ಒಂದು ಕಾಡಿನಲ್ಲಿ ಬಹಳ ಹಂದಿಗಳಿರುತ್ತವೆ. ಅವನ್ನು ಹಿಡಿಯಬೇಕೆಂದು ಒಬ್ಬ ವ್ಯಕ್ತಿ ಪ್ರಯತ್ನಿಸುತ್ತಿರುತ್ತಾನೆ. ಆದರೆ ನೂರಾರು ಸಂಖ್ಯೆಯ ಅವುಗಳನ್ನು ಎದುರಿಸುವುದು ಕಷ್ಟ ಅನ್ನುವುದನ್ನು ತಿಳಿದುಕೊಂಡು ಬಂದೂಕನ್ನು ಬಿಟ್ಟು ಬೇರೆ ಯೋಜನೆ ಹಾಕಿಕೊಳ್ಳುತ್ತಾನೆ.

ಒಂದು ದಿನ ಕಾಡಿಗೆ ಹೋದವನು ಸುಮಾರು ಅರ್ಧ ಕ್ವಿಂಟಲ್ನಷ್ಟು ಮೆಕ್ಕೆಜೋಳವನ್ನು ಕಾಡಿನ ನಡುವೆ ರಾಶಿ ಹಾಕುತ್ತಾನೆ. ಯಾವುದೋ ಹೊಂಡವಿಲ್ಲ, ಬಲೆಯೂ ಇಲ್ಲ. ಹಸಿದ ಹಂದಿಗಳು ಪೊದೆಗಳಿಂದ, ಕಾಡಿನ ಮೂಲೆ ಮೂಲೆಗಳಿಂದ ನುಗ್ಗಿ ಬಂದು ಜೋಳವನ್ನು ತಿನ್ನಲು ಪ್ರಾರಂಭಿಸುತ್ತವೆ. ಹೊಟ್ಟೆ ತುಂಬಿದ ಮೇಲೆ ಗಾಬರಿಯಲ್ಲೇ ಓಡಿ ಹೋಗುತ್ತವೆ. ದೂರದಲ್ಲಿ ಅವುಗಳನ್ನು ನೋಡುತ್ತ ನಿಂತಿರುತ್ತಾನೆ ಆ ವ್ಯಕ್ತಿ. ಮಾರನೇ ದಿನ ಮತ್ತೆ ಅಷ್ಟೇ ಪ್ರಮಾಣದ ಜೋಳ ಬೀಳುತ್ತದೆ. ಮರುದಿನವೂ ಅಷ್ಟೇ. ನಾಲ್ಕನೇ ದಿನ ಆ ಜೋಳ ಬೀಳುವ ಜಾಗದಿಂದ ಸ್ವಲ್ಪ ದೂರದಲ್ಲಿ ಅರ್ಧ ಮೀಟರ್ ಎತ್ತರದ ಸಣ್ಣ ಗೋಡೆಯನ್ನು ಅರ್ಧ ವೃತ್ತಾಕಾರದಲ್ಲಿ ಕಟ್ಟಲಾಗುತ್ತದೆ. ವಾಪಾಸು ಹೋಗುವಾಗ ಹಂದಿಗಳು ಅದನ್ನು ನಿರ್ಲಕ್ಷಿಸಿ ಮುಂದೆ ಹೋಗುತ್ತವೆ. ಪ್ರತೀ ದಿನ ಒಂದೇ ಜಾಗದಲ್ಲಿ ಜೋಳ ಬಂದು ಬೀಳುವುದು ಮತ್ತು ಹಂದಿಗಳು ಅದನ್ನು ತಿನ್ನುವಾಗ ಗೋಡೆಯ ಎತ್ತರ ಮತ್ತು ಉದ್ದ ಹೆಚ್ಚುತ್ತ ಹೋಗುವುದು ನಡೆದೇ ಇರುತ್ತದೆ. ಹದಿನೈದನೇ ದಿನ ಅರ್ಧವೃತ್ತಾಕಾರದ ಗೋಡೆ ಸಂಪೂರ್ಣ ವೃತ್ತದ ರೂಪ ಪಡೆದುಕೊಳ್ಳುತ್ತದೆ. ಮಧ್ಯೆ ಒಂದು ಬಾಗಿಲಿನ ಜಾಗವನ್ನು ಬಿಟ್ಟು ಗೋಡೆ ಪೂರ್ತಿಗೊಳ್ಳುತ್ತದೆ. ಎತ್ತರವೂ ಈಗ ಅರ್ಧ ಅಡಿಯಿಂದ ಏರುತ್ತ ಹತ್ತು ಅಡಿ ದಾಟಿರುತ್ತದೆ.

ಮಾರನೇ ದಿನ ಆ ಜೋಳದ ರಾಶಿಯತ್ತ ಪ್ರವೇಶಿಸಲು ಸಣ್ಣ ದಾರಿ ಮಾತ್ರ ಇರುತ್ತದೆ. ಎಂಥವರಿಗೂ ಹೊರಗಡೆಯಿಂದ ನೋಡಿದರೆ ಇದರಲ್ಲೇನೋ ಮೋಸವಿದೆ ಎಂದು ಗೊತ್ತಾಗುವಂತಿರುತ್ತದೆ. ಹಂದಿಗಳಿಗೂ ಅರ್ಥವಾಗುತ್ತದೆ. ಆದರೆ ಮೈಕೈ ನೋಯಿಸಿಕೊಳ್ಳದೇ ಬಂದು ಬೀಳುವ ರಾಶಿ ರಾಶಿ ಜೋಳವನ್ನು ಮನಸೋಇಚ್ಛೆ ಮೇದ ಕಾರಣ ಆ ದಾರಿಯಲ್ಲಿಯೇ ಒಳಹೋಗಿ ತಿನ್ನಲು ಪ್ರಾರಂಭಿಸುತ್ತವೆ. ಏಕೆಂದರೆ ಅವುಗಳಿಗೆ ಕಾಣುತ್ತಿರುವುದು ಬಾಯಲ್ಲಿ ನೀರೂರಿಸುವ ಜೋಳವೊಂದೇ. ಹಂದಿಗಳು ಜೋಳ ತಿನ್ನಲು ಪ್ರಾರಂಭಿಸುತ್ತಿದ್ದಂತೆಯೇ ಆ ದಾರಿಯಲ್ಲಿ ದೊಡ್ಡ ಕಬ್ಬಿಣದ ಬಾಗಿಲನ್ನು ಕೂರಿಸಲಾಗುತ್ತದೆ. ಹಂದಿಗಳು ಈಗ ಜಪ್ಪಯ್ಯ ಅಂದರೂ ತಪ್ಪಿಸಿಕೊಳ್ಳುವ ಹಾಗಿಲ್ಲ. ಎದುರಿಗೆ ಸಿಕ್ಕ ದೊಡ್ಡ ಮರಗಳನ್ನೇ ಕಿತ್ತು ಬಿಸುಡುವ ತಾಕತ್ತಿರುವ ಹಂದಿಗಳು ಈಗ ತಪ್ಪಿಸಿಕೊಳ್ಳಲಾಗದೇ ಕೈದಿಗಳಾಗುತ್ತವೆ.

ಮೊಬೈಲ್, ಅಂತರ್ಜಾಲ, ಫೇಸ್ಬುಕ್, ಇನ್ಸ್ಟಾ, ಯೂ ಟ್ಯೂಬ್, ಕುರುಕಲು ತಿಂಡಿ– ಆಹಾರ, ಸೋಮಾರಿತನ, ತುರ್ತು ಕೆಲಸಗಳನ್ನು ಮುಂದೂಡುವುದು ಎಲ್ಲವೂ ನಮ್ಮನ್ನು ಬಂಧಿಗಳಾಗಿಸುತ್ತಿವೆ ಎಂಬ ಕಟುಸತ್ಯ ನಮಗೆ ಗೊತ್ತಿದೆ. ಕಂಫರ್ಟ್ ಝೋನ್ ಅನ್ನುವುದು ಅರಮನೆ ಅನ್ನಿಸಿದರೂ ಅದು ನಮ್ಮ ಪ್ರಗತಿಯನ್ನು ತಡೆಹಿಡಿಯುವ ಜಾಗ ಎನ್ನುವುದೂ ನಮಗೆ ಅರಿವಿದೆ. ಹಂದಿಗಳಿಗೆ ಒಳಗೆ ಹೋಗಲು ಪುಟ್ಟ ದಾರಿ ಮಾತ್ರ ಕಂಡರೂ ಅವು ಅದನ್ನು ಗಮನಿಸದೇ ಒಳಗೆ ಹೋದಂತೆ ನಾವೂ ಭಯಂಕರ ಜಾಲದೊಳಗೆ ಸಿಕ್ಕಿಹಾಕಿಕೊಳ್ಳುವ ಅರಿವಾದರೂ ವಾಪಸ್ ಬರಲು ಸಾಧ್ಯವಾಗುವುದಿಲ್ಲ. ಏಕೆಂದರೆ ನಮಗೆ ಆ ಸುಖದ ಭ್ರಮೆ ಅಭ್ಯಾಸವಾಗಿಬಿಟ್ಟಿದೆ.

ಇದು ವಿದ್ಯಾರ್ಥಿಗಳು, ಯುವಜನರು, ಮಧ್ಯವಯಸ್ಕರು, ನಿರುದ್ಯೋಗಿಗಳು, ಉದ್ಯೋಗಿಗಳು, ಮಹಿಳೆಯರು, ಪುರುಷರು ಎಲ್ಲರ ಸಮಸ್ಯೆಯೂ ಹೌದು. ಹಾಗಾದರೆ ಇದಕ್ಕೆ ಪರಿಹಾರ? ಈ ಕಥೆಯಲ್ಲಿರುವ ಹಂದಿಗಳ ಅಂತ್ಯವನ್ನು ಊಹಿಸಿಕೊಂಡು ಎಚ್ಚೆತ್ತುಕೊಳ್ಳುವುದು ಮತ್ತು ಕಷ್ಟವಾದರೂ ಗಟ್ಟಿ ಮನಸ್ಸು ಮಾಡಿ ನಾವೇ ನಿರ್ಮಿಸಿಕೊಂಡ ಬಂಧನದಿಂದ ಬಿಡಿಸಿಕೊಳ್ಳುವುದು. ಅಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.