ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ನಿಂದನೆ, ಬೆದರಿಕೆಗೆ ಅಂಜಿದೊಡೆಂತಯ್ಯ?

Last Updated 19 ಜೂನ್ 2021, 19:31 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ಸಂಕಷ್ಟದ ಸಮಯದಲ್ಲಿ ಮನೆ–ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿ ಹೇಳುವ ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರನ್ನು ಬೆದರಿಸುವ, ಅವಾಚ್ಯ ಪದಗಳಿಂದ ನಿಂದಿಸುವ ಹಾಗೂ ಅವರೊಂದಿಗೆ ಜಗಳಕ್ಕೆ ನಿಲ್ಲುವ ಪ್ರಕರಣಗಳು ರಾಜ್ಯದ ವಿವಿಧ ಭಾಗದ ಗ್ರಾಮೀಣ ಪ್ರದೇಶದಲ್ಲಿ ವರದಿಯಾಗುತ್ತಲೇ ಇವೆ.

‘ಊರೂರು ಸುತ್ತಿ ಬರುವ ನಿಮ್ಮಿಂದಲೇ ನಮಗೆ ಸೋಂಕು ಬರುತ್ತದೆ. ನೀವು ನಮ್ಮಲ್ಲಿಗೆ ಬರಲೇಬೇಡಿ’ ಎಂದು ಬುಡಕಟ್ಟು ಜನರು, ಆರೋಗ್ಯ ಕಾರ್ಯಕರ್ತೆಯರ ಮೇಲೆ ಹರಿಹಾಯುತ್ತಿದ್ದಾರೆ.

ಹುಣಸೂರು ತಾಲ್ಲೂಕಿನ ಹೆಬ್ಬಾಳ ಹಾಡಿಯ ಜನರು, ಕಳೆದ ತಿಂಗಳು ಸುಮಾರು 15 ದಿನಗಳ ಕಾಲ ಆಶಾ ಕಾರ್ಯಕರ್ತೆಯರನ್ನು ತಮ್ಮ ಹಾಡಿಯ ಒಳಗೆ ಬಿಟ್ಟುಕೊಂಡಿರಲಿಲ್ಲ. ಕೊನೆಗೆ, ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಹಾಡಿ ಪ್ರವೇಶಿಸಿ, ಸಭೆ ನಡೆಸಿತು. ಜನರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿತು. ಆದರೂ, ಇಲ್ಲಿಯ 513 ಮಂದಿಯ ಪೈಕಿ 42 ಮಂದಿಗೆ ಮಾತ್ರ ಲಸಿಕೆ ಪಡೆದಿದ್ದಾರೆ.

ಈ ಕುರಿತು ನೋವು ತೋಡಿಕೊಳ್ಳುವ ಸ್ಥಳೀಯ ಆಶಾ ಕಾರ್ಯಕರ್ತೆ ಮಾದಮ್ಮ, ‘ಎಷ್ಟೇ ಹೇಳಿದರೂ ಇಲ್ಲಿನ ಜನರು ಕೇಳುವುದಿಲ್ಲ. ಜನಸಂಖ್ಯೆ ಕಡಿಮೆ ಮಾಡುವುದಕ್ಕಾಗಿ ಸರ್ಕಾರವೇ ಈ ಲಸಿಕೆ ಹಾಕುತ್ತಿದೆ. ಇದರಿಂದ ಮೂರು ವರ್ಷದಲ್ಲಿ ಜನರು ಸಾಯುತ್ತಾರೆ. ಅದಕ್ಕಾಗಿಯೇ ನೀವು ಬರುತ್ತೀರಿ ಎನ್ನುತ್ತಾರೆ. ಇವರ ನಂಬಿಕೆ ಬದಲಿಸಲಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಲಸಿಕೆ ತೆಗೆದುಕೊಳ್ಳುವಂತೆ ಹೇಳಿದರೆ ಹಿಗ್ಗಾಮುಗ್ಗಾ ಬೈಯ್ಯುತ್ತಾರೆ ಎಂದು ಬೇಸರಿಸುವಆಶಾ ಕಾರ್ಯಕರ್ತೆಯರು, ಕಮಿಷನ್‌ ಆಸೆಗೆ ಬರುತ್ತಾರೆ ಎಂಬ ನಿಂದನೆಯಿಂದ ನೊಂದಿದ್ದಾರೆ. ಆದರೂ ಕೋವಿಡ್‌–19 ನಿಯಂತ್ರಣದ ಕಾರ್ಯದಲ್ಲಿ ತೊಡಗಿದ್ದಾರೆ. ಗ್ರಾಮಸ್ಥರ ಗಲಾಟೆ ಅತಿರೇಕಕ್ಕೆ ಹೋದಾಗ, ಪೊಲೀಸರು ಮಧ್ಯ ಪ್ರವೇಶಿಸಿದ ಸಂದರ್ಭಗಳೂ ಸಾಕಷ್ಟಿವೆ.

‘ನೇರಳಕುಪ್ಪೆಯಿಂದ ಬಿ.ಆರ್.ಕಾವಲು ಹಾಡಿಗೆ 8 ಕಿ.ಮೀ.ವರೆಗೂ ಕಾಲ್ನಡಿಗೆಯಲ್ಲಿ ಹೋಗುತ್ತೇವೆ. ‘ಒಂದು ಲಸಿಕೆ ನೀಡಿದರೆ ನಿಮಗೆ ಇಂತಿಷ್ಟು ಹಣ ಸಿಗುತ್ತದೆ. ಹಾಗಾಗಿ, ನಮಗೆ ಒತ್ತಾಯ ಮಾಡುತ್ತೀರಿ’ ಎಂದು ಜನರು ಹೇಳುತ್ತಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹೇಗೋ ಒಂದಿಬ್ಬರ ಮನವೊಲಿಸಿದರೆ, ಅವರು ಕೂಡ ‘ನಾವು ಸತ್ತರೆ ನೀವೇ ಹೊಣೆ’ ಎಂದು ಹೇಳಿಯೇ ಹಾಕಿಸಿಕೊಳ್ಳುತ್ತಾರೆ’ ಎಂದು ಆಶಾ ಕಾರ್ಯಕರ್ತೆ ಕಲಾವತಿ ಅಳಲು ತೋಡಿಕೊಳ್ಳುತ್ತಾರೆ.

‘ನೇರಳಕುಪ್ಪೆ ಬಿ.ಹಾಡಿಯಲ್ಲಿ ಇರುವ 200 ಮಂದಿಯಲ್ಲಿ, ಇದುವರೆಗೆ ಒಬ್ಬರೂ ಲಸಿಕೆ ತೆಗೆದುಕೊಂಡಿಲ್ಲ. ಮನವೊಲಿಕೆಗೆ ಎಲ್ಲ ಬಗೆಯ ಕಸರತ್ತು ಮಾಡಿಯಾಯಿತು’ ಎನ್ನುತ್ತಾರೆ ಇಲ್ಲಿನ ಆಶಾ ಕಾರ್ಯಕರ್ತೆ ನೇತ್ರಾವತಿ.

ಹಾಸನ ಜಿಲ್ಲೆಯ ಹೆತ್ತೂರು, ಯಸಳೂರು, ಶುಕ್ರವಾರಸಂತೆ ಸೇರಿದಂತೆ ಹಲವು ಭಾಗಗಳಲ್ಲಿ ಒಂಟಿ ಮನೆಗಳು ಜಾಸ್ತಿ. ಕಾಡಾನೆ ಹಾವಳಿಯೂ ಇದೆ. ಲಾಕ್‌ಡೌನ್‌ನಿಂದಾಗಿ, ಸಾರಿಗೆ ಸಂಪರ್ಕವೂ ಇಲ್ಲ. ಆಶಾ ಕಾರ್ಯಕರ್ತೆಯರು ನಡೆದುಕೊಂಡೇ ಹೋಗಬೇಕಿದ್ದು, ಒಂದೊಂದು ಮನೆಗೆ 1ರಿಂದ 2 ಕಿ.ಮೀ.ವರೆಗೆ ಕ್ರಮಿಸಬೇಕಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಹಾಡಿಗೆ ತೆರಳಿ ಅಭಿಯಾನ ನಡೆಸಿದ ಬಳಿಕ,ಕೊಡಗು ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ಆಸಕ್ತಿ ವಹಿಸಿದ್ದಾರೆ.

ಲಸಿಕೆ ಪಡೆಯದೇ ನಿಂದನೆ: ಕುಟುಂಬದ ಪಡಿತರ ಚೀಟಿ ರದ್ದು

ರಾಯಚೂರು: ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಲು ತೆರಳಿದ್ದ ಅಂಗನವಾಡಿ ಕಾರ್ಯಕರ್ತೆ ಮತ್ತು ಆಶಾ ಕಾರ್ಯಕರ್ತೆ ಅವರನ್ನು ನಿಂದಿಸಿದ ಆರೋಪದ ಮೇರೆಗೆ ತಾಲ್ಲೂಕಿನ ದುಗನೂರ ಗ್ರಾಮದ ಯೇಸು ಆನಂದಪ್ಪ ಕುಟುಂಬದ ಪಡಿತರ ಚೀಟಿ ರದ್ದು ಪಡಿಸಲು ಮತ್ತು ಅವರ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಉಪ ವಿಭಾಗಾಧಿಕಾರಿ ಆದೇಶಿಸಿದ್ದಾರೆ.

‘45 ವರ್ಷದ ಸುಶೀಲಮ್ಮ ಅವರು ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಅಂಗನವಾಡಿ ಕಾರ್ಯಕರ್ತೆ ರಾಧಾವೇಣಿ ಮತ್ತು ಆಶಾಕಾರ್ಯಕರ್ತೆ ನಾಗಲಕ್ಷ್ಮೀ ಅವರು ಗುರುವಾರ (ಜೂನ್‌ 17) ಮನೆಗೆ ಹೋಗಿ ಹೇಳಿದಾಗ ಸುಶೀಲಮ್ಮ ಅವರ ಕುಟುಂಬದ ಸದಸ್ಯರಾದ ಯೇಸು, ನರಸಪ್ಪ, ಹನುಮಯ್ಯ ಹಾಗೂ ರಾಜು ಅವರು ರೇಗಾಡಿ, ಆವಾಚ್ಯ ಶಬ್ದಗಳಿಂದ ನಿಂದಿಸಿದ್ದರು
ಎನ್ನಲಾಗಿದೆ.

ಈ ಕುರಿತು ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರಿಗೆ ದೂರು ಸಲ್ಲಿಸಲಾಗಿತ್ತು.

ಗ್ರಾಪಂ ಸದಸ್ಯರಿಗೆ ನೋಟಿಸ್‌: ‘ಕೋವಿಡ್‌ ನಿಯಂತ್ರಣದ ಗ್ರಾಮೀಣ ಕಾರ್ಯಪಡೆ ಸದಸ್ಯರಾದ ದುಗನೂರಿನ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ ಹಾಗೂ ರಂಗಪ್ಪ ಅವರು ಈ ಕೊರೊನಾ ವಾರಿಯರ್ಸ್‌ಗಳ ನೆರವಿಗೆ ಬಂದಿಲ್ಲ. ಲಸಿಕಾ ಅಭಿಯಾನಕ್ಕೆ ಸಹಕಾರ ನೀಡದಿರುವುದಕ್ಕೆ ಇಬ್ಬರಿಗೂ ನೋಟಿಸ್‌ ಜಾರಿಗೊಳಿಸಲಾಗಿದೆ’ ಎಂದು ಉಪ ವಿಭಾಗಾಧಿಕಾರಿ
ತಿಳಿಸಿದ್ದಾರೆ.

‘ಕರ್ತವ್ಯ ನಿರ್ವಹಣೆಯಲ್ಲಿ ಅಸಡ್ಡೆ ತೋರಿದ್ದು, ನಿಮ್ಮ ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದತಿಗೆ ಏಕೆ ಕ್ರಮ ಕೈಗೊಳ್ಳಬಾರದು? ಈ ಕುರಿತು ಮೂರು ದಿನಗಳಲ್ಲಿ ಸಮಜಾಯಿಷಿ ನೀಡಿ’ ಎಂದೂ ಅವರು ಸೂಚಿಸಿದ್ದಾರೆ.

ಮಾಹಿತಿ: ಕೆ.ಎಸ್‌.ಗಿರೀಶ, ಸೂರ್ಯನಾರಾಯಣ ವಿ, ಎಂ.ಎನ್‌.ಯೋಗೇಶ್, ಕೆ.ಎಸ್.ಸುನಿಲ್, ಆದಿತ್ಯ ಕೆ.ಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT