ಭಾನುವಾರ, ಸೆಪ್ಟೆಂಬರ್ 15, 2019
30 °C
ಉಳ್ಳವರ ಪಾಲಾದ ಸಂತ್ರಸ್ತರ ಭೂಮಿ l ಖುಷ್ಕಿ ಬದಲು ಕಾಫಿತೋಟ

ಮುಳುಗಡೆ ಪ್ರಮಾಣಪತ್ರ ಗೋಲ್‌ಮಾಲ್ l ಐದು ಸಾವಿರ ಎಕರೆ ಅಕ್ರಮ ಮಂಜೂರು

Published:
Updated:

ಸಕಲೇಶಪುರ: ಹೇಮಾವತಿ ಜಲಾ ಶಯ ಯೋಜನೆಗೆ ಜಮೀನು ಕಳೆದು ಕೊಂಡವರ ಪೈಕಿ ಶೇ 95ರಷ್ಟು ಮಂದಿಗೆ 1980–85ರ ಅವಧಿಯಲ್ಲೇ ಭೂಮಿ ನೀಡಿದ್ದರೂ ಸಂತ್ರಸ್ತರ ಹೆಸರಿನಲ್ಲಿ ಈಗಲೂ ಹಲವು ಮಧ್ಯವರ್ತಿಗಳು ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.

ಆ ಸಂದರ್ಭದಲ್ಲಿ ಮಂಜೂರು ಮಾಡಿದ್ದ ಭೂಮಿಯನ್ನು 15 ವರ್ಷ ಮಾರಾಟ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಫಲಾನುಭವಿಯೊಬ್ಬರು ಹೈಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಿದ್ದರಿಂದ ಷರತ್ತು ರದ್ದಾಯಿತು. ಬಳಿಕ ಅದರ ಲಾಭ ಪಡೆದ ದುಷ್ಟಕೂಟ, ಎಚ್‌ಆರ್‌ಪಿ (ಹೇಮಾವತಿ ಜಲಾಶಯ ಯೋಜನೆ) ಸಂತ್ರಸ್ತರ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ ಪಡೆದು ಅಕ್ರಮ ಭೂಮಿ ಮಂಜೂರು, ಮಾರಾಟ ದಂಧೆಯಲ್ಲಿ ತೊಡಗಿತು.

2015 ರಿಂದ ಮಧ್ಯವರ್ತಿಗಳು ಈ ಹಿಂದೆ ಮುಳುಗಡೆ ಸರ್ಟಿಫಿಕೇಟ್‌ ಪಡೆದವರ ಹೆಸರಿನಲ್ಲೇ ಬೇನಾಮಿ ಫಲಾನುಭವಿಗಳನ್ನು ಸೃಷ್ಟಿಸಿ ನಕಲಿ ವ್ಯಕ್ತಿಗಳಿಗೆ ಹಕ್ಕುಪತ್ರ ಕೊಡಿಸಿದ್ದಾರೆ. ಅವರಿಗೆ ಮಂಜೂರಾಗುವ ಜಮೀನನ್ನು ಮಾರಲು ನೋಂದಣಿ ರಹಿತ ಮತ್ತು ನೋಂದಣಿ ಜಿಪಿಎ ಪಡೆಯುತ್ತಿದ್ದಾರೆ. ಎಕರೆಗೆ ₹ 5ರಿಂದ ₹ 10 ಲಕ್ಷ ವರೆಗೆ ಮಾರಾಟ ಮಾಡಲಾಗುತ್ತಿದೆ.

ಸಕಲೇಶಪುರ ತಾಲ್ಲೂಕಿನಲ್ಲಿಯೇ 5 ಸಾವಿರ ಎಕರೆಗಿಂತಲೂ ಹೆಚ್ಚು ಜಮೀನು ಅಕ್ರಮವಾಗಿ ಮಂಜೂರಾಗಿ, ಮಾರಾಟವೂ ಆಗಿದೆ. ಜಮೀನನ್ನು ಖುಷ್ಕಿ ಸಾಗುವಳಿಗೆ ಮಂಜೂರು ಮಾಡಿ, ಸಾಗುವಳಿ ಚೀಟಿಯಲ್ಲಿ ‘ಒಂದು ಪಕ್ಷ ಕಾಫಿ ಸಾಗುವಳಿ ಮಾಡಿದ್ದಲ್ಲಿ ಮಾರುಕಟ್ಟೆ ದರದಲ್ಲಿ ಕಾಫಿ ಕಿಮ್ಮತ್ತು ಸರ್ಕಾರಕ್ಕೆ ಪಾವತಿಸತಕ್ಕದ್ದು’ ಎಂಬ ಷರತ್ತು ವಿಧಿಸಲಾಗಿದೆ. ಆದರೂ, ಖುಷ್ಕಿ ಸಾಗುವಳಿಗೆ ಮಂಜೂರಾದ ಜಮೀನಿನಲ್ಲಿ ಖುಷ್ಕಿ ಬೆಳೆ ಬೆಳೆಯಲು ಸಾಧ್ಯ ಇಲ್ಲ. ಮಂಜೂರಾದ ನಂತರ ಎಲ್ಲಾ ಪ್ರಕರಣಗಳಲ್ಲಿಯೂ ಕಾಫಿ ಸಾಗುವಳಿ ಮಾಡಲಾಗುತ್ತಿದೆ.

ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಕಾಫಿ ಸಾಗುವಳಿ ಮಾಡಿರುವ ಕಾರಣ ಉಪನೋಂದಣಾಧಿಕಾರಿ ಕಚೇರಿ ಅಂಕಿ, ಅಂಶಗಳ ಪ್ರಕಾರ ಮಾರುಕಟ್ಟೆ ದರ ಎಕರೆಗೆ ₹ 5 ಲಕ್ಷ ವಸೂಲು ಮಾಡಬೇಕಾಗುತ್ತದೆ. ಈ ಹಿಂದೆ ಖುಷ್ಕಿಗೆ ಮಂಜೂರಾತಿ ಪಡೆದವರು ಪಾವತಿ ಮಾಡಿರುವ ದರ ಎಕರೆಗೆ ₹ 100 ಎಂಬುದು ಗಮನಿಸಬೇಕಾದ ಅಂಶ.

‘2015 ರಿಂದ ಈವರೆಗೆ ಕಾನೂನು ಬಾಹಿರವಾಗಿ ಮಂಜೂರಾಗಿರುವ ಜಮೀನಿನಲ್ಲಿ ಕಾಫಿ ಸಾಗುವಳಿ ಮಾಡು ತ್ತಿರುವ ಕಾರಣ ಅಂದಾಜು 5 ಸಾವಿರ ಎಕರೆ ಭೂಮಿಯ ಮೌಲ್ಯ ಸುಮಾರು ₹ 2.5 ಸಾವಿರ ಕೋಟಿ. ಕಾಫಿ ಸಾಗುವಳಿ ಆಗಿರುವುದರಿಂದ ಖುಷ್ಕಿ ಸಾಗುವಳಿಯ ಕಂದಾಯ ಎಕರೆಗೆ ಒಂದು ರೂಪಾಯಿ ಇದ್ದದ್ದು, ಎಲ್ಲಾ ಸೇರಿ ₹ 14.5 ಆಗಿದೆ. ಪ್ರತಿ ವರ್ಷ ಕಂದಾಯದಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ’ ಎನ್ನುತ್ತಾರೆ ಹೇಮಾವತಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸಿರುವ ನಿವೃತ್ತ ತಹಶೀಲ್ದಾರ್‌ ಅಣ್ಣೇಗೌಡ.

ಸಂತ್ರಸ್ತರ ಹೆಸರಿನಲ್ಲಿ ಲೂಟಿದಾರರು

ಈ ಹಿಂದೆ ಭೂಮಿ ಮಂಜೂರು ಮಾಡಿಸಿಕೊಂಡ ಸಂತ್ರಸ್ತರು ವಿಶೇಷ ಭೂಸ್ವಾಧೀನಾಧಿಕಾರಿ (ಪುನರ್ವಸತಿ) ಕಚೇರಿಗೆ ಮತ್ತೆ ಭೂಮಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಯಾವುದೇ ದಾಖಲೆ ಪರಿಶೀಲಿಸದೇ ಅವರಿಗೆ ಮತ್ತೆ ಮಂಜೂರು ಮಾಡಲಾಗಿದೆ. ತಾಲ್ಲೂಕಿನ ಕುರುಬತ್ತೂರು ಗ್ರಾಮದ ಸರ್ವೆ ನಂ. 13 ರಲ್ಲಿ 18.3 ಎಕರೆ, ಸರ್ವೆ ನಂ. 14ರಲ್ಲಿ 6 ಎಕರೆ ಭೂಮಿಯನ್ನು ಪ್ರವಾಸಿ ಮಂದಿರಕ್ಕಾಗಿ ಮೈಸೂರು ಮಹಾರಾಜರ ಕಾಲದಲ್ಲಿಯೇ ಕಾಯ್ದಿರಿಸ ಲಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಐ.ಬಿ ಜಾಗ ಎಂದಿದೆ. ಆದರೆ, ಇತ್ತೀಚೆಗೆ ಕೆಲ ಮಧ್ಯವರ್ತಿಗಳು ಕೋಟ್ಯಂತರ ರೂಪಾಯಿ ಬೆಲೆಯ ಈ ಜಾಗವನ್ನು ಎಚ್‌ಆರ್‌ಪಿ ಹೆಸರಿನಲ್ಲಿ ಕಬಳಿಸಿದ್ದಾರೆ.

ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನ ಆಗಿಲ್ಲ. ತಾಲ್ಲೂಕಿನಾದ್ಯಂತ ಸರ್ಕಾರಿ ಗೋಮಾಳ, ಡೀಮ್ಡ್‌ ಅರಣ್ಯ, ಒತ್ತುವರಿ ಮಾಡಿ ತೋಟಗಳನ್ನು ಸಹ ಸಂತ್ರಸ್ತರ ಹೆಸರಿನಲ್ಲಿ ಕಬಳಿಸಲಾಗುತ್ತಿದೆ. ಭೂಮಿ ಅಳತೆ ಮಾಡಿದ ಸರ್ವೆಯರ್‌, ಸರಿಯಾಗಿ ಪರಿಶೀಲನೆ ಮಾಡದ ಕಂದಾಯ ಇಲಾಖೆ ಸಿಬ್ಬಂದಿ, ಮಂಜೂರಾತಿ ಆದೇಶಕ್ಕೆ ಸಹಿ ಮಾಡಿದ ವಿಶೇಷ ಭೂಸ್ವಾಧೀನಾಧಿಕಾರಿ ಕಾರಣಕರ್ತರು ಎಂಬ ಆರೋಪ ಕೇಳಿ ಬಂದಿದೆ.

ಸಂತ್ರಸ್ತರಿಗೆ ಮುಳುಗಡೆ ಸರ್ಟಿ ಫಿಕೇಟ್‌ ನೀಡಿರುವ ಬಗ್ಗೆ ಸಮರ್ಪಕ ದಾಖಲೆ ನಮೂದು ಮಾಡಿಲ್ಲ. ಪ್ರಾರಂಭ ದಿಂದಲೂ ವಿಶೇಷ ಸ್ವಾಧೀನಾಧಿಕಾರಿಗಳು (ಭೂ ಸ್ವಾಧೀನ) ಮತ್ತು ವಿಶೇಷ ಭೂಸ್ವಾಧೀನಾಧಿಕಾರಿಗಳು (ಪುನರ್ವಸತಿ) ಭೂಮಿ ಮಂಜೂರು ಮಾಡಿರುವುದಕ್ಕೆ ದಾಖಲೆ ನಿರ್ವಹಣೆ ಮಾಡಿಲ್ಲ.

ಕೆಲ ಅಧಿಕಾರಿಗಳು, ಸಿಬ್ಬಂದಿ ವೈಟನರ್‌ ಹಾಕಿ ದಾಖಲೆ ನಾಶ ಮಾಡಿ ದ್ದಾರೆ ಎಂಬ ದೂರು ಇದೆ. ತಾಲ್ಲೂಕು ಕಚೇರಿಗಳಲ್ಲಿ ಮುಳುಗಡೆ ಸಂತ್ರಸ್ತರಿಗೆಂದು ಬದಲಿ ಭೂಮಿ ಮಂಜೂರು ಮಾಡಲು ಕಾಯ್ದಿರಿಸಿ, ಜಿಲ್ಲಾಧಿಕಾರಿಯ ಅಧಿಸೂಚನೆಯನ್ನು ಪಹಣಿಗಳಲ್ಲಿ ಇಂಡೀಕರಣ ಮಾಡದೆ ಇರುವುದು ಈ ಎಲ್ಲಾ ಅಕ್ರಮಕ್ಕೆ ಕಾರಣ ಎನ್ನಲಾಗಿದೆ.

ಉನ್ನತ ಮಟ್ಟದ ತನಿಖೆಯಾಗಲಿ

‘1977ರಿಂದ 81ರ ವರೆಗೆ ಹೇಮಾವತಿ ಜಲಾಶಯ ಯೋಜನೆ ಹೊಳೆನರಸೀಪುರದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ


ಅಣ್ಣೇಗೌಡ

ನಿರ್ವಹಿಸುವಾಗ ಮುಳುಗಡೆ ಜಮೀನಿಗೆ ಪರಿಹಾರ ಪಡೆಯುವ ವೇಳೆ ಅಕ್ರಮ ಪ್ರಕರಣಗಳು ಬೆಳಕಿಗೆ ಬಂದಿತ್ತು. ಆ ಕಾರಣ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಎಸ್‌.ಆರ್‌.ಬೊಮ್ಮಾಯಿ ನೇತೃತ್ವದಲ್ಲಿ ವಿಚಾರಣಾ ಸಮಿತಿ ನೇಮಕ ಮಾಡಿ, ಕ್ರಮ ತೆಗೆದುಕೊಂಡಿತು. ಭೂಸ್ವಾಧೀನ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಬದಲಿ ಜಮೀನು ಮಂಜೂರಾತಿ ಪ್ರಕ್ರಿಯೆಯು 1990–95ರ ಅಂತ್ಯಕ್ಕೆ ಮುಕ್ತಾಯವಾಗಿದೆ. ಯೋಜನೆಗಾಗಿ ಜಮೀನು ಕಳೆದುಕೊಂಡವರು ಮೃತಪಟ್ಟಿದ್ದರೂ ಈ ಹಿಂದೆ ಅವರಿಗೆ ಭೂಮಿ ಮಂಜೂರಾಗಿರುವುದನ್ನು ಮುಚ್ಚಿ ಹಾಕಿ ಅವರ ಮಕ್ಕಳು, ಮೊಮ್ಮಕ್ಕಳು, ಎರಡು, ಮೂರು ಮುಳುಗಡೆ ಸರ್ಟಿಫಿಕೇಟ್‌ ಪಡೆದು ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದು ನಿವೃತ್ತ ತಹಶೀಲ್ದಾರ್‌ ಅಣ್ಣೇಗೌಡ ಆರೋಪಿಸಿದರು.

‘ಸಕಲೇಶಪುರ ತಾಲ್ಲೂಕಿನಲ್ಲಿ ಗೋಮಾಳ, ಸರ್ಕಾರದ ವಿವಿಧ ಯೋಜನೆ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಒಂದಿಂಚೂ ಜಾಗ ಸಿಗುವುದಿಲ್ಲ. ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಆಗಿರುವುದರಿಂದ ಉನ್ನತ ಮಟ್ಟದ ಸಮಗ್ರ ತನಿಖೆ ಮಾಡಿ ನಕಲಿ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಿರುವುದನ್ನು ಅನರ್ಹ ಮಂಜೂರಾತಿ ಪ್ರಕರಣಗಳೆಲ್ಲವನ್ನೂ ರದ್ದು ಪಡಿಸಬೇಕು’ ಎಂದು ಆಗ್ರಹಿಸಿದರು.

ಕುಟುಂಬದ ಹೆಸರಿನಲ್ಲಿ ನೂರಾರು ಎಕರೆ ಭೂಮಿ

ಸಕಲೇಶಪುರ ತಾಲ್ಲೂಕಿನ ಬುಗಡಹಳ್ಳಿ ಸರ್ವೆ ನಂಬರ್‌ 138, ಅಗನಿ ಸರ್ವೆ ನಂ 104, ಕಾಡುಮನೆ ಸರ್ವೆ ನಂಬರ್‌ 88, 76 ಹಾಗೂ ಇತರ ಗ್ರಾಮಗಳಲ್ಲಿ ಸಂತ್ರಸ್ತರ ಹೆಸರಿನಲ್ಲಿ ಅಕ್ರಮವಾಗಿ ಸರ್ಕಾರಿ ಅಧಿಕಾರಿಗಳು, ನೌಕರರು ಭೂಮಿ ಮಂಜೂರು ಮಾಡಿದ್ದಾರೆ. ನಂತರ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಕ್ರಯಕ್ಕೆ ಕೊಂಡಂತೆ ನೋಂದಣಿ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಭೂ ಸುಧಾರಣಾ ಕಾಯ್ದೆ ಉಲ್ಲಂಘನೆ

ಎಚ್‌ಆರ್‌ಪಿ ವತಿಯಿಂದ ಮಂಜೂರಾತಿ ಜಮೀನನ್ನು ಒಂದೊಂದು ಕುಟುಂಬ 50–100 ಎಕರೆ ವರೆಗೂ ಕ್ರಯಕ್ಕೆ ತೆಗೆದುಕೊಂಡಿರುವುದು ಕಂಡು ಬರುತ್ತದೆ. ಭೂ ಸುಧಾರಣೆ ಕಾಯ್ದೆ ಪ್ರಕಾರ ಯಾವುದೇ ಕುಟುಂಬ ಖುಷ್ಕಿ ಜಮೀನು ಹೊಂದುವುದನ್ನು ಗರಿಷ್ಠ 40 ಎಕರೆಗೆ ಮಿತಿಗೊಳಿಸಲಾಗಿದೆ. ಇಂತಹ ಪ್ರಕರಣಗಳಲ್ಲಿಯೂ ಸರಿಯಾಗಿ ವಿಚಾರಣೆ ಮಾಡದೆ ಕ್ರಯಕ್ಕೆ ಕೊಂಡವರ ಹೆಸರಿಗೆ ಖಾತೆ ಮಾಡಿ ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಲೋಪ ಎಸಗಿದ್ದಾರೆ. ಕಾಯ್ದೆಯ 79ಎ ಮತ್ತು 79ಬಿ ಪ್ರಕಾರ ವಿಚಾರಣೆ ಮಾಡಿ, ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬಹುದು.

ಹೊಸದಾಗಿ 2,960 ಅರ್ಜಿ

ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಹಿಂದಿನ ಡಿ.ಸಿ ರೋಹಿಣಿ ಸಿಂಧೂರಿ ಅವರು, ಸಂತ್ರಸ್ತರಿಗೆ ಅರ್ಜಿ ಸಲ್ಲಿಸಲು 2017ರ ಡಿ. 30ರವರೆಗೆ ಅಂತಿಮ ಅವಕಾಶ ನೀಡಿದ್ದರು. ಆಗ ಮತ್ತೆ 2,960 ಅರ್ಜಿ ಸಲ್ಲಿಕೆಯಾದವು. ನೈಜತೆ ಪರಿಶೀಲಿಸಲು ಅವರು ಆದೇಶ ನೀಡಿದ್ದರು. ಎಷ್ಟು ಅಧಿಕೃತ ಜ್ಞಾಪನಾ (ಓಎಂ) ಮಂಜೂರಾತಿ ಆದೇಶ ನೀಡಲಾಗಿದೆ? ಓಎಂ ಆಧಾರದ ಮೇಲೆ ತಹಶೀಲ್ದಾರರು ಎಷ್ಟು ಸಾಗುವಳಿ ಚೀಟಿ ನೀಡಿದ್ದಾರೆ? ಅರ್ಜಿ ಸಲ್ಲಿಸಿರುವವರು, ಭೂಮಿ ಕಳೆದುಕೊಂಡವರಿಗೂ ಯಾವ ಸಂಬಂಧ ಎಂಬುದನ್ನು ಪರಿಶೀಲಿಸಬೇಕು. ತಮ್ಮ ಅನುಮತಿ ಇಲ್ಲದೆ ಓಎಂ ಕೊಡುವಂತಿಲ್ಲ ಎಂದು ಆದೇಶಿಸಿದ್ದರು. ಈ ಆದೇಶದ ಬಳಿಕವೂ ಡಿ.ಸಿ ಗಮನಕ್ಕೆ ತಾರದೆ ಹಲವರಿಗೆ ಅಧಿಕೃತ ಜ್ಞಾಪನಾ ಪತ್ರ ನೀಡಿರುವ ಪ್ರಕರಣಗಳೂ ಇವೆ. ಆದರೆ, ಸಂಬಂಧಿಸಿದ ಅಧಿಕಾರಿ ಸಹಿ ತಮ್ಮದಲ್ಲ ಎನ್ನುತ್ತಿದ್ದಾರೆ. ಏಜಂಟರು ಸಿಬ್ಬಂದಿಯೊಂದಿಗೆ ಶಾಮೀಲಾಗಿ ಫೋರ್ಜರಿ ಮಾಡಿರುವ ಸಂಶಯವಿದೆ.

ವರ್ಗಾವಣೆಗೊಂಡಿದ್ದ ಭೂಸ್ವಾಧೀನಾಧಿಕಾರಿಯೊಬ್ಬರು, 250 ಭೂ ಮಂಜೂರಾತಿ ಕಡತಗಳಿಗೆ ಸಹಿ ಹಾಕಿದ್ದಾರೆ ಎಂಬ ಆರೋಪ ಇದೆ. ಈ ಅಧಿಕಾರಿಯೂ ತಮ್ಮ ಸಹಿ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ‘ಘಟನೆ ನಡೆದು ವರ್ಷಕ್ಕೂ ಹೆಚ್ಚು ಸಮಯವಾಗಿರುವ ಕಾರಣ ತಾವು ಎಷ್ಟು ಕಡತಗಳಿಗೆ ಸಹಿ ಮಾಡಿದ್ದೇನೆಂಬ ನೆನಪು ಇಲ್ಲ’ ಎಂದು ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.


ಎಚ್‌.ಎಲ್‌.ನಾಗರಾಜ್‌

ದಾಖಲೆಗಳ ಪರಿಶೀಲನೆ

ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತರಿಗೆ ಪುನರ್ವಸತಿ ಹೆಸರಿನಲ್ಲಿ ವಂಚನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆ ಪ್ರಗತಿ ಹಂತದಲ್ಲಿದೆ. ಹೀಗಾಗಿ, ಹೆಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ. ಜಿಲ್ಲಾಧಿಕಾರಿಗೆ ಅಂತಿಮ ವರದಿ ಸಲ್ಲಿಸಲಾಗುವುದು

ಎಚ್‌.ಎಲ್‌.ನಾಗರಾಜ್‌, ಉಪವಿಭಾಗಾಧಿಕಾರಿ, ತನಿಖಾ ತಂಡದ ಮುಖ್ಯಸ್ಥ

 

 

* ಇವನ್ನೂ ಓದಿ...

ಮುಳುಗಡೆ ಹೆಸರಿನಲ್ಲಿ ಅಕ್ರಮ l ಸಂತ್ರಸ್ತರ ಹೆಸರಿನಲ್ಲಿ ಭೂಕಬಳಿಕೆ

ಬೆಳ್ಳಿಬೆಟ್ಟ ಕಾವಲು | ಸಂತ್ರಸ್ತರಿಗೆ ಪ್ರವೇಶವಿಲ್ಲ, ದಯಾಮರಣ ಕೇಳಿದ ನಿರಾಶ್ರಿತರು​

Post Comments (+)