ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಆಮ್ಲಜನಕ ಸಂಗ್ರಹ ಸ್ವಯಂ ಉತ್ಪಾದನೆ ಕಸರತ್ತು

ಉತ್ಪಾದನಾ ಘಟಕಗಳ ಸ್ಥಾಪನೆಗೆ ಗಮನ; ಆಮ್ಲಜನಕ ಸಾಂದ್ರಕಗಳ ಬಲ
Last Updated 5 ಸೆಪ್ಟೆಂಬರ್ 2021, 3:41 IST
ಅಕ್ಷರ ಗಾತ್ರ

ಚಾಮರಾಜನಗರ/ಮೈಸೂರು: ಸಕಾಲದಲ್ಲಿ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗದೆ 24 ಕೊರೊನಾ ಸೋಂಕಿತರು ಮೃತಪಟ್ಟು ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ, ಸದ್ಯ ಕೋವಿಡ್‌ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ದುರಂತದ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು ಸಂಭಾವ್ಯ ಮೂರನೇ ಅಲೆಯಲ್ಲಿ ಆಮ್ಲಜನಕ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ.

ಪಾಸಿಟಿವಿ ದರ ಶೇ 1ಕ್ಕಿಂತ ಕೆಳಗಿದ್ದು, ಪ್ರತಿದಿನ ಒಂದಂಕಿಯ ಪ್ರಕರಣಗಳಷ್ಟೇ ದಾಖಲಾಗುತ್ತಿವೆ. ಐಸಿಯುನಲ್ಲಿರುವ ನಾಲ್ವರ ಪೈಕಿ ಮೂವರಿಗೆ ವೆಂಟಿಲೇಟರ್‌ ಅಳವಡಿಸಲಾಗಿದೆ. ಪ್ರತಿದಿನ 10 ಸಿಲಿಂಡರ್‌ ಆಮ್ಲಜನಕ ಬಳಕೆಯಾಗುತ್ತಿದೆ.

ಜಿಲ್ಲೆಯಲ್ಲಿ ಆಮ್ಲಜನಕ ರಿಫಿಲ್ಲಿಂಗ್‌ ಘಟಕ ಇಲ್ಲ. ಸಿಲಿಂಡರ್‌ಗಳಿಗೆ ಆಮ್ಲಜನಕ ತುಂಬಿಸಲು ಮೈಸೂರಿನಲ್ಲಿರುವ ಎರಡು ಖಾಸಗಿ ಸಂಸ್ಥೆಗಳನ್ನೇ ಅವಲಂಬಿಸಬೇಕು. ಅಲ್ಲಿಂದ ಸಕಾಲಕ್ಕೆ ಸಿಲಿಂಡರ್‌ ಪೂರೈಕೆಯಾಗದೇ ದುರಂತ ಸಂಭವಿಸಿದ್ದರಿಂದ, ರಿಫಿಲ್ಲಿಂಗ್‌ ಏಜೆನ್ಸಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲೆಂದೇ ಆಮ್ಲಜನಕ ಉತ್ಪಾದನೆ ಹಾಗೂ ಸಂಗ್ರಹ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಸಿಎಸ್‌ಆರ್‌ ನಿಧಿ, ದಾನಿಗಳ ಸಹಾಯದಿಂದ ಪ್ರಮುಖ ಆಸ್ಪತ್ರೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ 6,000 ಲೀಟರ್ ಸಂಗ್ರಹ ಸಾಮರ್ಥ್ಯದ ಆಮ್ಲಜನಕ ಘಟಕವಿದೆ. ಯಡಬೆಟ್ಟದಲ್ಲಿರುವ 450 ಹಾಸಿಗೆ ಆಸ್ಪತ್ರೆಯಲ್ಲಿ 20 ಸಾವಿರ ಲೀಟರ್‌ ಘಟಕವನ್ನು ಸ್ಥಾಪಿಸಲಾಗಿದೆ. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ 416 ಎಲ್‌ಪಿಎಂ (ಲೀಟರ್ ಪರ್ ಮಿನಿಟ್/ ಪ್ರತಿ ನಿಮಿಷದ ಉತ್ಪಾದನೆ) ಸಾಮರ್ಥ್ಯದ ಉತ್ಪಾದನಾ ಘಟಕ ಆರಂಭವಾಗಿದೆ. ಸಂತೇಮರಹಳ್ಳಿಯಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಘಟಕ ಅಳವಡಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 1,000 ಎಲ್‌ಪಿಎಂನ ಒಂದು ಹಾಗೂ ಯಡಬೆಟ್ಟದ ಹೊಸ ಆಸ್ಪತ್ರೆಯಲ್ಲಿ 1,000 ಎಲ್‌ಪಿಎಂನ ಎರಡು ಉತ್ಪಾದನಾ ಘಟಕಗಳ ನಿರ್ಮಾಣ ಪ್ರಗತಿಯಲ್ಲಿದೆ. ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಘಟಕ ಸ್ಥಾಪನೆಯಾಗಲಿದೆ.

ಚಾಮರಾಜನಗರದ ಯಡಬೆಟ್ಟದ ಹೊಸ ಬೋಧನಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ 20 ಸಾವಿರ ಲೀಟರ್‌ ಸಾಮರ್ಥ್ಯದ ವೈದ್ಯಕೀಯ ಆಮ್ಲಜನಕ ಘಟಕ
ಚಾಮರಾಜನಗರದ ಯಡಬೆಟ್ಟದ ಹೊಸ ಬೋಧನಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ 20 ಸಾವಿರ ಲೀಟರ್‌ ಸಾಮರ್ಥ್ಯದ ವೈದ್ಯಕೀಯ ಆಮ್ಲಜನಕ ಘಟಕ

ಸಾಂದ್ರಕಗಳ ಬಲ: ‘ಜಿಲ್ಲೆಯಲ್ಲಿ 699 ಆಮ್ಲಜನಕ ಸಾಂದ್ರಕಗಳಿ‌ವೆ. 2ನೇ ಅಲೆಯ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ 500ಕ್ಕೂ ಹೆಚ್ಚು ರೋಗಿಗಳಿಗೆ ಸಾಂದ್ರಕಗಳ ಮೂಲಕ ಚಿಕಿತ್ಸೆ ನೀಡಿದ್ದೇವೆ’ ಎಂದು ಕೋವಿಡ್‌ ನೋಡಲ್‌ ಅಧಿಕಾರಿ ಡಾ.ಎಂ. ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹಾಸಿಗೆ ಹೆಚ್ಚಳ: ಜಿಲ್ಲೆಯಲ್ಲಿ ಈಗ ಆಮ್ಲಜನಕ ಸಹಿತ ಹಾಸಿಗೆಗಳ ಸಂಖ್ಯೆ ದುಪ್ಪಟ್ಟಾಗಿದೆ. 252 ಆಮ್ಲಜನಕ, 93 ಐಸಿಯು ಸೇರಿದಂತೆ 345 ಆಮ್ಲಜನಕ ಹಾಸಿಗೆಗಳಿವೆ. ಹೊಸ ಆಸ್ಪತ್ರೆಯಲ್ಲಿ 586 ಹಾಸಿಗೆಗಳಿವೆ. ಹೊಸ ವೆಂಟಿಲೇಟರ್‌ಗಳೂ ಬಂದಿವೆ. ಜಿಲ್ಲಾಸ್ಪತ್ರೆಗೆ 10, ತಾಲ್ಲೂಕು ಆಸ್ಪತ್ರೆಗಳಿಗೆ ತಲಾ ಎರಡು ವೆಂಟಿಲೇಟರ್‌ ಪೂರೈಸಲಾಗಿದೆ. ಮಕ್ಕಳಿಗಾಗಿಯೂ 140 ಹಾಸಿಗೆ ಮೀಸಲಿಡಲಾಗಿದೆ. ಆದರೆ, ವೆಂಟಿಲೇಟರ್‌ ಸಹಿತ ಮಕ್ಕಳ ಹಾಸಿಗೆಗಳು ಕಡಿಮೆ ಇವೆ. ಜಿಲ್ಲಾಸ್ಪತ್ರೆಯಲ್ಲಿ ಅವುಗಳ ಸಂಖ್ಯೆ ಮೂರು ಮಾತ್ರ.

ಯಡಬೆಟ್ಟದಲ್ಲಿರುವ ಆಸ್ಪತ್ರೆಯಲ್ಲಿ ಮೂಲ ಸೌಕರ್ಯದ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪತ್ರ ಸಿಗಬೇಕಾಗಿದೆ.

‘ಮೂರನೇ ಅಲೆ ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಕರಣಗಳು ಮಿತಿ ಮೀರಿದರೆ, ಹೊಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುವುದು’ ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ.ಎಂ. ಸಂಜೀವ್‌ ತಿಳಿಸಿದರು.

ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಆಮ್ಲಜನಕ ಘಟಕ
ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಆಮ್ಲಜನಕ ಘಟಕ

ಮೈಸೂರು: 14 ಘಟಕ ಸ್ಥಾಪನೆ
ಚಾಮರಾಜನಗರಕ್ಕೆ ಆಮ್ಲಜನಕ ಪೂರೈಸುವ ಮೈಸೂರು ಜಿಲ್ಲೆಯಲ್ಲೂ ಉತ್ಪಾದನೆ ಮತ್ತು ಸಂಗ್ರಹಕ್ಕೆ ಜಿಲ್ಲಾಡಳಿತ ಗಮನ ನೀಡಿದೆ.

ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 6,000 ಲೀ. ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ 13 ಸಾವಿರ ಲೀ. ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗಿದೆ. ಟ್ರಾಮಾ ಕೇಂದ್ರದಲ್ಲಿ 19 ಸಾವಿರ ಲೀ. ಸಾಮರ್ಥ್ಯದ ಘಟಕವು ನಿರ್ಮಾಣವಾಗುತ್ತಿದೆ. ಆಮ್ಲಜನಕ ಸಾಂದ್ರಕಗಳೂ ಲಭ್ಯವಿವೆ. ಜಿಲ್ಲೆಯಲ್ಲಿ 14 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗಿದೆ.

‘ಆಮ್ಲಜನಕದ ಸಂಗ್ರಹ ಸಾಕಷ್ಟಿದ್ದು, ಆತಂಕಪಡುವ ಸ್ಥಿತಿ ಇಲ್ಲ’ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಪ್ರತಿಕ್ರಿಯಿಸಿದರು.

ಕಲಬುರ್ಗಿಯಲ್ಲೂ ಸುಧಾರಣೆ
ಆಮ್ಲಜನಕ ಕೊರತೆಯಿಂದ ಏಳು ಮಂದಿ ಮೃತಪಟ್ಟಿದ್ದ ಕಲಬುರ್ಗಿ ಜಿಲ್ಲೆಯಲ್ಲೂ ಜಿಲ್ಲಾಡಳಿತ ಕ್ರಮ ವಹಿಸಿದೆ.

ದುರ್ಘಟನೆ ಬಳಿಕ ಜಿಲ್ಲೆಗೆ ಆಮ್ಲಜನಕ ಟ್ಯಾಂಕರ್ ಬರುವಂತಾಯಿತು. ಸಿಮೆಂಟ್ ಕಂಪನಿಗಳಲ್ಲದೆ ವಿವಿಧ ಸಂಘ–ಸಂಸ್ಥೆಗಳು ಜಂಬೊ ಸಿಲಿಂಡರ್‌ ಪೂರೈಸಿವೆ.

‘ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತರಿಗೆಂದೇ 50 ಹಾಸಿಗೆ ಮೀಸಲಿಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಮಕ್ಕಳಿಗಾಗಿ ಆಮ್ಲಜನಕ ಸೌಲಭ್ಯವುಳ್ಳ 350 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಕಲಬುರ್ಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮಾಹಿತಿ ನೀಡಿದರು.

*
ಆಮ್ಲಜನಕದ ಪೂರೈಕೆ, ದಾಸ್ತಾನಿದ್ದು, ಒಂದೇ ಬಾರಿಗೆ ಐದು ಸಾವಿರ ಸೋಂಕಿತರು ದಾಖಲಾದರೂ ಆಮ್ಲಜನಕ ಪೂರೈಸಬಹುದು.
-ಡಾ.ಕೆ.ಎಚ್.ಪ್ರಸಾದ್, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ

*
ಮೂರನೇ ಅಲೆ ಬಂದರೆ ಆಮ್ಲಜನಕದ ಕೊರತೆಯಾಗಬಾರದೆಂದು ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಡಾ. -ಎಂ.ಸಿ. ರವಿ, ಜಿಲ್ಲಾ ಆರೋಗ್ಯಾಧಿಕಾರಿ, ಚಾಮರಾಜನಗರ

*
ಜಿಲ್ಲೆಯ ಆಸ್ಪತ್ರೆಗಳಲ್ಲಿ ಮಕ್ಕಳ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆಮ್ಲಜನಕ ಕೊರತೆ ತಲೆದೋರದಂತೆ ಎಚ್ಚರವಹಿಸಲಾಗಿದೆ.
-ಡಾ.ಶರಣಬಸಪ್ಪ ಗಣಜಲಖೇಡ, ಜಿಲ್ಲಾ ಆರೋಗ್ಯಾಧಿಕಾರಿ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT