಮಾಡು ಅಂತಾ ಹೇಳಿದರೆ ಅದು ಧರ್ಮವೇ ಅಲ್ಲ. ಅದಕ್ಕೆ ಮನುಷ್ಯ ಪ್ರೇಮಪೂರ್ಣವಾಗಿ ಬದುಕಬೇಕು. ದ್ವೇಷ ಮರೆಸಬೇಕು. ಹೊಟ್ಟೆಕಿಚ್ಚು ಇರಬಾರದು. ಹೊಟ್ಟೆ ತುಂಬಿಸಿಕೊಳ್ಳುವುದೇ ತ್ರಾಸಾಗಿರುವಾಗ ಅದರೊಳಗೆ ಹೊಟ್ಟೆಕಿಚ್ಚನ್ನೂ ತುಂಬಿಕೊಳ್ಳಬಾರದು. ಹೊಟ್ಟೆಕಿಚ್ಚು ಮೊದಲು ನಿನ್ನ ಸುಡುತೈತಿ ಆ ಮೇಲೆ ಬ್ಯಾರೇದವರ ಸುಡತೈತಿ.
ಹೆಣ್ಣು ಮಗಾ ಅಂದರೆ ಪ್ರೀತಿ ಕಮ್ಮಿ, ಗಂಡು ಮಗಾ ಅಂದರೆ ಪ್ರೀತಿ ಜಾಸ್ತಿ. ಆತನಿಗೆ ಎರಡು ಚಮಚ ತುಪ್ಪ ಜಾಸ್ತಿ ಹಾಕ್ತೀರಿ. ಹೆಣ್ಣು ಮಗಳು ಕನ್ನಡ ಶಾಲಿ, ಗಂಡು ಮಗನಿಗೆ ಇಂಗ್ಲಿಷ್ ಶಾಲಿ, ಎಡಗೈ, ಎಡಗಾಲು ಎಂದರೆ ನಮಗೆ ತಾತ್ಸಾರ. ನಮ್ಮ ಹೊಟ್ಯಾಗ ಹುಟ್ಟಿದ ಮಕ್ಕಳನ್ನೇ ನಾವು ಭೇದಭಾವ ಮಾಡ್ತೀವಿ ಅಂದ್ರ, ನಮ್ಮ ದೇಹದ ಭಾಗಗಳಲ್ಲೇ ತಾರತಮ್ಯ ಐತಿ ಅಂದ್ರ ಈ ಜಗತ್ತನ್ನು ಪ್ರೇಮದಿಂದ ನೋಡುವ ಭಾವ ಹೇಗೆ ಬರತೈತಿ? ದ್ವೇಷ ಮುಕ್ತರಾಗಿ ಬದುಕಬೇಕು.
ನಾವು ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿದರೂ ಟೀಕೆ ಮಾಡೋರು ಊರಾಗ ನಾಲ್ಕು ಮಂದಿ ಇದ್ದೇ ಇರ್ತಾರ. ನಮಗೆ ಪ್ರೀತಿ ಮಾಡೋರು 96 ಮಂದಿ ಇದ್ದರೂ, ಪ್ರಾಣಕ್ಕೆ ಪ್ರಾಣ ಕೊಡೋರು 96 ಮಂದಿ ಇದ್ದರೂ ರಾತ್ರಿ ಮಲಗಿದಾಗ ನಮಗೆ ನೆನಪಿಗೆ ಬರೋರು ಟೀಕೆ ಮಾಡೋ ಅದೇ ನಾಲ್ಕು ಮಂದಿ. ನೀವು ಜೋಳದ ರಾಶಿ ಮಾಡುವಾಗ ನಾಲ್ಕು ಕಲ್ಲಿನ ಕಾಳೂ ಬಂದಿರ್ತಾವ. ಅದನ್ನು ದಲ್ಲಾಳಿ ಬಳಿಗೆ ತಗೊಂಡು ಹೋದಾಗ ಅವ ಇದು ಕಲ್ಲಿನ ಚೀಲ ಅನ್ನಲ್ಲ. ಜೋಳದ ಚೀಲ ಅಂತಾನೆ ಹೇಳ್ತಾನ. ನಾವು ಜೋಳದ ಚೀಲದ ಕಾಳಾಗಬೇಕು. ಕಲ್ಲಿನ ಚೀಲದ ಕಾಳಾಗಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.