ಗುಲಾಮಿ ಪದ್ಧತಿಯ ದಿನಗಳಲ್ಲಿ ಒಬ್ಬ ಮಾಲೀಕನ ಬಳಿ ಅನೇಕ ಗುಲಾಮರು ಇರುತ್ತಿದ್ದರು. ಲುಕ್ಮಾನ್ ಅವರಲ್ಲೊಬ್ಬನಾಗಿದ್ದ. ಲುಕ್ಮಾನ್ ಗುಲಾಮನಾಗಿದ್ದರೂ, ಅತ್ಯಂತ ಚತುರ ಮತ್ತು ಬುದ್ಧಿವಂತನಾಗಿದ್ದ. ಅವನ ಖ್ಯಾತಿ ದೂರ ದೂರದವರೆಗೂ ಹರಡಿತ್ತು.

ಈ ವಿಚಾರ ಮಾಲೀಕನ ಕಿವಿಗೂ ಬಿತ್ತು. ಒಂದು ದಿನ ಮಾಲೀಕನು ಲುಕ್ಮಾನ್ನನ್ನು ಕರೆಸಿ ಹೇಳಿದನು: ‘ನೀನು ತುಂಬಾ ಬುದ್ಧಿವಂತನೆಂದು ಕೇಳಿದ್ದೇನೆ. ನಿನ್ನ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಇಚ್ಛಿಸುತ್ತೇನೆ. ಈ ಪರೀಕ್ಷೆಯಲ್ಲಿ ನೀನು ಉತ್ತೀರ್ಣನಾದರೆ ನಿನ್ನನ್ನು ದಾಸತ್ವದಿಂದ ಮುಕ್ತಗೊಳಿಸುತ್ತೇನೆ. ಹೋಗಿ, ಸತ್ತ ಒಂದು ಮೇಕೆಯನ್ನು ಕತ್ತರಿಸಿ, ಅದರಲ್ಲಿನ ಉತ್ತಮವಾದ ಭಾಗವನ್ನು ನನಗೆ ತಂದುಕೊಡು’.

ಮಾಲೀಕನ ಆಜ್ಞೆಯಂತೆ ಲುಕ್ಮಾನ್ ಸತ್ತ ಮೇಕೆಯ ನಾಲಿಗೆಯನ್ನು ತೆಗೆದುಕೊಂಡು ಮಾಲೀಕನ ಮುಂದೆ ಇಟ್ಟನು.

‘ನಾಲಿಗೆಯನ್ನೇ ಯಾಕೆ ತಂದೆ?’ ಎಂದು ಮಾಲೀಕನು ಕೇಳಿದಾಗ, ಲುಕ್ಮಾನ್ ಉತ್ತರಿಸಿದನು: ‘ದೇಹದಲ್ಲಿ ನಾಲಿಗೆ ಒಳ್ಳೆಯದಾಗಿದ್ದರೆ, ಎಲ್ಲವೂ ಒಳ್ಳೆಯದೇ ಆಗಿರುತ್ತದೆ’.

ಅದಕ್ಕೆ ಮಾಲೀಕನು ಹೇಳಿದನು: ‘ಸರಿ, ಇದನ್ನು ತೆಗೆದುಕೊಂಡು ಹೋಗು. ಈಗ ಮೇಕೆಯಲ್ಲಿನ ಕೆಟ್ಟ ಭಾಗವನ್ನು ತಂದುಕೊಡು’.

ಲುಕ್ಮಾನ್ ಹೊರಗೆ ಹೋಗಿ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಅದೇ ನಾಲಿಗೆಯನ್ನು ತಂದು ಮಾಲೀಕನ ಮುಂದೆ ಇಟ್ಟನು.

ಮತ್ತೆ ಕಾರಣ ಕೇಳಿದಾಗ ಲುಕ್ಮಾನ್ ಹೇಳಿದನು:

‘ದೇಹದಲ್ಲಿ ನಾಲಿಗೆ ಒಳ್ಳೆಯದಾಗಿರದಿದ್ದರೆ, ಎಲ್ಲವೂ ಕೆಟ್ಟದೇ ಆಗುತ್ತದೆ.’

ಅವನು ಮುಂದುವರಿದು ಹೇಳಿದನು:

‘ಮಾಲೀಕರೇ, ವಾಣಿ ಎಲ್ಲರಿಗೂ ಜನ್ಮಸಿದ್ಧವಾಗಿ ದೊರಕುತ್ತದೆ. ಆದರೆ, ಮಾತನಾಡುವ ಕಲೆಯು ಕೆಲವೇ ಜನರಿಗೆ ಬರುತ್ತದೆ. ಏನು ಮಾತನಾಡಬೇಕು? ಹೇಗೆ ಮಾತನಾಡಬೇಕು? ಯಾವಾಗ ಮಾತನಾಡಬೇಕು?—ಈ ಒಂದು ಕಲೆ ಅತಿ ವಿರಳರಿಗೆ ಮಾತ್ರ ತಿಳಿದಿದೆ. ಒಂದೇ ಮಾತಿನಿಂದ ಪ್ರೀತಿ ಹರಿಯಬಹುದು; ಮತ್ತೊಂದು ಮಾತಿನಿಂದ ಜಗಳ ಉಂಟಾಗಬಹುದು. ಕಹಿ ಮಾತುಗಳು ಲೋಕದಲ್ಲಿ ಎಷ್ಟೋ ಕಲಹಗಳನ್ನು ಹುಟ್ಟಿಸಿವೆ. ಈ ನಾಲಿಗೆಯೇ ಲೋಕದಲ್ಲಿ ಭಾರಿ ವಿಪತ್ತನ್ನುಂಟುಮಾಡಿದೆ. ಮೂರು ಇಂಚಿನ ಈ ನಾಲಿಗೆ ಎಂಬ ಆಯುಧದಿಂದ, ಆರು ಅಡಿ ಎತ್ತರದ ವ್ಯಕ್ತಿಯನ್ನೂ ಕೊಲ್ಲಬಹುದು; ಹಾಗೆಯೇ ಸಾಯುತ್ತಿರುವವನಲ್ಲೂ ಜೀವ ತುಂಬಬಹುದು. ಎಲ್ಲ ಜೀವಿಗಳಲ್ಲಿ ವಾಣಿ ಎಂಬ ವರವು ಮಾನವನಿಗೆ ಮಾತ್ರ ಲಭಿಸಿದೆ. ಅದರ ಸದ್ವಿನಿಯೋಗದಿಂದ ಸ್ವರ್ಗವೇ ಭೂಮಿಗೆ ಇಳಿಯಬಹುದು; ದುರುಪಯೋಗದಿಂದ ಸ್ವರ್ಗವೂ ನರಕವಾಗಬಹುದು’.

ಲುಕ್ಮಾನನ ಬುದ್ಧಿವಂತಿಕೆ ಮತ್ತು ಚಾತುರ್ಯಭರಿತ ಮಾತುಗಳನ್ನು ಕೇಳಿ ಮಾಲೀಕನು ಬಹಳ ಸಂತೋಷಪಟ್ಟನು. ಆ ದಿನ ಅವನ ಗುಲಾಮನೇ ಅವನಿಗೆ ದೊಡ್ಡ ಪಾಠವನ್ನು ಕಲಿಸಿದ್ದ. ಆದ್ದರಿಂದ ಅವನು ಲುಕ್ಮಾನನನ್ನು ದಾಸತ್ವದಿಂದ ಮುಕ್ತಗೊಳಿಸಿದನು.

ಶರಣರು ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದರು. ಕಬೀರ ‘ಬೋಲಿ ಏಕ್ ಅನಮೋಲ್ ಹೈ, ಜೋ ಕೋಯಿ ಬೋಲೆ ಜಾನಿ, ಹಿಯೇ ತರಾಜು ತೌಲಿ ಕೆ,ತಬ್ ಮುಖ ಬಾಹರ ಆನಿ’ (ಮಾತು ಅಮೂಲ್ಯವಾದುದು, ಅಳೆದು-ತೂಗಿ ನೋಡಿ ಮಾತಾಡಬೇಕು) ಎಂದ. ಮಧುರ ವಾಣಿ ಒಂದು ವರ. ಅದನ್ನು ಸಿದ್ಧಿಸುವುದೇನು ಕಷ್ಟವಲ್ಲ. ನಿಮ್ಮ ವಾಣಿ ಹೇಗಿದೆ? ಅದು ತೀಕ್ಷ್ಣವಾಗಿದ್ದರೆ ಅಥವಾ ಸಾಮಾನ್ಯವಾಗಿದ್ದರೂ ಅದನ್ನು ಸಿಹಿಯಾಗಿಸುವ ಪ್ರಯತ್ನ ಮಾಡಿ. ನಿಮ್ಮ ವಾಣಿ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ; ಅದು ಸದಾ ಉತ್ತಮವಾಗಿರಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.