ಗುರುವಾರ , ಜೂನ್ 30, 2022
27 °C

ಒಳನೋಟ | ಕಳಪೆ ಬಿತ್ತನೆ ಬೀಜ ಹಾವಳಿ: ಸರ್ಕಾರ ಗಟ್ಟಿ ಇದ್ದರೆ ಹಿಂಗ್ಯಾಕ ಆಗತೈತಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಪೌಷ್ಟಿಕಾಂಶದ ಭದ್ರತೆ ಅವಶ್ಯ

ದೇಶದಲ್ಲಿ ಆಹಾರದ ಭದ್ರತೆ ವೃದ್ಧಿಸುವ ಉದ್ದೇಶದಿಂದ ಕೃಷಿ ಇಳುವರಿ ಹೆಚ್ಚಳಕ್ಕೆ ಸಂಶೋಧನೆಗಳು ನಡೆದಿವೆ. ಆದರೆ, ಸದ್ಯಕ್ಕೆ ಪೌಷ್ಟಿಕಾಂಶದ ಭದ್ರತೆಗೂ ಆದ್ಯತೆ ನೀಡಬೇಕಿದೆ. ಪೌಷ್ಟಿಕಾಂಶಯುತ್ತ ಮತ್ತು ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆಗಳು ಈಗ ಆರಂಭವಾಗಿವೆ. ಹೈಬ್ರಿಡ್‌ ಮತ್ತು ಮಿಶ್ರತಳಿಗಳಿಂದ ಖಂಡಿತವಾಗಿ ದೇಶಕ್ಕೆ ಅನುಕೂಲವಾಗಿದೆ. ಜನರಲ್ಲಿ ರೋಗ ನಿರೋಧಕ ಶಕ್ತಿ ಪ್ರಮಾಣ ಹೆಚ್ಚಿಸಲು ಕೂಡ ಸಾಧ್ಯವಾಗಿದೆ.

-ಡಾ.ಜಯಪ್ರಕಾಶ ನಿಡಗುಂದಿ, ಮುಖ್ಯಸ್ಥ, ಆನುವಂಶಿಕತೆ ಮತ್ತು ತಳಿ ಅಭಿವೃದ್ಧಿ ವಿಭಾಗ, ರಾಯಚೂರು ಕೃಷಿ ವಿಶ್ವವಿದ್ಯಾಲಯ

ಮೊಳಕೆಯೊಡೆಯುವ ಪರೀಕ್ಷೆ ಕಡ್ಡಾಯ

ಯಾವುದೇ ಬೀಜವಾಗಲೀ ಮೊಳಕೆಯೊಡೆಯುವ ಪ್ರಮಾಣವನ್ನು ಆಧರಿಸಿ ಅವುಗಳ ಗುಣಮಟ್ಟವನ್ನು ಅಳೆಯಲಾಗುತ್ತದೆ. ರೈತರೇ ಸಂಸ್ಕರಿಸಿದ ಅಥವಾ ವಿಶ್ವವಿದ್ಯಾಲಯ, ಬೀಜ ನಿಗಮ ಅಥವಾ ಖಾಸಗಿ ಕಂಪನಿಗಳ ಬೀಜಗಳೇ ಆದಲ್ಲಿ ಅವುಗಳ ಮೊಳಕೆಯೊಡೆಯುವಿಕೆ ಪರೀಕ್ಷೆ ನಡೆಸಬೇಕು. ರೈತರು ತಾವೇ ಮನೆಯಲ್ಲಿ ಮಾಡಬಹುದು. ಅಥವಾ ವಿಶ್ವವಿದ್ಯಾಲಯ ಮತ್ತು ಬೀಜ ತಂತ್ರಜ್ಞಾನ ಕೇಂದ್ರಗಳಲ್ಲಿಯೂ ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಿಸಬಹುದು. ಗುಣಮಟ್ಟ ಖಾತ್ರಿಯಾದ ನಂತರವೇ ಬೀಜವನ್ನು ಬಿತ್ತುವುದು ಸೂಕ್ತ. ಪ್ರಮಾಣೀಕೃತ ಬೀಜ (ನೀಲಿ ಬಣ್ಣದ ಚೀಟಿ) ಗುಣಮಟ್ಟ ಪರೀಕ್ಷೆಯನ್ನು ನಡೆಸಿ ಅದರ ಪ್ರಮಾಣವನ್ನು ಚೀಟಿ ಮೇಲೆ ಅಂಟಿಸಲಾಗಿರುತ್ತದೆ. ಇದಕ್ಕೆ ಒಂಭತ್ತು ತಿಂಗಳ ಕಾಲಾವಕಾಶ ಇರುತ್ತದೆ. ಆದರೆ ಬಹಳಷ್ಟು ಖಾಸಗಿ ಕಂಪನಿಗಳು ತಾವೇ ಗುಣಮಟ್ಟ ಪರೀಕ್ಷೆಗಳನ್ನು ನಡೆಸುವುದರಿಂದ ನಿಜಗುಣ ಬೀಜವನ್ನು (ಹಸಿರು ಬಣ್ಣದ ಚೀಟಿ) ಮಾರುತ್ತವೆ. ಇವುಗಳ ಗುಣಮಟ್ಟದ ಖಾತ್ರಿ ಇರುವುದಿಲ್ಲ

-ಡಾ. ವಿಜಯಕುಮಾರ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬೀಜ ತಯಾರಿಕಾ ಘಟಕದ ಮುಖ್ಯಾಧಿಕಾರಿ

ಸರ್ಕಾರ ಗಟ್ಟಿ ಇದ್ದರೆ ಹಿಂಗ್ಯಾಕ ಆಗತೈತಿ?

ಖಾಸಗಿ ಕಂಪನಿಗಳಿಗೆ ಅನುಕೂಲವಾಗುವಂಥ ಕಾನೂನೇ ಮಾಡ್ತಾರ. ಬೇಡಿಕೆ ಹೆಚ್ಚಾದಂಗ ಕಳಪೆ ಬೀಜಗಳ ಮಾರಾಟನೇ ಹೆಚ್ಚು ಮಾಡ್ತಾರ. ಕೃತಕ ಅಭಾವ ಸೃಷ್ಟಿಸ್ತಾರ. ಸರ್ಕಾರ, ಅಧಿಕಾರಿಗಳೂ ಶಾಮೀಲಾಗ್ಯಾರ. ಹಿಂಗಾದ್ರ ರೈತರ ಹಿತ ಕಾಯೋರು ಯಾರು?  ಸರ್ಕಾರ ಕೊಡೋ ಬೀಜದ ಬೆಲಿ, ನೂರು ರೂಪಾಯಿ ಕಡಿಮಿ ಇರ್ತದ ಖರೆ. ಆದ್ರ ಇಳುವರಿ ಹೆಚ್ಚು ಬರಾಂಗಿಲ್ಲ. ಹಿಂಗಾಗಿ ಖಾಸಗಿ ಕಂಪನಿ ಬೀಜನೇ ರೈತರು ಕೇಳ್ತಾರ. ಆದ್ರ ಸಂತಿಗೆ ಬರುವ ಬೀಜದ ಗುಣಮಟ್ಟ ಖಾತ್ರಿ ಮಾಡುವ ಜವಾಬ್ದಾರಿ ಸರ್ಕಾರದ್ದು ಅಲ್ಲೇನು?  

-ಬಸವರಾಜ ಸಾಬಳೆ, ರೈತ ಮುಖಂಡ, ಗದಗ

ಹೈಬ್ರಿಡ್‌ ತಳಿಗಳಿರಲಿ

ನೆಲದ ಗುಣ, ನೀರಿನ ಲಭ್ಯತೆ, ಮಳೆ, ಗಾಳಿಯ ಪ್ರಮಾಣ, ಒಂದು ಪ್ರದೇಶದ ಹವಾಮಾನದ ಸ್ಥಿತಿಗತಿಗಳ ಆಧಾರದಲ್ಲಿ ಹೈಬ್ರಿಡ್ ತಳಿಗಳನ್ನು ಅಭಿವೃದ್ಧಿಪಡಿಸುತ್ತೇವೆ. ರೋಗನಿರೋಧಕ ಶಕ್ತಿ ಹೆಚ್ಚಿರುವ ಕಾರಣ ಬೆಳೆ ನಷ್ಟ ಕಡಿಮೆ.

ಸಾಂಪ್ರಾದಾಯಿಕ ತಳಿಗಳು ನೀರು ಹೆಚ್ಚಾದರೂ, ಕಡಿಮೆಯಾದರೂ ಸಹಿಸಿಕೊಳ್ಳುವುದಿಲ್ಲ. ರಭಸವಾಗಿ ಬೀಸುವ ಗಾಳಿಗೂ ನೆಲಕ್ಕೆ ಉರುಳುತ್ತವೆ. ಹೈಬ್ರಿಡ್ ತಳಿಗಳು ಇಂತಹ ಪ್ರತಿಕೂಲ ಸ್ಥಿತಿ ನಿಭಾಯಿಸುವ ಗುಣ ಹೊಂದಿರುತ್ತವೆ. ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯ ಸೇರಿದಂತೆ ಇಂತಹ ಹಲವು ತಳಿಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಒಂದೇ ಬೆಳೆಯಲ್ಲಿ ಬೆಳೆಹಾನಿ, ಬೆಲೆ ಕುಸಿತದ ಅಪಾಯವಿರುತ್ತದೆ. ಮಿಶ್ರ ಬೆಳೆ ರೈತರ ಕೈಹಿಡಿಯುತ್ತವೆ. ಆರ್ಥಿಕ‌ ನಷ್ಟ ಇರುವುದಿಲ್ಲ.

-ಎಂ.ಹನುಮಂತಪ್ಪ, ಕುಲಪತಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ

ಬಿತ್ತನೆ ಬೀಜದ ಆದ್ಯತೆ ಬದಲು

ಹಸಿರು ಕ್ರಾಂತಿ ಮತ್ತು ಆ ಬಳಿಕ ಆಹಾರ ಧಾನ್ಯಗಳ ಉತ್ಪಾದಕತೆ ಹೆಚ್ಚಿಸಲು ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಅದರಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ನಮ್ಮ ಹಿಂದಿನ ದೇಸಿ ತಳಿಗಳ ಬೀಜಗಳಲ್ಲಿ ಉತ್ಪಾದಕತೆ ಕಡಿಮೆ ಇದ್ದರೂ ಪೌಷ್ಟಿಕತೆ, ವಿಟಮಿನ್‌, ಖನಿಜದ ಅಂಶಗಳು ಉತ್ತಮ ಗುಣಮಟ್ಟದ್ದಾಗಿದ್ದವು. ಬೀಜ ತಂತ್ರಜ್ಞಾನದಲ್ಲಿ ಉತ್ಪಾದಕತೆಗೆ ಹೆಚ್ಚಿನ ಆದ್ಯತೆ ನೀಡಿದಾಗ ಬೀಜದಲ್ಲಿ ಪೌಷ್ಟಿಕತೆ, ಖನಿಜದ ಅಂಶಗಳು ಕಡಿಮೆ ಆಗುತ್ತಿದ್ದವು. ಇದೀಗ ಪೌಷ್ಟಿಕತೆ, ಖನಿಜ, ವಿಟಮಿನ್‌, ಪ್ರೋಟಿನ್‌ ಅಂಶವುಳ್ಳ ಬಿತ್ತನೆ ಬೀಜಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲದೆ, ಉತ್ಪಾದಕತೆ ಮತ್ತು ತಳಿಗಳಲ್ಲಿ ರೋಗ ನಿರೋಧ ಶಕ್ತಿಯನ್ನು ಹೊಂದಿರುವುದನ್ನು ಸಮನ್ವಯಗೊಳಿಸಿ ಬಿತ್ತನೆ ಬೀಜ ಅಭಿವೃದ್ಧಿಪಡಿಸುವತ್ತ ಗಮನಹರಿಸಲಾಗಿದೆ. 

-ಡಾ. ಟಿ.ಎಂ. ರಮಣಪ್ಪ, ವಿಶೇಷ ಅಧಿಕಾರಿ (ಬೀಜ), ರಾಷ್ಟ್ರೀಯ ಬೀಜ ಯೋಜನೆ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು

ಜಾಗೃತ ದಳದ ಕಡಿವಾಣ

ಇಡೀ ದೇಶದಲ್ಲೇ ಮೊದಲ ಬಾರಿಗೆ ಜಾಗೃತ ದಳ ಜಾರಿಗೆ ತಂದ ಪರಿಣಾಮ ರಾಜ್ಯದಲ್ಲಿ ಕಳಪೆ ಬೀಜಗಳ ಮಾರಾಟ ಜಾಲಕ್ಕೆ ಕಡಿವಾಣ ಬಿದ್ದಿದೆ. 2019ರಿಂದ 21ರವರೆಗೆ ನಿರಂತರವಾಗಿ ದಾಳಿಗಳನ್ನು ನಡೆಸಿ ಪ್ರಕರಣ ದಾಖಲಿಸಲಾಗಿದೆ. 15 ಪ್ರಕರಣಗಳಲ್ಲಿ ಇಲಾಖೆ ಪರವಾಗಿಯೇ ತೀರ್ಪುಗಳು ಬಂದಿವೆ. ಈಗಲೂ ಅಪರೂಪಕ್ಕೆ ಪ್ರಕರಣಗಳು ಕಂಡುಬರುತ್ತಿವೆ. ಜಾಗೃತ ದಳ ಈಗಾಗಲೇ ಒಂದು ಸುತ್ತಿನ ತಪಾಸಣೆ ಕಾರ್ಯ ಪೂರ್ಣಗೊಳಿಸಿದೆ. ನಮ್ಮ ಈ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿರುವ ಕೃಷಿ ಇಲಾಖೆಯ ಸಿಬ್ಬಂದಿಯ ಸಹಕಾರ ದೊರೆತಲ್ಲಿ ಕಳಪೆ ಬೀಜ, ಗೊಬ್ಬರ ಹಾಗೂ ಕೀಟನಾಶಕದ ಜಾಲವನ್ನು ಬೇರುಸಹಿತ ಕಿತ್ತೊಗೆಯಬಹುದು.

-ಡಾ. ಎಚ್.ಕೆ.ಶಿವಕುಮಾರ, ಪ್ರಭಾರ ಅಪರ ಕೃಷಿ ನಿರ್ದೇಶಕ, ಜಾಗೃತ ದಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು