ಸುಖ ಮತ್ತು ಸಿರಿವಂತಿಕೆಗಳ ವ್ಯಾಖ್ಯಾನಗಳೇ ತೀರಾ ವೈಯಕ್ತಿಕ ಮತ್ತು ಅಪರಿಮಿತ. ಅವರವರ ದೃಷ್ಟಿಕೋನಗಳೇ ಬಾಳನ್ನು ಕಡೆದು ನಿಲ್ಲಿಸೋದು ಸತ್ಯ. ಶಹರದ ಗಲಾಟೆಯಿಂದ ಅಗಾಗ ಹಳ್ಳಿಗೆ ಹೋಗಿ ಮೋಜು ಮಾಡಿ ತಿಂದುಂಡು ಹಿಂದಿರುಗಲು ಕಟ್ಟಿಕೊಂಡ ತಾಣದ ಹೆಸರೇ ಫಾರ್ಮ್ ಹೌಸ್. ಭತ್ತ ಬೆಳೆವ ಹೊಲಗದ್ದೆಗಳನ್ನು ಕೊಂಡುಕೊಂಡು ರೆಸಾರ್ಟ್ಗಳನ್ನು ಸ್ಥಾಪಿಸುವುದು ಕೆಲವರಿಗೆ ಅಪಾರ ಸುಖ, ಸಿರಿತನದ ವಿಚಾರ. ಬಂಡವಾಳವಿರದೆ, ಬೆಳೆ ಬೆಳೆಯಲಾರದೆ ಅಸಹಾಯಕತೆಯಿಂದ ಜಮೀನು ಮಾರುವ ಬಡರೈತರಿಗೆ ಗರಿ ಗರಿ ನೋಟುಗಳನ್ನು ಮುಟ್ಟುವುದೇ ಸುಖ.

ಹೀಗೊಬ್ಬ ತಂದೆ ತನ್ನ ಮಗನನ್ನು ತಾನು ಕೊಂಡುಕೊಂಡ ಫಾರ್ಮ್ ಹೌಸ್ ತೋರಿಸಲಿಕ್ಕೆ ಕರೆದುಕೊಂಡು ಹೋದ. ಅಲ್ಲಿ ದುಡಿಯುತ್ತಿದ್ದ ಕೆಲಸಗಾರರ ಬಡತನ ಬವಣೆ ಬೆವರು ಶ್ರಮವನ್ನು ತೋರಿಸುತ್ತ ತನ್ನ ಶ್ರೀಮಂತ ಬಾಳನ್ನು ಕೂಡಾ ಪರಿಚಯ ಮಾಡಿಕೊಡುತ್ತಿದ್ದ.

ಮಗನಿಗೆ ತಂದೆಯ ಈ ಮಾತುಗಳ್ಯಾವುವೂ ಕಿವಿಗೆ ಹೋಗದೆ ಹಸಿರು ಸಿರಿ ಹರವಿದ ಗದ್ದೆ, ತೋಟ, ಆಕಾಶ, ಮುಸ್ಸಂಜೆ, ಸೂರ್ಯ ಮುಳುಗುವಾಗ ಕಾಣುವ ಮಿನುಗುವ ತಾರೆ ಚಂದ್ರನನ್ನೇ ಎದೆಗೆ ತುಂಬಿಕೊಂಡಿದ್ದ. ತಡರಾತ್ರಿ ಶಹರದ ಮನೆಗೆ ಹಿಂದಿರುಗಿದಾಗ ತಂದೆ ಮಗನಿಗೆ ಬಡತನವನ್ನು ಪರಿಚಯ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮಾತಿಗೆ ಕೂತ. ‘ನೋಡಿದೆಯಾ ಮಗನೇ, ಬಡತನದ ಬವಣೆ ಹೇಗಿದೆ ಗೊತ್ತಾಯ್ತಾ’ ಎಂದು ಪ್ರಶ್ನೆ ಮಾಡಿದ. ಅದಕ್ಕೆ ಮಗನ ವಿವರಣೆ ಅಭೂತಪೂರ್ವವಾಗಿತ್ತು:

‘ಇಷ್ಟು ಹಣ, ಕಾರು, ಬಂಗಲೆ ಇದ್ದರೂ ನಮ್ಮ ಮನೆಯಲ್ಲಿ ಒಂದೇ ನಾಯಿಮರಿ. ಅವರ ಬಳಿ ಹತ್ತಾರು ನಾಯಿಗಳು. ಇಲ್ಲಿ ಕಾಂಪೌಂಡ್ ಮಧ್ಯೆ ಸಣ್ಣ ಈಜುಕೊಳ. ಅಲ್ಲಿ ಅವರ ಗುಡಿಸಲ ಎದುರು ಹರಿವ ನಾಲೆ. ಇಲ್ಲಿ ಬೆಲೆ ಬಾಳುವ ಗಾಜಿನ ದೊಡ್ಡ ದೀಪ, ಅಲ್ಲಿ ಹೊರಗೆ ಮಲಗಿದರೆ ಸಹಸ್ರಾರು ತಾರೆಗಳು. ಇಲ್ಲಿ ಮನೆಯ ಆವರಣಕ್ಕೆ ಗೋಡೆ ಇದೆ. ಅವರ ಮನೆಯ ಎದುರು ಕಣ್ಣು ಚಾಚಿದಷ್ಟೂ ಹೊಲ ಗದ್ದೆ ಬಯಲು. ನಾವು ಸಣ್ಣ ಚೌಕಟ್ಟಿನ ಸೈಟಿನೊಳಗೆ ಬಾಳ್ತಾ ಇದೀವಿ. ಅವರು ಇಡೀ ಬಯಲಿನಲ್ಲಿ ಓಡಾಡುತ್ತಾರೆ. ನಮಗಿಂತ ಅವರು ಸಿರಿವಂತರು ಅಪ್ಪ’ ಅಂತೆಲ್ಲ ವಿವರಿಸುವ ಮಗನ ಕಂಡಾಗ ತಂದೆ ಕಕ್ಕಾಬಿಕ್ಕಿ. ತನ್ನ ಮಗನಿಗೆ ಬಡ ರೈತ ಕಾರ್ಮಿಕರ ಬಾಳನ್ನು ತೋರಿಸಲು ಹೊರಟ ತಂದೆ ಸಿರಿವಂತಿಕೆಯ ಬಗ್ಗೆ ಮಗ ನೀಡಿದ ವಿವರ, ಕೊಟ್ಟ ಹೋಲಿಕೆ ಎಲ್ಲಾ ಬಹುವಾಗಿ ಕಾಡಿತು. ತಾಯಿ ಮಾತ್ರ ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತ ತಾನೇ ತಯಾರಿಸಿದ ಅಡುಗೆಯನ್ನು ಬಡಿಸಲು ಅಣಿ ಮಾಡುತ್ತಿದ್ದಳು. ಸಿರಿತನ ಮತ್ತು ಬಡತನದ ಮಧ್ಯೆ ಇರುವ ತೆಳುಗೆರೆ ಮತ್ತು ಬೆಟ್ಟದ ಗಾತ್ರವನ್ನು ನೆನೆದು ಮುಗುಳ್ನಗುತ್ತಿದ್ದಳು. ಸಿರಿತನದ ಸ್ವರೂಪವನ್ನು ನಿವಾಳಿಸಿ ಬಿಸಾಕಿದ್ದ ಮಗ ಮಾತ್ರ ಅವಳ ಕಣ್ಣಿಗೆ ದಾರ್ಶನಿಕನ ಹಾಗೆ ಕಂಡಿದ್ದ.

ಬೇಂದ್ರೆಯವರು ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು’ ಕವಿತೆ ಕೂಡಾ ಸಿರಿವಂತಿಕೆಯ ಢೋಂಗಿತನವನ್ನು ಬಣ್ಣಿಸುತ್ತದೆ. ಬಾಳಿನಲ್ಲಿ ಅದಕು ಇದಕು ಎದಕು ಬಳಸಿಕೊಂಡ ಒಲವನ್ನು ಕವಿ ಆರಾಧಿಸುತ್ತಾರೆ. ಗುಡಿಸಲಿನಲ್ಲಿ ಇರುವ ಬೆಳಕು ಮತ್ತು ಮಹಲಿನಲ್ಲಿ ಇರುವ ಕತ್ತಲು ಇಲ್ಲಿ ಮುಖಾಮುಖಿಯಾಗುತ್ತವೆ. ಆತ ಕೊಟ್ಟ ವಸ್ತು ಒಡವೆ ಅವಳಿಗೆ ಮಾತ್ರ ಗೊತ್ತು ಎಂಬಲ್ಲಿನ ಸಿರಿವಂತಿಕೆಗೆ ಬೆಲೆ ಕಟ್ಟಲಾದೀತೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.