ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕೋವಿಡ್ ನಡುವೆ ರೈತರ ಯಶೋಗಾಥೆ, ಹೊಸ ದಾರಿಗಳ ಅನ್ವೇಷಣೆ

ಕಳೆದ ವರ್ಷದ ಲಾಕ್‌ಡೌನ್ ಕಲಿಸಿದ ಪಾಠ
Last Updated 15 ಮೇ 2021, 20:23 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್‌ ನೆರಳಲ್ಲಿ ‘ಭೂಮಿಪುತ್ರ’ರ ಅಳಲಿನ ಕಡಲಿನಲ್ಲಿ ನಗೆಯ ಹಾಯಿದೋಣಿಗಳೂ ಕಾಣುತ್ತಿವೆ.

ಕಳೆದ ವರ್ಷ ಸಂಪೂರ್ಣ ಲಾಕ್‌ಡೌನ್ ಆದಾಗ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ದಾಳಿಂಬೆ ತರಹದ ಹಣ್ಣುಗಳ ಫಸಲು ತುಂಬಾ ಚೆನ್ನಾಗಿತ್ತು. ರಫ್ತಾಗುವ ಬಣ್ಣದ ಕ್ಯಾಪ್ಸಿಕಂನಿಂದ ಹಿಡಿದು ಬ್ರೊಕೋಲಿ, ಲೆಟ್ಯೂಸ್ ಮೊದಲಾವುಗಳೂ ಕಣ್ಣುಕೋರೈಸುವಂತಿ
ದ್ದವು. ಮಾರುಕಟ್ಟೆ ಪೂರ್ಣ ಬಂದ್‌ ಆದದ್ದೇ ರೈತರು ಹತಾಶರಾಗಿದ್ದರು. ಬೆಳೆಯನ್ನೆಲ್ಲ ಬೀದಿಗೆ ಸುರಿದು ಪ್ರತಿಭಟಿಸಿದರು. ಈಗ ಟೊಮೆಟೊ ಹಾಗೂ ಹೂ ಬೆಳೆಗಾರರ ಸ್ಥಿತಿ ಹಲವೆಡೆ ಹೀಗೆಯೇ ಇದೆ. ಉಳಿದಂತೆ ಕಳೆದ ಸಲದಷ್ಟು ಆರ್ತನಾದ ಕೇಳಿಬರುತ್ತಿಲ್ಲ.

ಹೋದ ವರ್ಷ ಆಯಾ ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡು, ಸ್ಥಳೀಯ ರೈತ ಉತ್ಪಾದಕ ಕಂಪನಿ(ಎಫ್‌ಪಿಒ)ಗಳನ್ನು ಬಳಸಿಕೊಂಡು, ಎಲ್ಲ ರೈತರಿಂದ ಫಸಲು ಖರೀದಿಸಿ, ಗ್ರಾಹಕರ ಮನೆ ಮನೆಗಳಿಗೆ ತಲುಪಿಸುವ ಕೆಲಸ ಮಾಡಿದವು. ಅಲ್ಲೇ ಬೆಳೆದ ಹಣ್ಣು–ತರಕಾರಿ ಆ ಜಿಲ್ಲೆ ಬಿಟ್ಟು ಆಚೆಗೆ ಹೋಗದಂತೆ ಕಡಿವಾಣ ಹಾಕಿದ ಪ್ರಯೋಗ ಕೊಪ್ಪಳದಲ್ಲಿ ಯಶಸ್ವಿಯಾಗಿತ್ತು. ಕೊಡಗು, ಮೈಸೂರಿನ ಕೆಲವು ಭಾಗಗಳಲ್ಲೂ ಈ ಮಾರುಕಟ್ಟೆ ವಿಧಾನಗಳನ್ನು ಅಳವಡಿಕೊಂಡು ಗೆದ್ದ ಕಥನಗಳು ವರದಿಯಾದವು. ಮುಳಬಾಗಿಲು ತಾಲ್ಲೂಕು ಗ್ರಾಮ ವಿಕಾಸ ಸಂಸ್ಥೆ ಟೊಮೆಟೊವನ್ನು ಹೆಚ್ಚಿ, ಒಣಗಿಸಿ, ಆರು ತಿಂಗಳು ಇಟ್ಟು ಬಳಸುವಂತಹ ವಿಧಾನವನ್ನು ಗ್ರಾಮಸ್ಥರ ಸಹಯೋಗದಲ್ಲಿ ಕಂಡುಕೊಂಡಿತ್ತು. ತೀರ್ಥಹಳ್ಳಿಯಲ್ಲಿ ಕುಂಬಳ ಬೆಳೆದವರು ಆಗ್ರಾ ಪೇಟಾ ಮಾಡುವ ವಿಧಾನ ಅಳವಡಿಸಿಕೊಂಡು ಭರವಸೆ ಮೂಡಿಸಿದ್ದರು. ಉಡುಪಿಯ ಸುರೇಶ್ ನಾಯಕ್ ಹರಿವೆ ದೊಡ್ಡ ಪ್ರಮಾಣದಲ್ಲಿ ಬೆಳೆದ ತರಕಾರಿಗೆ ತಮ್ಮ ಹೊಲದ ಬದಿಯಲ್ಲೇ ಮಾರುಕಟ್ಟೆ ಸೃಷ್ಟಿಸಿಕೊಂಡ ಯಶೋಕಥನದ ಮಾದರಿ ಈಗಲೂ ಮುಂದುವರಿದಿದೆ.

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳ ಬಳಿಯೇ ಸಂತೆ ನಡೆಸಲು ಅವಕಾಶ ನೀಡಿದ್ದೂ ಫಲ ಕೊಟ್ಟಿತ್ತು. ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ರೈತ ಉತ್ಪಾದಕ ಕಂಪನಿಗಳು ರೈತರಿಂದ ಬೆಳೆ ಖರೀದಿಸಿ, ಗ್ರಾಹಕರಿಗೆ ತಲುಪಿಸುವ ಮೂಲಕ ಉತ್ತಮ ಮಾರುಕಟ್ಟೆ ವಿಧಾನ ಅನುಸರಿಸಿದವು.

ಕೊಡಗಿನಲ್ಲಿ ಬೆಣ್ಣೆಹಣ್ಣು, ಗೆಣಸು ಬೆಳೆದವರು, ಮಂಡ್ಯದಲ್ಲಿ ಏಲಕ್ಕಿ ಬಾಳೆ ಬೆಳೆಗಾರರು ನಿರ್ದಿಷ್ಟ ಮಾರುಕಟ್ಟೆ ಇಲ್ಲದ ಕಾರಣ ಕಂಗಾಲಾಗಿದ್ದಾರೆ. ಹೀಗಿದ್ದೂ ಮಧ್ಯಾಹ್ನ 12ರವರೆಗೆ ಸ್ಥಳೀಯ ಮಾರುಕಟ್ಟೆ ತೆರೆಯಲು ಅವಕಾಶ ನೀಡಿರುವುದರಿಂದ ಸ್ಥಳೀಯವಾಗಿ ಸೊಪ್ಪು, ತರಕಾರಿ ಬೆಳೆಯುವವರಿಗೆ ಅನುಕೂಲವಾಗಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿಯ ರೈತ ಮಹಿಳೆ ಲಕ್ಷ್ಮಕ್ಕ ಮುಖ್ಯಮಂತ್ರಿ ಯಡಿ ಯೂರಪ್ಪ ಅವರಿಗೆ ಪತ್ರ ಬರೆದು, ತಮ್ಮ ಈರುಳ್ಳಿ ಬೆಳೆಯನ್ನು ರಕ್ಷಿಸುವಂತೆ ಮೊರೆಯಿಟ್ಟ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ‘ಪ್ರಜಾವಾಣಿ’ಯೂ ವರದಿ ಮಾಡಿತು. ಈ ವರದಿ ಬಂದಮೇಲೆ ಏಳೆಂಟು ಜನರಿಂದ ಅವರಿಗೆ ಪ್ರತಿಕ್ರಿಯೆ ಬಂದಿದೆ. ಕೆಲವರು ಬಂದು ಬೆಳೆಯನ್ನು ನೋಡಿಕೊಂಡು, ಮಾರುಕಟ್ಟೆ ಒದಗಿಸುವ ಭರವಸೆಯನ್ನೂ ಅವರಿಗೆ ನೀಡಿ ಹೋಗಿದ್ದಾರೆ.

ಚಿತ್ರದುರ್ಗದ ಸಿರಿಗೆರೆ ಮಾರ್ಗದ ಚಿಕ್ಕಬೆನ್ನೂರು ಗಡಿಯಲ್ಲಿ 13 ಎಕರೆಯಲ್ಲಿ ಮಾವಿನ ತೋಟ ಮಾಡಿರುವ ಮಹಾವೀರ್, ಆರು ಎಕರೆಯಲ್ಲಿ ಅವರು ಆಲ್ಫಾನ್ಸೊ ತಳಿಯ ಮಾವನ್ನು ಜೈವಿಕ ಪದ್ಧತಿಯಲ್ಲಿ ಬೆಳೆದಿದ್ದಾರೆ. ಹದಿನೈದು ವರ್ಷಗಳಿಂದ ಅವರು ಸತತವಾಗಿ ಪ್ರಯತ್ನ ಪಟ್ಟು, ತಮ್ಮ ಗ್ರಾಹಕರನ್ನು ತಾವೇ ಕಂಡುಕೊಂಡಿದ್ದಾರೆ. ‘ನ್ಯಾಚುರಲ್ ಫಾರ್ಮ್’ ಹೆಸರಿನ ಅವರ ಮಾಲಿಗೆ ಮುಂಬೈ, ಪುಣೆ, ಕೊಯಮತ್ತೂರು, ಚೆನ್ನೈ, ದೆಹಲಿ ಎಲ್ಲೆಡೆಯೂ ಗ್ರಾಹಕರು. ಕರ್ನಾಟಕದಲ್ಲಂತೂ ಹಲವೆಡೆಗಳಿಂದ ಅವರ ಮಾವಿಗೆ ಕಾಯಂ ಗಿರಾಕಿಗಳು ಬರುತ್ತಾರೆ.

‘ರೈಲಿನ ಮೂಲಕ ಸಾಗಣೆ ಸಾಧ್ಯವಿದೆ. ರೈತರೆಲ್ಲ ಹೀಗೆ ನೇರ ಮಾರುಕಟ್ಟೆ ಕಂಡುಕೊಂಡರೆ ಸಮಸ್ಯೆ ಇರುವುದಿಲ್ಲ. ಐದೂವರೆ ಕೆ.ಜಿ. ತೂಕದ ಸುಮಾರು 200 ಬಾಕ್ಸ್‌ಗಳಷ್ಟು ಮಾವು ಈ ಫಸಲಿನಿಂದ ಬಂದಿದೆ. ಎಲ್ಲವೂ ಮಾರಾಟವಾಗುವುದರಲ್ಲಿ ನನಗೇನೂ ಅನುಮಾನವಿಲ್ಲ’ ಎಂದು ಅವರು ಆಶಾವಾದಿಯಾಗುತ್ತಾರೆ.

ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು, ಬಸವಾಪಟ್ಟಣ ಸೇರಿ ಹಲವೆಡೆ ಮಾವು ಬೆಳೆಗೆ ಮಾರುಕಟ್ಟೆ ಇಲ್ಲದೇ ಮನೆಯಲ್ಲೇ ಕೊಳೆಯುತ್ತಿದೆ. ರೈತರಿಂದ ಮಾವು ತೋಪು ಗುತ್ತಿಗೆ ಪಡೆದ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಾವೀರ್ ಅವರ ಮಾದರಿ ಪರ್ಯಾಯವಾಗಿ ಕಾಣುತ್ತಿದೆ.

ಉಡುಪಿ, ಮಂಗಳೂರು ಸೇರಿ ಹಲವು ಜಿಲ್ಲೆಗಳ ದೇವಸ್ಥಾನಗಳಿಗೆ ಜಿಲ್ಲೆಯ ಸಾಂಬಾರು ಸೌತೆ ಸೇರಿ ತರಕಾರಿ ಬೆಳೆಗಳು ರವಾನೆಯಾಗುತ್ತಿದ್ದವು. ಈಗ ದೇವಾಲಯ ಮುಚ್ಚಿರುವ ಕಾರಣ ತರಕಾರಿಗೆ ಬೇಡಿಕೆ ಕಡಿಮೆಯಾಗಿದೆ ಎನ್ನುವುದು ಆಲೂರಿನ ರೈತ ಪರಮೇಶ್‌ ಅವರ ಬೇಸರ.

ಹರಪನಹಳ್ಳಿ ತಾಲ್ಲೂಕಿನಲ್ಲಿ ಟೊಮೆಟೊ ಹೆಚ್ಚಿನ ಇಳುವರಿ ಬರುತ್ತಿದೆ. ಆದರೆ ಮಾರುಕಟ್ಟೆ ಸಿಗದೆ ಕೊಳೆಯುತ್ತಿದೆ. ಕೆಲವರು ದೂರದ ಹೊಸಪೇಟೆ, ವಿಜಯಪುರದ ಕಡೆಗೆ ಆಟೊ, ಲಾರಿ ಮೂಲಕ ಸಾಗಿಸುತ್ತಿದ್ದಾರೆ.

ಕ್ಯಾಪ್ಸಿಕಂ ಮಾರಿದ್ದು ದಾವಣಗೆರೆ ತಾಲ್ಲೂಕಿನ ಮಿಟ್ಲಕಟ್ಟೆ ಸಮೀಪದ ಸತ್ಯನಾರಾಯಣ ಕ್ಯಾಂಪ್‌ ನಿವಾಸಿ ಆದರ್ಶಕುಮಾರ್‌ ಒಂದು ಎಕರೆ ಪ್ರದೇಶದಲ್ಲಿ ಪಾಲಿಹೌಸ್ ನಿರ್ಮಿಸಿ ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಳೆದು ಮಾರುಕಟ್ಟೆ ಇಲ್ಲದೇ ಸಂಕಷ್ಟ ಅನುಭವಿಸಿದ್ದರು. ಬಳಿಕ ‘ಕ್ಯಾಪ್ಸಿಕಂ ಡೋರ್ ಡೆಲಿವರಿ ಸಿಗಲಿದೆ’ ಎಂಬ ಮಾಹಿತಿಯನ್ನು ಮೊಬೈಲ್ ನಂಬರ್ ಸಮೇತ ತಮ್ಮ ಸ್ನೇಹಿತರ ನಂಬರ್‌ಗಳಿಗೆ ಫಾರ್ವಡ್ ಮಾಡಿ ಒಂದು ಕೆ.ಜಿಗೆ ₹ 50ರಂತೆ ಎರಡು ಕ್ವಿಂಟಲ್‌ ಮಾರಾಟ ಮಾಡಿ ನೆಮ್ಮದಿ ಕಂಡುಕೊಂಡರು.

ಸಂತೇಬೆನ್ನೂರು ಸಮೀಪದ ದೊಡ್ಡಬ್ಬಿಗೆರೆ ರೈತ ತಿಪ್ಪೇಸ್ವಾಮಿ ತಾವು ಬೆಳೆದ ಮಾವಿಗೆ ತಾವೇ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಅನಾನಸ್‌ ಬೆಳೆಯನ್ನು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿ ಆಯ್ಕೆ ಮಾಡಲಾಗಿದೆ. ಆದರೆ ಸ್ಥಳೀಯವಾಗಿ ಮಾರುಕಟ್ಟೆ ದೊರಕಿಸಲು ಸಾಧ್ಯವಾಗಿಲ್ಲ. ಈ ಬಾರಿ ಜಿಲ್ಲೆಯಲ್ಲಿ 2 ಸಾವಿರ ಹೆಕ್ಟೇರ್ ಅನಾನಸ್‌ ಬೆಳೆಯಲಾಗಿದೆ. ದೆಹಲಿ, ಪಂಜಾಬ್, ಹರಿಯಾಣ, ಮಹಾರಾಷ್ಟ್ರಗಳಿಗೆ ಸಾಗಣೆ ಮಾಡಲು ತೊಂದರೆಯಾಗಿಲ್ಲ. ಸ್ಥಳೀಯ ಜ್ಯೂಸ್‌ ಅಂಗಡಿಗಳು ಬಾಗಿಲು ಮುಚ್ಚಿದ ಕಾರಣ ಕೆಲವು ಬೆಳೆಗಾರರು ತೊಂದರೆ ಅನುಭವಿಸಿದ್ದಾರಷ್ಟೆ.

ಅಪಾರ್ಟ್‌ಮೆಂಟ್‌ಗೇ ಮಾರುಕಟ್ಟೆ: ಬೆಂಗಳೂರಿನ ವೈಟ್‌ಫೀಲ್ಡ್, ಸರ್ಜಾಪುರ ರಸ್ತೆ, ಬಾಗರಬಾವಿ ಕಡೆಗಳ 150–200 ಅಪಾರ್ಟ್‌ಮೆಂಟ್‌ಗಳ ಬಳಿ ಕಳೆದ ವರ್ಷದ ಲಾಕ್‌ಡೌನ್‌ನಲ್ಲಿ ರೈತರಿಂದ ನೇರವಾಗಿ ಮಾವು–ದ್ರಾಕ್ಷಿ ಮಾರಾಟ ಮಾಡಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದವರು ವ್ಯವಸ್ಥೆ ಮಾಡಿಕೊಟ್ಟಿದ್ದರು. ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಕೋಲಾರ, ರಾಣೆಬೆನ್ನೂರು, ಗದಗ, ಚಿತ್ರದುರ್ಗ, ಹಿರಿಯೂರಿನರೈತರು ನೇರವಾಗಿ ಮಾರಾಟ ಮಾಡಿ, ಎಂದಿಗಿಂತ ಹೆಚ್ಚು ಲಾಭವನ್ನು ಆಗ ಗಳಿಸಿದ್ದರು. ಈ ಸಲವೂ ಮಾವು ಮಾರಲು ಆಸಕ್ತಿ ಇರುವವರಿಂದ ಸಂಘ ಅರ್ಜಿ ಆಹ್ವಾನಿಸಿದೆ. ಇದುವರೆಗೆ 20 ರೈತರು ಅರ್ಜಿ ಹಾಕಿದ್ದಾರೆ.

ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎನ್. ಅಂಬರೀಷ್ ಈ ಯಶಸ್ವಿ ಮಾದರಿಯನ್ನು ಈ ಬಾರಿಯೂ ಜಾರಿಗೆ ತರಲು ಉತ್ಸುಕರಾಗಿದ್ದಾರೆ. ‘ಕೋವಿಡ್ ಎರಡನೇ ಅಲೆಗೆ ಹೆದರಿ ಕೆಲವು ರೈತರು ಹಳ್ಳಿಗಳಿಂದ ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ಈ ಸಲ ಕೇರಳ, ತಮಿಳುನಾಡಿನಿಂದ ದ್ರಾಕ್ಷಿಗೆ ಬೇಡಿಕೆ ಬಂದಿದ್ದರಿಂದ ಈ ಮಾರುಕಟ್ಟೆ ಬಗ್ಗೆ ಕೆಲವರು ಉದಾಸೀನ ತೋರಿದರು’ ಎಂದು ಅವರು ಹೇಳಿದರು.

ಅಪಾರ್ಟ್‌ಮೆಂಟ್‌ಗಳಿಗೆ ವರ್ಷಪೂರ್ತಿ ತರಕಾರಿ ಪೂರೈಸುವ ವ್ಯವಸ್ಥೆ ಮಾಡುವಂತೆ ಬೇಡಿಕೆ ಬಂದಿದ್ದು, ಒಂದೇ ಕಡೆ ವಿವಿಧ ತರಕಾರಿಗಳನ್ನು ಬೆಳೆಯುವ ಕುರಿತು ತರಬೇತಿಯನ್ನೂ ಅವರು ನೀಡಲು ಯೋಜಿಸುತ್ತಿದ್ದಾರೆ.

**
ಈ ಸಲ ಮಾರುಕಟ್ಟೆ ಸಿಗದೆ ಬೆಳೆ ಹಾನಿಯಾದವರಿಗೆ ಪರಿಹಾರ ನೀಡುವ ಕುರಿತು ಸರ್ಕಾರ ಯಾವುದೇ ಯೋಜನೆಯನ್ನು ಇನ್ನೂ ಜಾರಿಗೆ ತಂದಿಲ್ಲ. ಹಾನಿಯ ಪ್ರಮಾಣ ನೋಡಿಕೊಂಡು ಮುಂದೆ ನಿರ್ಧರಿಸಬಹುದು
-ಲಕ್ಷ್ಮೀಕಾಂತ ಬೋಮ್ಮನ್ನರ್, ಉಪನಿರ್ದೇಶಕ, ದಾವಣಗೆರೆ ತೋಟಗಾರಿಕಾ ಇಲಾಖೆ

**

ರೈತರಿಗೆ ಎಫ್‌ಪಿಒ ನೆರವು: ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಕಾರಣತೋಟಗಾರಿಕೆ ಬೆಳೆಗಳಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಹಲವು ಎಫ್‌ಪಿಒಗಳು ಬೀಜ, ಗೊಬ್ಬರ, ಕೃಷಿ ಉಪಕರಣ ಮಾರಾಟ ಮಾಡುವ ಮೂಲಕ ನೆರವಾಗುತ್ತಿವೆ.

ದಾವಣಗೆರೆ ತಾಲ್ಲೂಕಿನ ಹೆಬ್ಬಾಳದ ವಿಶ್ವಬಂಧು ತೋಟಗಾರಿಕಾ ಬೆಳೆಗಳ ರೈತ ಉತ್ಪಾದಕ ಕಂಪನಿಬೆಳೆಗಳಿಗೆ ಮಾರುಕಟ್ಟೆ ಒದಗಿಸುತ್ತಿದೆ. ಈ ಎಫ್‌ಪಿಒ ಪ್ರತಿದಿನ ಹಣ್ಣು, ತರಕಾರಿಗಳನ್ನು ರೈತರಿಂದ ಉತ್ತಮ ಬೆಲೆ ಖರೀದಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಕಲ್ಲಂಗಡಿ, ಮಾವು, ಟೊಮೆಟೊ, ಮೆಣಸಿನಕಾಯಿ ಸೇರಿ ಈ ಭಾಗದಲ್ಲಿ ಸಿಗುವ ತರಕಾರಿಗಳನ್ನು ಮಾರುಕಟ್ಟೆ ಬೆಲೆಗಿಂತ ₹ 1 ಹೆಚ್ಚಿಗೆ ನೀಡಿ ರೈತರಿಂದ ಖರೀದಿ ಮಾಡುತ್ತಿದೆ.

‘ವಿಶ್ವಬಂಧು ರೈತ ಉತ್ಪಾದಕ ಕಂಪನಿಯಲ್ಲಿ 1000ಕ್ಕೂ ಹೆಚ್ಚು ನೋಂದಾಯಿತ ರೈತರಿದ್ದು, 500ಕ್ಕೂ ಹೆಚ್ಚು ಜನ ರೈತರಿಗೆ ಈಗಾಗಲೇ ನೆರವು ನೀಡಿದ್ದೇವೆ. ಈ ಬಾರಿ ಮಾವು, ಕಲ್ಲಂಗಡಿಯನ್ನು ರೈತರಿಂದ ಹೆಚ್ಚು ಖರೀದಿಸಿದ್ದೇವೆ. ಲಾಭದ ನಿರೀಕ್ಷೆ ಇಲ್ಲ. ಕಂಪನಿ ನೌಕರರಿಗೆ ವೇತನ ಸಿಕ್ಕರೆ ಸಾಕು. ರೈತರಿಗೆ ನೆರವು ನೀಡುವುದು ಪ್ರಮುಖ ಉದ್ದೇಶ’ ಎನ್ನುತ್ತಾರೆ ಕಂಪನಿ ಸಿಇಒ ರುದ್ರೇಶ್‌.

-ಚಂದ್ರಶೇಖರ ಆರ್.

**

ರೈತರ ‘ಸಂಜೀವಿನಿ’ ಅಳದಂಗಡಿ ಕಂಪನಿ
ಮಂಗಳೂರು:
ಈ ಊರಿನ ಸುತ್ತಮುತ್ತಲ ರೈತರಿಗೆ ಉತ್ಪನ್ನಗಳ ಮಾರುಕಟ್ಟೆ ಹೇಗೆ ಎಂಬ ಚಿಂತೆಯಿಲ್ಲ. ಲಾಕ್‌ಡೌನ್, ಜನತಾ ಕರ್ಫ್ಯೂ ಸಂದರ್ಭದಲ್ಲಿ ಪೇಟೆ ಬಂದ್‌ ಆದರೂ, ಇವರು ಸರಾಗವಾಗಿ ಹಿತ್ತಲ ತರಕಾರಿ, ಗಾಣದ ಎಣ್ಣೆ, ಕೋಳಿಮಾಂಸವನ್ನು ಗ್ರಾಹಕರಿಗೆ ತಲುಪಿಸುತ್ತಾರೆ.

ಈ ರೈತರ ನೆರವಿಗೆ ಬಂದಿದ್ದು ಅಳದಂಗಡಿ ರೈತ ಉತ್ಪಾದಕರ ಕಂಪನಿ. ರೈತರೇ ಸೇರಿ ಕಟ್ಟಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಈ ಸಂಸ್ಥೆ, ಲಾಕ್‌ಡೌನ್‌ ಸಂದರ್ಭದಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. 15 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡ ಸಂಸ್ಥೆ 1,000 ಸದಸ್ಯರನ್ನು ಹೊಂದಿದೆ. ರೈತರು ಹೊಲದಲ್ಲಿ ಬೆಳೆದ ಯಾವುದೇ ಬೆಳೆ ತಂದರೂ, ಅದು ಕನಿಷ್ಠ ಪ್ರಮಾಣದಲ್ಲಿದ್ದರೂ ಕಂಪನಿ ಅವರ ನೆರವಿಗೆ ಬರುತ್ತದೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಉತ್ಪನ್ನಗಳಿಗೆ ದರ ನಿರ್ಧರಿಸುವವರು ಕೃಷಿಕರೇ.

‘ಮೊನ್ನೆಯಷ್ಟೇ ಮಂಗಳೂರಿನ ಗ್ರಾಹಕರೊಬ್ಬರು ತುರ್ತಾಗಿ 50 ಕೆ.ಜಿ. ತೆಂಗಿನ ಎಣ್ಣೆ ಬೇಕೆಂದು ಕರೆ ಮಾಡಿದರು. ರೈತರೊಬ್ಬರ ಬಳಿ ಇದ್ದ ಕೊಬ್ಬರಿ ತಂದು, ನಾವೇ ನಿಂತು, ಮಿಲ್‌ನಲ್ಲಿ ಎಣ್ಣೆ ಮಾಡಿಸಿ, ಶುದ್ಧ ತೆಂಗಿನೆಣ್ಣೆಯನ್ನು ಗ್ರಾಹಕರಿಗೆ ತಲುಪಿಸಿದೆವು. ಇನ್ನೊಬ್ಬರು 50 ಕೆ.ಜಿ ಬಾಳೆಹಣ್ಣು ಅಗತ್ಯವಿತ್ತು ಎಂದು ಬೇಡಿಕೆಯಿಟ್ಟರು. ನಮ್ಮ ಸದಸ್ಯರ ತೋಟದಲ್ಲಿ ಬೆಳೆದ ಬಾಳೆಕಾಯಿಯನ್ನು ಅವರಿಗೆ ಪೂರೈಕೆ ಮಾಡಿದೆವು. ಹೀಗೆ, ಬೇಡಿಕೆ ಮತ್ತು ಪೂರೈಕೆ ನಡುವಿನ ಸಾಧನವಾಗಿ ನಾವು ಕೆಲಸ ಮಾಡುತ್ತೇವೆ ಅಷ್ಟೆ’ ಎಂದು ದೃಷ್ಟಾಂತ ವಿವರಿಸಿದರು ಕಂಪನಿಯ ಅಧ್ಯಕ್ಷ ಹರಿದಾಸ್ ಎಸ್‌.ಎಂ.

10 ಸಾವಿರ ಕೋಳಿ ಮರಿಗಳನ್ನು ಸ್ವ ಸಹಾಯ ಸಂಘದ ಸದಸ್ಯರಿಗೆ ಸಾಕಲು ನೀಡಲಾಗಿದೆ. ಎಲ್ಲೆಡೆ ನಾಟಿ ಕೋಳಿ ಮಾಂಸಕ್ಕೆ ₹ 450 ದರವಿದ್ದರೆ, ಅಳದಂಗಡಿ ರೈತ ಉತ್ಪಾದಕ ಸಂಸ್ಥೆ ₹ 200ಕ್ಕೆ ಮಾರಾಟ ಮಾಡುತ್ತದೆ. ಜೇನು ಸಾಕಣೆಯನ್ನು ಕಾರ್ಮಿಕರಿಗೆ ಕಲಿಸುವ ಮೂಲಕ 10 ಕ್ವಿಂಟಲ್ ಜೇನುತುಪ್ಪಕ್ಕೆ ಮಾರುಕಟ್ಟೆ ಕಲ್ಪಿಸಿದೆ.

-ಸಂಧ್ಯಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT