ಸೂಫಿಯೊಬ್ಬನಿಗೆ ಒಬ್ಬ ಗಂಟುಬಿದ್ದ, ‘ನಿನ್ನ ದೇವರನ್ನು ತೋರಿಸು. ನಾನೂ ನೋಡಬೇಕಿದೆ’ ಎಂದು. ‘ದೇವರು ತೋರುವ ವಸ್ತುವಲ್ಲ. ಪ್ರಯತ್ನದಿಂದ ಮಾತ್ರ ಅದನ್ನು ಸಾಧಿಸಬಲ್ಲ ಸ್ಥಿತಿ’ ಎಂದು ವಿವರಿಸಲು ನೋಡಿದ ಸೂಫಿ. ಆದರೆ, ಆ ವ್ಯಕ್ತಿ ತನ್ನ ಮೊಂಡುತನ ಬಿಡಲಿಲ್ಲ; ‘ಇದ್ದಾನೆ ಎಂದರೆ ತೋರಿಸು, ಇಲ್ಲದಿದರೆ ಇಲ್ಲ ಎಂದು ಒಪ್ಪಿಕೋ’ ಎಂದ.

ಇಬ್ಬರೂ ವಾದ ಮಾಡುತ್ತಾ ಬೆಳಿಗ್ಗೆ ಸಮುದ್ರದ ದಡಕ್ಕೆ ಬಂದರು. ಅಲ್ಲೊಬ್ಬ ಯಾರಿಗೋ ಕಾಯುತ್ತಾ ನಿಂತಿದ್ದ. ಮೀನುಗಾರರು ಮೀನನ್ನು ಹಿಡಿಯಲು ಹೊರಟರೆ, ಮುತ್ತುಗಳಿಗಾಗಿ ಶೋಧ ನಡೆಸುವವರ ದಂಡೂ ಸಮುದ್ರಕ್ಕಿಳಿಯುತ್ತಿತ್ತು. ನಿಂತಿದ್ದ ವ್ಯಕ್ತಿಯನ್ನು ನೋಡುತ್ತಾ ಇಬ್ಬರೂ ಮುಂದೆ ಹೋದರು. ವ್ಯಕ್ತಿ ಕೇಳಿದ, ‘ಅಯ್ಯಾ, ನೀನೊಬ್ಬ ಸೂಫಿ, ಅಂದರೆ ಬಲ್ಲವನು. ಆದರೆ, ನಾನು ಕೇಳಿದ ಒಂದಕ್ಕೂ ನಿನ್ನಲ್ಲಿ ಉತ್ತರವಿಲ್ಲ. ಅಂದರೆ, ನಿನಗೂ ದೇವರ ಇರುವಿನ ಬಗ್ಗೆ ತಿಳಿದಿಲ್ಲ ಎಂದು ನಾನು ನಂಬಬೇಕಾಗುತ್ತದೆ’ ಎಂದ. ‘ನನಗೆ ಗೊತ್ತಿರುವುದು ನನಗೆ ಮಾತ್ರ ಗೊತ್ತು, ನಿನಗೆ ಹೇಳಲಿಕ್ಕೆ ನನ್ನ ಬಳಿ ಪದವಿಲ್ಲ. ಯಾಕೆಂದರೆ, ದೇವರು ಒಂದು ಅನುಭವ. ಅದನ್ನು ನೀನೇ ಪಡೆದುಕೊಳ್ಳಬೇಕು’ ಎಂದ ಸೂಫಿ.

ವಾದ ಮುಗಿಯುತ್ತಿಲ್ಲ. ಸಂಜೆ ಮತ್ತೆ ಅವರು ಸಮುದ್ರದ ದಡದಲ್ಲಿ ಅಲೆಯುತ್ತಾ ಬಂದರು. ಮೀನುಗಾರರು ಬಲೆಯ ತುಂಬಾ ಮೀನು ತುಂಬಿ ತಂದರೆ, ಮುತ್ತುಗಾರರು ಮುತ್ತುಗಳ ಲೆಕ್ಕದಲ್ಲಿ ಸಂತೋಷದಲ್ಲಿದ್ದರು. ಈ ಗೌಜು ಗದ್ದಲದ ಮಧ್ಯೆ ಬೆಳಿಗ್ಗೆ ತಾವು ನೋಡಿದ ವ್ಯಕ್ತಿ ಇನ್ನೂ ಅಲ್ಲೇ ನಿಂತಿದ್ದನ್ನು ಗಮನಿಸಿ ಕುತೂಹಲದಿಂದ, ಕಾದು ನಿಂತವನ ಬಳಿಗೆ ಬಂದು, ‘ಅಣ್ಣ, ಬೆಳಿಗ್ಗೆ ಈ ದಾರಿಯಲ್ಲಿ ಹೋಗುವಾಗಲೂ ನೀನು ಇಲ್ಲೇ ನಿಂತಿದ್ದೆ. ಈಗಲೂ ಇಲ್ಲೇ ನಿಂತಿರುವೆ ಯಾಕೆ?’ ಎಂದ. ಕಾಯುತ್ತಿದ್ದವ ಆತಂಕದಿಂದ, ‘ನಾನು ಚರ್ಮದ ತೀವ್ರವಾದ ಕಾಯಿಲೆಯಿಂದ ನರಳುತ್ತಿರುವೆ. ವೈದ್ಯರು ಸಮುದ್ರ ಸ್ನಾನ ಎಲ್ಲಕ್ಕೂ ಪರಿಹಾರ ಎಂದಿದ್ದಾರೆ’ ಎಂದ. ‘ನಿನ್ನ ಮುಂದೆ ಅಗಾಧವಾದ ಸಮುದ್ರ ಭೋರ್ಗರೆಯುತ್ತಲೇ ಇದೆಯಲ್ಲ. ಸ್ನಾನ ಮಾಡಲಿಕ್ಕೆ ಇರುವ ಅಡ್ಡಿಯಾದರೂ ಏನು’ ಎಂದ ವ್ಯಕ್ತಿ. ಸಮುದ್ರದ ತಡದಲ್ಲಿ ನಿಂತವ ಹೇಳಿದ, ‘ಅದೇ ನನ್ನ ಸಮಸ್ಯೆ. ಬೆಳಿಗ್ಗೆಯಿಂದ ಕಾಯುತ್ತಲೇ ಇದ್ದೇನೆ, ಸಮುದ್ರದ ಅಲೆಗಳು ಸ್ವಲ್ಪವಾದರೂ ಕಡಿಮೆಯಾಗುತ್ತವೆಂದು. ಆದರೆ, ಸಂಜೆಯಾಗುತ್ತಾ ಅಲೆಗಳು ಜೋರಾಗುತ್ತಿವೆ’. ವ್ಯಕ್ತಿ ಅವನನ್ನು ಬಯ್ಯಲಿಕ್ಕೆ ಶುರು ಮಾಡಿದ, ‘ಬುದ್ಧಿ ಕೆಟ್ಟವನೇ, ಸ್ನಾನ ಮಾಡುವುದೇ ನಿನ್ನ ಉದ್ದೇಶವಾದರೆ, ಸಮುದ್ರಕ್ಕಿಳಿ’ ಎಂದ. ಇಬ್ಬರ ನಡುವೆ ಜಗಳ ಶುರುವಾಯಿತು. ಕೋಪಗೊಂಡ ವ್ಯಕ್ತಿ ಕಾಯುತ್ತಿದ್ದವನನ್ನು ಸಮುದ್ರಕ್ಕೆ ನೂಕಿಬಿಟ್ಟ.

ಸೂಫಿ ಕೇಳಿದ: ‘ಅದ್ಯಾಕೆ ಹಾಗೆ ಮಾಡಿದೆ?’. ‘ಮತ್ತಿನ್ನೇನು, ಪ್ರಯತ್ನವೇ ಇಲ್ಲದೆ ಸುಮ್ಮನೆ ನಿಂತರೆ ಸ್ನಾನ ಮಾಡಲಾದೀತೇ?’ ಎಂದ ವ್ಯಕ್ತಿ. ಸೂಫಿ ನಕ್ಕ, ‘ಅವನಿಗೆ ಸರಿಯಾಗಿಯೇ ಹೇಳಿದೆ. ನೀನು ಮಾತ್ರ ದಂಡೆಯಲ್ಲೇ ನಿಂತು ಯೋಚಿಸುತ್ತಿರುವೆ’. ‘ನಾನು ಅವನಷ್ಟು ಮೂರ್ಖ ಅಲ್ಲ’ ಎಂದ ಮುನಿಸಿನಿಂದ ವ್ಯಕ್ತಿ. ಸೂಫಿ ಅವನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ: ‘ಪ್ರಯತ್ನವಿಲ್ಲದೇ ಯಾವುದೂ ದಕ್ಕುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಇರುವ ನೀನು, ದೇವರನ್ನು ನೋಡಲು ನನ್ನ ಮೇಲೆ ಯಾಕೆ ಅವಲಂಬಿತನಾಗಿರುವೆ?’.

ನಮ್ಮ ಅರಿವು ಅನಂತದೊಂದಿಗೆ ಸಂಧಿಸುವ ಕ್ಷಣವೇ ಎಚ್ಚರ. ಅದನ್ನು ಪಡೆದುಕೊಳ್ಳಲು ನಮ್ಮ ಪ್ರಯತ್ನ ಇಲ್ಲದಿದ್ದರೆ ಹೇಗೆ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.