ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಡ್ರಗ್ಸ್ ಸುಳಿಯಲ್ಲಿ ರಾಜ್ಯ– ಗಾಂಜಾ ಬಳಕೆಗೆ ಇದೆ ಜಾನಪದೀಯ ನಂಟು

ಸಿದ್ದಪ್ಪಾಜಿ, ಮಂಟೇಸ್ವಾಮಿ ಆರಾಧನೆಯಲ್ಲಿ ‘ಭಂಗಿ’ಗೆ ಮಹತ್ವ
Last Updated 12 ಫೆಬ್ರುವರಿ 2022, 20:45 IST
ಅಕ್ಷರ ಗಾತ್ರ

ಚಾಮರಾಜನಗರ: ಜಾನಪದ ಕಲೆ, ಕಾವ್ಯಗಳ ತವರು ಎಂದು ಗುರುತಿಸಿಕೊಂಡಿರುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಗಾಂಜಾಕ್ಕೂ ಜಾನಪದ ಸಂಸ್ಕೃತಿಗೂ ನಂಟಿರುವುದು ವಿಶೇಷ.

ಪವಾಡ ಪುರುಷರಾದ ಸಿದ್ದಪ್ಪಾಜಿ, ಮಂಟೇಸ್ವಾಮಿ ಮತ್ತು ಅವರ ಶಿಷ್ಯರ ಗದ್ದುಗೆಗಳಿಗೆ ಮಾಂಸಾಹಾರದ ಎಡೆ (ನೈವೇದ್ಯ) ಇಡುವಾಗ, ಕಂಡಾಯ ಉತ್ಸವಗಳಲ್ಲಿ, ದೇವಾಲಯಗಳಲ್ಲಿ ನಡೆಯುವ ಪಂಕ್ತಿಸೇವೆಗಳಲ್ಲಿ ಗಾಂಜಾ ಬಳಕೆಯಾಗುತ್ತದೆ.

‘ಎಡೆ, ಪಂಕ್ತಿಸೇವೆಗೆ ಸಿದ್ಧಪಡಿಸುವ ಆಹಾರ ಪದಾರ್ಥಗಳಿಗೆ ಗಾಂಜಾ ಸೇರಿಸುತ್ತಾರೆ. ಮೊದಲು ಜಾತ್ರೆಗಳಲ್ಲಿ ಭಂಗಿ ಸೇವಿಸುತ್ತಿದ್ದರು. ಈಗ ಕಡಿಮೆಯಾಗಿದೆ‌’ ಎಂದು ಹೇಳುತ್ತಾರೆ ಸಿದ್ದಪ್ಪಾಜಿ, ಮಂಟೇಸ್ವಾಮಿ ಒಕ್ಕಲಿನವರು.

ಧಾರ್ಮಿಕ ಉದ್ದೇಶಗಳಿಗಾಗಿಯೇ ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆಯುವವರಿದ್ದಾರೆ. ಅದಕ್ಕಾಗಿ ಗಾಂಜಾ ಪೂರೈಸುವವರು ಇದ್ದಾರೆ. ಎಲ್ಲಿ ಹೋಗಿ ಕೇಳಿದರೆ ಗಾಂಜಾ ಸಿಗುತ್ತದೆ ಎಂಬುದು ಜನರಿಗೆ ತಿಳಿದಿದೆ. ಆಚರಣೆಯ ನೆಪದಲ್ಲಿ ಗಾಂಜಾ ದಂಧೆಯನ್ನು ಮಾಡುವವರೂ ಇದ್ದಾರೆ.

‘ಚಿಕ್ಕಲ್ಲೂರು, ಕುರುಬನಕಟ್ಟೆ, ಕೆ.ಆರ್‌.ನಗರ ಸಮೀಪವಿರುವ ಕಪ್ಪಡಿ ಕ್ಷೇತ್ರಗಳಲ್ಲಿ ಗಾಂಜಾ ಬಳಕೆ ಜನಪದ ಆಚರಣೆಯ ಭಾಗ. ಶತಮಾನಗಳಿಂದ ನಡೆದಿದ್ದರೂ ವ್ಯಸನ ಅಥವಾ ಅಪರಾಧದ ರೂಪದಲ್ಲಿಲ್ಲ. ಶಾಸ್ತ್ರಕ್ಕಷ್ಟೇ ಸೀಮಿತ. ಗಾಂಜಾ ಸೇವನೆಯಿಂದ ಒಳ್ಳೆಯ ಮನಃಸ್ಥಿತಿ ಉಂಟಾಗುತ್ತದೆ ಎಂಬ ನಂಬಿಕೆ ಜನರದ್ದು’ ಎಂದು ಜಾನಪದ ತಜ್ಞ ಮಹಾದೇವ ಶಂಕನಪುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿದ್ದಪ್ಪಾಜಿ, ಮಂಟೇಸ್ವಾಮಿ ಭಂಗಿ ಸೇವಿಸುತ್ತಿದ್ದರು. ಭಂಗಿ ಸೇವೆ ನಮಗೆ ಆಗಲಿ, ಹರವರ ಸೇವೆ ನಿಮಗೆ ಆಗಲಿ, ಸಿದ್ದಪ‍್ಪಾಜಿ ಕಂಡಾಯ ಊರಿಗೆ ಬರಲಿ ಎಂಬ ಸಾಲು ಸಿದ್ದಪ್ಪಾಜಿ ಕಾವ್ಯದಲ್ಲಿದೆ. ಎಡೆಯಲ್ಲಿ ಗಾಂಜಾ ಹಾಕಿದರೆ ಪವಾಡ ಪುರುಷರು ಸೇವಿಸುತ್ತಾರೆ ಎಂಬುದು ಭಕ್ತರ ನಂಬಿಕೆ’ ಎಂದು ನೀಲಗಾರ ಕೈಲಾಸ ಮೂರ್ತಿ ಹೇಳಿದರು.

ಕಾಡಂಚಿನಲ್ಲಿ ಬೆಳೆ: ಜಿಲ್ಲೆಯ ದಟ್ಟ ಅರಣ್ಯದ ಒಳಗೆ ಹಾಗೂ ಕಾಡಂಚಿನ ಪ್ರದೇಶದಲ್ಲಿ ತೋಟಗಳ ನಡುವೆ ಗಾಂಜಾ ಬೆಳೆಯಲಾಗುತ್ತದೆ. ಹನೂರು ತಾಲ್ಲೂಕು, ಚಾಮರಾಜನಗರ ತಾಲ್ಲೂಕಿನ ಪುಣಜನೂರು ವ್ಯಾಪ್ತಿಯಲ್ಲೇ ಹೆಚ್ಚು. ಒಣ ಗಾಂಜಾ ಸಂಗ್ರಹ, ಮಾರಾಟದ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ಆದಿವಾಸಿಗಳೂ ಸಕ್ರಿಯವಾಗಿ ಭಾಗಿಯಾಗುತ್ತಾರೆ. ಬೆಂಗಳೂರು, ಆಂಧ್ರಕ್ಕೂ ಗಾಂಜಾ ಪೂರೈಕೆಯಾಗುತ್ತದೆ. ‌ಕಳೆದ ವರ್ಷ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಬಳಿ ಭಾರಿ ಪ್ರಮಾಣದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವುದು ಪತ್ತೆಯಾಗಿತ್ತು.

ಹಾಸನ ಜಿಲ್ಲೆಯ ಹಳೇಬೀಡು, ಅರಸೀಕೆರೆ, ಬೇಲೂರು ಭಾಗದಲ್ಲಿ ಬೆಳೆಗಳ ಮಧ್ಯೆ ಗಾಂಜಾ ಬೆಳೆಯಲಾಗುತ್ತಿದೆ. ಕೇರಳ ಹಾಗೂ ತಮಿಳುನಾಡಿನವರು ರೈತರನ್ನು ಪ್ರಚೋದಿಸುತ್ತಿದ್ದಾರೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಹುಣಸೂರು, ಸರಗೂರು, ಪಿರಿಯಾಪಟ್ಟಣ ಮತ್ತು ತಿ.ನರಸೀಪುರ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿಗಾಂಜಾ ಸೇವನೆ ಚಟಕ್ಕೆ ಬೀಳುತ್ತಿರುವವರೂ ಹೆಚ್ಚಾಗಿದ್ದಾರೆ. ಗಾಂಜಾ ಗಿಡಗಳ ವಶ, ಸಾಗಾಟ ಮತ್ತು ಮಾರಾಟ‌ಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯಲ್ಲಿ ತಿಂಗಳಿಗೆ ಒಂದೆರಡು ಪ್ರಕರಣಗಳು ವರದಿಯಾಗುತ್ತಿವೆ.

ಕೊಡಗಿನಲ್ಲಿ ಶುಂಠಿ ಹಾಗೂ ಕಾಫಿ ತೋಟಗಳ ನಡುವೆ ಗಾಂಜಾ ಬೆಳೆಯುತ್ತಿದ್ದು, ಹೋಂ ಸ್ಟೇಗಳಿಗೆ ಪೂರೈಕೆ ಮಾಡುತ್ತಿರುವ ಆರೋಪಗಳಿವೆ. ಪೊಲೀಸರು, ಅಬಕಾರಿ ಇಲಾಖೆ, ಅರಣ್ಯ ಇಲಾಖೆಗಳು ಗಾಂಜಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರೂ, ಸಣ್ಣ ಪ‍್ರಮಾಣದ ಪ್ರಕರಣಗಳಷ್ಟೇ ಪತ್ತೆಯಾಗುತ್ತಿವೆ.

ಪೂರಕ ಮಾಹಿತಿ: ಮಹಮ್ಮದ್‌ ನೂಮಾನ್‌, ಕೆ.ಎಸ್‌. ಸುನಿಲ್‌,ಆದಿತ್ಯ ಕೆ.ಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT