ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸುರಕ್ಷತೆ: ಕಾಯ್ದೆ ಹೇಳುವುದೇನು?

ಕಾನೂನು ಉಲ್ಲಂಘನೆಗೆ ದಂಡ, ಕಠಿಣ ಶಿಕ್ಷೆ
Last Updated 28 ಜುಲೈ 2019, 1:28 IST
ಅಕ್ಷರ ಗಾತ್ರ

ಮೈಸೂರು: ‘ಶುಚಿತ್ವ ಕಾಯೋಣ, ಆಹಾರ ಕಲುಷಿತವಾಗದಂತೆ ನೋಡೋಣ, ಕಲಬೆರಕೆ ಇಲ್ಲದ ಆಹಾರ ನೀಡೋಣ’ ಎಂಬ ಮಂತ್ರವನ್ನು ಪ್ರತಿಪಾದಿಸುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮ, ನಿಬಂಧನೆಗಳು– 2011ರ ಆಗಸ್ಟ್‌ 5ರಿಂದ ಜಾರಿಗೆ ಬಂದಿವೆ.

ಉತ್ತಮ ಗುಣಮಟ್ಟದ ಆಹಾರ, ಸುರಕ್ಷಿತ ಹಾಗೂ ಶುಚಿಯಾದ ಆಹಾರವನ್ನು ನೀಡುವುದು ಪ್ರತಿಯೊಬ್ಬ ಆಹಾರ ಪದಾರ್ಥ ಮಾರಾಟಗಾರನ ಕರ್ತವ್ಯ ಆಗಿರುತ್ತದೆ. ಆಹಾರ ತಯಾರಿಸುವ ಪ್ರತಿಯೊಂದು ಘಟಕ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಈ ಉತ್ಪನ್ನಗಳನ್ನು ಮಾರಾಟ ಮಾಡುವ ಕಿರಾಣಿ ಅಂಗಡಿಯವರೂ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪರವಾನಗಿ ಪಡೆದಿರಬೇಕು. ಬೀದಿಬದಿಯಲ್ಲಿ ತಳ್ಳುಗಾಡಿಯಲ್ಲಿ ಆಹಾರ ತಯಾರಿಸಿ ಮಾರುವವರೂ ಅನುಮತಿ ಪಡೆಯುವುದು ಕಡ್ಡಾಯ. ಇಲ್ಲದೇ ಹೋದಲ್ಲಿ, ಅಂಥ ಘಟಕ/ಅಂಗಡಿಯ ಪರವಾನಗಿಯನ್ನು ರದ್ದು ಮಾಡಬಹುದು ಇಲ್ಲವೇ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರನ್ನು ಆಹಾರ ಸುರಕ್ಷತಾ ಆಯುಕ್ತರನ್ನಾಗಿ ರಾಜ್ಯ ಸರ್ಕಾರ ನೇಮಿಸಿದ್ದು, ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನ್ಯಾಯನಿರ್ಣಾಯಕ ಅಧಿಕಾರಿಯಾಗಿರುತ್ತಾರೆ. ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿಯು ಜಿಲ್ಲಾ ಅಂಕಿತ ಅಧಿಕಾರಿಯಾಗಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಹಾರ ಸುರಕ್ಷತಾ ನೋಂದಣಾಧಿಕಾರಿ ಕಾರ್ಯ ನಿರ್ವಹಿಸುತ್ತಾರೆ.

ಅಂಗಡಿಗಳಿಗೆ ಭೇಟಿ ನೀಡುವ ಅಧಿಕಾರಿಗಳು ಆಹಾರ ತಯಾರಿಕೆ, ಗುಣಮಟ್ಟ, ಸುರಕ್ಷತೆಯ ದಾಸ್ತಾನು, ಪ್ಯಾಕಿಂಗ್‌, ಸಾಗಾಣಿಕೆ, ಹಂಚಿಕೆ, ಮಾರಾಟ ಮತ್ತು ಆಮದು ವಿಚಾರದಲ್ಲಿ ತಪಾಸಣೆ ನಡೆಸುತ್ತಾರೆ. ಅನುಮಾನ ಬಂದಲ್ಲಿ, ಆಹಾರದ ಪೊಟ್ಟಣವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡುತ್ತಾರೆ. ಅವಧಿ ಮುಗಿದಿದ್ದರೆ, ಕಳಪೆ ಗುಣಮಟ್ಟದ್ದಾಗಿದ್ದರೆ ಹಾಗೂ ಅಸುರಕ್ಷಿತವಾಗಿದ್ದ ಬಗ್ಗೆ ವರದಿ ಬಂದಲ್ಲಿ, ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.

ಜಿಲ್ಲಾ ಅಂಕಿತ ಅಧಿಕಾರಿಗೆ ₹ 2.5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿರುತ್ತದೆ. ತೀವ್ರತೆ ಆಧರಿಸಿ, ಪ್ರಕರಣವನ್ನು ನ್ಯಾಯಾಲಯಕ್ಕೂ ಒಯ್ಯಬಹುದು. ನಿಯಮ ಉಲ್ಲಂಘಿಸಿದವರಿಗೆ ಕನಿಷ್ಠ 1 ವರ್ಷದಿಂದ ಗರಿಷ್ಠ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಸುರಕ್ಷಿತವಲ್ಲದ ಅಥವಾ ಕಳಪೆ ಆಹಾರ ಪದಾರ್ಥ ಸೇವಿಸಿ ತೊಂದರೆ ಅನುಭವಿಸಿದವರಿಗೆ, ತೊಂದರೆಯ ತೀವ್ರತೆ ಆಧರಿಸಿ ಆಹಾರ ತಯಾರಕರು/ ಉತ್ಪಾದಕರು ಪರಿಹಾರ ನೀಡಬೇಕಾಗುತ್ತದೆ.

ಸಿಎಫ್‌ಟಿಆರ್‌ಐ ಕಾರ್ಯನಿರ್ವಹಣೆ

ಆಹಾರದ ಪೌಷ್ಟಿಕತೆಗೂ ಗುಣಮಟ್ಟ ಇರುತ್ತದೆ. ಆ ಗುಣಮಟ್ಟವನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಆಹಾರಕ್ಕೆ ಬಳಸಬೇಕಾದ ಬಣ್ಣಗಳ ಮಿತಿ, ಆಹಾರದ ಪೊಟ್ಟಣಗಳನ್ನು ಸಿದ್ಧಗೊಳಿಸಿದ ರೀತಿ, ಆಹಾರ ಸುರಕ್ಷತಾ ಕಾಯ್ದೆಗೆ ಅನುಗುಣವಾಗಿ ಆಹಾರ ಪದಾರ್ಥಗಳು ಇವೆಯೇ ಎಂಬುದನ್ನೂ ಸಿಎಫ್‌ಟಿಆರ್‌ಐನಲ್ಲಿ ಪರೀಕ್ಷೆ ಮಾಡಲಾಗುತ್ತದೆ.

ಆಹಾರ ತಯಾರಕರಿಗೆ ಮಾಹಿತಿ, ತರಬೇತಿ, ತಂತ್ರಜ್ಞಾನ, ಸುರಕ್ಷತೆ, ಪಾಲಿಸಬೇಕಾದ ಕ್ರಮಗಳ ಬಗ್ಗೆಯೂ ತಿಳಿವಳಿಕೆ ನೀಡುತ್ತದೆ. ಆಹಾರ ಗುಣಮಟ್ಟದ ಪರೀಕ್ಷೆಗಾಗಿ ಸುಸಜ್ಜಿತ ಉಪಕರಣಗಳು, ವಿಧಾನಗಳನ್ನು ಅಭಿವೃದ್ಧಿಪಡಿಸುತ್ತದೆ. ಆಹಾರ ಪರೀಕ್ಷೆಗೆ ಸುಸಜ್ಜಿತ ಪ್ರಯೋಗಾಲಯವಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳೂ ಇಲ್ಲಿ ನಡೆಯುತ್ತವೆ.

ಆಹಾರ ತಯಾರಕರು ಉದ್ಯಮ ಆರಂಭಿಸುವಾಗ ಗುಣಮಟ್ಟ, ಸುರಕ್ಷತೆ ಬಗ್ಗೆ ಸಂಸ್ಥೆಯ ವಿಜ್ಞಾನಿಗಳಿಂದ ಮಾಹಿತಿ ಪಡೆಯುತ್ತಾರೆ. ಆಹಾರದ ತಯಾರಿ, ಸಂಸ್ಕರಣೆಯ ವಿಧಾನಗಳನ್ನು ಉದ್ದಿಮೆದಾರರ ಬಳಿಗೆ ತೆರಳಿಯೂ ಪರೀಕ್ಷೆ ಮಾಡಲಾಗುತ್ತದೆ. ಜತೆಗೆ ಅವರ ಉತ್ಪನ್ನಗಳನ್ನು ಇಲ್ಲಿನ ಪ್ರಯೋಗಾಲಯಗಳಲ್ಲಿ ತಪಾಸಣೆಗೊಳಪಡಿಸಿ ಮಾಹಿತಿ ನೀಡಲಾಗುತ್ತದೆ ಎನ್ನುತ್ತಾರೆ ಸಿಎಫ್‌ಟಿಆರ್‌ಐನ ಮುಖ್ಯ ವಿಜ್ಞಾನಿ, ಡಾ.ಅಲೋಕ್‌ಕುಮಾರ್‌ ಶ್ರೀವಾಸ್ತವ.

ಕಾಯ್ದೆಯ ಅಂಶಗಳು

*ಆಹಾರ ಪದಾರ್ಥಗಳಿಗೆ ವೈಜ್ಞಾನಿಕ ಗುಣಮಟ್ಟವನ್ನು ನಿಗದಿಗೊಳಿಸುವುದು

*ಆಹಾರ ತಯಾರಿಕೆ, ಸಂಗ್ರಹ, ವಿತರಣೆ, ಸಗಟು, ಚಿಲ್ಲರೆ ಮಾರಾಟ ಹಾಗೂ ಆಮದು ಈ ವಿವಿಧ ಹಂತಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ದೊರೆಯುವಂತೆ ಮಾಡುವುದು

*ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಾಗಾಣಿಕೆ, ಮಾರಾಟದ ಹಂತಗಳಲ್ಲಿ ಸುರಕ್ಷತೆ ಕಾಪಾಡುವುದು

*ಉತ್ಪಾದನೆಯಿಂದ ಉಣ್ಣುವವರೆಗೆ ಆಹಾರದ ಸುರಕ್ಷತೆ

*ಮನುಷ್ಯನು ಸೇವಿಸುವ ಆಹಾರ ಪದಾರ್ಥವು ನೈಸರ್ಗಿಕವಾಗಿರಬೇಕು

*ರಾಸಾಯನಿಕ/ ಕಲಬೆರಕೆ ಮುಕ್ತವಾಗಿರಬೇಕು

*ಗುಣಮಟ್ಟ ಹಾಗೂ ಸುರಕ್ಷಿತತೆಯಿಂದ ಕೂಡಿರಬೇಕು

*ತಯಾರಿಕಾ ಕಂಪನಿಗಳು ನಿಗದಿತ ಮಾನದಂಡ ಅನುಸರಿಸಿರಬೇಕು

ಪತ್ತೆಗೆ ಹಲವು ಪರೀಕ್ಷೆ

ಆಹಾರದ ಸುರಕ್ಷತೆ ಮತ್ತು ಗುಣಮಟ್ಟದ ಪರೀಕ್ಷೆಗೆ ಮೂರು ರೀತಿಯಲ್ಲಿ ಮಾದರಿಗಳನ್ನು (ಸಮೀಕ್ಷೆ ಉದ್ದೇಶದ ಮಾದರಿ, ಕಾನೂನಾತ್ಮಕ ಸಂಗ್ರಹ, ದೂರು ಆಧಾರಿತ) ಸಂಗ್ರಹಿಸಲಾಗುತ್ತದೆ.

ಒಂದು ಉತ್ಪನ್ನ ದೋಷಪೂರಿತವಾಗಿದ್ದರೆ, ಮಾಹಿತಿ ಸರಿ ಇಲ್ಲದೆ ಇದ್ದರೆ ಅದು ಮಿಸ್‌ ಬ್ರ್ಯಾಂಡ್‌ ಉತ್ಪನ್ನಗಳ ಅಡಿಯಲ್ಲಿ ಬರುತ್ತದೆ. ಒಂದು ಆಹಾರ ಪದಾರ್ಥದ ಗುಣಮಟ್ಟ ಇಂತಿಷ್ಟೇ ಇರಬೇಕು ಎಂಬ ಮಾನದಂಡ ಕಾಯ್ದೆಯಲ್ಲಿ ಇದೆ. ಅದಕ್ಕೆ ಪೂರಕವಾಗಿ ಇಲ್ಲದೆ ಇದ್ದರೆ ಅಂಥವುಗಳನ್ನು ಗುಣಮಟ್ಟ ರಹಿತ (ಸಬ್‌ ಸ್ಟ್ಯಾಂಡರ್ಡ್‌) ಎನ್ನಲಾಗುತ್ತದೆ. ಮಾರಣಾಂತಿಕ ಸಮಸ್ಯೆಗಳನ್ನು ಉಂಟುಮಾಡುವ ಅಂಶಗಳು ಇದ್ದರೆ ಅಂಥವುಗಳ ತಯಾರಕರಿಗೆ ದಂಡ, ಕಠಿಣ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ವಿಷಕಾರಿ ರಾಸಾಯನಿಕಗಳು ಸೇರಿಕೊಂಡಿರುವುದನ್ನು ಪತ್ತೆ ಮಾಡಲು ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತದೆ ಎನ್ನುತ್ತಾರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಮೈಸೂರಿನ ಅಂಕಿತ ಅಧಿಕಾರಿ ಡಾ.ಎಸ್‌.ಚಿದಂಬರ.

***

* ಕಲಬೆರಕೆಯಾದ ಕೆಲವೇ ಕೆಲವು ಪದಾರ್ಥಗಳನ್ನು ಮಾತ್ರ, ಜನಸಾಮಾನ್ಯರು ಸರಳ ಪರೀಕ್ಷೆಗಳ ಮೂಲಕ ಕಂಡು ಹಿಡಿಯಬಹುದು. ಉಳಿದವುಗಳೆಲ್ಲವನ್ನೂ ಸೂಕ್ಷ್ಮ ಪರೀಕ್ಷೆಗಳಿಂದಲೇ ತಿಳಿದುಕೊಳ್ಳಬೇಕಾಗುತ್ತದೆ

- ಡಾ.ಅಲೋಕ್‌ ಕುಮಾರ್‌ ಶ್ರೀವಾಸ್ತವ, ಮುಖ್ಯ ವಿಜ್ಞಾನಿ, ಸಿಎಫ್‌ಟಿಆರ್‌ಐ

***

* ಯಾವ ಪದಾರ್ಥಗಳನ್ನು ಹೇಗೆ ಕಲಬೆರಕೆ ಮಾಡಲಾಗುತ್ತದೆ ಎಂಬುದನ್ನು ತಿಳಿದುಕೊಂಡರೆ ಕಲಬೆರಕೆಯನ್ನು ಮೇಲ್ನೋಟಕ್ಕೇ ತಿಳಿಯಬಹುದು. ಆದರೆ, ಸೂಕ್ಷ್ಮ ಪರೀಕ್ಷೆಗಳನ್ನು ಪ್ರಯೋಗಾಲಯದಲ್ಲೇ ನಡೆಸಬೇಕಾಗುತ್ತದೆ.

- ಡಾ.ಎಸ್‌.ಚಿದಂಬರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT