ಅಕ್ಬರ್ ಕೇಳಿದ್ದ ಪ್ರಶ್ನೆಗೆ ಉತ್ತರ ಹುಡುಕಲು ಬೀರಬಲ್ ಹತ್ತಾರು ದಿನ ಕಾಣೆಯಾದ ಕತೆ ಎಲ್ಲರೂ ಬಲ್ಲರು. ಅಕ್ಬರ್ ನೀಡಿದ್ದ ಸವಾಲು ಇಷ್ಟೇ; ಸದ್ಯ ವಾಸವಿರುವ ಜಾಗದಲ್ಲಿ ಮೂರ್ಖರ ಸಂಖ್ಯೆಯನ್ನು ಲೆಕ್ಕ ಹಾಕಬೇಕಿತ್ತು. ಅದಕ್ಕೆ ಬೀರಬಲ್ ಒಪ್ಪಿಕೊಂಡು ಹೊರನಡೆದ ಮೇಲೆ ಹತ್ತಾರು ದಿನ ಸಭೆಗೆ ಬರಲೇ ಇಲ್ಲ. ಎಲ್ಲರಿಗೂ ಅಚ್ಚರಿ. ಅವನು ಊರು ಬಿಟ್ಟು ಹೋಗೇ ಇರಲಿಲ್ಲ. ಮನೆಯ ಮುಂದೆ ಅಂಗಳದಲ್ಲಿ ಹಗ್ಗದ ಮಂಚವನ್ನು ಹೆಣೆಯುತ್ತಾ ನಿಂತಿದ್ದ.

ಈ ವಿಷಯ ಗೊತ್ತಾಗಿ ಅನೇಕರು ವಿಚಾರಿಸಲು ಬಂದುಹೋದರು. ಎಲ್ಲರ ಪ್ರಶ್ನೆ ಒಂದೇ: ‘ಬೀರಬಲ್, ಏನು ಮಾಡ್ತಾ ಇದ್ದೀಯ?’ ಬಂದವರೆಲ್ಲ ಹೀಗೆ ಇದೇ ಪ್ರಶ್ನೆ ಕೇಳುತ್ತ ಹೋದ ಹಾಗೆ ಬೀರಬಲ್ ಏನೊಂದೂ ಉತ್ತರ ನೀಡದೆ, ಪಕ್ಕದ ಒಂದು ಖಾಲಿ ಪುಸ್ತಕದಲ್ಲಿ ಸಂಖ್ಯೆಯನ್ನು ಬರೆದುಕೊಳ್ಳುತ್ತ ಹೋದ. ಏನೂ ಮಾತನಾಡದೆ ಹಗ್ಗದಿಂದ ಮಂಚವನ್ನು ಕಟ್ಟುತ್ತಿದ್ದ ಬೀರಬಲ್ಲನಿಗೆ ಹುಚ್ಚೇ ಹಿಡಿದಿದೆ ಅಥವಾ ಮಂತ್ರಿ ಕೆಲಸವನ್ನು ಬಿಟ್ಟಿರಬೇಕು ಎಂದು ಮಾತಾನಾಡುತ್ತ ಹೊರಡುತ್ತಿದ್ದರು. ಈ ಸುದ್ದಿ ರಾಜನವರೆಗೂ ತಲುಪಿ, ಜನರ ಮಾತಿನ ಚರ್ಚೆಯ ಬಗ್ಗೆ ಕುತೂಹಲಗೊಂಡು ಅಕ್ಬರ್ ಕೂಡಾ ಬೀರಬಲ್ ಮನೆ ಮುಂದೆ ಬಂದು ನಿಂತು ಇದೇ ಪ್ರಶ್ನೆ ಕೇಳಿದ: ‘ಬೀರಬಲ್, ಏನು ಮಾಡ್ತಾ ಇದ್ದೀಯ?’ ಬೀರಬಲ್ ಏನೂ ಮಾತನಾಡದೆ ಮುಗುಳ್ನಗುತ್ತಾ ಪುಸ್ತಕದಲ್ಲಿ ಮತ್ತೊಂದು ಸಂಖ್ಯೆಯನ್ನು ಬರೆದುಕೊಂಡ. ಅಕ್ಬರ್ ಮರುಮಾತನಾಡದೆ ಹೊರಟ.

ಮರುದಿನ ರಾಜಸಭೆಗೆ ದಿಢೀರ್ ಅಂತ ಬೀರಬಲ್ನ ಆಗಮನ. ಎಲ್ಲರಿಗೂ ಆತಂಕ ಮತ್ತು ಅಚ್ಚರಿ; ಬೀರಬಲ್ಗೆ ಹುಚ್ಚು ಹಿಡಿದಿರಬಹುದಾ ಅಂತ. ಬೀರಬಲ್ ಒಂದು ದೊಡ್ಡ ಹಾಳೆಯಲ್ಲಿ ಅನೇಕ ಸಂಖ್ಯೆಗಳನ್ನು ಬರೆದುಕೊಂಡು ಬಂದಿದ್ದ. ಅದು ಸದ್ಯ ವಾಸವಿರುವ ಜಾಗದ ಮೂರ್ಖರ ಸಂಖ್ಯೆ. ಅಕ್ಬರನನ್ನೂ ಒಳಗೊಂಡಂತೆ ಆ ಸಂಖ್ಯೆ ಸಾವಿರವನ್ನು ದಾಟಿತ್ತು. ಮತ್ತು ಪರಿಚಿತರೆಲ್ಲ ಆ ಮೂರ್ಖರ ಪಟ್ಟಿಯಲ್ಲಿ ಸೇರಿದ್ದರು. ತಾನು ಹಗ್ಗದಿಂದ ಮಂಚವನ್ನು ಹೆಣೆಯುತ್ತಿದ್ದರೂ ಕಣ್ಣಿಗೆ ಕಾಣಿಸುತ್ತಿದ್ದರೂ ರಾಜನೂ ಸೇರಿ ಎಲ್ಲರೂ ಕೇಳಿದ ಪ್ರಶ್ನೆ:

‘ಬೀರಬಲ್, ಏನು ಮಾಡ್ತಾ ಇದ್ದೀಯ?’ ಇಲ್ಲಿ ಅಕ್ಬರನೂ ಮೂರ್ಖನಾಗಿದ್ದ!

ಬಾಳೇ ಹೀಗೆ. ಅನೇಕ ಸಲ ಮೂರ್ಖರನ್ನಾಗಿ ಮಾಡುತ್ತದೆ. ಕಂಡೂ ಗೊತ್ತಿದ್ದೂ ಪ್ರಶ್ನೆ ಕೇಳುತ್ತೇವೆ. ಸಿನಿಮಾ ಥಿಯೇಟರಿಗೆ ಬಂದವರನ್ನು ಸಿನಿಮಾ ನೋಡೋದಕ್ಕೆ ಬಂದ್ರ?; ಬಸ್ಸಲ್ಲಿ ಕೂತವರನ್ನು ಊರಿಗೆ ಹೊರಟಿದ್ದೀರ?; ಹೋಟೆಲ್ಲಿಗೆ ಬಂದವರನ್ನು ಕಾಫಿ ಕುಡಿಯೋಕೆ ಬಂದ್ರ?; ಅಡುಗೆ ಮನೆಯಲ್ಲಿ ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟವರನ್ನು ಅಡುಗೆ ಮಾಡ್ತಾ ಇದ್ದೀರ?– ಹೀಗೆ ಕೇಳುವ ಹಾಗೆ. ಬೀರಬಲ್ಲನಾದರೂ ಏನು ಉತ್ತರ ಕೊಡಬಲ್ಲ? ಪಾಪ.

ಇದು ಸಹಜ ಕೂಡಾ. ಇದನ್ನು ಮೂರ್ಖತನ ಅಂತ ಸಾರಾಸಗಟಾಗಿ ಒರಟುತನದಿಂದ ಹೇಳಲು ಬರುವುದಿಲ್ಲ, ಹೇಳಬಾರದು ಕೂಡ. ಅಲ್ಲಿ ಒಂದು ಸಣ್ಣ ಕಾಳಜಿ, ಒಂದು ಆಸಕ್ತಿ, ಒಂದು ಸಲುಗೆ ಕೆಲಸ ಮಾಡಿರುತ್ತದೆ. ಆದರೂ ಅದು ಅಭಾಸ ಆಗಿರುತ್ತದೆ.

ಜನರನ್ನು ಮೂರ್ಖರನ್ನಾಗಿ ಮಾಡಿ ಹಣ ದೋಚಿಕೊಳ್ಳುವುದನ್ನೇ ಕಸುಬು ಮಾಡಿಕೊಂಡಿರುವ ಜಾಲಗಳು ಈ ಕಾಲಮಾನದಲ್ಲಿ ಅಸಂಖ್ಯಾತ. ಜೀವಮಾನದ ಹಣವನ್ನೆಲ್ಲ ಸುರಿದು ನೆಲವನ್ನು ಕೊಂಡುಕೊಳ್ಳುವ, ಮನೆ ಕಟ್ಟಲು ಹವಣಿಸುವ ಜನ ಮೂರ್ಖರಾಗುತ್ತಾರೆ; ಅನೇಕ ಉದಾಹರಣೆಗಳಿವೆ. ಇನ್ನು ಹಣದ ಆಮಿಷಕ್ಕಾಗೋ ಭಯಕ್ಕೋ ಒಳಗಾಗಿ ಸೈಬರ್ ಕಳ್ಳರ ಜಾಲದಲ್ಲಿ ಹಣ ಕಳೆದುಕೊಂಡು ಮೂರ್ಖರಾದವರ ಸಂಖ್ಯೆ ಲೆಕ್ಕಕ್ಕೆ ಸಿಗದು.
ಮೂರ್ಖತನಕ್ಕೆ ನಾನಾ ರೂಪ. ಆದರೆ ಬುದ್ಧಿವಂತಿಕೆಗೆ ಒಂದೇ ರೂಪ, ಅಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.