ಲ್ಯಾಂಡ್ ಲಾರ್ಡ್ ಎಂದು ಪರಿಚಯಿಸಿಕೊಳ್ಳುತ್ತಿದ್ದ ಸುಭಾನ್ ಸಾಹೇಬರಿಗೆ ಮೂರು ಜನ ಗಂಡುಮಕ್ಕಳು. ಇಬ್ಬರು ತಮ್ಮಂದಿರು ನೌಕರಿ ಹಿಡಿದ ಮೇಲೆ ‘ನೀನೇ ನೋಡಿಕೊ’ ಎಂದು ಬಿಟ್ಟುಹೋದ ಜಮೀನಿನಲ್ಲಿ ಅಡಿಕೆ ಬೆಳೆದು ಧನಿಕರಾದರು. ಆಮೇಲೆ ಷೋಕಿಗೆ ಅಂತ ನಾಟಿ ಕೋಳಿ ಸಾಕಲು ಶುರು ಮಾಡಿದರು. ಮಕ್ಕಳು ಎಲ್ಲಿ ಏನು ಓದುತ್ತಾರೆ ಎಂದು ಒಂದು ಕ್ಷಣವೂ ಯೋಚಿಸದೆ ತಮ್ಮ ಪಾಡಿಗೆ ತಾವು ತೋಟ ತುಡಿಕೆಗೆ, ಯಾರೋ ಕರೆದ ಯಾರದೋ ಮನೆಯ ದಾವತ್ತಿಗೆ ಹೋಗಿಬಿಡುವ ಚಾಳಿಯಿದ್ದ ಸಾಹೇಬರಿಗೆ ಅನಾಯಾಸವಾಗಿ ಸಿಕ್ಕ ಜಮೀನಿನಿಂದ ‘ತಾವು ಕೆಲಸ ಮಾಡುವವರಲ್ಲ, ಮಾಡಿಸುವವರು’ ಎಂಬಂತಹ ಅಹಂಕಾರ ಬಂದುಬಿಟ್ಟಿತ್ತು. ಮಕ್ಕಳು ಬೆಳೆದ ಹಾಗೆ ಅವರ ಒಣಜಂಭವೂ ಬೆಳೆದು ಅಪರೂಪಕ್ಕೆ ಸಿಗುವ ಅಪ್ಪನಾಗಿಬಿಟ್ಟರು. ಸಿಗರೇಟು ಸೇದುವುದು, ಮೂಡು ಬಂದಾಗೊಮ್ಮೆ ಮಸೀದಿಗೆ ಹೋಗಿ ನಮಾಜು ಮಾಡಿಬರುವುದು, ಬೇಕಾಬಿಟ್ಟಿ ತಿಂದು ತೇಗುವುದು ಅವರ ಖಯಾಲಿಗಳು. ಹರೆಯಕ್ಕೆ ಬಂದ ಹಿರಿಯ ಮಗನೊಬ್ಬನ ಅಸಹಜ ಸಾವು ಸಾಹೇಬರನ್ನು ಇನ್ನಿಲ್ಲದಂತೆ ಅಲ್ಲಾಡಿಸಿಬಿಟ್ಟಿತು. ಅವರ ಮಾತುಕತೆಯಲ್ಲಿ ಕಾಣುತ್ತಿದ್ದ ಮೇಲರಿಮೆ ಮೆಲ್ಲಗೆ ಮರೆಯಾಗತೊಡಗಿತು. ನರಕಕ್ಕೆ ಹೋದರೂ ಅಲ್ಲಿ ಮಿನಿಸ್ವರ್ಗವೊಂದನ್ನು ಸೃಷ್ಟಿ ಮಾಡಿಕೊಳ್ಳುತ್ತೇನೆಂಬ ಚಾಲಾಕಿತನವಿದ್ದ ಸಾಹೇಬರು ಈಗ ಹತಾಶರಾದಂತಿದೆ.

ಮಕ್ಕಳಿಗೆ ಅಮ್ಮ ಅಪ್ಪ ತಮ್ಮ ಸುತ್ತ ಓಡಾಡುವ ಗಂಧರ್ವರಂತೆ ಕಾಣುತ್ತಾರೆ. ಬಟ್ಟೆ ಬರೆ ತಿಂಡಿ ತಿನಿಸು ಕೊಡಿಸುವುದಷ್ಟೇ ಅಪ್ಪ ಅಮ್ಮನ ಹೊಣೆಗಾರಿಕೆಯಲ್ಲ. ಅವರ ದೈಹಿಕ ಮಾನಸಿಕ ಸಮತೋಲನವನ್ನು ಸದಾ ಕಾಪಾಡುವ ಧನ್ವಂತರಿಯರಾಗಬೇಕಾಗುತ್ತದೆ. ಅವರ ಬಾಲ್ಯಕ್ಕೆ ಚೈತನ್ಯವನ್ನು ತುಂಬಿಕೊಡುವ ಕುದುರೆಗಳೂ, ಕಲ್ಪನಾಶಕ್ತಿಗೆ ರೆಕ್ಕೆಯೊದಗಿಸುವ ಹಕ್ಕಿಗಳೂ ನಗೆ ಉಕ್ಕಿಸುವ ಕಲಾವಿದರೂ ಆಗಬೇಕಾಗುತ್ತದೆ. ಒಂದು ಹಂತದವರೆಗೆ ಮಕ್ಕಳ ಪ್ರತಿ ಮಾತು ಮತ್ತು ಉಸಿರಿನಲ್ಲಿ ಆಗುವ ಸೂಕ್ಷ್ಮ ವ್ಯತ್ಯಾಸವನ್ನೂ ಅರಿತು ಅನುಭವಿಸಿ ಬೆನ್ನಿಗೆ ನಿಲ್ಲುವ ಗೋಡೆಗಳಾಗಬೇಕಾಗುತ್ತದೆ. ಮಕ್ಕಳೆಂದರೆ ಮೊಗ್ಗುಗಳಂತೆ. ಸಹಜವಾಗಿ ಸೂರ್ಯನ ಬಿಸಿಲಿಗೆ ಮುಖ ಮಾಡಿ ಅರಳಲು ಬಿಡಬೇಕು. ಅನೇಕರು ತಾವೇ ಅರಳಿಸಲು ಹೋಗಿ ಮೊಗ್ಗಿನ ದಳಗಳನ್ನು ಮುರಿದು ಹಾಕುತ್ತಾರೆ. ಒಂದುಕಾಲದ ಅನಕ್ಷರಸ್ಥ ತಂದೆ ತಾಯಿಗಳು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಬೆಳೆಸುತ್ತಿದ್ದ ಪರಿ ಅನನ್ಯವಾದುದು.

ಈಗಿನ ಅಪ್ಪ ಅಮ್ಮ ಬಹುಪಾಲು ವಿದ್ಯಾವಂತರು. ಅವರ ಮಕ್ಕಳ ಮುಖದ ಮೇಲೆ ಬಿಸಿಲು ಬೀಳಬಾರದು. ಮಕ್ಕಳು ಮಳೆಯಲ್ಲಿ ನೆನೆದರೆ ಇವರಿಗೇ ನೆಗಡಿ ಜ್ವರ ಬಂದಂತೆ ತಳಮಳಿಸುತ್ತಾರೆ. ಕಾಲು ಕೆಸರಾಗುವಂತಿಲ್ಲ. ಓಡೋಡಿ ಬಿದ್ದು ಸಣ್ಣ ಗಾಯವಾಗಿ ರಕ್ತ ಬಂದರಂತೂ ಒಂದು ವಾರ ರಜಾ. ಅತಿಯಾದ ಆರೈಕೆ ಮಕ್ಕಳನ್ನು ಅವಲಂಬಿತರನ್ನಾಗಿ, ನಿಗ್ರಹಶಕ್ತಿಶೂನ್ಯರನ್ನಾಗಿ ಮಾಡುತ್ತದೆ. ಜೀವನದ ಕಡುಕಷ್ಟದ ಹಾದಿಯನ್ನು ಎದುರಿಸಲಾಗದೆ ಕಲ್ಪಿತ ಭೀತಿಯಲ್ಲಿ ಒಂದೋ ಸ್ವಯಂ ನಾಶವಾಗುತ್ತಾರೆ, ಇಲ್ಲವೇ ಸಮಾಜವಿರೋಧಿ ವಿಕೃತಿಗಳಲ್ಲಿ ತೊಡಗಿ ಪತನಮುಖಿಯಾಗುತ್ತಾರೆ.

ಒಮ್ಮೆ ಎಲ್ಲವೂ ಸಲೀಸಾಗಿ ನಡೆಯುತ್ತದೆಂಬ ಭಾವನೆ ಬಂದುಬಿಟ್ಟರೆ ಪರಿಶ್ರಮದ ಅರಿವೇ ಇಲ್ಲದ ಅಸೂಕ್ಷ್ಮ ಸಂತತಿಯನ್ನು ಸಮಾಜದಲ್ಲಿ ಸಹಿಸಿಕೊಳ್ಳಬೇಕಾಗುತ್ತದೆ. ಮಕ್ಕಳಿಗೆ ಬಾಲ್ಯದ ನಲಿವಿನ ಜೊತೆಗೆ ಕಷ್ಟನಿಷ್ಠುರಗಳನ್ನು ಅರಿತು ನಿಭಾಯಿಸುವ ಯೋಗ್ಯತೆಯನ್ನು ಕಲಿಸಿಕೊಡಬೇಕು. ಯೋಗ್ಯತೆ ಹುಟ್ಟಿನಿಂದ ಬರುವುದಿಲ್ಲ. ಅದನ್ನು ಕಷ್ಟಪಟ್ಟು ಗಳಿಸಿಕೊಳ್ಳಬೇಕು. ಹುಟ್ಟಿದ ಕಾರಣಕ್ಕೇ ಮಣ್ಣು ಜಾತಿ ಧರ್ಮದೇಶಗಳು ಶ್ರೇಷ್ಠವೂ ಪವಿತ್ರವೂ ಆಗುವುದಿಲ್ಲ. ಮನುಷ್ಯರನ್ನು ವಿನಾಕಾರಣ ಗೌರವಿಸುವುದು, ಸಹನೆ ತುಂಬಿದ ನಡವಳಿಕೆಯಿಂದ ಮಾತ್ರವೇ ಅವೆಲ್ಲವನ್ನೂ ಪವಿತ್ರಗೊಳ್ಳುವಂತೆ ಮಾಡುವುದು ನಿಜವಾದ ಯೋಗ್ಯತೆ ಅಂತ ಮನದಟ್ಟು ಮಾಡುವುದು ಹೆತ್ತವರ ನೈತಿಕ ಹೊಣೆಯಾಗಬೇಕು. ಆ ಮೂಲಕ ಮಕ್ಕಳು ಬೆಳೆದಂತೆ ವಿಶ್ವಮಾನವ ಪ್ರಜ್ಞೆಯ ವಾರಸುದಾರರನ್ನಾಗಿ ರೂಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.