ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಭೂಕಬಳಿಕೆಗೆ ‘ರಾಜಿ ಡಿಕ್ರಿ’ ಕೈಚಳಕ; ನಕಲಿ ವ್ಯಾಜ್ಯ ಹೂಡಿ ವಂಚಿಸುವ ಜಾಲ

ವಕೀಲರು, ಅಧಿಕಾರಿಗಳು ಶಾಮೀಲು?
Last Updated 21 ಆಗಸ್ಟ್ 2021, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ನಕಲಿ ವ್ಯಾಜ್ಯ’ ಹೂಡಿ ನ್ಯಾಯಾಲಯಗಳನ್ನೇ ನಂಬಿಸಿ ‘ರಾಜಿ ಡಿಕ್ರಿ’ ಪಡೆದು ಆಸ್ತಿ ಕಬಳಿಸುತ್ತಿರುವ ಜಾಲದ ದಾಳಿಗೆ ಸಿಲುಕಿ ಜನರು ಹೈರಾಣಾಗುತ್ತಿದ್ದಾರೆ. ಭೂಗಳ್ಳರ ಜಾಲದೊಂದಿಗೆ ವಕೀಲರು, ಕೆಲ ಅಧಿಕಾರಿ ಗಳೂ ಕೈಜೋಡಿಸಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ವಂಚಕರ ಪಾಲಾಗುತ್ತಲೇ ಇವೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನುಗಳನ್ನು ಕಬಳಿಸುವುದು, ಬೆದರಿಕೆ ಅಥವಾ ಬಲವಂತದಿಂದ ಖಾಸಗಿ ವ್ಯಕ್ತಿಗಳ ಆಸ್ತಿಗಳನ್ನು ಕಿತ್ತುಕೊಳ್ಳುವ ಕೃತ್ಯಗಳಿಗೆ ಬೆಂಗಳೂರಿ ನಲ್ಲಿ ದೀರ್ಘ ಇತಿಹಾಸವಿದೆ. ಆದರೆ ಅತ್ಯಂತ ರಹಸ್ಯವಾಗಿ ಕಾರ್ಯಾಚರಣೆ ನಡೆಸಿ ಆಸ್ತಿಗಳನ್ನು ಕಬಳಿಸುತ್ತಿದ್ದ ಬೃಹತ್‌ ಜಾಲವೊಂದು, ಈಗ ಹೈಕೋರ್ಟ್‌ ಆದೇಶದಂತೆ ನಡೆಯುತ್ತಿರುವ ತನಿಖೆ ಯಿಂದ ಬಯಲಿಗೆ ಬಂದಿದೆ.

ಆಸ್ತಿಯ ಮಾಲೀಕರಿಗೆ ಕಿಂಚಿತ್ತೂ ಸುಳಿವೇ ಸಿಗದಂತೆ ನ್ಯಾಯಾಲಯದಿಂದ ‘ರಾಜಿ ಡಿಕ್ರಿ’ ಪಡೆದುಕೊಳ್ಳುವ ಈ ಗುಂಪು, ಸದ್ದಿಲ್ಲದೇ ಆಸ್ತಿಯನ್ನು ಬೇರೊ ಬ್ಬರಿಗೆ ಪರಭಾರೆ ಮಾಡುತ್ತದೆ. ಆಸ್ತಿಯ ಮೇಲಿನ ಹಕ್ಕು ಕಳೆದುಕೊಂಡಿರುವ ಬಹುತೇಕರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತು ಕೈತಪ್ಪಿರುವುದು ಈಗಲೂ ಗೊತ್ತೇ ಇಲ್ಲ. ವಿಷಯ ತಿಳಿದ ಬೆರಳೆಣಿಕೆಯಷ್ಟು ಮಂದಿ ಕಾನೂನು ಹೋರಾಟಕ್ಕೆ ಅಣಿಯಾಗುವಷ್ಟರಲ್ಲೇ ಆಸ್ತಿ ನಾಲ್ಕಾರು ಮಂದಿಯ ಕೈ ಬದಲಾಗಿ ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಂತಿವೆ.

ನಕಲಿ ದಾಖಲೆಗಳನ್ನು ಬಳಸಿ ಕೊಂಡು ನ್ಯಾಯಾಲಯದಿಂದ ‘ರಾಜಿ ಡಿಕ್ರಿ’ ಪಡೆದುಕೊಂಡು ಷಾ ಹರಿಲಾಲ್‌ ಭಿಕಾಬಾಯ್‌ ಅಂಡ್‌ ಕಂಪನಿಗೆ ಸೇರಿದ ಸ್ವತ್ತನ್ನು ಕಬಳಿಸಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಈ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಸಿಐಡಿ ಪೊಲೀಸರಿಗೆ ಆದೇಶಿಸಿತ್ತು. ಒಂದೇ ತಂಡ, ಒಂದೇ ರೀತಿಯ ಕಾರ್ಯ ವಿಧಾನ ಬಳಸಿಕೊಂಡು ನೂರಾರು ಸ್ಥಿರಾಸ್ತಿಗಳನ್ನು ಕಬಳಿಸಿ, ಕೈ ಬದಲಾವಣೆ ಮಾಡಿರುವುದನ್ನು ತನಿಖಾ ತಂಡ ಪತ್ತೆಮಾಡಿದೆ.

ವಂಚನೆಯ ಜಾಡು: ವಾರಸುದಾರರು ಸಮೀಪದಲ್ಲಿ ಇಲ್ಲದ, ಅನಿವಾಸಿ ಭಾರತೀಯರ ಒಡೆತನದ ಆಸ್ತಿಗಳನ್ನು ವಂಚಕರ ಜಾಲ ಪತ್ತೆಹಚ್ಚುತ್ತಿತ್ತು. ಆಸ್ತಿಯ ಒಡೆತನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ‘ನಕಲಿ ವ್ಯಾಜ್ಯ’ಕ್ಕೆ ಈ ತಂಡ ತಯಾರಿ ನಡೆಸುತ್ತಿತ್ತು. ಆಸ್ತಿಯ ಮಾಲೀಕನೆಂದು ಒಬ್ಬನನ್ನು, ಅತಿಕ್ರಮ ಪ್ರವೇಶ ಮಾಡಿರುವ ಪ್ರತಿವಾದಿ ಎಂದು ಒಬ್ಬನನ್ನು ಹಾಗೂ ಕೆಲವು ಪ್ರಕರಣಗಳಲ್ಲಿ ಬಾಡಿಗೆದಾರ ಎಂದು ಇನ್ನೊಬ್ಬನನ್ನು ಸೃಷ್ಟಿಸಲಾಗುತ್ತಿತ್ತು. ಅದಕ್ಕೆ ಪೂರಕವಾಗಿ ನಕಲಿ ದಾಖಲೆ ಸೃಷ್ಟಿಸಿ, ಈ ಮೂವರ ಹೆಸರಿನಲ್ಲೇ ನ್ಯಾಯಾಲಯಗಳಲ್ಲಿ ದಾವೆ ಹೂಡುವ ಕೆಲಸ ಮಾಡುತ್ತಿತ್ತು.

ವಿಚಾರಣೆ ಆರಂಭವಾದ ಕೆಲ ದಿನಗಳಲ್ಲಿ ರಾಜಿ ಸಂಧಾನದ ಅಪೇಕ್ಷೆಯನ್ನು ನ್ಯಾಯಾಲಯದ ಮುಂದೆ ಇಟ್ಟು, ‘ರಾಜಿ ಡಿಕ್ರಿ’ ಪಡೆಯವುದು. ಒಬ್ಬನ ಹೆಸರಿಗೆ ಆಸ್ತಿಯನ್ನು ಬಿಟ್ಟುಕೊ ಡುವ ರಾಜಿ ತೀರ್ಮಾನದ ಅನುಸಾರ ನ್ಯಾಯಾಲಯದಿಂದ ಆದೇಶ ಪಡೆಯು ವುದು. ಅದನ್ನು ಬಳಸಿಕೊಂಡು ಆಸ್ತಿಯ ಮೇಲೆ ಹಕ್ಕು ಸಾಧಿಸಿ, ದಿಢೀರನೆ ಬೇರೊ ಬ್ಬರಿಗೆ ಪರಭಾರೆ ಮಾಡಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಕೆಲಸವನ್ನು ಈ ಜಾಲ ಮಾಡುತ್ತಾ ಬಂದಿದೆ.

ಈ ಜಾಲದ ಪ್ರಮುಖ ಸೂತ್ರಧಾರಿಯೊಬ್ಬ ಬೆಂಗಳೂರಿನ ಆಯಕಟ್ಟಿನ ಸ್ಥಳಗಳಲ್ಲಿ ಬಳಕೆಯಾಗದ ಜಾಗಗಳು, ಮಾಲೀಕರು ದೂರದಲ್ಲಿರುವಂತಹ ಆಸ್ತಿಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕ ಮಾಹಿತಿಯನ್ನು ವಕೀಲರ ಗುಂಪಿನೊಂದಿಗೆ ಹಂಚಿಕೊಳ್ಳುತ್ತಿದ್ದ. ವಕೀಲರೇ ವಾದಿ, ಪ್ರತಿವಾದಿಗಳನ್ನು ಸೃಷ್ಟಿಸುತ್ತಿದ್ದರು. ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡುವುದಕ್ಕೆ ಪೂರಕವಾಗಿ ನಕಲಿ ದಾಖಲೆಗಳನ್ನೂ ತಯಾರು ಮಾಡುತ್ತಿದ್ದರು ಎಂಬುದನ್ನು ಸಿಐಡಿ ಬಯಲಿಗೆಳೆದಿದೆ.

ಕೆಲವು ಪ್ರಕರಣಗಳಲ್ಲಿ ನೈಜ ಮಾಲೀಕರನ್ನು ಪ್ರತಿವಾದಿ ಎಂದು ಹೆಸರಿಸಲಾಗಿದೆ. ಆದರೆ, ಅದನ್ನು ರಹಸ್ಯವಾಗಿರಿಸಿ ಅವರು ವಿಚಾರಣೆಗೆ ಹಾಜರಾಗದಂತೆ ಮಾಡಲಾಗಿದೆ. ಆಸ್ತಿಯ ಮೂಲ ಮಾಲೀಕರ ಪರವಾಗಿ ಹಾಜರಾದ ವಕೀಲರೇ ನಕಲಿ ರಾಜಿ ಅರ್ಜಿ ಸಲ್ಲಿಸಿ ಡಿಕ್ರಿ ಪಡೆಯಲು ನೆರವಾಗಿದ್ದಾರೆ ಎಂದು ತನಿಖೆಯ ಕುರಿತು ಮಾಹಿತಿ ಇರುವ ಅಧಿಕಾರಿಯೊಬ್ಬರು ತಿಳಿಸಿದರು.

ಈಗ ಪತ್ತೆಯಾಗಿರುವ, ಹರಿಲಾಲ್‌ ಭಿಕಾಬಾಯ್‌ ಅಂಡ್‌ ಕಂಪನಿ ಪ್ರಕರಣದಲ್ಲಿ ವಕೀಲರು ಸೇರಿದಂತೆ ನಾಲ್ವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ದಾಖಲೆಗಳನ್ನು ಫೋರ್ಜರಿ ಮಾಡಿ, ಉಪ ನೋಂದಣಾಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಮೊಹರುಗಳನ್ನೂ ನಕಲು ಮಾಡಿ ವಂಚನೆ ಕೃತ್ಯಕ್ಕೆ ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಐಪಿಎಸ್‌ ಅಧಿಕಾರಿಗಳ ಪ್ರಭಾವ: ನ್ಯಾಯಾಲಯದ ಆದೇಶವನ್ನು ಕಂದಾಯ ಇಲಾಖೆ ಅಧಿಕಾರಿಗಳ ಮುಂದಿಟ್ಟು, ಖಾತೆ ಬದಲಾವಣೆ ಮಾಡಿಸಿಕೊಳ್ಳುತ್ತಿದ್ದರು. ನಂತರ ಆಸ್ತಿಯನ್ನು ಮಾರಾಟ ಮಾಡುತ್ತಿದ್ದರು. ಕಂದಾಯ ಇಲಾಖೆ, ನೋಂದಣಿ ಕಚೇರಿಗಳ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ಖಾತೆ ಬದಲಾವಣೆ, ಕ್ರಯಪತ್ರ ನೋಂದಣಿಗೆ ‘ಸಹಕಾರ’ ನೀಡುತ್ತಿದ್ದಾರೆ. ನೋಂದಣಿ ಕಚೇರಿಗಳಲ್ಲಿರುವ ಫ್ರಾಂಕಿಂಗ್‌ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸುವ ಮೂಲಕವೇ ಅಕ್ರಮದ ಸರಣಿ ಆರಂಭವಾಗುತ್ತಿತ್ತು ಎಂಬುದು ಬಯಲಿಗೆ ಬಂದಿದೆ.

‘ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಒಬ್ಬರು ಸೇರಿದಂತೆ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ರಾಜಿ ಡಿಕ್ರಿಯ ಆಧಾರದಲ್ಲಿ ಸ್ಥಿರಾಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಲು ಪೊಲೀಸರ ನೆರವು ಒದಗಿಸುವ ವ್ಯವಸ್ಥೆಯನ್ನು ಈ ಇಬ್ಬರೂ ಅಧಿಕಾರಿಗಳು ಮಾಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.

‘ನಕಲಿ ವ್ಯಾಜ್ಯ’ ಹೂಡಿ ಕಬಳಿಸಿದ ಜಮೀನನ್ನು ಖರೀದಿಸುವವರೂ ಪ್ರಭಾವಿಗಳೇ ಆಗಿರುತ್ತಾರೆ. ಹೆಚ್ಚಿನವರು ವಂಚನೆಯ ಬಗ್ಗೆ ಅರಿವಿದ್ದೇ ಖರೀದಿಸಿದ್ದಾರೆ. ಹಾಲಿ ಶಾಸಕರಾಗಿರುವ ಒಬ್ಬರು ಸೇರಿದಂತೆ ಇಬ್ಬರು ಮಾಜಿ ಸಚಿವರು, ಭೂಗಳ್ಳರು ಲಪಟಾಯಿಸಿದ್ದ ಜಮೀನುಗಳನ್ನು ಖರೀದಿಸಿದ್ದಾರೆ’ ಎಂಬ ಮಾಹಿತಿ ಸಿಐಡಿ ತನಿಖೆ ವೇಳೆ ಹೊರಬಂದಿದೆ.

ಹೈಕೋರ್ಟ್ ಹೇಳಿರುವುದೇನು?

‘ವಂಚನೆ, ಫೋರ್ಜರಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸುವ ಕೃತ್ಯಗಳು ಸಾಮಾನ್ಯವಾಗಿ ಒಳಗಿನವರ ಭಾಗಿದಾರಿಕೆ ಇಲ್ಲದೇ ನಡೆಯುವುದಿಲ್ಲ’ ಎಂದು ‘ಷಾ ಹರಿಲಾಲ್‌ ಕಂಪನಿಯ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

‘ಅರ್ಜಿಯ ಮೇಲಿನ ಶಾಯಿ ಆರುವ ಮುನ್ನವೇ ನ್ಯಾಯಾಲಯದಿಂದ ಡಿಕ್ರಿ ಆದೇಶ ಪಡೆಯಲಾಗಿದೆ. 2018ರ ಮೇ 31ರಂದು ರಾಕೆಟ್‌ ವೇಗದಲ್ಲಿ ಈ ಆದೇಶ ಹೊರಡಿಸುವುದಕ್ಕೆ ಪೂರಕವಾದ ಯಾವ ಕಾರಣಗಳೂ ಕಾಣಿಸುತ್ತಿಲ್ಲ. ಪ್ರಕರಣದ ವಾದಿ ಅರ್ಜಿದಾರ ಮತ್ತು ಪ್ರತಿವಾದಿ ಸಂಶಯಾಸ್ಪದ ವೇಗದಲ್ಲಿ ವರ್ತಿಸಿದ್ದರೂ ಲಘು ಪ್ರಕರಣಗಳ ನ್ಯಾಯಾಲಯದ ನ್ಯಾಯಾಧೀಶರು ಈ ಬಗ್ಗೆ ಯೋಚನೆಯನ್ನೇ ಮಾಡಿಲ್ಲ ಎಂಬ ಅಭಿಪ್ರಾಯ ಈ ಪೀಠಕ್ಕೆ ಮೂಡುತ್ತಿದೆ’ ಎಂಬ ಉಲ್ಲೇಖ ತೀರ್ಪಿನಲ್ಲಿದೆ.

ಸಂತ್ರಸ್ತರ ಪೈಕಿ ಕ್ರೈಸ್ತರೇ ಹೆಚ್ಚು:

ನಕಲಿ ವ್ಯಾಜ್ಯ ಹೂಡಿ ಆಸ್ತಿ ಲಪಟಾಯಿಸುವ ಜಾಲ ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ನೂರಾರು ವರ್ಷಗಳಿಂದಲೂ ಕ್ರೈಸ್ತ ಧರ್ಮೀಯ ಕುಟುಂಬಗಳ ಸ್ವಾಧೀನದಲ್ಲಿರುವ ಆಸ್ತಿಗಳನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿದೆ. ಈ ಜಾಲದಿಂದ ವಂಚನೆಗೊಳಗಾದವರಲ್ಲಿ ಶೇಕಡ 60ಕ್ಕೂ ಹೆಚ್ಚು ಮಂದಿ ಕ್ರೈಸ್ತ ಧರ್ಮೀಯರು ಎಂಬ ಮಾಹಿತಿ ಲಭಿಸಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದವರಲ್ಲಿ ಹಲವರು ಅವುಗಳಿಂದ ದೂರವೇ ಉಳಿದಿದ್ದಾರೆ. ಅಂತಹ ಆಸ್ತಿಗಳನ್ನೇ ಕಬಳಿಸಿ ಮಾರಾಟ ಮಾಡಲಾಗಿದೆ. ವಿದೇಶಗಳಲ್ಲಿ ನೆಲೆಸಿರುವ ವ್ಯಕ್ತಿಗಳು ಹೂಡಿಕೆ ಉದ್ದೇಶಕ್ಕೆ ಖರೀದಿಸಿರುವ ಹಲವು ಆಸ್ತಿಗಳನ್ನೂ ಇದೇ ರೀತಿ ವಂಚಕರ ಜಾಲ ಕಬಳಿಸಿದೆ.

ವಂಚಕರ ಜಾಲಕ್ಕೆ ಖಾಕಿ ಅಭಯ:

ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಖಾಸಗಿ ಆಸ್ತಿಗಳ ಮಾಲೀಕತ್ವಕ್ಕೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮಾಲೀಕರನ್ನೇ ಬೆದರಿಸಿ ಭೂಗಳವು ಮಾಡುವ ತಂಡಗಳು ದಶಕಗಳಿಂದ ಸಕ್ರಿಯವಾಗಿವೆ. ರೌಡಿಗಳು, ವಂಚಕರು ಶಾಮೀಲಾಗಿರುವ ಈ ಜಾಲಕ್ಕೂ ಪೊಲೀಸರೇ ರಕ್ಷಣೆ ನೀಡುತ್ತಿರುವ ಆರೋಪವಿದೆ.

ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಆನೇಕಲ್‌ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಈ ರೀತಿ ಆಸ್ತಿ ಲಪಟಾಯಿಸುವ ತಂಡಗಳು ಇವೆ. ಕೆಲವು ಪೊಲೀಸ್‌ ಅಧಿಕಾರಿಗಳೇ ಈ ತಂಡಗಳ ‘ನಾಯಕ’ರಂತೆ ಇದ್ದಾರೆ. ನೂರಾರು ವರ್ಷಗಳ ಹಿಂದಿನ ಅವಧಿಗೂ ನಕಲಿ ದಾಖಲೆ ಸೃಷ್ಟಿಸುವಷ್ಟರ ಮಟ್ಟಿಗೆ ಈ ತಂಡಗಳು ಬೆಳೆದು ನಿಂತಿವೆ ಎಂಬ ಮಾತುಗಳು ಪೊಲೀಸರ ವಲಯದಲ್ಲೇ ಸದ್ದು ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT