ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರುತ್ತಿದೆ ‘ಏಲಕ್ಕಿ’ ಘಮಲು: ಸೂಕ್ತ ಬೆಲೆ ಸಿಗದೆ ಬೆಳೆಗಾರರ ಪರದಾಟ

Last Updated 18 ಫೆಬ್ರವರಿ 2023, 21:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಬಾರ ಪದಾರ್ಥಗಳ ‘ರಾಣಿ’ ಎಂದು ಗುರುತಿಸಿಕೊಂಡಿರುವ ಏಲಕ್ಕಿ ಬೆಳೆಯು ಕಾರ್ಮಿಕರ ಕೊರತೆ, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಇರುವುದು, ಸೂಕ್ತ ಬೆಲೆ ಸಿಗದ ಕಾರಣಗಳಿಂದಾಗಿ ರಾಜ್ಯದಿಂದ ನಿಧಾನವಾಗಿ ಕಣ್ಮರೆ ಆಗುತ್ತಿದೆ. ಹವಾಮಾನ ಬದಲಾವಣೆ ಹಾಗೂ ಕಟ್ಟೆ ರೋಗದಂತಹ ಸಮಸ್ಯೆಗಳು ಸಹ ಏಲಕ್ಕಿ ಬೆಳೆಯಲು ಬೆಳೆಗಾರರಲ್ಲಿ ನಿರಾಸಕ್ತಿ ಮೂಡಿಸುತ್ತಿವೆ.

ಭಾರತೀಯ ಸಂಬಾರ ಮಂಡಳಿಯಲ್ಲಿ ಇರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಸುಮಾರು 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದೆ. 2017–18 ರಿಂದ 2021–22ರವರೆಗಿನ ಅಂಕಿ–ಅಂಶಗಳನ್ನು ಗಮನಿಸಿದರೆ ಬೆಳೆ ಪ್ರದೇಶದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. 25,135 ಹೆಕ್ಟೇರ್‌ನಷ್ಟೇ ಇದೆ. ಆದರೆ ಉತ್ಪಾದನೆಯಲ್ಲಿ ಹೆಚ್ಚಳ ಆಗಿದೆ. 2020–21ರಲ್ಲಿ 579 ಟನ್‌ ಉತ್ಪಾದನೆ ಆಗಿತ್ತು. ಇದು 2021–22ರಲ್ಲಿ 697 ಟನ್ ಉತ್ಪಾದನೆ ಆಗಿರುವ ಅಂದಾಜು ಮಾಡಲಾಗಿದೆ. ಆದರೆ, ವಾಸ್ತವದಲ್ಲಿ ಏಲಕ್ಕಿ ಬೆಳೆಯುವ ಪ್ರದೇಶದ ವಿಸ್ತೀರ್ಣದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಸಾಂಪ್ರದಾಯಿಕವಾಗಿ ಏಲಕ್ಕಿ ಬೆಳೆಯುವ ಪ್ರದೇಶದ ವಿಸ್ತೀರ್ಣವು ಸದ್ಯ ಸುಮಾರು 5 ಸಾವಿರ ಹೆಕ್ಟೇರ್‌ನಷ್ಟು ಮಾತ್ರ ಇದೆ. ಈ ಕುರಿತು ಅಧಿಕೃತವಾಗಿ ಯಾವುದೇ ಸಮೀಕ್ಷೆ ನಡೆದಿಲ್ಲ. ತಜ್ಞರು ಅಂದಾಜು ಮಾಡುವ ಪ್ರಕಾರ, ‌ಕಳೆದ ದಶಕದಿಂದ ಏಲಕ್ಕಿ ಬೆಳೆಯುವ ಪ್ರಮಾಣ ಶೇ 30 ರಿಂದ 40 ರಷ್ಟು ಕಡಿಮೆಯಾಗುತ್ತಿದೆ.

ಮಾರುಕಟ್ಟೆಯ ಸವಾಲು: ಏಲಕ್ಕಿ ಬೆಳೆಯಲ್ಲಿ ಕೇರಳಕ್ಕೆ ದೇಶದಲ್ಲಿ ಅಗ್ರಸ್ಥಾನ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ರಾಜ್ಯದಲ್ಲಿ ಬೆಳೆಯುವ ಏಲಕ್ಕಿಯನ್ನು ಮಾರಾಟ ಮಾಡಲು ಸಮರ್ಪಕ ಮಾರುಕಟ್ಟೆ ವ್ಯವಸ್ಥೆಯೇ ಇಲ್ಲ. ಸರ್ಕಾರಿ ಇಲ್ಲವೇ ಸಹಕಾರಿ ರಂಗದ ಹಿಡಿತವಿಲ್ಲದೆ ಖಾಸಗಿಯವರು ಪ್ರತ್ಯೇಕವಾಗಿ ಹರಾಜು ನಡೆಸಿ ಬೆಳೆಗಾರರಿಂದ ಏಲಕ್ಕಿ ಖರೀದಿಸುತ್ತಿದ್ದಾರೆ. ಇದರಿಂದಾಗಿ ಸರಿಯಾದ ಬೆಲೆ ಸಿಗುತ್ತಿಲ್ಲ. ಅಲ್ಲದೆ, ಸ್ಥಳದಿಂದ ಸ್ಥಳಕ್ಕೆ ಬೆಲೆಯಲ್ಲಿಯೂ ವ್ಯತ್ಯಾಸ ಇದೆ.

ಕೋವಿಡ್‌ಗೆ ಮುನ್ನ, ಏಲಕ್ಕಿ ಮಾರುಕಟ್ಟೆ ಚೆನ್ನಾಗಿತ್ತು. ಲಾಕ್‌ಡೌನ್ ಪರಿಣಾಮ ಏಲಕ್ಕಿ ರಫ್ತು ಮಾಡಲಾಗಲಿಲ್ಲ. ಪ್ರವಾಸಿಗರೂ ಬರದೇ ಮಾರುಕಟ್ಟೆ ಕುಸಿದುಹೋಯಿತು. ಆಗಿನಿಂದ ಬೆಲೆಯೂ ಕಡಿಮೆಯಾಗಿ, ಬೆಳೆಗಾರರು ಏಲಕ್ಕಿ ಕೃಷಿಯಿಂದ ವಿಮುಖರಾಗಲು ಆರಂಭಿಸಿದರು.

ಕರ್ನಾಟಕದಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಏಲಕ್ಕಿ ಬೆಳೆಯಲಾಗುತ್ತಿದೆ. ಮಡಿಕೇರಿ ಭಾಗದಲ್ಲಿ ಎಕರೆಗೆ 50 ರಿಂದ 100 ಕೆಜಿ ಏಲಕ್ಕಿ ಬೆಳೆಯುವವರ ಸಂಖ್ಯೆಯ ರೈತರು ಹೆಚ್ಚು. ಕಡಿಮೆ ಹಿಡುವಳಿ, ಕಡಿಮೆ ಉತ್ಪಾದನೆಯಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ. ಹೀಗಾಗಿ ರೈತರು ಏಲಕ್ಕಿ ಗಿಡ ಕಿತ್ತುಹಾಕಿ ಅಡಿಕೆ, ಕಾಳುಮೆಣಸಿನತ್ತ ಮುಖಮಾಡಿದ್ದಾರೆ.

ಮನೆ ಅಳತೆಗೆ ಸಣ್ಣ ಪ್ರಮಾಣದಲ್ಲಿ ಕೆಲವು ರೈತರು ಏಲಕ್ಕಿ ಬೆಳೆಯುತ್ತಿದ್ದು, ಉತ್ತಮ ಇಳುವರಿಯನ್ನೂ ಪಡೆಯುತ್ತಿದ್ದಾರೆ. ಆದರೆ, ಅವರಿಗೂ ಮಾರುಕಟ್ಟೆ ಸಮಸ್ಯೆ, ಬೆಲೆ ಕುಸಿತದ ಸಮಸ್ಯೆ ಕಾಡುತ್ತಿದೆ.

ಸಾಂಪ್ರದಾಯಿಕ ಪ್ರದೇಶಗಳಲ್ಲದೆ ಹೊಸ ಭಾಗಗಳಲ್ಲಿಯೂ ಏಲಕ್ಕಿ ಬೆಳೆಯಲು ರೈತರು ಆಸಕ್ತಿ ತೋರಿಸುತ್ತಿದ್ದಾರೆ. ಒಂದು ಎಕರೆಗೆ ಸರಾಸರಿ ಇಳುವರಿ 40 ರಿಂದ 50 ಕೆ.ಜಿಯಷ್ಟೇ. ಆದರೆ, ಕೆಲವರು ಅರ್ಧ ಎಕರೆಯಲ್ಲೇ 100 ಕೆ.ಜಿಯವರೆಗೂ ಫಸಲು ತೆಗೆದಿದ್ದಾರೆ. ಆದರೆ, ಸೂಕ್ತ ಬೆಲೆ ಸಿಗದೇ ಇರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ ಎಂದು ಭಾರತೀಯ ಸಂಬಾರ ಮಂಡಳಿಯ ನಿವೃತ್ತ ಸಂಶೋಧನಾ ಅಧಿಕಾರಿ ಬಿ.ಎ. ವಾದಿರಾಜ್ ಹೇಳುತ್ತಾರೆ.

ತಗ್ಗುತ್ತಲೇ ಇದೆ ಸಂಬಾರ ಪದಾರ್ಥಗಳ ಬೆಳೆ ಪ್ರದೇಶ

ಸಂಬಾರ ಪದಾರ್ಥಗಳಲ್ಲಿ ಕಾಳುಮೆಣಸು ಬೆಳೆಯುವುದರಲ್ಲಿ ದೇಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅದರೆ, ಬೆಲೆ ಕುಸಿತ, ಪ್ರತಿಕೂಲ ಹವಾಮಾನ ಮತ್ತು ಸೊರಗು ರೋಗದಿಂದ ಕಾಳುಮೆಣಸು ಬಳ್ಳಿಗಳು ನಾಶವಾಗುತ್ತಿವೆ. ಸಂಬಾರ ಮಂಡಳಿಯ ಮಾಹಿತಿ ಪ್ರಕಾರ 2021–22ರಲ್ಲಿ ಅಂದಾಜು 1.90 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವ್ಯಾಪಿಸಿದ್ದು, 30 ಸಾವಿರ ಟನ್‌ ಉತ್ಪಾದನೆ ಆಗಿದೆ. ಲವಂಗ, ದಾಲ್ಚಿನ್ನಿಯಂತಹ ಇತರೆ ಸಂಬಾರ ಪದಾರ್ಥಗಳ ಉತ್ಪಾದನೆಯು ರಾಜ್ಯದಲ್ಲಿ ತೀರಾ ಕಡಿಮೆ. ಈ ಬಗ್ಗೆ ಸ್ಥಳೀಯವಾಗಿ ಮಾಹಿತಿಯೂ ಲಭ್ಯವಿಲ್ಲ.


ಹೆಚ್ಚುತ್ತಿದೆ ನಿರ್ವಹಣಾ ವೆಚ್ಚ

ಹೊಸದಾಗಿ ಒಂದು ಎಕರೆಯಲ್ಲಿ ಏಲಕ್ಕಿ ಬೆಳೆಯಲು ಕನಿಷ್ಠ ₹40 ಸಾವಿರ ಬೇಕಾಗುತ್ತದೆ. ಅದನ್ನು ಸಾಗಿಸುವ, ಮಾರಾಟ ಮಾಡುವ ಇತ್ಯಾದಿ ವೆಚ್ಚಗಳು ಪ್ರತ್ಯೇಕ. ಒಟ್ಟಿನಲ್ಲಿ ಕೆ.ಜಿಗೆ ಕನಿಷ್ಠ ₹ 800ರಷ್ಟು ಬೆಲೆಯಾದರೂ ಸಿಗಬೇಕು. ಎಲ್ಲಾ ಖರ್ಚು ಕಳೆದು ಒಂದು ಎಕರೆಗೆ ಕನಿಷ್ಠ ₹25 ಸಾವಿರದಿಂದ ₹30 ಸಾವಿರ ಉಳಿದರೆ ಮಾತ್ರ ಏಲಕ್ಕಿ ಬೆಳೆ ಉಳಿಸಿಕೊಳ್ಳಲು ರೈತರಿಗೂ ಆಸಕ್ತಿ ಬರುತ್ತದೆ ಎಂಬುದು ವಾದಿರಾಜ್‌ ಅಭಿಪ್ರಾಯ.

‘ಒಂದು ದಿನಕ್ಕೆ ಒಬ್ಬ ಕೆಲಸಗಾರ ಐದರಿಂದ ಆರು ಸೇರು ಏಲಕ್ಕಿ ಬಿಡಿಸುತ್ತಾರೆ. ಅದು ಒಣಗಿದರೆ ಒಂದು ಕೆ.ಜಿಯಾಗುತ್ತದೆ. ಮಾರುಕಟ್ಟೆಯಲ್ಲಿ 1 ಕೆ.ಜಿ ಏಲಕ್ಕಿಗೆ ₹500 ಬೆಲೆ ಇದೆ ಎಂದುಕೊಳ್ಳೋಣ. ಒಂದು ಆಳಿಗೆ ದಿನಕ್ಕೆ ₹500 ಕೂಲಿ ಕೊಟ್ಟು, ಅಷ್ಟೇ ಬೆಲೆಗೆ ಏಲಕ್ಕಿ ಮಾರಾಟವಾದರೆ, ಬೆಳೆದವರಿಗೆ ಅಸಲೂ ಹುಟ್ಟುವುದಿಲ್ಲ. ಹೀಗಾಗಿ ಏಲಕ್ಕಿ ಬೆಳೆಯುವುದನ್ನು ದಶಕದ ಹಿಂದೆಯೇ ನಿಲ್ಲಿಸಬೇಕಾಯಿತು’ ಎನ್ನುತ್ತಾರೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಅಚ್ಚನಹಳ್ಳಿಯ ಕೃಷಿಕ ಸುಚೇತನ.

ಹೀಗಿರಲಿಲ್ಲ ಪರಿಸ್ಥಿತಿ:1995ಕ್ಕಿಂತ ಮುಂಚೆ ಏಲಕ್ಕಿ ಉತ್ತಮ ಸ್ಥಿತಿಯಲ್ಲಿತ್ತು. ಆಗ ಪ್ರತಿ ಮನೆಯಲ್ಲಿ ಕಾಯಂ ಆಗಿ ಕಾರ್ಮಿಕರಿದ್ದರು. ಹೊರಗಿನಿಂದಲೂ ಕಾರ್ಮಿಕರು ಏಲಕ್ಕಿ ಕೊಯ್ಲಿಗಾಗಿ ಬರುತ್ತಿದ್ದರು. ಏಲಕ್ಕಿ ಬೆಳೆ ಒಂದು ರೀತಿ ವರ್ಷದಲ್ಲಿ (ಸೆಪ್ಟೆಂಬರ್‌ನಿಂದ ಫೆಬ್ರುವರಿವರೆಗೆ) ನಾಲ್ಕೈದು ತಿಂಗಳು ನಿರಂತರವಾಗಿ ಹಣ ಕೊಡುವ ಬೆಳೆಯಾಗಿತ್ತು. ವರ್ಷಪೂರ್ತಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದ ಬೆಳೆಯಾಗಿತ್ತು. ಒಂದೆಡೆ ಉತ್ಪಾದನೆ ಚೆನ್ನಾಗಿದ್ದರೆ, ಮತ್ತೊಂದೆಡೆ ಉತ್ತಮ ಬೆಲೆ ಸಿಗುತ್ತಿತ್ತು. 1997–98 ಅವಧಿಯಲ್ಲಿ ಏಲಕ್ಕಿ ಬೆಲೆ ಕೆ.ಜಿಗೆ ₹600 ರಿಂದ ₹900 ವರೆಗೆ ಇತ್ತು. 2018–19ರಲ್ಲಿ ಕೆ.ಜಿ ಏಲಕ್ಕಿ ಬೆಲೆ
₹ 3000ದವರೆಗೂ ಹೋಗಿತ್ತು. ಆಗ ಅನೇಕ ರೈತರು ಏಲಕ್ಕಿ ಬೆಳೆ ನಾಟಿ ಮಾಡಿದರು. ಕೋವಿಡ್‌ನಿಂದಾಗಿ ಈಗ ಅವರೆಲ್ಲ ಬೆಲೆ ಕುಸಿತವನ್ನು ಎದುರಿಸುತ್ತಿದ್ದಾರೆ.

ಸಮಸ್ಯೆಗಳು ಹಲವು: ಏಲಕ್ಕಿ ಬೆಳೆ ಹಾಸನ ಜಿಲ್ಲೆಯ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಿತ್ತು. ಇಳುವರಿ ಕೂಡ ಉತ್ತಮವಾಗಿತ್ತು. ಹೀಗಾಗಿ ದಟ್ಟ ಕಾಡುಗಳ ನಡುವೆ ಏಲಕ್ಕಿಯನ್ನು ಬೆಳೆಯಲಾಗುತ್ತಿತ್ತು. ಯಾವುದೇ ಗೊಬ್ಬರ ಹಾಕದೇ ನೈಸರ್ಗಿಕವಾಗಿಯೇ ಬೆಳೆಯಲಾಗುತ್ತಿತ್ತು. ಹೀಗಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಬೆಳೆಯಾಗಿತ್ತು. ಎಲ್ಲವೂ ನೆಮ್ಮದಿಯಾಗಿದ್ದ ಕಾಲದಲ್ಲಿ ಕಟ್ಟೆ ರೋಗ, ಕೊಕ್ಕೆ ಕಂದು ರೋಗ ಏಲಕ್ಕಿಯನ್ನು ಕಾಡಲು ಆರಂಭಿಸಿತು. ಪರಿಣಾಮ ಇಡೀ ಏಲಕ್ಕಿ ಬೆಳೆಯೇ ನಾಶವಾಗಿ ಹೋಯಿತು.

ಹಾಸನ ಜಿಲ್ಲೆಯಲ್ಲಿ 3,167 ಹೆಕ್ಟೇರ್‌ ಪ್ರದೇಶದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದ್ದು, ಹೆಕ್ಟೇರ್‌ಗೆ ಸರಾಸರಿ 62 ಕೆ.ಜಿ ಇಳುವರಿ ಇದೆ. ಕಾಡುಪ್ರಾಣಿ, ಮಂಗಗಳ ಹಾವಳಿ ಹಾಗೂ ರೋಗಬಾಧೆಯಿಂದ ಏಲಕ್ಕಿ ಬೆಳೆಯುವ ಪ್ರದೇಶ ಕ್ಷೀಣಿಸಿದೆ. ಹೆತ್ತೂರು ಸುತ್ತಮುತ್ತಲಿನ 15 ಗ್ರಾಮಗಳಲ್ಲಿ ಏಲಕ್ಕಿ ಬೆಳೆಯಲಾಗುತ್ತಿದ್ದು, ಇಲ್ಲಿನ ಬೆಳೆಗಾರರು ಒಂದಿಲ್ಲೊಂದು ಸಮಸ್ಯೆಯಿಂದ ನಲುಗುತ್ತಿದ್ದಾರೆ. ಕೆ.ಜಿಗೆ ₹4 ಸಾವಿರದವರೆಗೂ ಇದ್ದ ಬೆಲೆ ಇದೀಗ ₹700 ರಿಂದ ₹800ರ ಆಸುಪಾಸಿನಲ್ಲಿದೆ.

ಕೊಡಗು ಜಿಲ್ಲೆಯಲ್ಲಿ 5 ವರ್ಷದ ಹಿಂದೆ ಏಲಕ್ಕಿ ಬೆಳೆ ವಿಸ್ತೀರ್ಣ ಪ್ರದೇಶವು 7,065 ಹೆಕ್ಟೇರ್‌ ಇದ್ದದ್ದು ಈಗ 985.7 ಹೆಕ್ಟೇರ್‌ಗೆ ಕುಗ್ಗಿದೆ. ಒಂದು ಕಾಲದಲ್ಲಿ ಕಾಫಿ ಬೆಳೆಯಷ್ಟೇ ತೀವ್ರವಾಗಿ ಕೊಡಗಿನಲ್ಲಿ ವ್ಯಾಪಿಸಿದ್ದ ಏಲಕ್ಕಿ ಇದೀಗ ನಶಿಸುವ ಹಂತಕ್ಕೆ ಬಂದುನಿಂತಿದೆ.

ಕೊಡಗಿನ ಎಲ್ಲೆಡೆ ಮಾರಾಟವಾಗುತ್ತಿರುವ ಏಲಕ್ಕಿ ನಿಜಕ್ಕೂ ಕೊಡಗಿನದ್ದಲ್ಲ. ಕೇರಳದಿಂದ ಬರುವ ಈ ಏಲಕ್ಕಿಯನ್ನು ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಅಧಿಕ ರಾಸಾಯನಿಕಗಳನ್ನು ಬಳಸಿ ಬೆಳೆಯುವ ಕೇರಳದ ಏಲಕ್ಕಿಯ ಬಣ್ಣದ ಮುಂದೆ ಕಡಿಮೆ ರಾಸಾಯನಿಕ ಬಳಸಿ ಬೆಳೆಯುವ ಕೊಡಗಿನ ಏಲಕ್ಕಿಯ ಬಣ್ಣವಷ್ಟೇ ಅಲ್ಲದೆ ಬೇಡಿಕೆಯೂ ಮಾಸುತ್ತಿದೆ.

‘ಶಬರಿಮಲೆ ಪ್ರಸಾದದಲ್ಲಿ ಬಳಕೆ ಮಾಡುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಕೀಟನಾಶಕ ಪತ್ತೆಯಾಗಿದ್ದರಿಂದ ಈಚೆಗಷ್ಟೇ ಕೇರಳ ಹೈಕೋರ್ಟ್‌ ಪ್ರಸಾದ ಮಾರಾಟಕ್ಕೆ ತಡೆ ನೀಡಿತ್ತು. ವಿದೇಶದಲ್ಲೂ ಭಾರತೀಯ ಸಂಬಾರ ಪದಾರ್ಥಗಳಲ್ಲಿ ಅಧಿಕ ಕೀಟನಾಶಕದ ಅಂಶಗಳು ಪತ್ತೆಯಾಗಿದ್ದು, ತಿರಸ್ಕೃತಗೊಂಡಿವೆ’ ಎಂದು ರಫ್ತುದಾರ ಸ್ವರೂಪಾ ರೆಡ್ಡಿ ಸಹ ಹೇಳುತ್ತಾರೆ. ವಿದೇಶದಲ್ಲಿ ತಿರಸ್ಕೃತಗೊಂಡಾಗ ಸಹಜವಾಗಿಯೇ ದೇಶಿ ಮಾರುಕಟ್ಟೆಯಲ್ಲಿ ಪೂರೈಕೆ ಅಧಿಕವಾಗಿ ಬೆಲೆ ಕುಸಿತವಾಗುತ್ತದೆ.

‘ಅಧಿಕ ರಾಸಾಯನಿಕ ಬಳಸಿ ಬೆಳೆಯುವ ಕೇರಳದ ಬಣ್ಣದ ಏಲಕ್ಕಿಯೇ ಜನರಿಗೆ ಆಕರ್ಷಣೆಯಾಗಿದೆ. ಜತೆಗೆ, 5 ವರ್ಷದ ಹಿಂದೆ ಏಲಕ್ಕಿ ಕೆ.ಜಿಗೆ ₹ 4 ಸಾವಿರ ಇದ್ದಿದ್ದು, ಈಗ ₹ 400ಕ್ಕೆ ಕುಸಿದಿದೆ. ಏಲಕ್ಕಿ ತೋಟದ ನಿರ್ವಹಣಾ ವೆಚ್ಚ ಹಲವುಪಟ್ಟು ಹೆಚ್ಚಾಗಿದೆ. ಕಾಡುತ್ತಿರುವ ಕಟ್ಟೆರೋಗ, ಕೊಳೆರೋಗದಿಂದ ಬೆಳೆಗಾರರು ಏಲಕ್ಕಿ ಕಿತ್ತು ಕಾಫಿ ಬೆಳೆಯುತ್ತಿದ್ದಾರೆ’ ಎಂದು ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಅಪ್ಪಂಗಳದ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ.ಎಸ್.ಜೆ.ಅಂಕೇಗೌಡ ತಿಳಿಸುತ್ತಾರೆ.

‘4 ವರ್ಷದ ಹಿಂದೆ ಒಂದು ವರ್ಷಕ್ಕೆ 15 ಸಾವಿರ ಏಲಕ್ಕಿ ಕಂದುಗಳನ್ನು ಬಿತ್ತನೆ ಮಾಡಲು ರೈತರು ನಮ್ಮಿಂದ ಖರೀದಿಸಿದ್ದರು. ಆದರೆ, ಕಳೆದ ವರ್ಷ 5 ಸಾವಿರ ಕಂದುಗಳಷ್ಟೇ ಮಾರಾಟವಾಗಿವೆ’ ಎಂದು ಅವರು ಮಾಹಿತಿ ನೀಡುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ಸುಮಾರು ಸಾವಿರ ಹೆಕ್ಟೇರ್‌ ಪ್ರದೇಶಲ್ಲಿ ಇದ್ದ ಏಲಕ್ಕಿ ಬೆಳೆ ಇದೀಗ 530 ಹೆಕ್ಟೇರ್‌ಗೆ ಇಳಿದಿದೆ.

ತಾಲ್ಲೂಕುವಾರು– ಮೂಡಿಗೆರೆ: 255 ಹೆಕ್ಟೇರ್‌, ಕೊಪ್ಪ: 115, ಶೃಂಗೇರಿ: 60, ಎನ್‌.ಆರ್‌.ಪುರ: 38, ಕಳಸ: 35, ಚಿಕ್ಕಮಗಳೂರು: 15, ಕಡೂರು: 9 ಹಾಗೂ ತರೀಕೆರೆ: 5 ಹೆಕ್ಟೇರ್‌ ಏಲಕ್ಕಿ ಬೆಳೆ ಪ್ರದೇಶ ಇದೆ. ವಾರ್ಷಿಕ ಸುಮಾರು 950 ಕ್ವಿಂಟಲ್‌ ಉತ್ಪಾದನೆ ಇದೆ.

ಕಟ್ಟೆ ರೋಗ, ಬುಡ ಕೊಳೆಯುವ ರೋಗ, ಕಾಂಡ ಕೊರಕ ಬಾಧೆ, ಪ್ರತಿಕೂಲ ಹವಾಮಾನ ಮೊದಲಾದವು ಏಲಕ್ಕಿ ಬೆಳೆಗೆ ಕಂಟಕವಾಗಿ ಪರಿಣಮಿಸಿವೆ. ಬೆಲೆಯೂ ಇಳಿಮುಖವಾಗಿದೆ. ಇಲ್ಲಿನ ಹಲವು ರೈತರು ಏಲಕ್ಕಿ ಕೃಷಿಯಿಂದ
ವಿಮುಖರಾಗಿದ್ದಾರೆ.

ಅಡಿಕೆ ಪ್ರಧಾನ ಬೆಳೆಯಾಗಿರುವ ಉತ್ತರ ಕನ್ನಡದಲ್ಲಿ ದಶಕಗಳ ಹಿಂದೆ ಅಡಿಕೆ ಮರಗಳ ಜತೆ ಏಲಕ್ಕಿ ಬೆಳೆಯುವುದು ರೈತರ ವಾಡಿಕೆ ಆಗಿತ್ತು. ಎರಡು ಸಾವಿರ ಹೆಕ್ಟೇರ್ ಪ್ರದೇಶದಷ್ಟಿದ್ದ ಏಲಕ್ಕಿ ಹತ್ತೇ ವರ್ಷದಲ್ಲಿ ಪಾತಾಳಕ್ಕೆ ಇಳಿದಿದೆ. ಸದ್ಯ ಜಿಲ್ಲೆಯಲ್ಲಿ 392 ಹೆಕ್ಟೇರ್ ಪ್ರದೇಶಲ್ಲಿ ಮಾತ್ರ ಏಲಕ್ಕಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಶಿರಸಿ, ಯಲ್ಲಾಪುರ, ಸಿದ್ದಾಪುರ, ಜೋಯಿಡಾ ಭಾಗದಲ್ಲಿ ಅಲ್ಲಲ್ಲಿ ಏಲಕ್ಕಿ ಬೆಳೆಯಲಾಗುತ್ತಿದೆ. ಮನೆಯ ಉಪಯೋಗದ ಸಲುವಾಗಿ ರೈತರು ತೋಟದಲ್ಲಿ ಬೆರಳೆಣಿಕೆಯಷ್ಟು ಏಲಕ್ಕಿ ಗಿಡ ಉಳಿಸಿಕೊಂಡಿದ್ದಾರೆ. ಕೆಲವೇ ರೈತರು ಎಕರೆಗಟ್ಟಲೆ ಏಲಕ್ಕಿ ಬೆಳೆಯುತ್ತಿದ್ದಾರೆ.

‘ಏಲಕ್ಕಿಯನ್ನೂ ರಾಸಾಯನಿಕ ಬಳಸದೆ ಬೆಳೆಯುವ ಹಂಬಲವಿತ್ತು. ಮೊದಲ ವರ್ಷ ಸುಮಾರು ಒಂದು ಸಾವಿರ ಗಿಡಗಳು ಪ್ರಾಣಿಗಳ ಹಾವಳಿಗೆ ತುತ್ತಾಗಿದ್ದವು. ನಂತರದ ವರ್ಷದಲ್ಲೂ ಒಂದು ಸಾವಿರದಷ್ಟು ಗಿಡಗಳು ಅತಿವೃಷ್ಟಿಯಿಂದ ಕೊಳೆರೋಗಕ್ಕೆ ತುತ್ತಾಗಿ ಹಾಳಾದವು. ಆನಂತರ ದಲ್ಲೂ ರೋಗಬಾಧೆಗೆ ಮತ್ತೆ ಸಾವಿರಾರು ಗಿಡ ನಾಶ ವಾಯಿತು. ಆದರೂ ಸಾವಯವ ಪದ್ಧತಿ ಕೈಬಿಡದೆ ಏಲಕ್ಕಿ ಗಿಡ ಬೆಳೆಸಿದ್ದೇನೆ’ ಎನ್ನುತ್ತಾರೆ ನಾಲ್ಕು ಸಾವಿರ ಏಲಕ್ಕಿ ಗಿಡ ಬೆಳೆಸಿರುವ ಶಿರಸಿ ತಾಲ್ಲೂಕು ಮಾವಿನಕೊಪ್ಪದ ರೈತ ದತ್ತಾತ್ರೇಯ ಹೆಗಡೆ.

‘ಏಲಕ್ಕಿ ಬೆಳೆಗೆ ಕಟ್ಟೆ ಕಂದು ರೋಗ ವಿಪರೀತ ಬಾಧಿಸುತ್ತಿದೆ. ಇದರಿಂದ ಗಿಡಗಳು ನಾಶವಾಗುತ್ತವೆ. ಸೂಕ್ತ ಔಷಧ ಸಿಗದ ಕಾರಣ ರೈತರು ಏಲಕ್ಕಿ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಜತೆಗೆ ಏಳೆಂಟು ವರ್ಷದಿಂದ ಈಚೆಗೆ ಏಲಕ್ಕಿ ದರದಲ್ಲೂ ಭಾರಿ ಕುಸಿತವಾಗಿದೆ. ಕೆ.ಜಿ.ಗೆ ಸರಾಸರಿ ₹4 ಸಾವಿರದಷ್ಟಿದ್ದ ದರ ಈಗ ₹700 ರಿಂದ ₹1 ಸಾವಿರದವರೆಗೆ ನಡೆಯುತ್ತಿರುವುದು ರೈತರ ಆಸಕ್ತಿ ಕುಂದುವಂತೆ ಮಾಡಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ.

ಸಂಬಾರ ಮಂಡಳಿ ಎಚ್ಚೆತ್ತುಕೊಳ್ಳಬೇಕಿದೆ: ರಾಜ್ಯದಲ್ಲಿ ಏಲಕ್ಕಿ ಬೆಳೆ ಮತ್ತೆ ತನ್ನ ಹಿಂದಿನ ವೈಭವ ಕಂಡುಕೊಳ್ಳಬೇಕಾದರೆ ಸಂಬಾರ ಮಂಡಳಿಯ ಸಕ್ರಿಯ ಭಾಗವಹಿಸುವಿಕೆ ಅಗತ್ಯ. ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು, ಹರಾಜು ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುವ ಮೂಲಕ ಬೆಳೆಗಾರರಿಗೆ ಕನಿಷ್ಠ ಬೆಲೆ ಸಿಗುವಂತೆ ಮಾಡುವ ತುರ್ತು ಅಗತ್ಯ ಇದೆ ಎನ್ನುವುದು ಬೆಳೆಗಾರರು ಮತ್ತು ವ್ಯಾಪಾರಿಗಳ ಒಕ್ಕೊರಲಿನ ಅಭಿಪ್ರಾಯವಾಗಿದೆ.

ಕೇರಳದಲ್ಲಿ ಸಂಬಾರ ಮಂಡಳಿಯ ನಿರ್ವಹಣೆಯಲ್ಲಿಯೇ ಇ–ಹರಾಜು ನಡೆಯುತ್ತದೆ. ಇದರಿಂದಾಗಿ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುತ್ತಿದೆ. ಆದರೆ, ನಮ್ಮಲ್ಲಿ ಒಂದೆರಡು ಕಡೆ ಹರಾಜು ನಡೆಯುತ್ತಿದೆ ಯಾದರೂ ಅದರ ಮೇಲೆ ಮಂಡಳಿಯ ನಿಯಂತ್ರಣ
ವಾಗಲಿ, ಮೇಲ್ವಿಚಾರಣೆಯಾಗಲಿ ಇಲ್ಲ. ಹೀಗಾಗಿ ಬೆಳೆಗಾರರಿಗೆ ಅದರಲ್ಲಿಯೂ ಸಣ್ಣ ಪ್ರಮಾಣದಲ್ಲಿ ಬೆಳೆಯುತ್ತಿರುವವರಿಗೆ ಮಾಡಿದ ಖರ್ಚೂ ಸಿಗದೇ ಇರುವಂತಾಗಿದೆ. ಹರಾಜು ಪ್ರಕ್ರಿಯೆಯ ಮೇಲೆ ಕೆಲವೇ ಕೆಲವು ಮಂದಿಯ ಪ್ರಭಾವ ಇದೆ. ಅಲ್ಲದೆ, ಯಾವ ಬೆಳೆ ಯಾರಿಗೆ ಸೇರಿದ್ದು ಎನ್ನುವುದು ಹರಾಜಿಗೂ ಮುನ್ನವೇ ಖರೀದಿದಾರರಿಗೆ ತಿಳಿದಿರುತ್ತದೆ. ಇದರಿಂದ ಉತ್ತಮ ಬೆಳೆ ಇದ್ದರೂ ಅದಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ. ಒಟ್ಟಾರೆ, ರಾಜ್ಯದಲ್ಲಿ ಏಲಕ್ಕಿಯ ಭವಿಷ್ಯ ನಿಶ್ಚಿತ, ಉತ್ತಮ ಬೆಲೆ ಹಾಗೂ ಉತ್ತಮ ಇಳುವರಿ ನೀಡುವ ತಳಿ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ.

ರೋಗಗಳಿಗಿಂತ ನಿರ್ವಹಣಾ ವೆಚ್ಚ ದುಬಾರಿ, ಕೃಷಿ ಕಾರ್ಮಿಕರ ಕೊರತೆಯಿಂದ ಹೆಚ್ಚಿನ ಬೆಳೆಗಾರರು ಏಲಕ್ಕಿ ಬದಲಿಗೆ ಕಾಫಿಯನ್ನು ಬೆಳೆಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಏಲಕ್ಕಿ ಬೆಳೆ ಪ್ರದೇಶದ ವಿಸ್ತೀರ್ಣ ಕುಗ್ಗುತ್ತಿದೆ.
ಪ್ರಮೋದ್, ಕೊಡಗು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ.

‘ಸುಮಾರು 35 ವರ್ಷಗಳಿಂದ ಏಲಕ್ಕಿ ಕೃಷಿಯಲ್ಲಿ ತೊಡಗಿದ್ದೇವೆ. 20 ಎಕರೆಯಲ್ಲಿ ಏಲಕ್ಕಿ ಬೆಳೆ ಇದೆ. ರೋಗ ಬಾಧೆ, ಜಾಸ್ತಿ ಮಳೆ, ತಾಪಮಾನ ಹೆಚ್ಚಳ, ಕಾರ್ಮಿಕರ ಕೊರತೆಯಿಂದಾಗಿ ನಿರ್ವಹಣೆ ಕಷ್ಟವಾಗಿದೆ. ನಾಲ್ಕು ವರ್ಷದ ಹಿಂದೆ ಏಲಕ್ಕಿ ಕೆ.ಜಿ.ಗೆ ₹ 3.5 ಸಾವಿರ ಇತ್ತು. ಈಗ ಕೆ.ಜಿಗೆ ₹ 1500 ಇದೆ.
ಆರ್‌. ನಾರಾಯಣಮೂರ್ತಿ, ಬಾಳೆಹೊನ್ನೂರಿನ ದೂಬ್ಲಾ ಗ್ರಾಮದ ಬೆಳೆಗಾರ.

ಬೆಳಗಾರರು ಕಾಫಿ ಬೆಳೆಯತ್ತ ಆಕರ್ಷಿತರಾದ ನಂತರ ಏಲಕ್ಕಿಯ ಅವನತಿ ಶುರುವಾಯಿತು. ಕಾಫಿ ಗಿಡಗಳ ನಾಟಿಗಾಗಿ ತೋಟದಲ್ಲಿದ್ದ ವಿವಿಧ ಬಗೆಯ ಕಾಡುಮರಗಳನ್ನು ಕಡಿದರು. ಇದರಿಂದ ಜೀವವೈವಿಧ್ಯ ಕ್ಷೀಣಿಸಿತು. ಏಲಕ್ಕಿಗೆ ರೋಗಬಾಧೆ ಹೆಚ್ಚಾಯಿತು. ಉತ್ಪಾದನೆ ಕಡಿಮೆ ಆಗಿ, ಬೆಲೆಯೂ ಸಿಗದಂತಾಯಿತು.
ಕೆ.ಎನ್‌. ಹರ್ಷ,ವಿಜ್ಞಾನಿ, ಸಂಬಾರ ಮಂಡಳಿ, ಸಕಲೇಶಪುರ


(ಪೂರಕ ಮಾಹಿತಿ: ಕೆ.ಎಸ್‌. ಗಿರೀಶ, ಬಿ.ಜೆ. ಧನ್ಯಪ್ರಸಾದ್‌, ಗಣಪತಿ ಹೆಗಡೆ, ಚಿದಂಬರ ಪ್ರಸಾದ್, ಗಾಣಧಾಳು ಶ್ರೀಕಂಠ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT