ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸಂಸ್ಥೆಗಳ ಬೆನ್ನೆಲುಬು ಮುರಿದ ಅಕ್ರಮಗಳು

ಅಧ್ಯಕ್ಷ, ಆಡಳಿತ ಮಂಡಳಿಯೇ ಭಾಗಿ l ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾಲ
Last Updated 16 ಅಕ್ಟೋಬರ್ 2021, 20:32 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾವಲಂಬಿ, ಸ್ವಾಯತ್ತತೆ ಮತ್ತು ಆರ್ಥಿಕವಾಗಿ ಸಬಲರಾಗಲು ಸಮಾನ ಮನಸ್ಕರು ಕಟ್ಟಿಕೊಂಡ ಕೆಲ ಸಹಕಾರ ಸಂಸ್ಥೆಗಳು, ‘ಅಕ್ರಮ’ದಲ್ಲಿ ಸಿಲುಕಿ ನಲುಗುತ್ತಿವೆ. ಕೋಟ್ಯಂತರ ರೂಪಾಯಿ ಠೇವಣಿ ಹಣವನ್ನು ಬೇನಾಮಿ ಹೆಸರಿನಲ್ಲಿ ಸಾಲ ನೀಡುತ್ತಿರುವ ಆಡಳಿತ ಮಂಡಳಿಯವರೇ ಅಕ್ರಮದಲ್ಲಿ ಭಾಗಿಯಾಗಿ ಸಂಸ್ಥೆಗಳ ಬೆನ್ನೆಲುಬು ಮುರಿಯುತ್ತಿದ್ದಾರೆ.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ – ಆಪರೇಟಿವ್ ಲಿಮಿಟೆಡ್‌, ಕಣ್ವ ಸಮೂಹ ಸಂಸ್ಥೆಯ ಶ್ರೀ ಕಣ್ವ ಸೌಹಾರ್ದ ಕೋ– ಆಪರೇಟಿವ್ ಸೊಸೈಟಿ ಹಾಗೂ ಶ್ರೀ ವಸಿಷ್ಠ ಕೋ– ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಕ್ರಮಗಳು ಇತ್ತೀಚೆಗೆ ಹೆಚ್ಚು ಸುದ್ದಿ ಮಾಡಿವೆ. ಕಷ್ಟಕಾಲದಲ್ಲಿ ನೆರವಾಗಲೆಂದು ಠೇವಣಿ ಇರಿಸಿದ್ದ ಕೋಟ್ಯಂತರ ರೂಪಾಯಿ ವಂಚಕರ ಪಾಲಾಗಿದ್ದು, ಠೇವಣಿದಾರರು ಮಾತ್ರ ತಾವು ಇರಿಸಿದ್ದ ಠೇವಣಿಯ ಹಣಕ್ಕಾಗಿ ಕಾಯುತ್ತ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಅಕ್ರಮಗಳ ಬಗ್ಗೆ ಎಫ್‌ಐಆರ್‌ಗಳು ದಾಖಲಾಗಿದ್ದು, ತನಿಖೆ ಹೊಣೆಯನ್ನು ಸಿಐಡಿಗೆ ವಹಿಸಲಾಗಿದೆ. ಕೆಲ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದ್ದು, ಬಹುತೇಕರು ಜಾಮೀನಿನ ಮೇಲೆ ಹೊರಬಂದಿದ್ದಾರೆ.

27 ಮಂದಿಗೆ ₹ 920.46 ಕೋಟಿ ಸಾಲ: ‘ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ – ಆಪರೇಟಿವ್ ಲಿಮಿಟೆಡ್‌ನಲ್ಲಿ ನಡೆದಿರುವ ಅಕ್ರಮ ಅಗೆದಷ್ಟೂ ಆಳವಿದೆ. ಬ್ಯಾಂಕ್‌ ಅಧ್ಯಕ್ಷ ಕೆ. ರಾಮಕೃಷ್ಣ, ಅವರ ಪುತ್ರರಾದ ಉಪಾಧ್ಯಕ್ಷ ಕೆ.ಆರ್. ವೇಣುಗೋಪಾಲ್ ಸೇರಿದಂತೆ 26 ಮಂದಿ ಅಕ್ರಮದ ಆರೋಪಿಗಳು. ಇವರೆಲ್ಲರೂ ಸೇರಿ ಕೇವಲ 27 ಮಂದಿಗೆ ₹ 920.46 ಕೋಟಿ ಸಾಲ ಮಂಜೂರು ಮಾಡಿದ್ದು, ಈ ಹಣ ಮರು ಪಾವತಿಯಾಗಿಲ್ಲ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಸ್ವತಃ ರಾಮಕೃಷ್ಣ ₹ 78.08 ಕೋಟಿ ಸಾಲ ಪಡೆದು ವಾಪಸ್‌ ತುಂಬಿಲ್ಲ. ‘ಹೆಬ್ಬುಲಿ’ ನಿರ್ಮಾಪಕ ಜಿ. ರಘುನಾಥ್ ₹ 139.85 ಕೋಟಿ, ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ₹ 12.12 ಕೋಟಿ ಸಾಲ ಪಡೆದಿರುವುದಕ್ಕೆ ದಾಖಲೆಗಳು ಸಿಕ್ಕಿವೆ. ಅಕ್ರಮದಿಂದ ಗಳಿಸಿದ್ದ ₹ 1,000 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿ, ಜಪ್ತಿಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದೂ ತಿಳಿಸಿವೆ.

