ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಇಲ್ಲಿ ಯಾವುದೂ ಕನಿಷ್ಠ ಅಲ್ಲ!

ನುಡಿ ಬೆಳಗು
Published : 2 ಸೆಪ್ಟೆಂಬರ್ 2024, 0:45 IST
Last Updated : 2 ಸೆಪ್ಟೆಂಬರ್ 2024, 0:45 IST
ಫಾಲೋ ಮಾಡಿ
Comments

ಒಂದೂರಲ್ಲಿ ಒಬ್ಬ ಹುಡುಗಿ ಇದ್ದಳು. ಆಕಿಗೆ ಮದುವೆ ಮಾಡಬೇಕು ಎಂದು ಅವಳ ತಂದೆ, ‘ನೋಡಮ್ಮ ನಿನ್ನ ಮದುವಿ ಮಾಡಬೇಕು ಅನಕೊಂಡೇನಿ, ಅಲ್ಲಿ ಇಲ್ಲಿ ಯಾಕೆ ಹುಡುಕೋದು, ಇಲ್ಲೇ ನಮ್ಮ ಓಣ್ಯಾಗೆ ಕಲ್ಲು ಒಡಿತಾನಲ್ಲ ಅವನ್ನ ಮದುವ್ಯಾಗು’ ಎಂದ. ‘ಕಲ್ಲು ಒಡೆಯುವ ಹುಡುಗನನ್ನು ನಾನು ಮದುವ್ಯಾಗಲ್ಲ. ನಾನು ಮದಿವ್ಯಾಗೋ ಹುಡುಗ ಭಾರೀ ಶಕ್ತಿವಂತನಾಗಿರಬೇಕು’ ಎಂದಳು. ‘ಅಂತಹ ಶಕ್ತಿವಂತನನ್ನು ನಾನೆಲ್ಲಿ ಹುಡುಕಲಿ? ನೀನೇ ಹುಡುಕಿಕೋ’ ಎಂದ ಅಪ್ಪ. 

ಆಕಿ ಚಂದ್ರನನ್ನು ಕೇಳಿದಳು. ‘ಚಂದಮಾಮಾ ಚಂದಮಾಮಾ ನೀನು ಬಾಳ ಚಂದ ಅದಿ. ನಿನ್ನೇ ಮದುವಿ ಆಗ್ತೀನಿ’ ಅಂದಳು. ಅದಕ್ಕೆ ಚಂದ್ರ, ‘ನೋಡಮ್ಮ ನಾನು ನೋಡೋಕಷ್ಟೇ ಚಂದ. ನನಗೆ ಸ್ವಂತ ಬೆಳಕೆಂಬುದು ಇಲ್ಲ. ಸೂರ್ಯನ ಬೆಳಕು ಬಿದ್ದರಷ್ಟೇ ನನಗೆ ಬೆಳಕು. ನೀನು ಮದುವ್ಯಾಗೋದಿದ್ದರೆ ಸೂರ್ಯನನ್ನೇ ಮದುವ್ಯಾಗು’ ಎಂದ. ಆಕಿ ಸೂರ್ಯನನ್ನು ಕೇಳಿದಳು. ಸೂರ್ಯ ಅಂದ, ‘15 ಕೋಟಿ ಕಿಮೀ ದೂರದಲ್ಲಿದ್ದರೇ ನನ್ನ ಶಾಖ ತಡೆಯೋರಲ್ಲ ನೀವು. ಅಲ್ಲದೆ ನಾನು ಎಷ್ಟೇ ಪ್ರಖರವಾಗಿದ್ದರೂ ಮೋಡ ಅಡ್ಡ ಬಂದರೆ ನಾನು ಕಾಣೋದೇ ಇಲ್ಲ. ನನಗಿಂತ ಮೇಘರಾಜ ಶಕ್ತಿಶಾಲಿ. ಅವನನ್ನೇ ಮದುವ್ಯಾಗು’ ಎಂದ.

ಹುಡುಗಿ ಮೇಘನನ್ನು ಕೇಳಿದಳು. ‘ನಾನೇನು ಶಕ್ತಿವಂತ ಅಲ್ಲ. ನಾನು ಎಷ್ಟೇ ವೇಗವಾಗಿ ಸಾಗಿದರೂ ಕಲ್ಲಿನ ಬೆಟ್ಟ ಅಡ್ಡ ಬಂದರೆ ನಾನು ಮುಂದಕ್ಕೆ ಹೋಗಲಾರೆ. ಅದಕ್ಕೆ ನೀನು ಕಲ್ಲಿನ ಗುಡ್ಡವನ್ನು ಮದುವೆ ಆಗು’ ಅಂದ. ಆಕೆ ಕಲ್ಲಿನ ಗುಡ್ಡಕ್ಕೆ ಕೇಳಿದಳು. ‘ನಾನೇನು ಶಕ್ತಿಶಾಲಿ ಅಲ್ಲ. ಆ ಕಲ್ಲು ಒಡೆಯುವ ಹುಡುಗ ಚಾಣದಿಂದ ಚಚ್ಚಿದರೆ ನಾನು ಪುಡಿಪುಡಿಯಾಗುತ್ತೇನೆ. ಅದಕ್ಕೆ ಮದುವೆಯಾಗುವುದಿದ್ದರೆ ನೀನು ಆ ಕಲ್ಲು ಒಡೆಯುವ ಹುಡುಗನನ್ನೇ ಮದುವ್ಯಾಗು’ ಎಂತು.

ಅಂದರೆ, ಇಲ್ಲಿ ಯಾರೂ ಸಣ್ಣವರಲ್ಲ. ಯಾರೂ ದೊಡ್ಡವರೂ ಅಲ್ಲ. ಈ ಜಗತ್ತಿನಲ್ಲಿ ಯಾರೂ ಕೀಳಲ್ಲ. ಯಾರೂ ಶ್ರೇಷ್ಠರಲ್ಲ. ಅಲ್ಲಮ ಅಂತಾನೆ, ‘ಭೂಮಿಯಾಕಾಶ ಒಂದು ಜೀವನದುದರ, ಅಲ್ಲಿ ಘನವೇನು ಘನವೆನ್ನದವಂಗೆ? ಕಿರಿದೇನು ಕಿರಿದೆನ್ನದವಂಗೆ? ಆ ಘನವು ಮನಕ್ಕೆ ಗಮಿಸಿದೆಡೆ ಇನ್ನು ಸರಿಯುಂಟೆ ಗುಹೇಶ್ವರ?’ ಎಂದು.

ಸೂರ್ಯ ಬಹಳ ದೊಡ್ಡವ, ದೀಪ ಸಣ್ಣದು ಅನ್ನಲಿಕ್ಕಾಗ್ತದೇನು? ಸೂರ್ಯ ಜಗತ್ತನ್ನೇ ಬೆಳಗಬಹುದು, ಆದರೆ ಸೂರ್ಯ ಮುಳುಗಿನ ನಂತರ ಮನೆ ಬೆಳಗಲು ದೀಪವೇ ಬೇಕು. ಅದಕ್ಕೆ ದೀಪ ಸಣ್ಣದೆನ್ನಲಾಗದು. ಹೂವು ಬಲಿಷ್ಠ, ಬೇರು ಕನಿಷ್ಠ ಅನ್ನೋ ಹಾಗಿಲ್ಲ. ಯಾಕೆಂದರೆ ಬೇರು ನೀರು ಕಳಿಸದಿದ್ದರೆ ಹೂವು ಒಣಗಬೇಕಾಗುತ್ತದೆ. ಹೂವೂ ಮುಖ್ಯ, ಬೇರೂ ಮುಖ್ಯ. ಒಬ್ಬ ಗುರು ಎಲ್ಲ ಜನರಲ್ಲಿಯೂ ನಾವು ಸಣ್ಣವರಲ್ಲ ಎಂಬ ಭಾವನೆಯನ್ನು ತುಂಬ ಬೇಕಾಗುತ್ತದೆ.

ಬಿ.ಆರ್. ಅಂಬೇಡ್ಕರ್ ಪ್ರತಿ ಸಮಾಜಕ್ಕೂ ಶಿಕ್ಷಣ ಮುಖ್ಯ ಅಂತ ಹೇಳ್ತಾರೆ. ‘ನಿನ್ನ ಬಳಿ ಎರಡು ರೂಪಾಯಿ ಇತ್ತು ಅಂದ್ರ ಒಂದು ರೂಪಾಯಿ ಆಹಾರಕ್ಕೆ ಖರ್ಚು ಮಾಡು. ಇನ್ನೊಂದು ರೂಪಾಯಿಯಲ್ಲಿ ಪುಸ್ತಕ ತೆಗೆದುಕೊ. ಒಂದು ರೂಪಾಯಿ ಆಹಾರ ನಿನ್ನನ್ನು ಬದುಕಿಸುತ್ತದೆ. ಇನ್ನೊಂದು ರೂಪಾಯಿಯಲ್ಲಿ ತೆಗೆದುಕೊಂಡ ಪುಸ್ತಕ ಸಮಾಜದಲ್ಲಿ ಹ್ಯಾಗೆ ಬದುಕಬೇಕು ಎನ್ನುವುದನ್ನು ಕಲಿಸುತ್ತದೆ’ ಎಂದು ಅವರು ಹೇಳ್ತಾರೆ. 

ಪುಸ್ತಕ, ಶಿಕ್ಷಣ ನಮಗೆ ಬಹಳ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT