ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕೋವಿಡ್–19 ಫಲಿತಾಂಶದ ನಿರೀಕ್ಷೆಯ ಭಾರಕ್ಕೆ ಕುಸಿಯುವ ಮನೋಬಲ

Last Updated 22 ಮೇ 2021, 19:31 IST
ಅಕ್ಷರ ಗಾತ್ರ

ದಾವಣಗೆರೆ: ಉಸಿರಾಟದ ತೊಂದರೆ ಕಾಣಿಸಿಕೊಂಡ 76 ವರ್ಷದ ವೃದ್ಧರೊಬ್ಬರಿಗೆ ರ‍್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ನಲ್ಲಿ ‘ಕೋವಿಡ್‌ ಪಾಸಿಟಿವ್‌’ ಎಂಬ ವರದಿ ಬಂತು. ಪ್ರಾಥಮಿಕ ಸಂಪರ್ಕಿತರಾಗಿದ್ದ ಅವರ ಪತ್ನಿಯ ಗಂಟಲಿನ ದ್ರವದ ಮಾದರಿಯನ್ನು ಅಂದೇ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರೂ ‘ನೆಗೆಟಿವ್‌’ ಎಂದುಆರ್‌ಟಿಪಿಸಿಆರ್‌ ವರದಿ ಬಂದಿದ್ದು ಎಂಟು ದಿನಗಳ ಬಳಿಕ. ಅದೂ ಪತಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಮೇಲೆ ಮೊಬೈಲ್‌ಗೆ ಸಂದೇಶ ಬಂದಿತ್ತು!

ಇದು ದಾವಣಗೆರೆ ಜಿಲ್ಲೆಯ ಉದಾಹರಣೆಯಷ್ಟೇ ಅಲ್ಲ; ಬಹುತೇಕ ಕಡೆ ‘ಪಾಸಿಟಿವ್‌’ ಪ್ರಕರಣಗಳ ವರದಿಯು ಎರಡು–ಮೂರು ದಿನಗಳಲ್ಲಿ ಬರುತ್ತಿವೆ. ಆದರೆ, ‘ನೆಗೆಟಿವ್‌’ ವರದಿಯ ಸಂದೇಶ ಬರಲು ವಿಳಂಬವಾಗುತ್ತಿದೆ. ಇದರಿಂದಾಗಿ ಫಲಿತಾಂಶಕ್ಕಾಗಿ ಕಾಯುತ್ತಿರುವ ರೋಗಿಗಳ ಮನೋಬಲ ನಿರೀಕ್ಷೆಯ ಭಾರಕ್ಕೆ ದಿನೇ ದಿನೇ ಕುಸಿಯುತ್ತಿದೆ.

ದಾವಣಗೆರೆಯಲ್ಲಿ ಪಾಸಿಟಿವ್‌ ಪ್ರಕರಣಗಳು ಗೊತ್ತಾಗಲು ಎರಡು–ಮೂರು ದಿನಗಳಾಗುತ್ತಿದ್ದವು. ಗಂಟಲು ದ್ರವ ಮಾದರಿ ತೆಗೆದುಕೊಳ್ಳುವಾಗಲೇ ಆರೋಗ್ಯದ ಸ್ಥಿತಿ ಚೆನ್ನಾಗಿದ್ದರೆ ‘ಬಿ’ ಎಂದೂ, ಆರೋಗ್ಯದಲ್ಲಿ ಏರುಪೇರಾಗಿದ್ದರೆ ‘ಎ’ ಎಂದೂ ವಿಂಗಡಿಸಲಾಗುತ್ತಿತ್ತು. ‘ಎ’ ವಿಭಾಗದ್ದನ್ನು ಮೊದಲು ಪರೀಕ್ಷೆಗೊಳಪಡಿಸಲಾಗುತ್ತಿತ್ತು. ಈಗ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಹೊಸ ಆರ್‌ಟಿಪಿಸಿಆರ್‌ ಯಂತ್ರ ಬಂದಿದೆ. ಒಂದೇ ಬಾರಿಗೆ 1,600 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ. 24ರಿಂದ 30 ಗಂಟೆಗಳ ಒಳಗೆ ಪಾಸಿಟಿವ್‌ ಇರುವವರಿಗೆ ಮಾಹಿತಿ ಹೋಗುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಆರೋಗ್ಯ ಇಲಾಖೆಯು ಕೋವಿಡ್‌ ಪರೀಕ್ಷೆ ನಡೆಸುವ ಪ್ರಮಾಣವನ್ನು ಈಗ ಕಡಿಮೆಗೊಳಿಸಿದೆ. ಸೋಂಕಿನ ಲಕ್ಷಣ ಇಲ್ಲದವರು ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬಂದರೆ ‘ನಿಮಗೆ ಅಗತ್ಯವಿಲ್ಲ’ ಎಂದೂ ಹೇಳಿ ಕಳುಹಿಸಲಾಗುತ್ತಿದೆ. ಕೆಲವೆಡೆ ₹ 1,200 ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವ ಅನಿವಾರ್ಯ ಎದುರಾಗಿದೆ.

ಪರೀಕ್ಷೆಗೆ ಹಿಂದೇಟು: ಗ್ರಾಮೀಣ ಪ್ರದೇಶಗಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡವರೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಆರೋಗ್ಯ ಇಲಾಖೆಯೂ ಪರೀಕ್ಷೆಯ ಪ್ರಮಾಣ ಕಡಿಮೆಗೊಳಿಸಿರುವುದರಿಂದ ಹಳ್ಳಿಗಳಲ್ಲಿ ರೋಗಿಗಳು ಸೋಂಕುವಾಹಕರಾಗುತ್ತಿದ್ದಾರೆ. ಹೀಗಾಗಿ ಹಳ್ಳಿಗಳಲ್ಲೂ ಕೋವಿಡ್‌ ಪ್ರಕರಣಗಳು ಹೆಚ್ಚತೊಡಗಿವೆ. ವರದಿ ಬರಲು ವಿಳಂಬವಾಗುತ್ತಿರುವುದೂ ಸೋಂಕು ಹರಡಲು ಕಾರಣವಾಗಿದೆ.

ಬೆಳಗಾವಿಯಂತಹ ದೊಡ್ಡ ಜಿಲ್ಲೆಯಲ್ಲಿ ಆರ್‌ಟಿಪಿಸಿಆರ್‌ ವರದಿ ಬರಲು ಐದಾರು ದಿನಗಳಾಗುತ್ತಿದೆ. ದಿನಕ್ಕೆ ಸರಾಸರಿ ಆರು ಸಾವಿರ ಮಾದರಿಗಳನ್ನು ಪರೀಕ್ಷೆಗೊಳಪಡಿಸುತ್ತಿದ್ದ ಈ ಜಿಲ್ಲೆಯಲ್ಲಿ ಈಗ 2,600 ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ನಿತ್ಯ 1,055 ಮಾದರಿಗಳನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದವರು ಫಲಿತಾಂಶಕ್ಕೆ ಸರಾಸರಿ ಐದು ದಿನ ಕಾಯಬೇಕಾಗಿದೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡ ಗ್ರಾಮಗಳ ಜನರು ಸೋಂಕು ಬಾಧಿಸುತ್ತಿದ್ದರೂ ಚಿಕಿತ್ಸೆಗಾಗಿ ಫಲಿತಾಂಶ ಬರುವವರೆಗೆ ಕಾಯುವ ಅನಿವಾರ್ಯ ಇದೆ. ಸೋಂಕು ಕಾಣಿಸಿಕೊಂಡವರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಕೋವಿಡ್ ಆರೈಕೆ ಕೇಂದ್ರಗಳಿಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ.

ಶಿವಮೊಗ್ಗದಲ್ಲಿ ಮೆಗ್ಗಾನ್ ಹಾಗೂ ಪರಿಮಾಣು ಕ್ರಿಮಿ ಪ್ರಯೋಗಶಾಲೆಯಲ್ಲಿ ಪರೀಕ್ಷೆ ಮಾಡಲಾಗುತ್ತಿದ್ದು, ಕೆಲ ಬಾರಿ ವರದಿ ಬರಲು ಮೂರು–ನಾಲ್ಕು ದಿನಗಳಾಗುತ್ತವೆ. ಇನ್ನೂ ಎರಡು ಪ್ರಯೋಗಾಲಯಗಳನ್ನು ನಿರ್ಮಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಲಾಕ್‌ಡೌನ್‌ಗಿಂತ ಮುಂಚೆ ನಿತ್ಯ ಸರಾಸರಿ 5 ಸಾವಿರ ಜನರಿಗೆ ಕೋವಿಡ್‌ ತಪಾಸಣೆ ಮಾಡಲಾಗುತ್ತಿತ್ತು. ಈಗ 2,000ಕ್ಕೆ ಇಳಿಸಲಾಗಿದೆ. ಸರಾಸರಿ ಮೂರು ದಿನಗಳ ಬಳಿಕ ಫಲಿತಾಂಶ ಬರುತ್ತಿದೆ.

ಮೈಸೂರಿನಲ್ಲಿ ಪರೀಕ್ಷೆಯ ಪ್ರಮಾಣವನ್ನು ಅರ್ಧಷ್ಟು ಕಡಿಮೆಗೊಳಿಸಲಾಗಿದೆ. ಮೂರ್ನಾಲ್ಕು ದಿನಗಳ ಬಳಿಕ ವರದಿ ಕೈಸೇರುತ್ತಿದೆ. ಹಳ್ಳಿಗಳಲ್ಲಿ ಹಾಗೂ ಹೋಬಳಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಸದೇ ಇರುವುದರಿಂದ ತಾಲ್ಲೂಕು ಕೇಂದ್ರಗಳಿಗೇ ಬರಬೇಕಾಗಿದೆ. ಹಾಸನ ಜಿಲ್ಲೆಯಲ್ಲಿ ದಿನಾಲು ಸರಾಸರಿ ಮೂರು ಸಾವಿರ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದ್ದು, ವರದಿ ಬರಲು ಐದು ದಿನಗಳಾಗುತ್ತಿವೆ. ಮಂಡ್ಯ, ಕೊಡಗು ಜಿಲ್ಲೆಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗ್ರಾಮ ಮಟ್ಟದ ಕಾರ್ಯಪಡೆಗಳು ಸಕ್ರಿಯವಾಗಿವೆ. ರೋಗ ಲಕ್ಷಣ ಇರುವವರು, ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ಗರಿಷ್ಠ 48 ಗಂಟೆಯೊಳಗೆ ವರದಿ ಬರುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೀಕ್ಷಾ ವರದಿ 36 ಗಂಟೆಯೊಳಗೆ ಲಭಿಸುತ್ತಿದೆ. ಆದರೆ ಗ್ರಾಮೀಣ ಪ್ರದೇಶದ ಜನ ರೋಗ ಲಕ್ಷಣವಿದ್ದರೂ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಕೋವಿಡ್‌ ಕೇಂದ್ರಕ್ಕೆ ಬರದೇ, ಸ್ಥಳೀಯವಾಗಿಯೇ ಔಷಧ ಪಡೆಯಲು ಮುಂದಾಗುತ್ತಿರುವುದರಿಂದ ಹಲವು ಹಳ್ಳಿಗಳಲ್ಲಿ ಕೋವಿಡ್‌ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

ಹುಬ್ಬಳ್ಳಿಯಲ್ಲಿ ಸಾಮಾನ್ಯವಾಗಿ ಮೂರು ದಿನಗಳಲ್ಲಿ ಫಲಿತಾಂಶ ಬರುತ್ತಿವೆ. ಕೋವಿಡ್ ಕೇರ್ ಸೆಂಟರ್ ತಾಲ್ಲೂಕು ಕೇಂದ್ರದಲ್ಲಿ ಮಾತ್ರವಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸೆ ಲಭಿಸುತ್ತಿಲ್ಲ. ಫಲಿತಾಂಶ ಬರುವುದು ವಿಳಂಬವಾಗಲಿದೆ ಎಂಬ ಕಾರಣಕ್ಕೆ ರೋಗಿಗಳು ‘ಸಿಟಿ ಸ್ಕ್ಯಾನ್‌’ ಮೊರೆಹೋಗುತ್ತಿದ್ದಾರೆ.

ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರೆಗಳು, ಮೆಡಿಸಿನ್‌ ಕಿಟ್‌ ಲಭ್ಯವಿಲ್ಲ ಎಂಬ ದೂರುಗಳೂ ಕೇಳಿಬರುತ್ತಿವೆ. ಕೋವಿಡ್‌ ಫಲಿತಾಂಶ ಬರುವವರೆಗೆ ಕಾಯದೇ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಕೆಲವೆಡೆ ಹಾಸಿಗೆ ಸಿಗುವುದೇ ಸಮಸ್ಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT