ಶುಕ್ರವಾರ, ಡಿಸೆಂಬರ್ 6, 2019
18 °C

ಆಸರೆ ಮನೆ: ‘10 ವರ್ಷಗಳ ನಂತರ ಗೃಹಪ್ರವೇಶ’

Published:
Updated:
Prajavani

ಬಾಗಲಕೋಟೆ: ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಮಹಾಪೂರದ ಕಾರಣ ಜಿಲ್ಲೆಯಲ್ಲಿ ಇಷ್ಟು ದಿನ ಹಾಳುಬಿದ್ದಿದ್ದ ಆಸರೆ ಮನೆಗಳು ಮತ್ತೆ ಜೀವ ಪಡೆಯತೊಡಗಿವೆ. ಬಹುತೇಕ ಮರೆತೇ ಹೋಗಿದ್ದ ಮನೆಗಳನ್ನು ಹುಡುಕಿಕೊಂಡು ಹೋಗಿ ಸಂತ್ರಸ್ತರು ವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಾದಾಮಿ ತಾಲ್ಲೂಕಿನ ನಂದಿಕೇಶ್ವರದ ಆಸರೆ ಕಾಲೊನಿಯಲ್ಲಿ 500 ಮನೆಗಳು ಹಾಳು ಬಿದ್ದಿದ್ದವು. ಈಗ ಮತ್ತೆ ಅವುಗಳನ್ನು ವಾಸಯೋಗ್ಯವಾಗಿಸಲು ಸಂತ್ರಸ್ತರೊಂದಿಗೆ ಜಿಲ್ಲಾಡಳಿತವೂ ಕೈ ಜೋಡಿಸಿದೆ. ಸುತ್ತಲೂ ಬೆಳೆದ ಜಾಲಿ ಕಂಟಿ ತೆಗೆಸಿ ತಾತ್ಕಾಲಿಕ ರಸ್ತೆ ಮಾಡಲು ಪಿಡಿಒಗೆ ಹೊಣೆ ವಹಿಸಲಾಗಿದೆ. ಬಾಗಿಲು– ಕಿಟಕಿ ಇಲ್ಲದ ಮನೆಗಳಿಗೆ ಬಟ್ಟೆಯ ಹೊದಿಕೆ ನೆರವಾಗಿತ್ತು. ಮತ್ತೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಒದಗಿಸುವ ಕೆಲಸ ನಡೆದಿತ್ತು. ಓಣಿ ಹಾಗೂ ಕೇರಿಯ ಸಾಮಾಜಿಕ ಸಂರಚನೆಯೂ ಪಾಲನೆಯಾಗಿತ್ತು!

ಇದನ್ನೂ ಓದಿ: ಸಂತ್ರಸ್ತರಿಗೆ ಸಿಗದ ‘ಆಸರೆ’; ಬೀದಿಗೆ ಬಿದ್ದು ಹತ್ತು ವರ್ಷ

‘ಊರಿಂದ 2 ಕಿ.ಮೀ ದೂರವಿದೆ ಎಂಬ ಕಾರಣಕ್ಕೆ  ಇತ್ತ ನಾವು ತಲೆ ಹಾಕಿರಲಿಲ್ಲ. ನಮ್ಮನ್ನು ಒಕ್ಕಲೆಬ್ಬಿಸಲು ಮತ್ತೆ ಮಲಪ್ರಭೆಯೇ ಬರಬೇಕಾತು ನೋಡ್ರಿ’ ಎನ್ನುತ್ತಾ ‘ಪ್ರಜಾವಾಣಿ’ಗೆ ಎದುರಾದ ದುರುಗಪ್ಪ ಮಾದರ ನಕ್ಕರು. ‘ಈ ಮನೆಗಳೂ ನಮ್ಮ ಹೆಸರಲ್ಲಿಲ್ಲ. ಯಾರಿಗೆ ಹಂಚಿಕೆಯಾಗಿವೆಯೋ ಗೊತ್ತಿಲ್ಲ. ತಹಶೀಲ್ದಾರ್ ಬಂದು ಹೇಳಿದರು. ಹೀಗಾಗಿ ಬಂದು ಸೇರಿಕೊಂಡಿದ್ದೇವೆ’ ಎಂದರು.

ಕೆಲವು ಕಡೆ ಇಷ್ಟು ದಿನ ಆಸರೆ ಮನೆ ಬಾಡಿಗೆ ಕೊಟ್ಟು ಊರಲ್ಲಿ ದೊಡ್ಡ ಮನೆಯಲ್ಲಿದ್ದವರೂ ಈಗ ವಾಪಸ್ ಬಂದು ಬಾಡಿಗೆದಾರರೊಂದಿಗೆ ವಾಸವಿದ್ದಾರೆ.

ಇದನ್ನೂ ಓದಿ: ಬಾಣಂತಿ,ಮಗು ಆರೈಕೆಗೆ ಮನೆ ಬಿಟ್ಟು ಕೊಟ್ಟ!

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು