ಪರಮಹಂಸರನ್ನು ನೋಡಲಿಕ್ಕೆ ಅತ್ಯಂತ ದುಃಖಿತನಾಗಿದ್ದ ಭಕ್ತನೊಬ್ಬ ಬರುತ್ತಾನೆ. ಪರಮಹಂಸರು ಪ್ರಾರ್ಥನೆಯಲ್ಲಿ ಮುಳುಗಿಹೋಗಿರುತ್ತಾರೆ. ಅತಿಯಾದ ಚಡಪಡಿಕೆಯಲ್ಲಿದ್ದ ಭಕ್ತ ಕೋಪದಿಂದಲೋ ಅಸಹಾಯಕತೆಯಿಂದಲೋ ಅವರ ಮೇಲೆ ಕೂಗಾಡುತ್ತಾನೆ. ಇದನ್ನು ನೋಡುತ್ತಿದ್ದ ಶಿಷ್ಯ, ಗುರುವನ್ನು ನಿಂದಿಸುವಷ್ಟು ಅಹಂ ಇವನದ್ದೇ ಎಂದು ಅಂದುಕೊಂಡು, ಮಾತಿಗೂ ಅವಕಾಶ ಕೊಡದ ಹಾಗೆ ಅವನನ್ನು ದಬಾಯಿಸಿ ಕಳಿಸಿಬಿಡುತ್ತಾನೆ.

ಪ್ರಾರ್ಥನೆ ಮುಗಿಸಿದ ಪರಮಹಂಸರು ವಿಷಯ ತಿಳಿದು ಹೇಳುತ್ತಾರೆ: ‘ನನ್ನ ಬಳಿಗೆ ಬಂದವನನ್ನು ಹೀಗೆ ಗಾಸಿಗೊಳಿಸಿಬಿಟ್ಟರೆ ಹೇಗಪ್ಪಾ? ಅವನು ಎಷ್ಟು ದುಃಖವನ್ನು ಎದೆಯಲ್ಲಿ ಹೊತ್ತು ಬಂದಿದ್ದನೋ? ಕಾಯುವ ತಾಳ್ಮೆಯನ್ನೂ ಕಳಕೊಂಡಿದ್ದನೇನೋ? ಅಂಥವರನ್ನು ನೀನು ಹೀಗೆ ಅಂದಿದ್ದು ಸರಿಯಲ್ಲ. ಎಲ್ಲೂ ಸಿಗದ ಪರಿಹಾರ ನಮ್ಮ ಬಳಿ ಇದೆ ಎಂದು ನಂಬಿ ಬಂದವನನ್ನು ನಾವೂ ಅರ್ಥ ಮಾಡಿಕೊಳ್ಳದಿದ್ದರೆ ಅವನು ಮತ್ತೆಲ್ಲಿಗೆ ಹೋಗಬೇಕು? ಇನ್ನೊಬ್ಬರಿಗೆ ನೋವಾಗದಂತೆ ಬದುಕುವುದೇ ನಮ್ಮ ಧರ್ಮ. ಹೋಗು, ನಾನು ಕ್ಷಮೆ ಕೇಳಿದೆ ಎಂದು ಅವನಲ್ಲಿ ಹೇಳು. ಅವನ ಮನಸ್ಸಿಗೆ ಆದ ನೋವು ಮರೆತುಹೋಗಬೇಕು, ಹಾಗೆ ಮಾತನಾಡಿ ಬಾ’ ಎಂದರು.

ಶಿಷ್ಯನಿಗೆ ಜಿಜ್ಞಾಸೆ. ತಪ್ಪು ಮಾಡಿದ್ದು ತಾನು, ಅದಕ್ಕಾಗಿ ಗುರುಗಳು ಯಾಕೆ ಕ್ಷಮೆ ಕೇಳಬೇಕು ಎಂದೆನ್ನಿಸಿತು. ಆದರೂ ಗುರುಗಳು ಹೇಳಿದಂತೆ ಭಕ್ತನಲ್ಲಿಗೆ ಹೋಗಿ ಮಾತನಾಡಿ ತನ್ನ ದುಡುಕಿಗಾಗಿ ಕ್ಷಮೆ ಕೇಳುತ್ತಾನೆ. ಭಕ್ತನು ತಾನೂ ದುಡುಕಬಾರದಿತ್ತು, ಅಷ್ಟು ದೊಡ್ಡವರ ಎದುರು ತಾಳ್ಮೆ ಕಳೆದುಕೊಳ್ಳಬಾರದಿತ್ತು ಎಂದು ಅದಕ್ಕಾಗಿ ಕ್ಷಮೆ ಕೇಳುತ್ತಾನೆ. ವಾಪಸ್ ಬಂದ ಶಿಷ್ಯನನ್ನು ಪರಮಹಂಸರು, ‘ಏನೆಲ್ಲಾ ನಡೆಯಿತು, ಆ ವ್ಯಕ್ತಿ ಸಮಾಧಾನಿಯಾದನೆ’ ಎಂದು ಕೇಳಿದರು. ಶಿಷ್ಯ, ‘ಹೌದು. ನಾನು ಅವನಲ್ಲಿ ನನ್ನ ದುಡುಕಿಗೆ ಕ್ಷಮೆಯನ್ನೂ ಕೇಳಿದೆ’ ಎನ್ನುತ್ತಾನೆ. ಪರಮಹಂಸರು ತಕ್ಷಣ, ‘ಅವನಲ್ಲಿ ನನ್ನ ಪರವಾಗಿಯೂ ಕ್ಷಮೆ ಕೇಳಿದೆಯೇ?’ ಎಂದು ಪ್ರಶ್ನಿಸುತ್ತಾರೆ. ಶಿಷ್ಯ ಗುರುವಿನ ಈ ಪ್ರಶ್ನೆಗೆ ತಬ್ಬಿಬ್ಬಾದರೂ ದೃಢವಾಗಿ, ‘ಇಲ್ಲ. ಇದರಲ್ಲಿ ನಿಮ್ಮ ತಪ್ಪಿಲ್ಲ’ ಎಂದ. ‘ಶಿಷ್ಯ ಮಾಡಿದ ಪ್ರತಿ ತಪ್ಪಿಗೆ ಗುರುವೂ ಹೊಣೆಯೇ. ನಿನ್ನ ತಪ್ಪಿಗೆ ಕ್ಷಮೆ ಸಿಗಬೇಕಾದರೆ ಅವನು ನನ್ನನ್ನೂ ಕ್ಷಮಿಸಬೇಕು ತಿಳಿಯಿತೇ?’ ಎಂದರು ಪರಮಹಂಸರು. ‘ತಪ್ಪಾ! ಅದು ಹೇಗೆ ಸಾಧ್ಯ? ಇಲ್ಲಿ ನಡೆದದ್ದು ಯಾವುದೂ ನಿಮಗೆ ಗೊತ್ತೇ ಇಲ್ಲ. ನೀವು ಜಗತ್ತಿನ ಆತ್ಯಂತಿಕ ಸ್ಥಿತಿಯಾದ ಪ್ರಾರ್ಥನೆಯಲ್ಲಿದ್ದಿರಿ’ ಎಂದ. ಪರಮಹಂಸರು, ‘ಪ್ರಾರ್ಥನೆ ಆತ್ಯಂತಿಕ ಸ್ಥಿತಿ ಎಂದು ನಿನಗೆ ಯಾರು ಹೇಳಿದರು? ದುಃಖಿತರ ಅಳಲನ್ನು ತೊಡೆಯಲು ಮುಂದೆ ಚಾಚಿದ ಒಂದು ಕೈ ಪ್ರಾರ್ಥನೆಯಲ್ಲಿ ಮಗ್ನವಾಗಿರುವ ಎರಡು ಕೈಗಳಿಗಿಂತ ಅಧಿಕ ಸುಕೃತಶಾಲಿ ಎನ್ನುವುದನ್ನು ಮರೆಯಬೇಡ. ಎದುರು ಜೀವದ ಮೇಲೆ ಅಷ್ಟು ಪ್ರೀತಿಯಿಲ್ಲದಿದ್ದರೆ ಹೇಗೆ?’ ಎಂದರು.

ಶಿಷ್ಯ ಗುರುವಿನ ಕ್ಷಮೆಯನ್ನೂ ಭಕ್ತನಿಗೆ ತಲುಪಿಸಿದ. ಆ ಭಕ್ತ ಓಡಿ ಬಂದು ಗುರುವಿನ ಪಾದಗಳಿಗೆ ಎರಗಿದ. ಪರಮಹಂಸರು ಕೇಳಿದರು, ‘ನೀನು ನನ್ನ ಕ್ಷಮಿಸಿದ್ದೀಯ ಅಲ್ಲವೇ?’ ಭಕ್ತ ಅಳುತ್ತಾ ಹೇಳಿದ: ‘ಇದೆಂಥಾ ಮಾತು. ನಾನು ತುಂಬಾ ಸಣ್ಣವನು’. ಪರಮಹಂಸರು ಶಿಷ್ಯನ ಕಡೆಗೆ ನೋಡುತ್ತಾ ಎಂದರು: ‘ನಮ್ಮ ತಪ್ಪಿಗೆ ಕ್ಷಮೆ ಸಿಕ್ಕಿತು’.

ಪ್ರೀತಿಯೊಂದೇ ಎಲ್ಲವನ್ನೂ ಗೆಲ್ಲಬಲ್ಲ ಅಸ್ತ್ರ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.