ಕಣ್ವದಲ್ಲಿ ಸುಮಾರು ₹ 250 ಕೋಟಿ ವಂಚನೆ: ‘ಕಣ್ವ ಸಮೂಹ ಸಂಸ್ಥೆ ಸಂಸ್ಥಾಪಕ ಎನ್‌. ನಂಜುಂಡಯ್ಯ, ಶ್ರೀ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿ ಸ್ಥಾಪಿಸಿದ್ದರು. ಅವರೇ ಗೌರವ ಅಧ್ಯಕ್ಷರೂ ಆಗಿದ್ದರು. ಗಾರ್ಮೆಂಟ್ಸ್‌, ರಿಯಲ್ ಎಸ್ಟೇಟ್, ಆರೋಗ್ಯ ಕ್ಷೇತ್ರದಲ್ಲೂ ನಂಜುಂಡಯ್ಯ ತೊಡಗಿಸಿಕೊಂಡಿದ್ದರು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಠೇವಣಿ ಇರಿಸಿದ್ದ ಹಣ ವಾಪಸು ನೀಡದಿದ್ದರಿಂದ 80 ಠೇವಣಿದಾರರು ಪೊಲೀಸರಿಗೆ ದೂರು ನೀಡಿದ್ದರು. ನಂಜುಂಡಯ್ಯ ಅವರನ್ನು ಬಂಧಿಸಿದ್ದ ಸಿಐಡಿ, ವಿಚಾರಣೆ ನಡೆಸಿತ್ತು. ಸುಮಾರು ₹ 250 ಕೋಟಿಯಷ್ಟು ಅಕ್ರಮ ನಡೆದಿರುವ ಮಾಹಿತಿ ಇದ್ದು, ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದೆ. ವಂಚನೆ ಮೊತ್ತ ಹೆಚ್ಚಾಗುವ ಸಾಧ್ಯತೆಯೂ ಇದೆ’ ಎಂದೂ ಮೂಲಗಳು ತಿಳಿಸಿವೆ.

ಅಮಾನತ್‌ನಲ್ಲೂ ಸುಮಾರು ₹ 102.03 ಕೋಟಿ ಅವ್ಯವಹಾರ: ಶಿವಾಜಿನಗರದಲ್ಲಿದ್ದ ಅಮಾನತ್ ಸಹಕಾರ ಬ್ಯಾಂಕ್‌ನಲ್ಲೂ ಸುಮಾರು ₹ 102.03 ಕೋಟಿ ಅವ್ಯವಹಾರವಾಗಿತ್ತು. ಇದುವರೆಗೂ ಹಲವು ಠೇವಣಿದಾರರಿಗೆ ನ್ಯಾಯ ಸಿಕ್ಕಿಲ್ಲ ಎಂಬ ದೂರುಗಳಿವೆ.

ಬ್ಯಾಂಕ್‌ನಲ್ಲಾದ ಅವ್ಯವಹಾರದ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೂಚನೆಯಂತೆ, ಅಂದಿನ ಸಹಕಾರ ಇಲಾಖೆಯ ಉಪ ರಿಜಿಸ್ಟ್ರಾರ್ ಕೆ.ಎ.ಅಪ್ಪಣ್ಣ ನೇತೃತ್ವದ ತಂಡ ತನಿಖೆ ನಡೆಸಿತ್ತು. 2007ರಲ್ಲಿ 129 ಪುಟಗಳ ತನಿಖಾ ವರದಿ ಸಲ್ಲಿಸಿತ್ತು.

‘₹102.03 ಕೋಟಿ ಅವ್ಯವಹಾರ ನಡೆದಿರುವುದಾಗಿ ತಂಡ ಹೇಳಿತ್ತು. ಬ್ಯಾಂಕ್‌ನ ಅಂದಿನ ಅಧ್ಯಕ್ಷ ಕೆ.ರೆಹಮಾನ್ ಖಾನ್, ನಿರ್ದೇಶಕರಾದ ಅಬ್ದುಲ್ ಗಫಾರ್ ಹಾಜಿ ಲತೀಫ್ (ಮೃತ), ಮೊಹಮ್ಮದ್ ಅಜಂ ಜಾನ್ (ಮೃತ), ಎಸ್.ಎಸ್.ಪೀರಾನ್, ಜಿಯಾವುಲ್ಲಾ ಷರೀಫ್, ಸಾದತ್ ಅಲಿ ಖಾನ್, ಅಜೀಜ್ ಮೊಹಮ್ಮದ್, ಅತೀಕ್ ಅಹಮ್ಮದ್, ಹೈದರ್ ಅಲಿ, ಜೀವಭಾಯಿ, ಜಮೀಲ್ ಖಲೀಲ್, ಅಂದಿನ ಪ್ರಧಾನ ವ್ಯವಸ್ಥಾಪಕ ಮೊಹಮ್ಮದ್ ಅಸಾದುಲ್ಲಾ ಮತ್ತು ಎನ್.ಆರ್.ರಸ್ತೆ ಶಾಖೆಯ ವ್ಯವಸ್ಥಾಪಕ ಎ. ಷಫಿವುಲ್ಲಾ ತಪ್ಪಿತಸ್ಥರು ಎಂಬುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು’ ಎಂದು ಬ್ಯಾಂಕ್‌ನ ಠೇವಣಿದಾರರೊಬ್ಬರು ಹೇಳಿದರು.

‘ಕೆ.ಹಿದಾಯತ್ ಉಲ್ಲಾ, ಖೈರುನ್ನಿಯಾ, ನಸೀಮಾ ಬೇಗಂ, ಎಂ.ಎ.ರಾಜ್, ಸಾದಿಕ್ ಬೇಗಂ ಮತ್ತು ನೂರ್‌ಜಹಾನ್ ಬೇಗಂ ಎಂಬುವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆಗಳನ್ನು ತೆರೆದಿರುವುದು, ನಡಾವಳಿ ಪುಸ್ತಕವನ್ನು ತಿದ್ದಿರುವುದು, ಸಾಲ ಮಂಜೂರಾತಿ ದಾಖಲೆ ಸೃಷ್ಟಿಸಿರುವುದು ಮತ್ತಿತರ ಅಕ್ರಮಗಳಲ್ಲಿ ಭಾಗಿಯಾಗಿದ್ದರು ಎಂದು ವರದಿ ಹೇಳಿತ್ತು. ಎಲ್ಲರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಅಲ್ ಅಮೀನ್ ಚಾರಿಟಬಲ್ ಟ್ರಸ್ಟ್‌ನ ಖಾತೆಯನ್ನು ಬಳಸಿಕೊಂಡು ಅವ್ಯವಹಾರ ನಡೆಸಿದ್ದು ತನಿಖೆಯಿಂದ ಗೊತ್ತಾಗಿತ್ತು’ ಎಂದೂ ಠೇವಣಿದಾರ ತಿಳಿಸಿದರು.

ಶ್ರೀವಸಿಷ್ಠ ಅಕ್ರಮದಲ್ಲಿ ಜಾಮೀನು: ಶ್ರೀವಸಿಷ್ಠ ಕೋ–ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ಅಕ್ರಮ ನಡೆದ ಬಗ್ಗೆ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲವು ದಿನ ತಲೆಮರೆಸಿಕೊಂಡಿದ್ದ ಸೊಸೈಟಿ ಅಧ್ಯಕ್ಷ ವೆಂಕಟನಾರಾಯಣ ಹಾಗೂ ನಿರ್ದೇಶಕ ಕೃಷ್ಣಪ್ರಸಾದ್, ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಸದ್ಯ ಅವರಿಬ್ಬರೂ ಜಾಮೀನು ಮೇಲೆ ಹೊರಗಿದ್ದಾರೆ. ಸೊಸೈಟಿಯಲ್ಲೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ.

ಗುರು ರಾಘವೇಂದ್ರ ಬ್ಯಾಂಕ್ ಚಿತ್ರಣ

ಠೇವಣಿದಾರರು – ಸುಮಾರು 46,000

ಠೇವಣಿ ಹಿಂಪಡೆದವರು – ಸುಮಾರು 22,000

ಒಟ್ಟು ಠೇವಣಿ – ಸುಮಾರು ₹ 2,375 ಕೋಟಿ

ಸಾಲ ಪಡೆದ ಪ್ರಮುಖರು

ಸಾಲಗಾರರು; ಸಾಲ (₹ ಕೋಟಿಗಳಲ್ಲಿ)

ಜಿ. ರಘುನಾಥ್; 139.85

ಜಶ್ವತ್ ರೆಡ್ಡಿ; 153.50

ಕುಮಾರೇಶ್ ಬಾಬು; 39.03

ಟಿ.ಎಚ್. ಆರಾಧ್ಯ;25.78

ಡಿ.ಪಿ. ಆರಾಧ್ಯ;91.23

ಎಂ.ಆರ್. ರಜತ್;26.10

ಎಸ್‌.ಪಿ. ಶ್ರೀಷಾ;10.05

ಬಿ.ಜಿ.ರಾಮಕೃಷ್ಣನ್;46.06

ವಿ.ಆರ್. ರಾಜೇಶ್;40.40

ಜಗನ್ನಾಥ್ ಹೆಗ್ಡೆ;55.30

ಜಿ. ಶ್ರೀನಿವಾಸನ್;56.5

ಅಶ್ವತ್ಥನಾರಾಯಣ;12.12

ರಾಜಸಿಂಹ;6.57

ಎನ್‌. ಸತ್ಯನಾರಾಯಣ;24.24

ಎಸ್‌.ವಿ. ರೆಡ್ಡಿ;8.08

ಆದಿ ನಾರಾಯಣ;6.06

ಹರಿಕೃಷ್ಣ;22.12

ಪ್ರಸನ್ನ ಕುಮಾರ್;6.06

ವೈ.ಪಿ. ಸಂತೋಷ್;6.06

ಲೋಕೇಶ್;7.07

ವೋಡರಿಚ್ ಫರ್ನಿಚರ್;8.02

ವಿಜಯಸಿಂಹ;5

ಬಿ.ಎನ್‌. ವೆಂಕಟೇಶ್;5

ಎಸ್‌.ಎನ್‌. ಸುಯಮೀಂದ್ರ;10

ರಾಮಕೃಷ್ಣ;78.08

ಸತ್ಯನಾರಾಯಣ;24.04

ಮಯ್ಯ;8.08

‘₹ 5 ಲಕ್ಷಕ್ಕಿಂತ ಹೆಚ್ಚು ಠೇವಣಿ ಇರಿಸಿದವರ ಗತಿಯೇನು?’

ಹಲವು ವರ್ಷಗಳ ನಂಬಿಕೆ ಹಾಗೂ ವಿಶ್ವಾಸದಿಂದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದೆ. ಆಡಳಿತ ಮಂಡಳಿಯವರೇ ಅಕ್ರಮ ಎಸಗಿ ಠೇವಣಿ ನುಂಗಿದ್ದಾರೆ. ಸಾವಿರಾರು ಠೇವಣಿದಾರರು ಬೀದಿಗೆ ಬಿದ್ದಿದ್ದಾರೆ. ₹ 5 ಲಕ್ಷದವರೆಗೆ ಠೇವಣಿ ಇರಿಸಿದವರಿಗೆ ವಿಮೆ ಹೆಸರಿನಲ್ಲಿ ಹಣ ವಾಪಸು ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಆದರೆ, ₹ 5 ಲಕ್ಷಕ್ಕಿಂತ ಹೆಚ್ಚು ಠೇವಣಿ ಇರಿಸಿದ್ದವರ ಗತಿಯೇನು?

– ವಿ.ಹರೀಶ್, ಠೇವಣಿದಾರ

***

‘ಚಿಂತೆಯಲ್ಲೇ ಪ್ರಾಣ ಬಿಟ್ಟ ಅತ್ತೆ’

ನನ್ನ ಅತ್ತೆ–ಮಾವ, 25 ವರ್ಷಗಳ ಹಿಂದೆಯೇ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಣ ಠೇವಣಿ ಇರಿಸಿದ್ದರು. ಬಡ್ಡಿ ನಂಬಿ ಜೀವನ ಸಾಗಿಸುತ್ತಿದ್ದರು. ಅಕ್ರಮದಿಂದ ಠೇವಣಿ ಎಲ್ಲ ಹೋಯಿತೆಂಬ ಸುದ್ದಿ ಕೇಳಿ ಹಾಸಿಗೆ ಹಿಡಿದಿದ್ದ ಅತ್ತೆ, ಚಿಂತೆಯಲ್ಲೇ ಪ್ರಾಣ ಬಿಟ್ಟರು. ಇದೇ ರೀತಿ ಇದುವರೆಗೂ 78 ಠೇವಣಿದಾರರು ತೀರಿಕೊಂಡಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಅಕ್ರಮ ಎಸಗಿರುವ ಆರೋಪಿಗಳು ಯಾರು ಎಂಬುದು ಗೊತ್ತಿದ್ದರೂ ಸರ್ಕಾರ ಮೌನವಾಗಿದೆ. ನೊಂದ ಠೇವಣಿದಾರರ ಪರ ನಿಲ್ಲಬೇಕಾದ ರಾಜಕಾರಣಿಗಳು, ಆರೋಪಿಗಳನ್ನು ಬಚಾವ್ ಮಾಡಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

– ಕೆ.ವಿ. ಬಾಲಸುಬ್ರಹ್ಮಣ್ಯ, ಠೇವಣಿದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT