ಮುಪ್ಪಿನಲ್ಲಿ ಮಗನನ್ನು ಹೊರತುಪಡಿಸಿ ಆ ವೃದ್ಧನ ಬಳಿ ಏನೂ ಇರಲಿಲ್ಲ. ಒಂದು ಕೋಣೆಯ ಕಲ್ಲಿನ ಮನೆ, ಒಂದು ಮುರುಕು ಕುರ್ಚಿ ಅಷ್ಟೇ. ಬೆಲ್ಲ ಇದ್ದಲ್ಲಿ ಇರುವೆಗಳು ಎಂಬ ಮಾತು ಸಹಜ; ಕೆಲವೊಮ್ಮೆ ಜೀರ್ಣವಾಗದ ಸತ್ಯ ಕೂಡ. ಈ ಮೊದಲು ಒಂದಿಷ್ಟು ತ್ರಾಣ ಇದ್ದಾಗ ಜನ ಕೆಲಸ ಕಾರ್ಯಗಳಿಗೆ ಕರೆಯುತ್ತ, ಸಂಜೆ ಮನೆ ಬಳಿ ಬಂದು ಮಾತಾಡಿಸಿಯೂ ಹೋಗುತ್ತಿದ್ದರು. ಮಗ ದೊಡ್ಡವನಾಗಿ ಹೊಟ್ಟೆಪಾಡು, ಉದ್ಯೋಗ ಎಂದು ಶಹರದಲ್ಲಿ ಅಲೆಯುವಾಗ ಇವರು ಇಲ್ಲಿ ಒಬ್ಬಂಟಿ. ವಯೋಸಹಜವಾಗಿ ಮಂಜಾದ ಕಣ್ಣು ಮತ್ತು ಮೊಣಕಾಲು ನೋವು. ಮುಕ್ಕಾಲು ಪಾಲು ಅಂಗವೈಕಲ್ಯ ಎನ್ನುವಂಥ ಸ್ಥಿತಿ. ನಿರುಪಯುಕ್ತ ಅಂತ ಯಾರೂ ಹತ್ತಿರ ಕೂಡ ಸುಳಿಯರು, ಮಾತೂ ಆಡಿಸರು. ನಸುಕು ಮತ್ತು ಸಂಜೆ ಮುರುಕು ಕುರ್ಚಿ ಹಾಕಿಕೊಂಡು ಕೂತರೆ, ಒಂದು ನರಪಿಳ್ಳೆಯೂ ಮಾತಾಡಿಸುತ್ತಿರಲಿಲ್ಲ.

ನಿರುಪಯುಕ್ತತೆ ಅವರನ್ನು ಜನ ನಿರ್ಲಕ್ಷಿಸುವಂತೆ ಮಾಡಿತ್ತು. ಮಗನ ಬಳಿ ಹೋಗಿ ಇರಲಾರದ ಅಸಹಾಯಕತೆ. ಮಗನಿಗೆ ವಿಷಯ ತಿಳಿಸಿದಾಗ ಅವನೂ ಬಹಳ ನೊಂದುಕೊಂಡ. ‘ಏನೂ ಭಯ ಬೇಡ. ನನಗೆ ಮೂರು ವಸ್ತು ತಂದುಕೊಡು ಸಾಕು: ಒಂದು ಟಿವಿ, ಒಂದು ಜನರೇಟರ್, ಒಂದು ಸೈಕಲ್’ ಎಂಬ ಬೇಡಿಕೆ ಇಟ್ಟ ವೃದ್ಧ. ಮಗ ಕೆಲದಿನಗಳಲ್ಲೇ ಈ ಮೂರೂ ವಸ್ತುಗಳನ್ನು ತಂದುಕೊಟ್ಟ. ಕಣ್ಣು ಕಾಣಲ್ಲ; ಟಿವಿ? ಕಾಲು ನೋವು; ಸೈಕಲ್? ಇನ್ನು ಜನರೇಟರ್..? ಅಚ್ಚರಿ ಎನಿಸಿತು. ಆದರೆ, ಇಲ್ಲೇ ಇದ್ದದ್ದು ಸ್ವಾರಸ್ಯ. ಕೆಲವೇ ದಿನಗಳಲ್ಲಿ ವೃದ್ಧನ ಬಾಳೇ ಬದಲಾಯಿತು. ಹತ್ತಾರು ಜನ ಟಿವಿ ನೋಡಲು ನಿತ್ಯ ಬರಲು ಶುರುಮಾಡಿದರು. ಗ್ರಾಮದ ಅನೇಕ ಪುಟ್ಟ ಮಕ್ಕಳು ಸೈಕಲ್ ನೆಪದಲ್ಲಿ ವೃದ್ಧನ ಸುತ್ತ ನೆರೆದರು. ಕರೆಂಟ್ ಹೋದಾಗಲೆಲ್ಲ ಅನೇಕರು ತಮ್ಮ ಮೊಬೈಲ್ಗಳನ್ನು ಚಾರ್ಜ್ ಮಾಡಿಕೊಳ್ಳಲು ಧಾವಿಸಿದರು. ಮನೆ ತುಂಬಾ ಜನವೋ ಜನ. ಕೂತಲ್ಲೇ ಜನ ವೃದ್ಧನಿಗೆ ಊಟ ತಿಂಡಿ ಕೊಡಲು ಶುರು ಮಾಡಿದರು. ತಾವೇ ಬರುವುದು, ಟಿವಿ ನೋಡುವುದು, ಜನರೇಟರ್ ಶುರು ಮಾಡುವುದು, ಮಕ್ಕಳು ಸರದಿಯಲ್ಲಿ ಸೈಕಲ್ ಅನ್ನು ಓಡಿಸುವುದು... ಹೀಗೇ. ಅದ್ಭುತವೇ ನಡೆದುಹೋಯಿತು.

ಮಗ ಅನುಕೂಲಸ್ಥನಾದಾಗ ಮುರುಕು ಮನೆಯ ತಾರಸಿ ಗೋಡೆ ಎಲ್ಲ ಬದಲಾಯಿಸಿದ. ಮನೆಯ ಪಕ್ಕ ತಂಪು ಪಾನೀಯದ ಪುಟ್ಟ ಅಂಗಡಿ ಇಟ್ಟುಕೊಟ್ಟ. ಜನರೇಟರ್ ಇದ್ದುದರಿಂದ ವಿದ್ಯುತ್ ಕಡಿತವಾದರೂ ಪಾನೀಯಗಳು ತಂಪನ್ನು ಕಳೆದುಕೊಳ್ಳುತ್ತಿರಲಿಲ್ಲ. ತಂದೆ ಕೂತ ಕೂತಲ್ಲೇ ಚೈತನ್ಯಮಯಿ ಆದ ಸಂಗತಿಯನ್ನು ಕಂಡು ಅಚ್ಚರಿಪಟ್ಟ. ಕೇವಲ ಮೂರು ವಸ್ತುಗಳು ಜನ ಮತ್ತು ಜೀವನವನ್ನೇ ಬದಲಾಯಿಸಿದ ಕತೆ ಇದು. ನಿರುಪಯುಕ್ತ ಬಾಳು ಉಪಯುಕ್ತಗೊಳ್ಳಬೇಕಾದರೂ ಒಂದು ಕೌಶಲ ಬೇಕಲ್ಲ?

ಅಸಡ್ಡೆ ತೋರುತ್ತಿದ್ದ ಜನರ ದೃಷ್ಟಿ ಬದಲಾಗುವಂತೆ, ಕನಿಷ್ಠ ಮಟ್ಟದಲ್ಲಿ ಉಪಯುಕ್ತವಾಗುವಂತೆ ಬಾಳು ರೂಪಿಸಿಕೊಳ್ಳಲೇಬೇಕಲ್ಲವೆ? ಮೊದಲೇ ಲಾಭಕೋರತನದ ಸಮಾಜ. ಲಾಭವಿದ್ದರೆ ಮಾತ್ರ ಜನ ಹತ್ತಿರ ಬರುವ ಕಾಲಮಾನ. ಅದು ಏನೇ ಇರಲಿ, ಹತ್ತಾರು ಜನ ತಾವೇ ಹತ್ತಿರ ಬರುವ ಹಾಗೆ ಮಾಡಿಕೊಳ್ಳದ ಬಾಳು ಅದೆಷ್ಟು ನೀರಸ ನೋಡಿ. ಪರಿಹಾರವನ್ನು ಮಾತ್ರ ಗೌರವಿಸುವ ಸಮಾಜದಲ್ಲಿ ಸಮಸ್ಯೆಯನ್ನು ಯಾರು ಇಷ್ಟಪಡುತ್ತಾರೆ? ನಮಗೆ ನಾವೇ ಒಂದು ಸಮಸ್ಯೆಯಾಗಿ ಕೂತಾಗ ಅರಿವಿಲ್ಲದೇ ಹತ್ತಿರವಿದ್ದವರೂ ದೂರ ಸರಿಯುವ ಪಾಠ ಕಹಿಸತ್ಯವೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.