ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ – ಆಟವಿಲ್ಲ, ಶಿಬಿರವಿಲ್ಲ; ನಿರ್ವಹಣೆಯ ಹೊರೆ!

Last Updated 17 ಜುಲೈ 2021, 21:07 IST
ಅಕ್ಷರ ಗಾತ್ರ

ಮೈಸೂರು: ಶಿಬಿರವಿಲ್ಲ, ಆಟೋಟವಿಲ್ಲ. ಆದರೆ, ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಈಜುಕೊಳಗಳನ್ನು ನಿತ್ಯ ಸ್ವಚ್ಛಗೊಳಿಸಲೇಬೇಕು. ವಿದ್ಯುತ್‌, ನೀರಿನ ಬಿಲ್‌ ಪಾವತಿಸಲೇಬೇಕು. ಕೋಚ್‌, ಭದ್ರತಾ ಹಾಗೂ ನಿರ್ವಹಣಾ ಸಿಬ್ಬಂದಿಗೆ ಸಂಬಳ ನೀಡಲೇಬೇಕು...

ಕೊರೊನಾ –ಲಾಕ್‌ಡೌನ್‌ ಪರಿಣಾಮ ಒಂದೂವರೆ ವರ್ಷದಿಂದ ಕ್ರೀಡಾಕೂಟಗಳು ಸರಿಯಾಗಿ ನಡೆದಿಲ್ಲ. ತರಬೇತಿ ನೀಡಲು, ಶಿಬಿರ ನಡೆಸಲು ರಾಜ್ಯದ ಹಲವು ಕ್ಲಬ್‌ಗಳು, ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಗೆ ಸಾಧ್ಯವಾಗಿಲ್ಲ. ಕ್ರೀಡಾ ಇಲಾಖೆಯ ಹಲವು ಕ್ರೀಡಾಂಗಣಗಳು ಪಾಳು ಬಿದ್ದಿವೆ. ಹಲವು ಸಿಬ್ಬಂದಿ ಹಾಗೂ ಕೋಚ್‌ಗಳು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಶಿಬಿರ ಆಯೋಜನೆ ಮೂಲಕ ಕ್ರೀಡಾ ತರಬೇತಿ ಕೇಂದ್ರಗಳಿಗೆ, ಕ್ಲಬ್‌ಗಳಿಗೆ, ಸಂಸ್ಥೆಗಳಿಗೆ ದೊಡ್ಡ ಮಟ್ಟದಲ್ಲಿ ಆದಾಯ ಲಭಿಸುತ್ತದೆ. ಅದರಿಂದಲೇ ವರ್ಷಪೂರ್ತಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಬೇಸಿಗೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆಯೂ ಇರುವ ಕಾರಣ ತರಬೇತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಾರೆ. ದುರದೃಷ್ಟಕರ ಎಂದರೆ ಕಳೆದ ಎರಡೂ ಬೇಸಿಗೆಗಳಲ್ಲಿ ಕೋವಿಡ್‌ ನಿರ್ಬಂಧಗಳ ಕಾರಣ ತರಬೇತಿಗೆ ತಡೆ ಬಿದ್ದಿತ್ತು.

ಮೈಸೂರಿನ ಜೆ.ಪಿ.ನಗರದಲ್ಲಿರುವ ಈಜುಕೊಳದ ಪರಿಸ್ಥಿತಿಯನ್ನೇ ಗಮನಿಸಿ. ಪಾಲಿಕೆಯು ಇದರ ನಿರ್ವಹಣೆಯನ್ನು 30 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಿದೆ. ಆದರೆ, ಲಾಕ್‌ಡೌನ್‌ ವೇಳೆ ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗದೆ ಪಾಚಿ ಬೆಳೆದು ಕೊಂಡಿದೆ. ‘ಬೇಸಿಗೆಯ ನಾಲ್ಕು ತಿಂಗಳಲ್ಲಿ ದುಡಿದ ಹಣದಿಂದ ವರ್ಷವಿಡೀ ಈಜುಕೊಳ ನಿರ್ವಹಿಸುತ್ತಿದ್ದೆವು. ಆದರೆ, ಕೋವಿಡ್‌ನಿಂದಾಗಿ ನಿರ್ವಹಣೆಯದ್ದೇ ದೊಡ್ಡ ಸಮಸ್ಯೆಯಾಗಿದೆ. ಈಜುಕೊಳಕ್ಕೆ ಸದಾ ನೀರು ಹರಿಸುತ್ತಲೇ ಇರಬೇಕು. ಇಲ್ಲದಿದ್ದರೆ ಟೈಲ್ಸ್‌ ಬಿರುಕು ಬಿಡುತ್ತವೆ, ಪೈಪ್‌ಗಳ ಒಳಗೆ ಕಸ ಸಂಗ್ರಹವಾಗುತ್ತದೆ. ಚೆನ್ನಾಗಿ ಇಟ್ಟುಕೊಳ್ಳಬೇಕೆಂದರೆ ನೀರು ಹರಿಸಬೇಕು. ಅದಕ್ಕೆ ನೀರಿನ ಬಿಲ್‌, ವಿದ್ಯುತ್‌ ಬಿಲ್‌ ಪಾವತಿ ಜೊತೆಗೆ ಸಿಬ್ಬಂದಿಗೂ ಸಂಬಳ ಕೊಡಬೇಕು. ಯಾರೂ ಬರದಿದ್ದರೆ ಈ ಹಣ ಹೊಂದಿಸುವುದು ಹೇಗೆ’ ಎಂದು ಈಜು ಕೋಚ್‌ ಎಸ್‌.ಸುಂದರೇಶ್ ಪ್ರಶ್ನಿಸುತ್ತಾರೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮ ಕ್ರೀಡಾ ಸೌಲಭ್ಯಗಳಿವೆ. ವಿವಿಧ ಕ್ರೀಡಾ ಸಂಸ್ಥೆಗಳಿಗೆ ಕ್ರೀಡಾಕೂಟ ಆಯೋಜನೆಗೆ, ಶಿಬಿರ ನಡೆಸಲು ಬಾಡಿಗೆ ನೀಡುತ್ತಿರುತ್ತಾರೆ. ಈಜುಕೊಳದಿಂದಲೇ ವರ್ಷಕ್ಕೆ ₹ 80 ಲಕ್ಷ ಆದಾಯ ಸಿಗುತ್ತದೆ. ಆದರೆ, ಒಂದೂವರೆ ವರ್ಷದಿಂದ ಬಳಕೆ ಆಗಿಲ್ಲ. ನಿರ್ವಹಣೆಗೆ ವೆಚ್ಚ ಭರಿಸಬೇಕಿದೆ, ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿರುವ ಸಿಬ್ಬಂದಿಗೆ ಕೆಲಸವಿಲ್ಲದಿದ್ದರೂ ವೇತನ ನೀಡಬೇಕಾಗಿದೆ.

‘ಈಗ ಆದಾಯವೂ ಇಲ್ಲ; ಬರೀ ಖರ್ಚು. ಕ್ರೀಡಾ ಉಪಕರಣಗಳನ್ನು ಬಳಸುತ್ತಿದ್ದರೆ ಚೆನ್ನಾಗಿರುತ್ತವೆ. ಇಲ್ಲದಿದ್ದರೆ ತುಕ್ಕು ಹಿಡಿಯುತ್ತವೆ, ದೂಳು ಹಿಡಿದು ಹಾಳಾಗುತ್ತವೆ’ ಎಂದು ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.‍ಪಿ.ಕೃಷ್ಣಯ್ಯ ಹೇಳುತ್ತಾರೆ.

ಗ್ರಾಮೀಣ ಭಾಗದಲ್ಲಿ ಕ್ರೀಡಾ ಇಲಾಖೆಯ ಕ್ರೀಡಾಂಗಣಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಅಲ್ಲಿ ಕಳೆ, ಪಾಚಿ ಬೆಳೆದಿದೆ.

‘ಕ್ರೀಡಾಂಗಣದ ಸ್ವಚ್ಛತೆ ಹಾಗೂ ರಕ್ಷಣೆಯೇ ಸವಾಲಾಗಿದೆ. ಮೈಸೂರಿನ ಚಾಮುಂಡಿವಿಹಾರದಲ್ಲಿರುವ ಕ್ರೀಡಾ ಇಲಾಖೆಯ ಈಜುಕೊಳವನ್ನು ಖಾಸಗಿಯವರಿಗೆ ₹ 28 ಲಕ್ಷಕ್ಕೆ ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಕೋವಿಡ್‌ ಕಾರಣ ಅವರಿಗೆ ನಷ್ಟವಾಗಿದೆ. ಹೀಗಾಗಿ, ಹೆಚ್ಚುವರಿಯಾಗಿ 3 ತಿಂಗಳು ಗುತ್ತಿಗೆ ಅವಧಿ ವಿಸ್ತರಿಸಬೇಕಾಗಿದೆ’ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್‌ ಹೇಳಿದರು.

ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮೈದಾನವು ಅಧ್ವಾನದ ಸ್ಥಿತಿಗೆ ತಲುಪಿದೆ. ನಿರ್ವಹಣೆಯ ಕೊರತೆಯಿಂದಾಗಿ, ನಿತ್ಯ ವಾಯುವಿಹಾರ‌ ನಡೆಸುವವರಿಗೆ ಹಾಗೂ ಅಭ್ಯಾಸ ನಡೆಸುವ ಕ್ರೀಡಾಪಟುಗಳಿಗೆ ಅಡ್ಡಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT