ಮಂಗಳವಾರ, ಅಕ್ಟೋಬರ್ 19, 2021
24 °C

ಒಳನೋಟ: ಪ್ರೇಮ ಪ್ರಕರಣ ತಡೆಯಲು ಬಾಲ್ಯ ವಿವಾಹದ ಅಸ್ತ್ರ!

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

PV Photo

ಚಿಕ್ಕಬಳ್ಳಾಪುರ: ಆಕೆ ಬಾಗೇಪಲ್ಲಿ ತಾಲ್ಲೂಕಿನ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿ. ಅನ್ಯಜಾತಿ ಯುವಕನನ್ನು ಪ್ರೇಮಿಸುತ್ತಾಳೆ. ವಿಷಯ ಮನೆಯವರೆಗೂ ತಲುಪುತ್ತದೆ. ಪೋಷಕರು ತಕ್ಷಣ ಸ್ವಜಾತಿಯ ಯುವಕನ ಜತೆ ವಿವಾಹ ನಿಶ್ಚಯಿಸುತ್ತಾರೆ. ಇದನ್ನು ತಿಳಿದ ವಿದ್ಯಾರ್ಥಿನಿಯ ಪ್ರಿಯಕರ ‘ಇಲ್ಲೊಂದು ಬಾಲ್ಯ ವಿವಾಹ ನಡೆಯುತ್ತಿದೆ’ ಎಂದು ಮಕ್ಕಳ ಸಹಾಯವಾಣಿಗೆ ಗುಟ್ಟಾಗಿ ದೂರು ನೀಡುತ್ತಾನೆ.

ಶಿಡ್ಲಘಟ್ಟ ತಾಲ್ಲೂಕಿನ ಹುಡುಗಿಗೆ 17 ವರ್ಷ. ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ‘ವಿವಾಹ ಇಷ್ಟವಿಲ್ಲ, ತಡೆಯಿರಿ’ ಎಂದು ಹುಡುಗಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗೆ ಟ್ವೀಟ್ ಮಾಡುತ್ತಾಳೆ. ಆಂಧ್ರದ ಚಿತ್ತೂರು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರದಲ್ಲಿ ವಿವಾಹಕ್ಕೆ ತಡೆಯೂ ಬಿದ್ದಿತ್ತು. ಹುಡುಗಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ ‘ನಾನು ಚೆನ್ನಾಗಿ ಓದಬೇಕು, ಅಧಿಕಾರಿ ಆಗಬೇಕು’ ಎಂದಳು. ಕೌನ್ಸೆಲಿಂಗ್‌ನಲ್ಲಿ, ‘ನಾನು ಮತ್ತೊಬ್ಬನನ್ನು ಪ್ರೇಮಿಸಿದ್ದೇನೆ. ಹೀಗಾಗಿ ಈ ವಿವಾಹ ಇಷ್ಟವಿಲ್ಲ’ ಎಂದಳು!

ಗುಡಿಬಂಡೆಯ 9ನೇ ತರಗತಿ ವಿದ್ಯಾರ್ಥಿನಿಗೆ ಯುವಕನೊಬ್ಬನ ಜತೆ ಪ್ರೇಮಾಂಕುರವಾಗಿತ್ತು. ವಿವಾಹವಾಗಿ ಒಂದೂವರೆ ವರ್ಷ ಬೇರೆ ಕಡೆ ಇದ್ದರು. ಹೆರಿಗೆಗೆ ಆಸ್ಪತ್ರೆಗೆ ದಾಖಲಾದಾಗ ಸಿಬ್ಬಂದಿಗೆ ಈಕೆ ಬಾಲಕಿ ಎನ್ನುವುದು ತಿಳಿಯುತ್ತದೆ. ಬಾಲ್ಯವಿವಾಹ ನಿಷೇಧ ಮತ್ತು ಪೊಕ್ಸೊ ಕಾಯ್ದೆಯಡಿ ಈಗ ಯುವಕ ಜೈಲುಪಾಲಾದರೆ, ತಾಯಿ ಮತ್ತು ಮಗು ತವರು ಮನೆ ಸೇರಿದ್ದಾರೆ.

ಇವು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಪ್ರಕರಣಗಳಿಗೆ ಕೆಲವು ಉದಾಹರಣೆಗಳಷ್ಟೆ.

ಜಿಲ್ಲೆಯಲ್ಲಿ, ಹದಿಹರೆಯದ ಮಕ್ಕಳ ಪ್ರೀತಿ–ಪ್ರೇಮ ಪ್ರಕರಣಗಳಿಗೆ ಕಡಿವಾಣ ಹಾಕಲು ಪೋಷಕರು ಬಾಲ್ಯ ವಿವಾಹಕ್ಕೆ ನೂಕುತ್ತಾರೆ. ಅಷ್ಟೂ ಮೀರಿ ಪೋಷಕರ ಕಣ್ಣು ತಪ್ಪಿಸಿ ಬಾಲಕಿಯರನ್ನು ಮದುವೆಯಾಗುವ ಯುವಕರು ಕೊನೆಗೆ ಬಾಲ್ಯವಿವಾಹ ನಿಷೇಧ ಮತ್ತು ಪೊಕ್ಸೊ ಕಾಯ್ದೆಯಡಿ ಜೈಲು ಸೇರುತ್ತಾರೆ. ಜಿಲ್ಲೆಯಲ್ಲಿ ಇಂಥ ಗರಿಷ್ಠ ಪ್ರಕರಣಗಳು ದಾಖಲಾಗಿವೆ. ಬಡತನ, ಅನಕ್ಷರತೆಯ ಕಾರಣದಿಂದ ನಡೆಯುವ ಬಾಲ್ಯ ವಿವಾಹಗಳಿಗಿಂತ ಗಡಿಭಾಗದಲ್ಲಿ ಹದಿಹರೆಯದ ಪ್ರೇಮ ಪ್ರಕರಣ ಮುರಿಯಲು ನಡೆಯುವ ಬಾಲ್ಯ ವಿವಾಹಗಳ ಸಂಖ್ಯೆಯೇ ಹೆಚ್ಚು.

ಬಾಗೇಪಲ್ಲಿ ಪ್ರಮುಖ: ರಾಜ್ಯದಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ದಾಖಲಾಗುವ ತಾಲ್ಲೂಕುಗಳಲ್ಲಿ ಬಾಗೇಪಲ್ಲಿಯೂ ಪ್ರಮುಖವಾದುದು. ಇಲ್ಲಿ ಬಾಲ್ಯ ವಿವಾಹ ತಡೆಗೆ ಗ್ರಾಮಮಟ್ಟದಲ್ಲಿ ಅಧಿಕಾರಿಗಳ ತಂಡ ನೇಮಿಸಲಾ
ಗಿದೆ. ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ 2020ರ ಏಪ್ರಿಲ್ 1ರಿಂದ 2021ರ ಜುಲೈ ಅಂತ್ಯದವರೆಗೆ ‌ಬಾಗೇಪಲ್ಲಿ ತಾಲ್ಲೂಕಿನಲ್ಲಿ 73 ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ 36 ದೂರುಗಳು ದಾಖಲಾಗಿವೆ.

ಆಂಧ್ರ ಸಂಸ್ಕೃತಿಯ ಪ್ರಭಾವ: ಬಾಗೇಪಲ್ಲಿ, ಗೌರಿಬಿದನೂರು, ಗುಡಿಬಂಡೆ ತಾಲ್ಲೂಕುಗಳ ಮೇಲೆ ನೆರೆಯ ಆಂಧ್ರ ಪ್ರದೇಶದ ಪ್ರಭಾವ ದಟ್ಟವಾಗಿದೆ. ತೆಲುಗು ಸಿನಿಮಾಗಳ ಪ್ರಭಾವವೂ ಪ್ರೌಢಶಾಲಾ ಹಂತದಲ್ಲೇ ಹುಡುಗ–ಹುಡುಗಿಯರಲ್ಲಿ ಪ್ರೇಮ ಅರಳಲು ಕೊಡುಗೆ ನೀಡುತ್ತಿದೆ. ಮಗಳು ಅಂತರ್ಜಾತಿ ಪ್ರೇಮ ವಿವಾಹವಾಗುತ್ತಾಳೆ ಎನ್ನುವ ಭಯದಿಂದ ಹಾಗೂ ಪೋಷಕರ ‘ಜಾತಿ ಪ್ರತಿಷ್ಠೆ’ಯ ಮನೋಭಾವದಿಂದ ಈ ಪಿಡುಗು ಹೆಚ್ಚಲು ಕಾರಣವಾಗುತ್ತಿದೆ.

ಬಹುತೇಕ ಬಾಲ್ಯವಿವಾಹ ಪ್ರಯತ್ನಗಳಿಗೆ ಪ್ರೇಮವೇ ಪ್ರಮುಖ ಕಾರಣ ಎನ್ನುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ವಿಚಾರಣೆ ಹಾಗೂ ತಜ್ಞರ ಕೌನ್ಸೆಲಿಂಗ್‌ ವೇಳೆ ದೃಢವಾಗುತ್ತಿದೆ.

ಯುವಕರಿಗೆ ಜಾಗೃತಿ!: ‘ನೀವು ಇಷ್ಟಪಟ್ಟು ಹೋದರೂ ಅಥವಾ ಅವರೇ ಇಷ್ಟಪಟ್ಟು ನಿಮ್ಮ ಜತೆ ಬಂದರೂ ಹುಡುಗಿಗೆ 18 ವರ್ಷ ಪೂರ್ಣವಾಗದಿದ್ದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎಂದು ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು