ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತಾಸಕ್ತಿ ಸಂಘರ್ಷ, ಸರ್ಕಾರದ ನಿರ್ಲಕ್ಷ್ಯ: ಖೆಡ್ಡಾದಲ್ಲಿ ಕಬ್ಬು ಬೆಳೆಗಾರ

ತ್ರಿಶಂಕು ಸ್ಥಿತಿಯಲ್ಲಿ ರೈತ
Last Updated 14 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಳಗಾವಿ: ಸರ್ಕಾರದ ನಿರ್ಲಕ್ಷ್ಯ, ಸಕ್ಕರೆ ಕಾರ್ಖಾನೆಗಳ ಲಾಭಕೋರತನ ಮತ್ತು ಮಾಲೀಕರಾಗಿರುವ ಪ್ರಭಾವಿ ರಾಜಕಾರಣಿಗಳ ‘ಹಿತಾಸಕ್ತಿ ಸಂಘರ್ಷ’ದಿಂದಾಗಿ ಕಬ್ಬು ಬೆಳೆಗಾರ ಸಾಲ ಹಾಗೂ ಸಂಕಷ್ಟಗಳ ಸಂಕೋಲೆಯಿಂದ ಮುಕ್ತಿ ಪಡೆಯಲಾಗುತ್ತಿಲ್ಲ. ಪೂರೈಸುವ ಕಬ್ಬಿಗೆ ನ್ಯಾಯಸಮ್ಮತ ಬೆಲೆ ಪಡೆಯವುದಕ್ಕೂ ಹೋರಾಟ ನಡೆಸಬೇಕಾದ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳ ಪೈಕಿ 3ನೇ ಹಾಗೂ ಸಕ್ಕರೆ ಇಳುವರಿ ಯಲ್ಲಿ 2ನೇ ಸ್ಥಾನ ಕರ್ನಾಟಕದ್ದು. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಬೀದರ್‌ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಮೂರನೇ ಒಂದರಷ್ಟು ಭಾಗ ಬೆಳಗಾವಿಯದ್ದೇ ಇದೆ. ಹೆಚ್ಚಿನ ಕಾರ್ಖಾನೆಗಳಿರುವುದೂ ಇಲ್ಲೇ. ಬಹುತೇಕ ಒಂದಿಲ್ಲೊಂದು ಪಕ್ಷದ ಪ್ರಭಾವಿ ಮುಖಂಡರ ಒಡೆತನ ಅಥವಾ ‘ಹಿಡಿತ’ದಲ್ಲಿವೆ. ಇಡೀ ಉದ್ಯಮವನ್ನೇ ಅವರು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಪರಿಣಾಮ ಬೆಳೆಗಾರರು ನಿರಂತರ ಶೋಷಣೆ ಹಾಗೂ ಅನ್ಯಾಯದ ‘ಕಹಿ’ ಉಣ್ಣುತ್ತಿದ್ದಾರೆ.

ವೆಚ್ಚಕ್ಕೆ ತಕ್ಕಂತೆ ಬೆಲೆ ಸಿಗುತ್ತಿಲ್ಲ: ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾದರೂ ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ವರದಿ ಸಲ್ಲಿಸಿದ ರಾಜ್ಯ ಸರ್ಕಾರ ಎಕರೆಗೆ ₹1.9 ಲಕ್ಷ ವೆಚ್ಚವಾಗುತ್ತದೆ ಎಂದು ತಿಳಿಸಿದೆ. ಆದರೆ, ಬೆಳೆದವರಿಗೆ ಅರ್ಧಕ್ಕರ್ಧ ಬೆಲೆಯೂ ದೊರೆಯುತ್ತಿಲ್ಲ. ಕೇಂದ್ರ ನಿಗದಿಪಡಿಸುವ ಎಫ್‌ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ) ಕೂಡ ಕನ್ನಡಿಯೊಳಗಿನ ಗಂಟಾಗಿದೆ. ಉಪ ಉತ್ಪಾದನೆಯ ಲಾಭ ಹಂಚಿಕೆಯೂ ಕನಸಾಗಿದೆ!

ಉತ್ತರ ಪ್ರದೇಶದಲ್ಲಿ ಶೇ8ರಷ್ಟು ಸಕ್ಕರೆ ಇಳುವರಿ ನೀಡುವ ಟನ್ ಕಬ್ಬಿಗೆ ₹3,300 ದರವನ್ನು (ಎಸ್‌ಎಪಿ) ಅಲ್ಲಿನ ರಾಜ್ಯ ಸರ್ಕಾರವೇ ನಿಗದಿಪಡಿಸುತ್ತದೆ. ಆದರೆ, ರಾಜ್ಯದಲ್ಲಿ ಎಸ್‌ಎಪಿ ಕೊಡುತ್ತಿಲ್ಲ. ಕೇಂದ್ರ ಹೇಳಿದಷ್ಟನ್ನೂ (ಎಫ್‌ಆರ್‌ಪಿ) ಕೊಡಿಸುತ್ತಿಲ್ಲ. ತೂಕದಲ್ಲಿ ಮೋಸ, ಬಾಕಿ ಪಾವತಿಯಲ್ಲಿ ವಿಳಂಬ ಮೊದಲಾದ ಶೋಷಣೆಗಳಿವೆ. ಕಬ್ಬು ತೂಕ ಹಾಕುವಾಗ ರೈತರು ಸ್ಥಳದಲ್ಲೇ ಇಲ್ಲದಂತೆ ಅನಿವಾರ್ಯತೆ ಸೃಷ್ಟಿಸಲಾಗುತ್ತದೆ. ಕಬ್ಬಿಗೊಂದು, ಸಕ್ಕರೆಗೊಂದು ತೂಕದ ಯಂತ್ರ ಬಳಕೆ ಸಾಮಾನ್ಯ. ವಿದ್ಯುನ್ಮಾನ ಯಂತ್ರ ಬಳಸಿದರೂ ಮೋಸ ತಪ್ಪಿಲ್ಲ. ಕಾರ್ಖಾನೆಗಳಿಗಿರುವ ‘ಪೂರಕ ವಾತಾವರಣ’ ಬೆಳೆಗಾರರನ್ನು ಹಿಂಡಿ ‘ಸಿಪ್ಪೆ’ ಮಾಡುತ್ತಿದೆ.

‘ಕೈ ಬಿಸಿ’ ಮಾಡಬೇಕು!: ಗುಜರಾತ್‌ನಲ್ಲಿ ಕಟಾವಾಗಿ 8ರಿಂದ 10 ಗಂಟೆಗಳಲ್ಲೇ ಕಬ್ಬನ್ನು ನುರಿಸಲಾಗುತ್ತದೆ. ಆದರೆ, ನಮ್ಮಲ್ಲಿ ಸರಾಸರಿ 26ರಿಂದ 36 ಗಂಟೆಗ
ಳನ್ನು ತೆಗೆದುಕೊಳ್ಳಲಾಗುತ್ತದೆ. ಪರಿಣಾಮ ಕಬ್ಬು ಒಣಗಿ ಇಳುವರಿ ಕಡಿಮೆಯಾಗುತ್ತದೆ. ಖರ್ಚಾದಷ್ಟು ಹಣವೂ ದೊರೆಯುವುದಿಲ್ಲ.

ಕಬ್ಬು ಕಟಾವು ಮಾಡಿಸಲೂ ದುಂಬಾಲು ಬೀಳಬೇಕು, ಕಾರ್ಖಾನೆಗಳವರ ‘ಕೈ ಬಿಸಿ’ ಮಾಡಬೇಕು! ಕಬ್ಬಿನ ತೂಕದ ಬದಲಿಗೆ, ಸಕ್ಕರೆ ಇಳುವರಿ ಹೆಚ್ಚು ಬರುವ ಬೀಜಗಳನ್ನು ಕಾರ್ಖಾನೆಗಳು ಪೂರೈಸುತ್ತವೆ. ರಸಗೊಬ್ಬರಕ್ಕೆ ಸಾಲ ಕೊಡುತ್ತಾರೆ ಎನ್ನುವ ಕಾರಣಕ್ಕೆ ಬೆಳೆಗಾರರು ಅವರನ್ನೇ ಅವಲಂಬಿಸಿದ್ದಾರೆ.

ನೀರು, ರಸಗೊಬ್ಬರದ ಅತಿಯಾದ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗಿ ಇಳುವರಿ ಕಡಿಮೆಯಾಗುತ್ತಿದೆ. 5 ವರ್ಷಗಳ ಹಿಂದೆ ಎಕರೆಗೆ 40ರಿಂದ 45 ಟನ್‌ನಷ್ಟು ಇದ್ದ ಇಳುವರಿ ಕಳೆದ ವರ್ಷ 30–35 ಟನ್‌ಗಳಿಗೆ ಇಳಿದಿದೆ! ಬೆಳೆಗಾರರಿಗೆ ಮಾರ್ಗದರ್ಶನ ಮಾಡಿ, ಮನಸ್ಥಿತಿ ಬದಲಿಸುವ ಕೆಲಸವನ್ನೂ ಸಂಬಂಧಿಸಿದ ಇಲಾಖೆಗಳು ಮಾಡುತ್ತಿಲ್ಲ.

ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ

‘ಫ್ಯಾಕ್ಟರಿಗಳು ರೈತರನ್ನು ವಂಚಿಸುವ ಜೊತೆಗೆ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳದೇ ಪರಿಸರ, ಜಲ ಮಾಲಿನ್ಯ ಮಾಡುತ್ತಿವೆ. ದುರ್ಗಂಧ ಹಾಗೂ ಹಾರುಬೂದಿ ಸಮಸ್ಯೆಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೂ ಮಾಲಿನ್ಯ ನಿಯಂತ್ರಣ ಮಂಡಳಿಯವರು ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ. ಹೆಚ್ಚಿನ ಕಾರ್ಖಾನೆಗಳು ಶಾಸಕರು, ಮಂತ್ರಿಗಳ ಒಡೆತನದಲ್ಲಿವೆ. ಅವರ ವಿರುದ್ಧ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೆ.ಎ.ದಯಾನಂದ
ಕೆ.ಎ.ದಯಾನಂದ

‘ನೆರೆ ನೋವಿನಿಂದ ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕು. ಹೀಗಾಗಿ, ಉತ್ಪಾದನಾ ವೆಚ್ಚವನ್ನಾದರೂ ಕೊಡಬೇಕು. ಗದ್ದೆ ಸಹಜ ಸ್ಥಿತಿಗೆ ತರಲು ಆರ್ಥಿಕ ನೆರವು ಹಾಗೂ ತಾಂತ್ರಿಕ ಸಹಕಾರ ಕೊಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಎಕರೆಗೆ ಭಿಕ್ಷೆ ರೂಪದ ₹5,500 ಪರಿಹಾರ ಸಾಲದು’ ಎನ್ನುತ್ತಾರೆ ಅವರು. ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ವೇಳೆ, ಹೋರಾಟಕ್ಕೆ ಬೆಳೆಗಾರರು ಸಜ್ಜಾಗಿದ್ದಾರೆ.

*ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಸಕ್ಕರೆ ಕಾರ್ಖಾನೆಗಳು ಶೇ 30ರಿಂದ 40ರಷ್ಟು ಬಾಕಿ ಉಳಿಸಿಕೊಂಡಿವೆ. ಇದು ದೊಡ್ಡ ಮೊತ್ತವಾಗುತ್ತದೆ. ಆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿವೆ.

ಕೆ.ಎ.ದಯಾನಂದ,ಸಕ್ಕರೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT