ಬುಧವಾರ, ಜೂನ್ 16, 2021
23 °C
ತೂಗುಯ್ಯಾಲೆಯಲ್ಲಿ ಗೋಡಂಬಿ, ಹೆಂಚು ಉದ್ಯಮ

ಒಳನೋಟ: ಲಾಕ್‌ಡೌನ್‌ ಪರಿಣಾಮ; ಬೀಡಿ ಸುತ್ತುವ ಕೈಗಳಿಗೆ ಪೂರ್ಣ ಉದ್ಯೋಗವಿಲ್ಲ!

ಪ್ರದೀಶ್‌ ಎಚ್‌. ಮರೋಡಿ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಬೀಡಿಯ ಆದಾಯ ನಂಬಿ ಸ್ವಸಹಾಯ ಸಂಘದಿಂದ ಸಾಲ ಪಡೆದಿದ್ದೇನೆ. ಪ್ರತಿ ವಾರ ಸಾಲದ ಕಂತು ಕಟ್ಟಬೇಕು. ಆದರೆ, ಈಗ ಕೆಲಸವಿಲ್ಲದೆ ಕೈಕಟ್ಟಿದಂತಾಗಿದೆ. ಇತರ ವರ್ಗಗಳ ಕಾರ್ಮಿಕರಿಗೆ ನೆರವು ಘೋಷಿಸಿದ ಸರ್ಕಾರ, ಬೀಡಿ ಕಾರ್ಮಿಕರನ್ನು ಮರೆತಿದೆ...’ ಇದು ಬೀಡಿ ಕಾರ್ಮಿಕರಾದ ಬೆಳ್ತಂಗಡಿಯ ಭಾರತಿ ಅವರ ಮಾತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 2.5 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರಿದ್ದು, ಬಹುತೇಕ ಅವರೆಲ್ಲರ ಕೊರಗು ಇದೇ ಆಗಿದೆ. ಸಂಸಾರದ ನಿರ್ವಹಣೆಯ ನೊಗ ಹೊತ್ತ ಮಹಿಳೆಯರು, ವಿಧವೆಯರು ಬೀಡಿ ಸುತ್ತುವುದನ್ನು ಕಾಯಕ ಮಾಡಿಕೊಂಡಿದ್ದಾರೆ. ಅವಿಭಜಿತ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಬೀಡಿ ಕಂಪನಿಗಳು ಇದ್ದು, ಕೋವಿಡ್‌ ಸಂದರ್ಭದಲ್ಲಿ ಉತ್ಪನ್ನಕ್ಕೆ ಬೇಡಿಕೆ ಕುಗ್ಗಿದೆ. ಹೀಗಾಗಿ, ಕಾರ್ಮಿಕರಿಗೆ ಬೇಡಿಕೆಯಷ್ಟು ಕೆಲಸವನ್ನು ನೀಡಲು ಕಂಪನಿಗಳಿಗೆ ಸಾಧ್ಯವಾಗುತ್ತಿಲ್ಲ.

‘ಕಳೆದ ವರ್ಷದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಬೀಡಿ ಉದ್ಯಮ ಚೇತರಿಕೆಯ ಹಾದಿಯಲ್ಲಿತ್ತು. ಈ ಬಾರಿ ಜಿಲ್ಲಾಡಳಿತಗಳು ಷರತ್ತುಬದ್ಧ ಅವಕಾಶ ಕಲ್ಪಿಸಿದರೂ, ಕಂಪನಿಗಳು ವಾರಕ್ಕೆ ಒಂದೆರಡು ದಿನ ಮಾತ್ರ ಕೆಲಸ ನೀಡುತ್ತಿವೆ’ ಎನ್ನುತ್ತಾರೆ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ.

‘ಕಾರ್ಮಿಕರು ಒಂದು ದಿನ ಸಾವಿರ ಬೀಡಿ ಕಟ್ಟಿದರೆ ₹ 215.22 ಸಂಪಾದನೆ. ಇದಕ್ಕೆ ಹನ್ನೆರಡು ಗಂಟೆ ದುಡಿಯಬೇಕು. ಇಂಥ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸಿ, ಬೀಡಿ ಕಾರ್ಮಿಕರಿಗೆ ಕೆಲಸ ಒದಗಿಸಬೇಕು. ಎಲ್ಲ ಕಾರ್ಮಿಕರಿಗೆ ತಿಂಗಳಿಗೆ 10 ಕೆ.ಜಿ. ಉಚಿತ ಆಹಾರ ಧಾನ್ಯ ನೀಡಬೇಕು. ಬೀಡಿ ಕಾರ್ಮಿಕರು ಕೋವಿಡ್‍ಗೆ ತುತ್ತಾದಲ್ಲಿ ಅವರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಬೇಕು. ಬೀಡಿ ಕಾರ್ಮಿಕರ ಕ್ಷೇಮ ನಿಧಿಯಲ್ಲಿ ಇರುವ ಸಾವಿರಾರು ಕೋಟಿ ಹಣವನ್ನು ಅವರ ಕಲ್ಯಾಣಕ್ಕಾಗಿ ಉಪಯೋಗಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ಹೆಂಚು, ಗೋಡಂಬಿ ಉದ್ಯಮ: ಹಿಂದೆ ಕರಾವಳಿಯ ಉದ್ಯಮಕ್ಕೆ ಬಲ ತುಂಬಿದ್ದು ಹೆಂಚು ಮತ್ತು ಗೋಡಂಬಿ ಕಾರ್ಖಾನೆಗಳು. ಉಭಯ ಜಿಲ್ಲೆಯಲ್ಲಿ ಸುಮಾರು 20 ಹೆಂಚು ಕಾರ್ಖಾನೆಗಳಿದ್ದು, 2 ಸಾವಿರದಷ್ಟು ಕಾರ್ಮಿಕರು ದುಡಿಯುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭ ಈ ಕಾರ್ಖಾನೆಗಳು ಕಾರ್ಯ ಸ್ಥಗಿತಗೊಳಿಸಿವೆ.

ಪ್ರಸ್ತುತ ಗೋಡಂಬಿ ಉದ್ಯಮವೂ ತೊಂದರೆಯಲ್ಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ಕಾರ್ಮಿಕರು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರೆಲ್ಲರೂ ಅತಂತ್ರರಾಗಿದ್ದಾರೆ.

‘ಕಳೆದ ವರ್ಷ ಕೆಲ ಹೆಂಚು ಕಾರ್ಖಾನೆಗಳ ಮಾಲೀಕರು ಕಾರ್ಮಿಕರಿಗೆ ನೆರವು ನೀಡಿದ್ದರು. ಹಾಗೆಯೇ ಈ ವರ್ಷವೂ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಬೇಕು. ರಾಜ್ಯದಾದ್ಯಂತ ಇರುವ ಬೀಡಿ, ಹೆಂಚು ಮತ್ತು ಗೋಡಂಬಿ ಕಾರ್ಮಿಕರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಉಡುಪಿ.

‘ಕೋವಿಡ್‌ನಿಂದ ಬೇಡಿಕೆ ಕುಸಿತ’
‘ಕೋವಿಡ್‌, ಲಾಕ್‌ಡೌನ್‌ ಕಾರಣದಿಂದ ಬೀಡಿ ಉದ್ಯಮವು ನಷ್ಟದಲ್ಲಿದೆ. ಲಾಕ್‌ಡೌನ್‌ನಿಂದ ಅಂಗಡಿಗಳು ಬಂದ್‌ ಆಗಿರುವ ಕಾರಣ ಉತ್ಪನ್ನ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ. ಬೇಡಿಕೆಗಿಂತ ಹೆಚ್ಚು ಉತ್ಪನ್ನ ದಾಸ್ತಾನಿದೆ. ಹೀಗಾಗಿ, ಉತ್ಪಾದನೆ ಕಡಿಮೆ ಮಾಡುವುದು ಅನಿವಾರ್ಯ. ಆದರೂ ಕಾರ್ಮಿಕರಿಗೆ ತೊಂದರೆಯಾಗದಂತೆ ಕೆಲಸ ನೀಡಲು ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ಜೆ.ಪಿ. ಬೀಡಿ ಕಂಪನಿ ಜನರಲ್‌ ಮ್ಯಾನೇಜರ್‌ ದಿನೇಶ್ ಪೈ.

‘ಇದು ಹೆಂಚು ಮಾರಾಟದ ಸೀಜನ್‌’
‘ಏಪ್ರಿಲ್‌, ಮೇ ತಿಂಗಳಲ್ಲಿ ಹೆಂಚುಗಳು ಹೆಚ್ಚು ಮಾರಾಟವಾಗುತ್ತಿದ್ದವು. ಲಾಕ್‌ಡೌನ್‌ ಕಾರಣದಿಂದ ಕಾರ್ಖಾನೆಗಳು ಸ್ಥಗಿತಗೊಂಡು, ನಷ್ಟವಾಗುತ್ತಿದೆ. ಅದರಲ್ಲೂ ಕಾರ್ಮಿಕರಿಗೆ ಉದ್ಯೋಗವಿಲ್ಲದೆ ತೊಂದರೆಯಾಗಿದೆ’ ಎನ್ನುತ್ತಾರೆ ಮಂಗಳೂರಿನ ಸಾವರಿನ್‌ ಟೈಲ್‌ ವರ್ಕ್ಸ್‌ನ ವ್ಯವಸ್ಥಾಪಕ ಸುರೇಂದ್ರನಾಥ್‌.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25 ವರ್ಷಗಳ ಹಿಂದೆ 36 ಹೆಂಚು ಕಾರ್ಖಾನೆಗಳಿದ್ದವು. ಕಚ್ಚಾವಸ್ತು, ಮಾರುಕಟ್ಟೆ ಮತ್ತು ಕಾರ್ಮಿಕರ ಸಮಸ್ಯೆಯಿಂದಾಗಿ ಒಂದೊಂದೇ ಬಾಗಿಲು ಹಾಕಿವೆ. ಇಂದು ಜಿಲ್ಲೆಯಲ್ಲಿ ಕೇವಲ ಐದು ಕಾರ್ಖಾನೆಗಳು ನಡೆಯುತ್ತಿವೆ. ಲಾಕ್‌ಡೌನ್‌ನಿಂದ ಹೆಂಚು ಕಾರ್ಖಾನೆಗಳಿಗೆ ಸ್ವಲ್ಪಮಟ್ಟಿನ ತೊಂದರೆಯಾಗಿದೆ ನಿಜ. ಆದರೆ, ಇತರೆ ಸಮಸ್ಯೆಗಳೇ ಕಾರ್ಖಾನೆಗಳಿಗೆ ಬಾಗಿಲು ಹಾಕಿಸುತ್ತಿವೆ’ ಎನ್ನುತ್ತಾರೆ ಅವರು.

ಇವನ್ನೂ ಓದಿ
ಒಳನೋಟ: ಕೈಗಾರಿಕೆಗಳಿಗೆ ಪೆಟ್ಟು ನೀಡಿದ ಕೋವಿಡ್‌ ಎರಡನೇ ಅಲೆ; ಉತ್ಪಾದನೆ ಸ್ಥಗಿತ
ಒಳನೋಟ: ಲಾಕ್‌ಡೌನ್‌ ಪರಿಣಾಮ; ನೆಲಕಚ್ಚಿದ ಗೊಂಬೆ ಉದ್ಯಮ
ಒಳನೋಟ: ಲಾಕ್‌ಡೌನ್ ಕಾರಣ ಕಾರ್ಮಿಕರ ಕೊರತೆ; ಸಿಮೆಂಟ್ ಉತ್ಪಾದನೆ ಶೇ 50ರಷ್ಟು ಕಡಿತ
ಒಳನೋಟ: ಗಾರ್ಮೆಂಟ್ಸ್‌ ಉದ್ಯಮಕ್ಕೆ ಕೋವಿಡ್‌ ಬರೆ
ಒಳನೋಟ: ಜೀವ ಉಳಿಸಲೆಂದು ಜಾರಿಗೊಳಿಸಿದ ಲಾಕ್‌ಡೌನ್‌ ಉದ್ಯಮಕ್ಕೆ ಉರುಳು
ಒಳನೋಟ: ಆಟೊಮೊಬೈಲ್ ಉದ್ಯಮಕ್ಕೆ ಲಾಕ್‌ಡೌನ್‌ ಪೆಟ್ಟು
ಒಳನೋಟ: ಗಣಿ ಚಟುವಟಿಕೆ ಸದ್ಯ ನಿರಾಳ; ಭವಿಷ್ಯದ ಬಗ್ಗೆ ಕಳವಳ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು