ಜಾಹೀರಾತು-1. ಎರಡು ರೂಪಾಯಿಯ ಕಾಫಿ ಪುಡಿ ಸ್ಯಾಷೆಯೊಂದನ್ನು ತಂದು ‘ಪ್ರಿಯಾ, ಓಡಿ ಬಾ’ ಎಂದು ತನ್ನ ಮಡದಿಯನ್ನು ಕರೆದು ತೋರಿಸುತ್ತಾನೆ. ಅವಳು ಪ್ರಿಯಕರ ಕರೆದಷ್ಟೇ ವೇಗವಾಗಿ ಬಂದು ನೋಡಿ ಹೇಳುತ್ತಾಳೆ: ‘ಪ್ರಶಾಂತ್, ಬೇಗ ಹೋಗಿ ಕಾಫಿ ಮಾಡಿ ಕೊಂಡು ಬಾ’. ಅವನು ಅಡುಗೆ ಮನೆಗೆ ಹೋಗಿ ಕಾಫಿ ಮಾಡಿಕೊಂಡು ಎರಡೂ ಕೈಯಲ್ಲಿ ಕಾಫಿ ತುಂಬಿದ ಕಪ್ಗಳನ್ನು ಹಿಡಿದುಕೊಂಡು ನಲಿಯುತ್ತಾ ಬಂದು ತನ್ನ ನಲ್ಲೆಗೆ ಕೊಟ್ಟು ತಾನೂ ಕುಡಿಯುತ್ತಾನೆ.

ಜಾಹೀರಾತು:2. ಹುಡುಗಿಯೊಬ್ಬಳು ಕ್ರಿಕೆಟ್ ಆಡಲು ಹುಡುಗರೊಂದಿಗೆ ಬಂದಿದ್ದಾಳೆ. ಹುಡುಗ ಮಾಡಿದ ವೇಗದ ಬೌಲಿಂಗ್ ಎದುರಿಸಲು ಹುಡುಗಿ ತಡವರಿಸಿದಾಗ ಫೀಲ್ಡಿಂಗ್ ಮಾಡುತ್ತಿದ್ದ ಇನ್ನೊಬ್ಬ ಆ ಹುಡುಗನಿಗೆ, ‘ಅವಳು ಹುಡುಗಿ ಕಣೋ, ತುಸು ನಿಧಾನವಾಗಿ ಬೌಲ್ ಮಾಡು’ ಅನ್ನುತ್ತಾನೆ. ಹುಡುಗಿ ತನಗೆ ಅಂತಹ ರಿಯಾಯಿತಿ ಏನೂ ಬೇಕಿಲ್ಲ ಅಂತ ಅವನಿಗೆ ಉತ್ತರಿಸಲು ಹೋದಾಗ ಧೋನಿ ಬಂದು ‘ಅವರಿಗೆ ಬಾಯಿಂದ ಅಲ್ಲ, ಬ್ಯಾಟಿಂದ ಉತ್ತರ ಕೊಡಬೇಕು’ ಎಂದು ಹುರಿದುಂಬಿಸುತ್ತಾನೆ. ನಂತರ ಹುಡುಗಿಯ ಬ್ಯಾಟ್ಗೆ ಸಿಕ್ಕ ಚೆಂಡು ಗಾಳಿಯನ್ನು ಸೀಳಿಕೊಂಡು ಬೌಂಡರಿ ದಾಟಿ ಸ್ಕೋರ್ ಬೋರ್ಡ್ನಲ್ಲಿದ್ದ BATSMAN ಎಂಬ ಅಕ್ಷರಗಳಿಗೆ ಬಡಿದು ಅದರಲ್ಲಿದ್ದ MAN ಅಕ್ಷರಗಳು ಕಳಚಿ ಬೀಳುತ್ತವೆ.

ವ್ಯಾಪಾರಿ ದೃಷ್ಟಿಯ ಸೃಷ್ಟಿಗಳಾಗಿದ್ದರೂ ಈ ಎರಡು ಜಾಹೀರಾತುಗಳು ಕಾಲಕಾಲಕ್ಕೆ ಬದಲಾಗಬೇಕಾದ ಸಾಮಾಜಿಕ ಮನೋಧರ್ಮವನ್ನು, ಸಮಾಜದ ಗತಿಗೆ ತನ್ನನ್ನು ಹೊಂದಿಸಿಕೊಳ್ಳಲು ಗಂಡು ಸಜ್ಜಾಗಬೇಕಾದ ಅನಿವಾರ್ಯವನ್ನು ಹೇಳುತ್ತವೆ. ಹೆಣ್ಣು ಅಡಿಗೆ ಮನೆಗೆ ಸೀಮಿತವೆಂದು ಭಾವಿಸಿ ಹಾಗೆಯೇ ನಡೆಸಿಕೊಂಡ ಗಂಡಸಿನ ಅಹಂಕಾರ, ಕಳೆದ ಎರಡು ಮೂರು ದಶಕಗಳಲ್ಲಿ ಸ್ವಲ್ಪಮಟ್ಟಿಗಾದರೂ ಕರಗಿದಂತೆ ಕಾಣುತ್ತಿದೆ. ಮನೆಯಲ್ಲಿದ್ದೂ, ಮನೆಯಿಂದ ಹೊರಗೆ ಹೋಗಿ ದುಡಿಯುತ್ತಿರುವ ಮಹಿಳೆಯರ ವರಮಾನ ಅನೇಕ ಗಂಡಸರ ನೆಮ್ಮದಿಗೆ ಕಾರಣವಾದಂತೆ ಕೆಲವರ ಅಶಾಂತಿಗೂ ಆಹಾರವಾದಂತಿದೆ. ಗಂಡಿನ ರೂಢಿಗತ ವರ್ತನೆಯಲ್ಲಿನ ಒರಟುತನ ಬದಲಾಗಲು ಕಾನೂನಿನ ಭಯ ಮತ್ತು ಕೆಲವೊಮ್ಮೆ ಸ್ವಯಂ ತಿಳಿವಳಿಕೆಯೂ ಕಾರಣವಾಗಿದೆ. ಇದು ಮಹಿಳಾ ಸಮುದಾಯ ತಣ್ಣಗೆ ಪರಂಪರೆಯೊಂದಿಗೆ ವರ್ತಮಾನವನ್ನು ನಿರ್ಭೀತವಾಗಿ ಮುಖಾಮುಖಿಯಾಗಿಸುತ್ತಿರುವ ಸಂದರ್ಭ. ಚರಿತ್ರೆಯ ಭ್ರಮಿತ ಧಾರ್ಮಿಕ ವಿಕಾರಗಳನ್ನು ಹಸಿಹಸಿಯಾಗಿ ಸುರಿದು ಪ್ರತೀಕಾರದ ಮಾತನಾಡುವ ಅವಿವೇಕದ ನಡುವೆ ಹೆಣ್ಣು ವಿವೇಕದ ಸಾಕ್ಷಿಯಾಗಿ ಎದುರಾಗಿದ್ದಾಳೆ.

ಪರಸ್ಪರ ಕ್ಷಮೆ ಪ್ರೀತಿ ಗೌರವಗಳೇ ಹೆಣ್ಣು ಗಂಡಿನ ಘನತೆಯನ್ನು ಎತ್ತಿ ಹಿಡಿಯುವ ಶಕ್ತಿಗಳಾಗಿವೆ. ಅವರ ನಡುವಿನ ಬಾಂಧವ್ಯಕ್ಕೆ ಅವೇ ಸ್ನೇಹ ಸೇತು. ಪ್ರತಿಷ್ಠೆ ಮತ್ತು ಸಣ್ಣತನಗಳು ಇಬ್ಬರ ನಡುವಿನ ಆರ್ದ್ರತೆಗೆ ಅಡ್ಡಿಯಾಗಿವೆ. ಬಾಳಿನ ಸೊಗಸನ್ನು ಅರಿಯುವಲ್ಲಿನ ತೊಡಕುಗಳಾಗಿವೆ. ಗಂಡಿನ ದುಡುಕುತನವನ್ನು ಕ್ಷಮಿಸಿ ಕಾಂತಾಸಮ್ಮಿತ ಗುಣದಿಂದ ಅವನೊಳಗಿನ ಕುರುಡು ರಕ್ಕಸನನ್ನು ಅಡಗಿಸುವುದು ಹೆಣ್ಣಿಗೆ ಕಷ್ಟವಲ್ಲ. ತಪ್ಪು ಎಂದು ಕಂಡಾಗ ಅವನನ್ನು ಪ್ರೀತಿಯಿಂದ ತಬ್ಬಿ ಎದೆಗೆ ತುಂಬಿಕೊಂಡು ತಾಯ್ತನ ತೋರಿದರೆ ಎಂತಹ ಕಲ್ಲೂ ಕರಗುತ್ತದೆ. ಹೆಣ್ಣಿನ ಔದಾರ್ಯವನ್ನು ಅರಿಯುವಲ್ಲಿ ಗಂಡು ಹಿಂದೆ ಬಿದ್ದರೆ ದುರಂತ ಶತಸಿದ್ಧ. ಶತಮಾನಗಳ ಕಾಲದ ಅವಮಾನ, ಅನುಮಾನಗಳ ಕುಲುಮೆಯಲ್ಲಿ ಬಸವಳಿದ ಹೆಣ್ಣಿನ ಗೆಲುವಿಗೆ ಮರೆಯಲ್ಲಿದ್ದು ಸಂಭ್ರಮಿಸುವುದು, ಮುಕ್ತವಾಗಿ ಅಭಿನಂದಿಸುವುದು, ಒಂಟಿತನದಲ್ಲಿ ಅವಳೊಂದಿಗೆ ಜೊತೆಯಾಗಿ ಸಾಗುವುದು ಗಂಡಿನ ಹೆಮ್ಮೆಯಾಗಬೇಕು.

ಧರ್ಮಮೂಲ ಸಾಮಾಜಿಕ ಬಂಧನಗಳನ್ನು ಹೆಣ್ಣನ್ನು ಆಳಲು ಬೇಕಾದ ಸಾಧನಗಳಂತೆ ಬಳಸಿಕೊಳ್ಳುವ ಗಂಡು ಕುಲಕ್ಕೆ ತಾಯಾಗಿ, ಮಡದಿಯಾಗಿ, ಮಗಳಾಗಿ ತೋರುವ ಬೆಚ್ಚನೆಯ ಮಮತೆ ಅವನ ಅಸ್ತಿತ್ವಕ್ಕೆ ಸಾಕ್ಷಿ. ಆಕೆಯ ಮೇಲೆ ದೈಹಿಕ ಮಾನಸಿಕ ದೌರ್ಜನ್ಯ ನಡೆಸಲು ಗಂಡಸಿಗೆ ಅಧಿಕಾರ ಕೊಡುವ ಧಾರ್ಮಿಕ ಪ್ರಭುತ್ವ ಮತ್ತು ಅದನ್ನು ಪ್ರಶ್ನಿಸಿ ಖಂಡಿಸದ ಜಾಗತಿಕ ಮೌನ ಅಸಹ್ಯಕರವಾಗಿದೆ. ಧಾರ್ಮಿಕರು ಅಂತ ಅನಿಸಿಕೊಂಡವರು ಯುದ್ಧೋನ್ಮಾದ ತುಂಬಿ ತುಳುಕುವ ಅಸ್ವಸ್ಥ ಮನಃಸ್ಥಿತಿಯ ವ್ಯಕ್ತಿಯೊಬ್ಬನನ್ನು ಸುತ್ತುವರಿದು ಅವನ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸುವ ಮಟ್ಟದ ನೈತಿಕ ಅಧಃಪತನವನ್ನು ಕಾಣುತ್ತಿದ್ದೇವೆ. ಇಂತಹ ಒಣ ಧಾರ್ಮಿಕ ಡಾಂಭಿಕರು ಉದುರಿಸುವ, ಪುಸ್ತಕಗಳ ಸಾಲುಗಳಲ್ಲಿ ಅಡಗಿರುವ ಮಾತೆ, ಶಕ್ತಿ ದೇವತೆ, ಗಂಧವತಿಯಂತಹ ನುಡಿಮುತ್ತುಗಳು ಆಕರ್ಷಕವೇನೋ ಹೌದು. ಆದರೆ ವಾಸ್ತವ ಬೇರೆಯೇ ಇದೆ. ಈ ಯಾವ ಬಗೆಯ ಬಂಧನಗಳೂ ಆಕೆಯ ಅಂತಃಕರಣದ ಆರ್ದ್ರತೆಯನ್ನು ಒಂಚೂರೂ ಬತ್ತಿಸಿಲ್ಲ. ಆದರೂ ಕಟ್ಟಕಡೆಗೊಮ್ಮೆ ಉಳಿಯುವ ಪ್ರಶ್ನೆ ‘ಆಕೆಗೆ ಸ್ತ್ರೀ ಎಂದರೆ ಅಷ್ಟೇ ಸಾಕೆ?’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.