ಒಂದು ದಪ್ಪ ನೋಟ್ಪುಸ್ತಕದಲ್ಲಿ ಬಹಳ ಹಾಳೆಗಳಿದ್ದವು. ಕೆಲವು ಹಾಳೆಗಳು ಪೂರ್ತಿ ಬರೆಯಲ್ಪಟ್ಟಿದ್ದವು. ಇನ್ನು ಕೆಲವು ಪುಟಗಳಲ್ಲಿ ಚಿತ್ರಗಳು, ಮತ್ತೆ ಕೆಲವು ಪುಟಗಳಲ್ಲಿ ಲೆಕ್ಕಗಳು, ಮತ್ತೆ ಕೆಲವಲ್ಲಿ ನಾಳೆ ಮಾಡಬೇಕಾದ ಸಂಗತಿಗಳು ಹೀಗೆ. ಆದರೆ, ಒಂದು ಪುಟದಲ್ಲಿ ಮಾತ್ರ ಒಂದೇ ಒಂದು ಅಕ್ಷರವನ್ನೂ ಬರೆದಿರಲಿಲ್ಲ.

ಬರೆಯಲ್ಪಟ್ಟ ಪುಟಗಳು ಜೋರಾಗಿ ಮಾತಾಡಿಕೊಳ್ಳುತ್ತಿದ್ದವು. ‘ನಾವೆಷ್ಟು ಮುಖ್ಯ ಅಲ್ವಾ’ ಅಂದಿತು ಒಂದು ಪುಟ. ನಮ್ಮಲ್ಲಿ ಕಥೆಗಳಿವೆ, ಜ್ಞಾನವಿದೆ, ಲೆಕ್ಕವಿದೆ, ಕನಸುಗಳಿವೆ. ನಾವು ಇರುವುದಕ್ಕೇ ಈ ನೋಟ್ ಪುಸ್ತಕ ಅರ್ಥಪೂರ್ಣ’ ಎಂದಿತು ಮತ್ತೊಂದು ಪುಟ. ‘ನಾವಿಲ್ಲದೇ ಇದ್ದರೆ ಈ ನೋಟ್ ಪುಸ್ತಕ ಖಾಲಿಯಾಗಿ ಅಪ್ರಯೋಜಕವಾಗಿರುತ್ತಿತ್ತು’ ಎಂದು ಜೋರಾಗಿ ಹೇಳಿತು ಇನ್ನೊಂದು ಪುಟ.

ಖಾಲಿಯಾಗಿದ್ದ ಪುಟ ಮಾತಾಡದೇ ಸುಮ್ಮನಿತ್ತು.

ದಿನಗಳು ಉರುಳಿದವು. ನೋಟ್ಪುಸ್ತಕವನ್ನು ಮತ್ತೆ ಮತ್ತೆ ಉಪಯೋಗಿಸಲಾಗುತ್ತಿತ್ತು. ಕೆಲವು ಪುಟಗಳು ಹೊಗಳಲ್ಪಟ್ಟವು. ಮತ್ತೆ ಕೆಲವು ಪುಟಗಳ ಮೇಲೆ ಗೀಚಲಾಯಿತು. ಇನ್ನು ಕೆಲವು ಪುಟಗಳನ್ನು ಸಿಟ್ಟಿನಿಂದ ಹರಿದು ಹಾಕಲಾಯಿತು ಕೂಡ.

ಒಂದು ದಿನ ಒಬ್ಬಳು ಹುಡುಗಿ ನೋಟ್ ಪುಸ್ತಕವನ್ನೆತ್ತಿಕೊಂಡು ಹಾಳೆಗಳನ್ನು ತಿರುವಿ ಹಾಕಿದಳು. ಓದುತ್ತ ನೋಡುತ್ತ ನಡುವೆ ಅಚಾನಕ್ಕಾಗಿ ಸಿಕ್ಕ ಖಾಲಿ ಪುಟವನ್ನು ತೆರೆದಳು. ಅವಳಿಗೆ ಖಾಲಿ ಪುಟವನ್ನು ನೋಡಿ ಖುಷಿಯಾಯಿತು.

ಅಲ್ಲಿಯೇ ಕುಳಿತು ಅವಳು ಬರೆಯಲಾರಂಭಿಸಿದಳು. ತನ್ನ ತೀರಾ ಖಾಸಗಿ ಭಾವನೆಗಳನ್ನು, ತನ್ನ ಕನಸುಗಳನ್ನು, ಅವುಗಳನ್ನು ನನಸಾಗಿಸುವ ತನ್ನ ಭವಿಷ್ಯದ ಯೋಜನೆಗಳು ಎಲ್ಲವನ್ನೂ ಬರೆದಳು.

ಖಾಲಿ ಪುಟವೆಂದು ಅವಗಣನೆಗೆ ಒಳಗಾಗಿದ್ದ ಪುಟವೀಗ ಆ ಹುಡುಗಿಯ ಪಾಲಿಗೆ ಅತ್ಯಂತ ಅಮೂಲ್ಯವಾದ ಪುಟವಾಗಿತ್ತು. ಇಡೀ ನೋಟ್ ಪುಸ್ತಕದಲ್ಲಿ ಅದರಷ್ಟು ಮುಖ್ಯವಾದ ಪುಟ ಬೇರೊಂದಿರಲಿಲ್ಲ.

ಬೇರೆ ಪುಟಗಳು ಈಗ ಸುಮ್ಮನೆ ನೋಡುತ್ತಿದ್ದವು.

ತಡೆಯಲಾಗದೆ ಒಂದು ಪುಟ ಕೇಳಿತು, ‘ಅಲ್ಲ, ಇಷ್ಟು ದಿನ ಖಾಲಿಯಿದ್ದೆ. ಈಗ ಅದು ಹೇಗೆ ನೀನು ಅಷ್ಟು ಮುಖ್ಯವಾದ ಪುಟವಾಗಿಬಿಟ್ಟೆ?’

ಈ ಮೊದಲು ಖಾಲಿಯಿದ್ದ ಪುಟ ಹೇಳಿತು, ‘ನಾನು ಕಾದೆ. ತುಂಬಲ್ಪಡಬೇಕೆಂದು ನಾನು ಒದ್ದಾಡಲಿಲ್ಲ, ಆತುರ ಪಡಲಿಲ್ಲ. ಖಾಲಿಯಾಗಿಯೇ ಇದ್ದೆ. ಇವತ್ತು ಆ ಹುಡುಗಿಗೆ ತೀವ್ರವಾಗಿ ಬರೆಯಬೇಕೆನಿಸಿದಾಗ ನಾನು ಲಭ್ಯವಿದ್ದೆ ಅಷ್ಟೇ. ಹಾಂ, ಅಕಾಸ್ಮಾತ್ ನಾನು ಖಾಲಿಯಾಗೇ ಇದ್ದರೂ ನನ್ನ ಬದುಕು ಅರ್ಥರಹಿತವೇನೂ ಆಗುತ್ತಿರಲಿಲ್ಲ’.

ತುಂಬಿರುವುದು ಮತ್ತು ಅರ್ಥಪೂರ್ಣವಾಗಿರುವುದು ಎರಡೂ ಒಂದೇ ಅಲ್ಲ ಎಂಬುದು ಜಂಬ ಪಡುತ್ತಿದ್ದ ಪುಟಗಳಿಗೆ ಅರ್ಥವಾಗಿತ್ತು. ಖಾಲಿಯಿರುವುದು ಅವಮಾನವೂ ಅಲ್ಲ ಎಂಬುದೂ ಅರಿವಾಗಿತ್ತು.

ನಮ್ಮ ಬದುಕನ್ನು ವಿಭಿನ್ನ ಸಂಗತಿಗಳಿಂದ, ಬಣ್ಣಗಳಿಂದ, ಅನುಭವಗಳಿಂದ ತುಂಬಿಸಬೇಕೆಂದು ನಾವು ಸದಾ ಧಾವಂತದಲ್ಲಿರುತ್ತೇವೆ. ಅದೇ ಅರ್ಥಪೂರ್ಣ ಬದುಕು ಅಂದುಕೊಂಡಿರುತ್ತೇವೆ. ಸದಾ ಕಾರ್ಯನಿರತರಾಗಿರುವುದೇ ಪರಿಹಾರವೆಂದುಕೊಂಡಿರುತ್ತೇವೆ. ಅದು ಸಾಧ್ಯವಾಗದಿದ್ದಾಗ ನೋಯುತ್ತೇವೆ. ಬೇರೆಯವರ ಬದುಕಿನ ಬಣ್ಣದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತ ನಮ್ಮ ಬದುಕು ನಿಂತಲ್ಲಿಯೇ ಇದೆಯೆಂದು ಮತ್ತಷ್ಟು ಕೊರಗುತ್ತೇವೆ.

ಯಾರೋ ಓಡುವುದನ್ನು ನೋಡಿ ದಾರಿಯನ್ನು ಸ್ಪಷ್ಟಗೊಳಿಸಿಕೊಳ್ಳದೇ ನಾವೂ ಓಡುತ್ತೇವೆ. ಆದರೆ, ಸದಾ ಓಡುತ್ತಿರುವುದನ್ನೇ ಯಶಸ್ವೀ ಬದುಕು ಎನ್ನಲಾಗುವುದಿಲ್ಲ. ತಾಳ್ಮೆ, ಸಾವಧಾನ ಕೂಡ ಬದುಕಿಗೆ ಅಗತ್ಯ. ಅದು ಖಾಲಿತನವಲ್ಲ. ಪ್ರತಿಯೊಬ್ಬರೂ ವಿಶಿಷ್ಟ. ಪ್ರತಿಯೊಬ್ಬರ ಬದುಕೂ ಅನನ್ಯ ಎಂಬುದನ್ನು ಅರ್ಥ ಮಾಡಿಕೊಂಡರೆ ಜಗತ್ತಿನಲ್ಲಿ ಹೆಚ್ಚಿನ ಸಮಸ್ಯೆಗಳೇ ಮಾಯವಾಗಿ ಹೋಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.