ಮಂಗಳವಾರ, ಫೆಬ್ರವರಿ 7, 2023
25 °C

ಒಳನೋಟ: ತಬ್ಬಲಿಯು ನೀನಾದೆ ಮಗನೆ.. ರಾಜ್ಯದಲ್ಲಿ ಗೋವುಗಳ ರಕ್ಷಣೆ ಹೇಗಿದೆ ಗೊತ್ತಾ?

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಗಷ್ಟೇ ಹುಟ್ಟಿದ ಗಂಡು ಕರುಗಳು, ಹಾಲು ನೀಡಲಾರದ ವಯಸ್ಸಾದ ಹಸುಗಳು, ಹೊಲ ಉಳಲು ತಾಕತ್ತಿಲ್ಲದೇ ಬಡವಾದ ಎತ್ತುಗಳ ಸ್ಥಿತಿ ರಾಜ್ಯದಲ್ಲಿ ಈಗ ‘ತಬ್ಬಲಿಯು ನೀನಾದೆ ಮಗನೆ’ !

ಹೌದು, ಇವು ಹೆಬ್ಬುಲಿಯ ಬಾಯಿಗೆ ಹೋಗದೇ ಇದ್ದರೂ, ಕೆಲವು ಕಾಡು ಪಾಲಾಗುತ್ತಿವೆ. ಇನ್ನು ಕೆಲವು ಹೆದ್ದಾರಿಗಳಲ್ಲಿ ವಾಹನಗಳ ಚಕ್ರಗಳಿಗೆ ಸಿಕ್ಕಿ ಸಾಯುತ್ತಿವೆ. ಇನ್ನೂ ಕೆಲವು ಹೊಟ್ಟೆಗಿಲ್ಲದೆ ನರಳಿ ಇಹಲೋಕ ತ್ಯಜಿಸುತ್ತಿವೆ. ಹೀಗೆ ಸತ್ತ ಜಾನುವಾರುಗಳನ್ನು ಎತ್ತದ ಕಾರಣ ಹಾಗೇ ಕೊಳೆತು ಮಣ್ಣಾಗಿ ಹೋಗುತ್ತಿವೆ.

ರಾಜ್ಯದಲ್ಲಿನ ಜಾನುವಾರುಗಳ ಸ್ಥಿತಿ ಇದು. ಗೋಹತ್ಯೆ ನಿಷೇಧ ಜಾರಿಗೆ ಬಂದ ನಂತರವಂತೂ ಈ ಸ್ಥಿತಿ ಮತ್ತಷ್ಟು ಉಲ್ಬಣಿಸಿದೆ. ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಿದ ನಂತರ ಜಾನುವಾರುಗಳ ಬಳಕೆ ನೇಪಥ್ಯಕ್ಕೆ ಸರಿದಿದೆ. ಗಂಡು ಕರುಗಳನ್ನು ಎತ್ತುಗಳನ್ನಾಗಿ ಬಳಕೆ ಮಾಡುವುದೂ ಕಡಿಮೆ ಆಯಿತು. ಸೀಮೆ ಹಸುವಿನ ಗಂಡು ಕರು ಯಾವುದಕ್ಕೂ ಬಳಕೆಗೆ ಬರದ ಕಾರಣ ರೈತರು ಕಸಾಯಿಖಾನೆಗೆ ಒಯ್ಯಲು ಬರುತ್ತಿದ್ದವರಿಗೆ ಮಾರಾಟ ಮಾಡುತ್ತಿದ್ದರು. ಗೋಹತ್ಯೆ ನಿಷೇಧದಿಂದ ಈ ರೀತಿಯ ಕರುಗಳ ಮಾರಾಟಕ್ಕೂ ಕಡಿವಾಣ ಬಿದ್ದಿದೆ. 

ದನಗಳ ಕೊಟ್ಟಿಗೆಯಲ್ಲಿ ಗಂಡು ಕರು ಹುಟ್ಟಿದರೆ ಯಾರಿಗೂ ಕಾಣದಂತೆ ರಾತ್ರೋ ರಾತ್ರಿ ಕಾಡಿಗೋ, ಊರಾಚೆಗೋ ಬಿಟ್ಟು ಬಂದು ಉಸ್ಸಪ್ಪಾ... ಎಂದು ನಿಟ್ಟುಸಿರು ಬಿಡುವ ಪ್ರವೃತ್ತಿ ರಾಜ್ಯದಲ್ಲಿ ಹೆಚ್ಚಾಗಿದೆ. ಆ ನತದೃಷ್ಟ ಎಳೆ ಗಂಡು ಕರುವಿನ ಹೊಟ್ಟೆಗೆ ಗುಟುಕು ತಾಯಿ ಹಾಲೂ ಸಿಗದೇ ಕಾಡಿನಲ್ಲೋ, ಹಾದಿ– ಬೀದಿಯಲ್ಲೋ ನರಳಿ ನರಳಿ ಸಾಯುತ್ತದೆ. ‘ಗಂಡು ಕರುಗಳನ್ನು ಸಾಕುವಷ್ಟು ಆರ್ಥಿಕ ಸಾಮರ್ಥ್ಯ ನಮಗಿಲ್ಲ’ ಎಂದು ಕೈಚೆಲ್ಲುತ್ತಾರೆ. ತಮ್ಮ ಅಸಹಾಯ ಕತೆ ತೋಡಿಕೊಳ್ಳುತ್ತಾರೆ. ‘ಗೋ ಹತ್ಯೆನಿಷೇಧ ಕಾಯ್ದೆ ಜಾರಿಗೆ ತಂದ ಸರ್ಕಾರವೇ ನೋಡಿಕೊಳ್ಳಬೇಕು’ ಎನ್ನುತ್ತಾರೆ.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿ ಯಮ (ಗೋಹತ್ಯೆ ನಿಷೇಧ) ಜಾರಿ ಬಂದ ಬಳಿಕ ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಸಮಸ್ಯೆಯು ಗಂಭೀರ ಸ್ವರೂಪ ತಾಳುತ್ತಿದೆ. ಈ ಸಮಸ್ಯೆ ಗಂಡು ಕರುಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಾಲು ಕೊಡದ ಹಸುಗಳು, ವಯಸ್ಸಾದ ಎತ್ತು, ಎಮ್ಮೆ– ಕೋಣಗಳ ಸ್ಥಿತಿಯೂ ಅಷ್ಟೇ. ಎಷ್ಟೊ ಕಡೆಗಳಲ್ಲಿ ಇಂತಹ ಗಂಡು ಕರುಗಳು ಮತ್ತು ಹಸು– ಎತ್ತುಗಳು ಕಾಡು ಪ್ರಾಣಿಗಳ ಉದರ ಸೇರಿವೆ. ಇಲ್ಲವೇ ಎಲ್ಲೆಂದರಲ್ಲಿ ಹಸಿವಿನಿಂದ ಸತ್ತು ಹೋಗುತ್ತಿವೆ.

ಮಲೆನಾಡು ಭಾಗದಲ್ಲಿ ಕಾಡುಗಳು, ಹಾಡಿ, ಗುಡ್ಡಗಳು ಅಥವಾ ಘಾಟಿ ರಸ್ತೆಗಳತ್ತ ಗಂಡು ಕರುಗಳನ್ನು ಅಟ್ಟಿ ಬಂದರೆ, ಬಯಲು ಸೀಮೆಯಲ್ಲಿ ಸಂತೆಗಳಲ್ಲಿ, ನಿರ್ಜನ ಬಯಲು ಪ್ರದೇಶಗಳಲ್ಲಿ ಅಥವಾ ದೇವಸ್ಥಾನಗಳ ಬಳಿ ಗಂಡು ಕರುಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಅವು ಆನಾಥವಾಗುತ್ತಿವೆ.

‘ಹೊಸದುರ್ಗ ತಾಲ್ಲೂಕು ಕುರುಬರ ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗವಿರಂಗಾಪುರ ಮತ್ತು ಮೈಲಾರ ಪುರದಲ್ಲಿ ಪ್ರತಿ ಶನಿವಾರ ಸಂತೆ ನಡೆಯು
ತ್ತದೆ. ಈ ಸಂತೆಗೆ ಜಾನುವಾರುಗಳನ್ನು ಮಾರಾಟ ಮಾಡಲೆಂದು ಬರುವವರು ಮೂರು– ನಾಲ್ಕು ದಿನಗಳ ಎಳೆ ಕರುಗಳನ್ನು ತಂದು ಸಂತೆಯಲ್ಲೇ ಬಿಟ್ಟು ಹೋಗುತ್ತಾರೆ. ಒಂದೊಂದು ಸಲಕ್ಕೆ 20 ರಿಂದ 30 ಕರುಗಳನ್ನು ಬಿಟ್ಟು ಹೋಗಿದ್ದೂ ಇದೆ. ಅವು ಹಸಿವಿನಿಂದ ಆರ್ತನಾದ ಮಾಡುವುದನ್ನು ಕೇಳಿ, ಬೇಸರವಾಗಿ ಅವುಗಳನ್ನು ತಂದು ಹಾಲು ಕುಡಿಸಿ, ಸಾಕಲು ಸಾಧ್ಯವೇ ಎಂದು ನೋಡಿದಾಗ ಬಹುತೇಕ ಕ್ರಮೇಣ ಸತ್ತೇ ಹೋದವು. ತಾಯಿ ಹಾಲು ಬಿಟ್ಟು ಬೇರೆ ಹಾಲು ಅವುಗಳಿಗೆ ಆಗುವುದಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಸುನೀಲ್‌ ಕುಮಾರ್.

‘ಈ ವಿಷಯವನ್ನು ಕುರುಬರಹಳ್ಳಿ  ಗ್ರಾಮಪಂಚಾಯಿತಿ ಪಿಡಿಒ ಗಮನಕ್ಕೆ ತಂದೆವು. ಅವರೂ ಅನಾಥ ಕರುಗಳನ್ನು ತಂದು ಸಾಕುವ ಪ್ರಯತ್ನ ನಡೆಸಿದರು. ಆದರೆ, ಅದು ಫಲ ನೀಡಲಿಲ್ಲ. ಆ ಬಳಿಕ ಅವರು ಕರುಗಳನ್ನು ಸಂತೆಗಳಲ್ಲಿ ತಂದು ಬಿಡುವುದರ ವಿರುದ್ಧ ನೋಟಿಸ್‌ ಮೂಲಕ ಕಟುವಾದ ಎಚ್ಚರಿಕೆಯನ್ನು ನೀಡಿದ್ದೂ ಅಲ್ಲದೇ ವಾಟ್ಸ್‌ ಆ್ಯಪ್‌ ಮೂಲಕ ಸಂದೇಶವನ್ನೂ ರವಾನಿಸಿದರು. ಬಳಿಕ ಗಂಡು ಕರುಗಳನ್ನು ಅನಾಥವಾಗಿ ಬಿಟ್ಟು ಹೋಗುವುದು ನಿಯಂತ್ರಣಕ್ಕೆ ಬಂದಿತು. ಈ ರೀತಿ ತಂದು ಬಿಟ್ಟರೆ 7 ವರ್ಷ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು’ ಎನ್ನುತ್ತಾರೆ.

‘ಸೀಮೆ ತಳಿಯ ಗಂಡು ಕರುಗಳು ಅಥವಾ ಎತ್ತುಗಳು ಯಾವುದೇ ಬಳಕೆಗೂ ಆಗುವುದಿಲ್ಲ. ಹಿಂದೆ ಮುಸ್ಲಿಮರು ಬಂದು ಗಂಡು ಕರುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಅವರೂ ಹೆದರಿಕೆಯಿಂದ ಬರುತ್ತಿಲ್ಲ’ ಎನ್ನುತ್ತಾರೆ ಅದೇ ಗ್ರಾಮದ ರೈತ ಉದಯ್‌.

ಬೆಂಗಳೂರು ಸೇರಿದಂತೆ ಎಲ್ಲ ಪ್ರಮುಖ ನಗರಗಳಲ್ಲೂ ದನಗಳು ರಸ್ತೆ ಮಧ್ಯೆ ಬಂದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿರುವುದು ಮಾತ್ರವಲ್ಲದೆ, ರಾತ್ರಿ ರಸ್ತೆಗಳಲ್ಲೇ ಮಲಗುವುದರಿಂದ ಅಪಘಾತಗಳು ಸಂಭವಿಸಿ ಗಂಡು ಕರುಗಳು ಸಾವನ್ನಪ್ಪುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇದು ಹೆಚ್ಚು. ಹೀಗಾಗಿ ಸಾರ್ವಜನಿಕರು ಜಾಗರೂಕತೆಯಿಂದ ವಾಹನಗಳನ್ನು ಓಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕರ್ನಾಟಕ ಭಾಗದ ಗೌಳಿ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ತಮ್ಮ ಸಮುದಾಯದ ಸ್ಥಿತಿಯನ್ನು ಮುಂಡಗೋಡದ ಸಿದ್ದು ಥೋರತ್‌ ವಿವರಿಸುವುದು ಹೀಗೆ– ‘ನಮ್ಮ ಬದುಕಿನ ಭಾಗ ಮತ್ತು ಆರ್ಥಿಕತೆಯ ಮೂಲವಾಗಿದ್ದ ಹಸುಗಳ ಸಾಕಣೆ ಈಗ ಸವಾಲಾಗಿದೆ. ಆದಾಯ ತರುವ ಹಾಲು, ಗೊಬ್ಬರ ಮಾರಾಟ, ದನ– ಕರುಗಳ ಕೊಡು– ಕೊಳ್ಳುವಿಕೆ ಹಿಂದಿನಂತಿಲ್ಲ. ಸವಾಲುಗಳನ್ನು ಎದುರಿಸಲಾಗದವರು ಬೇರೆ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಕುಲ ಕಸುಬು ತೊರೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ’.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ವಿಶಿಷ್ಟ ಸಮಸ್ಯೆ ಎದುರಾಗಿದೆ. ಈ ತಾಲ್ಲೂಕಿನ ಸಂತೇಬಾಚಹಳ್ಳಿ ಅರಣ್ಯ ಪ್ರದೇಶದಲ್ಲಿರುವ ಗವಿ ರಂಗನಾಥ ದೇವಾಲಯಕ್ಕೆ ಭಕ್ತರು ತಂದು ಬಿಡುವ ಹರಕೆ ಕರುಗಳಿಗೆ ರಕ್ಷಣೆಯೇ ಇಲ್ಲವಾಗಿದೆ. ಕರುಗಳ ಮಾರಾಟ, ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಪುಟಾಣಿ ಜೀವಗಳು ಕಾಡು ಪ್ರಾಣಿಗಳಿಗೆ ಆಹಾರವಾಗುತ್ತಿವೆ. ಗಂಡು ಕರುಗಳು ಹಾಲು ಹೆಚ್ಚು ಕುಡಿಯುತ್ತವೆ ಎಂಬ ಕಾರಣಕ್ಕೆ ಅರಣ್ಯದಲ್ಲಿ ಬಿಟ್ಟು ಹೋಗುವವರೂ ಇದ್ದಾರೆ. ಇಂತಹ ಕರುಗಳನ್ನು ಮುಜರಾಯಿ ಇಲಾಖೆ ಹರಾಜು ಹಾಕುತ್ತಿತ್ತು. ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಬಂದ ನಂತರ ಹರಾಜು– ಮಾರಾಟ ನಿಂತು ಹೋಗಿದೆ.

ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದ ಸಮಸ್ಯೆಯೇ ಬೇರೆ, ಕೆಲವು ಕಡೆಗಳಲ್ಲಿ ಗಂಡು ಕರುಗಳು ಮತ್ತು ಮುದಿ ಹಸುಗಳನ್ನು ಕಾಡಿಗೆ ಬಿಟ್ಟರೆ, ಇನ್ನು ಕೆಲವು ಕಡೆಗಳಲ್ಲಿ ಪೇಟೆಗೆ ಬರುವ ಹಸುಗಳು ಮತ್ತೆ ಹಳ್ಳಿಗೆ ಹೋಗುವುದಿಲ್ಲ. ರೈತರೂ ಸುಮ್ಮನಾಗುತ್ತಾರೆ. ‘ಗಾಳಿ– ಮಳೆಯಿಂದ ರಕ್ಷಣೆಗೆ ಬಸ್ ನಿಲ್ದಾಣ, ಹಾಳು ಬಿದ್ದ ಕಟ್ಟಡಗಳು ಇವೆ. ಹಣ್ಣಿನಂಗಡಿ, ತರಕಾರಿ ಮಂಡಿ, ಹೋಟೆಲ್‌ಗಳ ತ್ಯಾಜ್ಯ, ವಾರದ ಸಂತೆಯ ತ್ಯಾಜ್ಯ ಸೇರಿದಂತೆ ಅವುಗಳಿಗೆ ಅಗತ್ಯವಿರುವ ಆಹಾರ ಲಭ್ಯವಿದೆ. ಹೊಸನಗರ ಪಟ್ಟಣದಲ್ಲಿಯೇ ಹೀಗೆ ಬಿಡಾಡಿಯಾಗಿ ಬಿಟ್ಟ 40 ರಿಂದ 50 ಹೋರಿಗಳು ಕಾಣಸಿಗುತ್ತವೆ’ ಎನ್ನುತ್ತಾರೆ ಸುಪ್ರಕಾಶ.

ರಾಜಧಾನಿ ಬೆಂಗಳೂರಿನಲ್ಲಿ ಚರ್ಮೋದ್ಯಮ ಬಹುತೇಕ ನಿಂತು ಹೋಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೂ ಮೊದಲೇ  ಚರ್ಮೋದ್ಯಮ ಕುಸಿತ ಕಂಡಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿದೇಶಗಳಿಗೆ ಚರ್ಮದ ರಫ್ತು ಗಣನೀಯವಾಗಿ ಕುಸಿತವಾಗಿದೆ. ದೇಶಿ ಮಾರುಕಟ್ಟೆಯ ಬೇಡಿಕೆಗಿಂತಲೂ ವಿದೇಶಗಳಿಗೆ ರಫ್ತು ಮಾಡುವುದಕ್ಕಾಗಿ ಚರ್ಮವನ್ನು ಹದ ಮಾಡಲಾಗುತ್ತಿತ್ತು. ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ನಡೆಯುತ್ತಿದ್ದ ಚರ್ಮದ ವಹಿವಾಟು ಈಗ ಬಹುತೇಕ ನಿಂತು ಹೋಗಿದೆ. ಆ ಕಸುಬನ್ನು ಆಶ್ರಯಿಸಿದ್ದವರು ಈಗ ಬೇರೆ– ಬೇರೆ ಉದ್ಯಮ ಅಥವಾ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸರ್ಕಾರದ ಕ್ರಮವೇನು?

ರಾಜ್ಯದಲ್ಲಿ ಗಂಡು ಕರುಗಳು, ವಯಸ್ಸಾದ ಹಸು ಮತ್ತು ಕೋಣಗಳನ್ನು ಊರಿನ ಆಚೆಗೆ ಬಿಟ್ಟು ಬರುವ ಪ್ರಕರಣಗಳು ಹೆಚ್ಚಾಗಿವೆ. ಸರ್ಕಾರ ಸ್ಥಳೀಯ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಪಶು ಇಲಾಖೆ ಸಿಬ್ಬಂದಿ ಮೂಲಕ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿ ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸುತ್ತಾರೆ. 

ಭವಿಷ್ಯದಲ್ಲಿ ಗಂಡು ಕರುಗಳ ಸಂತತಿಯ ಮೇಲೆ ನಿಯಂತ್ರಣ ಸಾಧಿಸಲು ಈಗಾಗಲೇ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಲಿಂಗ ನಿರ್ಧರಿತ ವೀರ್ಯ ನಳಿಕೆಗಳನ್ನು ನೀಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಗಂಡು ಕರುಗಳ ಜನನ ಗಣನೀಯವಾಗಿ ಕಡಿಮೆಯಾಗುವುದಲ್ಲದೇ ಹೆಣ್ಣು ಕರುಗಳ ಜನನ ಹೆಚ್ಚಾಗಿ ಪಶುಪಾಲಕರಿಗೆ ವರದಾನವಾಗಲಿದೆ ಎಂದು ಹೇಳಿದ್ದಾರೆ.

100 ಗೋಶಾಲೆಯನ್ನು ಆರಂಭಿಸಿದ ಬಳಿಕ ಬೀಡಾಡಿ, ಅನುತ್ಪಾದಕ, ವಯಸ್ಸಾದ ಜಾನುವಾರುಗಳನ್ನು ಸಂರಕ್ಷಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

 

6 ಜಿಲ್ಲೆಗಳಲ್ಲಿ ಕೇವಲ 126 ಗೋವು ರಕ್ಷಣೆ !

ಗೋಹತ್ಯೆ ನಿಷೇಧದ ಮಸೂದೆಯನ್ನು ಅಂಗೀಕರಿಸುವ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳಲ್ಲೂ ತಲಾ ಒಂದು ಗೋಶಾಲೆಯನ್ನು ಸರ್ಕಾರದ ವತಿಯಿಂದಲೇ ಸ್ಥಾಪಿಸುವುದಾಗಿ ಹೇಳಿತ್ತು. 30 ರಿಂದ ಬಳಿಕ 100 ಕ್ಕೆ ಹೆಚ್ಚಿಸುವುದಾಗಿಯೂ ಘೋಷಿಸಿತ್ತು. ಸದ್ಯಕ್ಕೆ ಚಿಕ್ಕಮಗಳೂರು, ವಿಜಯಪುರ, ಹಾಸನ, ಮೈಸೂರು, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ. ಇಲ್ಲಿ 126 ಹಸು/ಎತ್ತುಗಳಿಗೆ ಆಶ್ರಯ ನೀಡಲಾಗಿದೆ. ರಾಜ್ಯವ್ಯಾಪಿ ಗೋಶಾಲೆ ನಿರ್ಮಾಣಕ್ಕಾಗಿ ₹300 ಕೋಟಿ ಒದಗಿಸಿದ್ದು, ಈ ವರೆಗೆ ₹118 ಕೋಟಿ ಖರ್ಚಾಗಿದೆ.  ನಾಲ್ಕು ಜಿಲ್ಲೆಗಳಲ್ಲಿ ಗೋಶಾಲೆಗಳ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. 20 ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

----

ಕರಾವಳಿಯಲ್ಲಿ ತಗ್ಗಿದ ಅಕ್ರಮ ಸಾಗಣೆ

-ಪಿ.ವಿ.ಪ್ರವೀಣ್ ಕುಮಾರ್

ಮಂಗಳೂರು: ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಗೋವುಗಳ ಅಕ್ರಮ ಸಾಗಣೆ ಕಡಿಮೆಯಾಗಿದೆ. ಗೋವುಗಳನ್ನು ಸಾಗಿಸುವವರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳೂ ಕಡಿಮೆಯಾಗಿವೆ ಎನ್ನುತ್ತವೆ ಪೊಲೀಸ್ ಮೂಲಗಳು.

ಜಾನುವಾರುಗಳ ಅಕ್ರಮ ಸಾಗಾಟದ ಬಗ್ಗೆ ಕರಾವಳಿ ಜಿಲ್ಲೆಗಳಲ್ಲಿ ಈ ಹಿಂದೆ ತಿಂಗಳಲ್ಲಿ ಏನಿಲ್ಲವೆಂದರೂ ಹತ್ತಾರು ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಒಂದೆರಡು ಪ್ರಕರಣಗಳು ದಾಖಲಾದರೆ ಹೆಚ್ಚು. ರಾಜ್ಯದಲ್ಲಿ  ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಕಸಾಯಿಖಾನೆಗಳಿವೆ. ಮಂಗಳೂರಿನ ಕಸಾಯಿಖಾನೆ ಮುಚ್ಚಿ ಹೋಗಿರುವುದರಿಂದ ಗೋವು ಸಾಗಣೆ ಕಡಿಮೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

'ಮುಸ್ಲಿಮರು ದನದ ಮಾಂಸ ಸೇವಿಸುವುದು, ಅದು ಅಗ್ಗ ಎಂಬ ಕಾರಣಕ್ಕೆ. ಇತ್ತೀಚಿನ ದಿನಗಳಲ್ಲಿ ಗೋಮಾಂಸದ ದರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಹಿಂದೆ ಕೆ.ಜಿ. ಗೋಮಾಂಸ ನೂರು ರೂಪಾಯಿ ಒಳಗೆ ಇತ್ತು. ಆದರೆ ಈಗ ಪ್ರತಿ ಕೆ.ಜಿಗೆ ₹ 300 ರಿಂದ ₹ 400 ದರ ಇದೆ. ಕೋಳಿ ಮಾಂಸದ ದರವು ಅದರ ಅರ್ಧಕ್ಕಿಂತಲೂ ಕಡಿಮೆ ಇದೆ' ಎಂದು ಮುಸ್ಲಿಂ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.

'ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಯಾಗುವ ಮುನ್ನ ಗೋವುಗಳ ಅಕ್ರಮ ಸಾಗಾಟ ರಾಜ್ಯದಾದ್ಯಂತ ಅವ್ಯಾಹತವಾಗಿ ನಡೆಯುತ್ತಿತ್ತು. ಹಾಗಾಗಿ ನಮ್ಮ ಸಂಘಟನೆಯ ಕಾರ್ಯಕರ್ತರು ಇದನ್ನು ತಡೆಯುವ ಬಗ್ಗೆ ಹೆಚ್ಚಿನ ಕಣ್ಣಿಟ್ಟಿದ್ದರು. ಈಗ ಗೋವುಗಳನ್ನು ಜೀವಂತವಾಗಿ ಸಾಗಿಸುವುದು ಕಡಿಮೆ. ಆದರೆ, ಅದರ ಬದಲು ಹಳ್ಳಿಗಳಲ್ಲಿ ಗೋವುಗಳನ್ನು ಕಡಿದು, ಮಾಂಸವನ್ನು ಸಾಗಾಟ ಮಾಡುವ ಹೊಸ ತಂತ್ರವನ್ನು ಗೋಹಂತಕರು ಕಂಡುಕೊಂಡಿದ್ದಾರೆ. ಇದನ್ನು ತಡೆಯುವುದಕ್ಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್.

----

ನೆಲಕಚ್ಚಿದ ಚರ್ಮೋದ್ಯಮ

-ವಿಜಯ್‌ಕುಮಾರ್ ಎಸ್‌.ಕೆ.

ಬೆಂಗಳೂರು: ಬೇಡಿಕೆ ಇಲ್ಲದೆ ಮೊದಲೇ ಕುಸಿದಿದ್ದ ಚರ್ಮೋದ್ಯಮ, ಗೋಹತ್ಯೆ ನಿಷೇಧ ಬಳಿಕ ಮತ್ತಷ್ಟು ನೆಲ ಕಚ್ಚಿದೆ.

ಚರ್ಮೋದ್ಯಮದ ವಹಿವಾಟಿನೊಂದಿಗೇ ಬೆರೆತು ಹೋಗಿದ್ದರಿಂದಲೇ ಟ್ಯಾನರಿ ರಸ್ತೆ ಎಂದು ಖ್ಯಾತಿ ಪಡೆದಿದ್ದ ಈ ರಸ್ತೆಯಲ್ಲೀಗ ಚರ್ಮದ ವಹಿವಾಟೇ ಇಲ್ಲವಾಗಿದೆ. ಚರ್ಮದ ಮಂಡಿಯ ಚಿತ್ರಣವೇ ಬದಲಾಗಿದ್ದು, ಮಂಡಿಯಲ್ಲಿ ಚರ್ಮದ ಅಂಗಡಿಗಳನ್ನು ಹುಡುಕಾಡಬೇಕಾದ ಸ್ಥಿತಿ ಇದೆ. ಅಲ್ಲಿದ್ದ ಚರ್ಮದ ಅಂಗಡಿಗಳಲ್ಲಿ ಬಹುತೇಕವು ಈಗ ಮರಗೆಲಸದ ಅಂಗಡಿಗಳು, ಬಣ್ಣದ ಅಂಗಡಿ, ಗ್ಯಾರೇಜ್‌ಗಳಾಗಿ ಮಾರ್ಪಟ್ಟಿವೆ.

ಇಡೀ ಮಂಡಿಯ ಮೇಲ್ವಿಚಾರಣೆ ನಡೆಸುತ್ತಿದ್ದ ವಿಜಯಕುಮಾರ್ ಎಂಬುವರು ಈಗ ಸೆಕ್ಯೂರಿಟಿ ಕೆಲಸ ನೋಡಿಕೊಂಡಿದ್ದಾರೆ. ‘ದಿನಕ್ಕೆ ಐದಾರು ಲಾರಿ ಲೋಡ್‌ನಷ್ಟು ಚರ್ಮ ಇದೇ ಮಂಡಿಯಿಂದ ಚೆನ್ನೈಗೆ ಹೋಗುತ್ತಿತ್ತು. ಅಲ್ಲಿಂದ ವಿದೇಶಕ್ಕೆ ರಫ್ತಾಗುತ್ತಿತ್ತು. ಈಗ ಭಾರತದಿಂದ ಚರ್ಮ ರಫ್ತಾಗುತ್ತಿಲ್ಲ, ಚರ್ಮಕ್ಕೆ ಬೇಡಿಕೆಯೇ ಇಲ್ಲವಾಗಿದೆ. ಈಗ ತಿಂಗಳಿಗೆ ಎರಡು ಲಾರಿ ಲೋಡ್‌ ಚರ್ಮದ ವಹಿವಾಟು ನಡೆಯುವುದೂ ಕಷ್ಟ. ಗೋಹತ್ಯೆ ನಿಷೇಧವಾದ ಬಳಿಕವಂತೂ ದನ ಮತ್ತು ಎಮ್ಮೆ ಚರ್ಮದ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ’ ಎಂದು ವಿಜಯಕುಮಾರ್ ಹೇಳಿದರು.

‘ಒಂದು ದನದ ಚರ್ಮವನ್ನು ₹2 ಸಾವಿರ ತನಕ ಮಾರಾಟ ಮಾಡಿದ ಉದಾಹರಣೆ ಇದೆ. ಈಗ ₹100ಕ್ಕೂ ಕೇಳುವವರಿಲ್ಲ. ದನ ಅಥವಾ ಎಮ್ಮೆ ಚರ್ಮ ಕಂಡರೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂಬ ಭಯವೂ ಇದೆ. ಆದ್ದರಿಂದ ಈ ಚರ್ಮದ ವ್ಯಾಪಾರಕ್ಕೂ ಯಾರೂ ಮನಸು ಮಾಡುತ್ತಿಲ್ಲ’ ಎಂದು ವಿವರಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ವಿದೇಶಕ್ಕೆ ಚರ್ಮ ರಫ್ತಾಗುತ್ತಿಲ್ಲ. ಕುರಿ ಮತ್ತು ಮೇಕೆಗಳ ಚರ್ಮಕ್ಕೂ ಬೆಲೆ ಇಲ್ಲ. ಒಂದು ಚರ್ಮಕ್ಕೆ ₹50 ದರ ಇರುವುದರಿಂದ ಮಂಡಿ ತನಕ ಚರ್ಮವೇ ಬರುವುದಿಲ್ಲ. ಬೇರೆ ಕೆಲಸ ಗೊತ್ತಿಲ್ಲದ ಕಾರಣ ಇದೇ ಕೆಲಸ ಮುಂದುವರಿಸಿದ್ದೇನೆ’ ಎಂದು ರಫೀಕ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು