ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ ಸೇರುತ್ತಿದೆ, ಆಹಾರವಲ್ಲ ವಿಷ!

ಹಳ್ಳಿಯಿಂದ ದಿಲ್ಲಿತನಕ ಕಲಬೆರಕೆ ಜಾಲ * ದೌರ್ಬಲ್ಯವೇ ಬಂಡವಾಳ * ನಿಷ್ಕ್ರಿಯ ಪ್ರಾಧಿಕಾರ
Last Updated 27 ಜುಲೈ 2019, 20:09 IST
ಅಕ್ಷರ ಗಾತ್ರ

ಆಹಾರ ಪೌಷ್ಟಿಕತೆಯಿಂದ ಕೂಡಿದ್ದರೆ ಆರೋಗ್ಯ. ಅದು ಕಲಬೆರಕೆಯಾಗಿದ್ದರೆ? ಇವತ್ತಿನ ಪರಿಸ್ಥಿತಿ ಇದು. ನಾವು ತಿನ್ನುವ ಬಹುತೇಕ ಆಹಾರ ವಿಷಪೂರಿತವಾಗಿದೆ. ಅಂದರೆ, ಕಲಬೆರಕೆಯಾಗಿದೆ! ಕಾಲ, ಪ್ರದೇಶಗಳನ್ನೂ ಮೀರಿ ಕಲಬೆರಕೆ ಎಂಬುದು ಎಗ್ಗಿಲ್ಲದೇ ಮುನ್ನುಗುತ್ತಿದೆ. ಇದಕ್ಕೆ ಕಾರಣಗಳೇನು? ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು? ಆಹಾರ ಸುರಕ್ಷತೆಗೆ ರಚನೆಯಾದ ಪ್ರಾಧಿಕಾರದ ಕತೆ ಏನು? ಎಂಬ ವಿಷಯಗಳ ಕುರಿತ ಮಾಹಿತಿ ಒಳನೋಟದಲ್ಲಿ...

ಬೆಂಗಳೂರು: ಕಡಿಮೆ ದುಡ್ಡು, ಹೆಚ್ಚು ರುಚಿ ಮತ್ತು ಬಣ್ಣದ ಆಕರ್ಷಣೆಗೆ ಗಂಟುಬಿದ್ದು ದಿನದಿಂದ ದಿನಕ್ಕೆ ಕಲಬೆರಕೆ ಆಹಾರ ಜಾಲಕ್ಕೆ ಸಿಲುಕುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಜಾಲದ ಹಿಂದಿನ ಶಕ್ತಿಗಳು ಜನರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಕೋಟ್ಯಂತರ ಲೂಟಿ ಮಾಡುತ್ತಿವೆ. ಇದರಿಂದ ಅಪಾಯಕಾರಿ ರೋಗಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

ತೀರ ಇತ್ತೀಚಿನವರೆಗೆ ಕಲಬೆರಕೆ ಎಂದರೆ ಹಾಲಿಗೆ ನೀರು ಸೇರಿಸುವುದು ಎಂದೇ ಭಾವಿಸ ಲಾಗಿತ್ತು. ತಂತ್ರಜ್ಞಾನ ಬೆಳೆದಂತೆ ಹೊಸ ಬಗೆಯ ಕಲಬೆರಕೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಲಿಗೆ ಡಿಟರ್ಜೆಂಟ್‌–ಯೂರಿಯಾ, ಕಾಫಿ ಪುಡಿಗೆ ಮರದ ಹೊಟ್ಟು, ಮಣ್ಣು, ಅಡುಗೆಗೆ ನಕಲಿ ಎಣ್ಣೆ, ಬೆಣ್ಣೆ, ಕೊಬ್ಬು, ಬಣ್ಣ ಬೆರೆಸಲಾಗುತ್ತಿದೆ. ಬಹುತೇಕ ಹೋಟೆಲ್ ಮತ್ತು ಬೀದಿಬದಿ ಮಾರಾಟ ಮಾಡುವ ಆಹಾರ, ಸಿಹಿ, ಖಾರ ತಿನಿಸು ಮತ್ತು ಕರಿದ ಪದಾರ್ಥ ಗಳಲ್ಲೂ ರುಚಿ ಹೆಚ್ಚಿಸಲು, ಬಣ್ಣದಿಂದ ಆಕರ್ಷಿಸಲು ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಹಣ್ಣು ತರಕಾರಿಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ರಾಸಾಯನಿಕಗಳನ್ನು ಬಳಸಲಾಗುತ್ತಿದೆ.

ಕರ್ನಾಟಕದಲ್ಲಿ ನಾವು ಸೇವಿಸುವ ಆಹಾರದಲ್ಲಿ ಶೇ 20ರಷ್ಟು ಕಲಬೆರಕೆ ಪದಾರ್ಥ ಇದ್ದೇ ಇರುತ್ತವೆ. ನೆರೆಯ ತಮಿಳುನಾಡಿನಲ್ಲಿ ಇದು ಶೇ 40 ರಷ್ಟಿದೆ! ಕಲಬೆರೆಕೆ ತಡೆಗೆ ಕಾನೂನು ಜಾರಿಯಲ್ಲಿ ಇದ್ದರೂ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿಲ್ಲ. ಇದರ ಲಾಭ ಪಡೆಯುತ್ತಿರುವ ಕಲಬೆರೆಕೆ ಜಾಲ ರಾಜಾರೋಷವಾಗಿ ತನ್ನ ದಂಧೆ ನಡೆಸುತ್ತಿದೆ. ಸರ್ಕಾರ ನಿಗದಿ ಮಾಡಿರುವ ಗುಣಮಟ್ಟದ ಮಾನದಂಡವನ್ನು ವೈಜ್ಞಾನಿಕತೆ ನೆರವಿನೊಂದಿಗೆ ಸಾಬೀತು ಮಾಡಿ ಅಪೌಷ್ಟಿಕ ಆಹಾರ ಮಾರಾಟ ಮಾಡುವ ಪರಿಪಾಠ ಬೆಳೆಯುತ್ತಿದೆ. ಸಂಸ್ಕರಣೆ ಹೆಸರಲ್ಲಿ ಪೋಷಕಾಂಶಗಳನ್ನು ಕದಿಯಲಾಗುತ್ತಿದೆ. ಹೀಗೆ ಕಲಬೆರಕೆ ಪ್ರಕ್ರಿಯೆ ಮಗ್ಗುಲು ಬದಲಿಸಿ ಮುನ್ನುಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅನಾ ರೋಗ್ಯ, ಹೊಸ ಹೊಸ ಕಾಯಿಲೆಗಳಿಗೆ ಆಹಾರ ಕಲಬೆರಕೆಯೇ ಪ್ರಮುಖ ಕಾರಣ. ಅಂದಾಜಿನ ಪ್ರಕಾರ ಯಾವುದೇ ಔಷಧಗಳಿಗೂ ಜಗ್ಗದ ಕ್ಷಯರೋಗಕ್ಕೆ ದೇಶದಲ್ಲಿ ಪ್ರತಿ ವರ್ಷ 4.50 ಲಕ್ಷ ಜನ ಪ್ರಾಣ ಬಿಡುತ್ತಿದ್ದಾರೆ. ಔಷಧಗಳಿಗೂ ಕೆಲ ರೋಗಗಳು ಜಗ್ಗದೇ ಇರಲು ನಾವು ಸೇವಿಸುತ್ತಿರುವ ಆಹಾರದಲ್ಲಿನ ರೋಗ ನಿರೋಧಕ ಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತಿರುವ ಅಂಶಗಳೇ ಕಾರಣ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.

ವೈಫಲ್ಯವೇಕೆ? : ಪದಾರ್ಥವೊಂದರಲ್ಲಿ ಸೂಚಿ ಸಲ್ಪಟ್ಟ ಅಂಶಗಳು ನಿಗದಿತ ಪ್ರಮಾಣದಲ್ಲಿ ಇಲ್ಲದಿರುವುದು ಇಲ್ಲವೇ ಕಡಿಮೆ ಅಥವಾ ಹೆಚ್ಚಿರುವುದೇ ಕಲಬೆರಕೆ. ಆಹಾರ ಕಲಬೆರೆಕೆ ಮಾಡಿದ ಅಪರಾಧಗಳಿಗೆ ₹25 ಸಾವಿರದಿಂದ ₹10ಲಕ್ಷ ದವರೆಗೆ ದಂಡ ಹಾಗೂ 2 ತಿಂಗಳಿಂದ 7 ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಮಾಡಬಹುದು. ರಾಜ್ಯದಲ್ಲಿ 4,55,195 ನೋಂದಾಯಿತ, ಪರವಾನಗಿ ಪಡೆದ ಹೋಟೆಲ್‌, ಆಹಾರ ಉದ್ದಿಮೆಗಳಿವೆ. ಆದರೆ, ಅವುಗಳ ಮೇಲೆ ನಿಗಾ ವಹಿಸಲು, ಗುಣಮಟ್ಟ ಪರೀಕ್ಷಿಸಲು ವೈಜ್ಞಾನಿಕ ಸಲಕರಣೆಗಳು ಮತ್ತು ಅಗತ್ಯ ಸಿಬ್ಬಂದಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಬಳಿ ಇಲ್ಲ.

ಪ್ರತಿ ತಾಲ್ಲೂಕಿಗೆ ಒಬ್ಬರಂತೆ ಆಹಾರ ಸುರಕ್ಷತಾ ಅಧಿಕಾರಿ ಇರಬೇಕು ಎನ್ನುತ್ತದೆ ನಿಯಮ. ಆದರೆ ರಾಜ್ಯದ ಕೆಲವು ತಾಲ್ಲೂಕುಗಳಿಗೆ ಸೇರಿದಂತೆ ಒಬ್ಬ ಆಹಾರ ಸುರಕ್ಷತಾ ಅಧಿಕಾರಿ ಕೆಲಸ ಮಾಡುತ್ತಿದ್ದಾರೆ. ದಾಖಲೆಗಳನ್ನು ನಿರ್ವಹಿಸಬೇಕಾದ ಹೆಚ್ಚುವರಿ ಹೊಣೆಯೂ ಅವರ ಮೇಲಿದೆ. ಹೀಗಾಗಿ ಆಹಾರ ಗುಣಮಟ್ಟದ ಮೇಲೆ ನಿಗಾ ವಹಿಸಲು ಪ್ರಾಧಿಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಗುಣಮಟ್ಟ ನಿಗದಿ ಕಾರಣವಾಯಿತೇ?: ಸರ್ಕಾರ ಆಹಾರ ಪದಾರ್ಥಗಳಲ್ಲಿ ಇಂತಿಂಥ ಅಂಶ ಇಷ್ಟಿಷ್ಟೇ ಪ್ರಮಾಣದಲ್ಲಿ ಇರಬೇಕು ಎಂದು ಹೇಳುತ್ತದೆ. ಆದರೆ ನೈಜತೆ ಮತ್ತು ವಿಶ್ವಾಸಾರ್ಹತೆಗೆ ಹೆಚ್ಚಿನ ಗಮನ ನೀಡುವುದಿಲ್ಲ. ಉದಾಹರಣೆಗೆ ಹಾಲಿನಲ್ಲಿ ಕೊಬ್ಬು, ಪೌಷ್ಟಿಕಾಂಶ ಇಂತಿಷ್ಟೇ ಪ್ರಮಾಣದಲ್ಲಿ ಇರಬೇಕು ಎಂದು ಹೇಳಲಾಗುತ್ತದೆ. ಯೂರಿಯಾ, ಎಣ್ಣೆ, ನೀರು, ಉಪ್ಪು ಸೇರಿದಂತೆ ಕೆಲ ರಾಸಾಯನಿಕಗಳನ್ನು ಬಳಸಿ ಬಿಳಿ ದ್ರವ ತಯಾರಿಸುವ ಕಲಬೆರಕೆ ದಂಧೆಕೋರರು ಗುಣಮಟ್ಟದ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಿದ್ದಾರೆ. ರಾಸಾಯನಿಕಗಳ ಮಿಶ್ರಣದಿಂದ ಗುಣಮಟ್ಟ ಪರೀಕ್ಷೆಯಲ್ಲಿ ಪಾಸಾಗಬಹುದು ಎಂಬುದು ಈಗಾ ಗಲೇ ಹಲವರಿಗೆ ಗೊತ್ತಾಗಿದೆ. ಇದು ವ್ಯಾಪಕ ವಾದರೆ, ಭವಿಷ್ಯದಲ್ಲಿ ಬಹುದೊಡ್ಡ ಅಪಾಯವೇ ಎದುರಾಗಲಿದೆ ಎನ್ನುತ್ತಾರೆ ಆಹಾರ ತಜ್ಞ ಕೆ.ಸಿ ರಘು.

ವರ್ಣಗಳ ಕುರಿತಾದ ಗೊಂದಲ: ನಮ್ಮಲ್ಲಿ ವರ್ಣಗಳ ಕುರಿತಾದ ಗೊಂದಲಗಳಿವೆ. ಬಿಳಿ ಪರಿಶುದ್ಧವೆಂಬ, ಪರಿಶುದ್ಧವೇ ಅಂತಿಮವೆಂಬ ನಂಬಿಕೆ ಆಳವಾಗಿ ಬೇರೂರಿದೆ. ಸಮಾಜದ ಬೇಡಿಕೆಗೆ ಪೂರಕವಾಗಿಯೇ ಪದಾರ್ಥಗಳನ್ನು ಶುದ್ಧಗೊಳಿಸುವ (ರೀಫೈನ್ಡ್‌) ಪ್ರಕ್ರಿಯೆ ನಡೆಯುತ್ತಿದೆ. ಅಕ್ಕಿಯನ್ನು ಪಾಲಿಶ್‌ ಮಾಡಿ ಅದರಲ್ಲಿನ ‘ವಿಟಮಿನ್‌ ಇ’ ಅನ್ನು ಪ್ರತ್ಯೇಕಿಸಲಾಗುತ್ತದೆ. ಖಾದ್ಯ ತೈಲವನ್ನೂ ರೀಫೈನ್ಡ್‌ ಮಾಡಿ ಪೋಷಕಾಂಶಗಳನ್ನು ತೆಗೆಯ ಲಾಗುತ್ತಿದೆ. ಪೋಷಕಾಂಶಗಳನ್ನು ತೆಗೆದುಹಾಕುವ ಈ ರೀಫೈನ್ಡ್‌ ಪ್ರಕ್ರಿಯೆಯೂ ಒಂದು ಬಗೆಯ ಕಲಬೆರಕೆಯೇ.

ಪೋಷಕಾಂಶಗಳನ್ನು ತೆಗೆದ ಆಹಾರ ಪದಾರ್ಥಗಳು ಮಧುಮೇಹಕ್ಕೆ ಕಾರಣವಾಗುತ್ತಿವೆ. ಪರಿಶುದ್ಧತೆಯ ಮೋಹ ಹೆಚ್ಚಾದಂತೆಲ್ಲ ಆಹಾರದಲ್ಲಿನ ಪೋಷಕಾಂಶಗಳನ್ನು ಹೊರ ತೆಗೆಯುವ ರೀಫೈನ್ಡ್‌ ಪ್ರವೃತ್ತಿಯೂ ಹೆಚ್ಚುತ್ತಾ ಸಾಗಿದೆ. ಇದು ಅನಾರೋಗ್ಯಕರ ಸಮಾಜ ಸೃಷ್ಟಿಗೆ ಕಾರಣವಾಗುತ್ತಿದೆ. ಪ್ರತಿಯೊಂದೂ ಬಿಳುಪಾಗಿ ರಬೇಕು, ಪರಿಶುದ್ಧವಾಗಿರಬೇಕೆಂಬ ವ್ಯಾಮೋಹವು ಜನರನ್ನು ಪರೋಕ್ಷವಾಗಿ ಸಂಕಟಕ್ಕೆ ತಳ್ಳುತ್ತಿದೆ.

ಕಲಬೆರಕೆಯ ಹಿಂದೆ ಮಾಫಿಯಾ ಜಾಲ ?

ಕಲಬೆರಕೆಯ ಹಿಂದೆ ದೊಡ್ಡ ಮಾಫಿಯಾಗಳಿರುವುದನ್ನು, ದಂಧೆ ನಡೆಯುತ್ತಿರುವುದನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಅಲ್ಲಗೆಳೆಯುತ್ತಾರೆ. ಆದರೆ, ಸ್ಥಳೀಯ ಮಟ್ಟದಲ್ಲಿ ಸಣ್ಣ ಸಣ್ಣ, ಪ್ರತ್ಯೇಕ ಗುಂಪುಗಳಾಗಿ, ಸೀಮಿತ ವ್ಯಾಪ್ತಿಯಲ್ಲಿ ದಂಧೆ ರೂಪದಲ್ಲಿ ನಡೆಯುತ್ತಿರುವ ಸಾಧ್ಯತೆಗಳನ್ನು ಅಧಿಕಾರಿಗಳು ಮತ್ತು ಆಹಾರ ತಜ್ಞರೂ ಒಪ್ಪುತ್ತಾರೆ. ಆಹಾರ ಕಲಬೆರಕೆಯು ಒಂದಕ್ಕೊಂದು ಪೂರಕವಾಗಿ ನಡೆಯುವ ಪ್ರಕ್ರಿಯೆ. ಉತ್ಪಾದನೆಯಾಗುವ ವೇಳೆ ಕ್ರಿಮಿನಾಶಗಳು, ಸಂಸ್ಕರಣೆ ವೇಳೆ ರಾಸಾಯನಿಕಗಳು, ಪ್ಯಾಕೇಜ್‌ ವೇಳೆ ಅನ್ಯ ಪದಾರ್ಥಗಳು ಆಹಾರದಲ್ಲಿ ಸೇರಿಕೊಳ್ಳುತ್ತಿವೆ. ಮಾರಾಟದ ವೇಳೆ ತೂಕದಲ್ಲಿ ವ್ಯತ್ಯಾಸಗಳಾಗುತ್ತಿವೆ. ಹಾಗಾಗಿ ಇದೊಂದು ವ್ಯವಸ್ಥಿತ ಜಾಲ ಎನ್ನಲು ಅಡ್ಡಿ ಇಲ್ಲ.

316: ಕಳೆದ ಒಂದು ವರ್ಷದಲ್ಲಿ ರಾಜ್ಯ ಆಹಾರ ಸುರಕ್ಷತಾ ಪ್ರಾಧಿಕಾರ ಪತ್ತೆ ಹಚ್ಚಿದ ಆಹಾರ ಕಲಬೆರಕೆ ಪ್ರಕರಣಗಳು

116066: ರಾಜ್ಯದಲ್ಲಿರುವ ಪರವಾನಗಿ ಪಡೆದ ಹೋಟೆಲ್‌, ಆಹಾರ ಉದ್ದಿಮೆಗಳು

339129: ರಾಜ್ಯದಲ್ಲಿರುವ ನೋಂದಾಯಿತ ಆಹಾರ ಉದ್ದಿಮೆಗಳು

40%: ಸೂಕ್ತ ರಚನೆ ಇಲ್ಲ ಎಂಬ ಕಾರಣಕ್ಕೆ ಜಗತ್ತಿನಲ್ಲಿ ಬಳಕೆಯಾಗದೇ ವ್ಯರ್ಥವಾಗುತ್ತಿರುವ ಕ್ಯಾರೆಟ್‌ ಉತ್ಪಾದನೆ.

4.50 ಲಕ್ಷ: ಮಲ್ಟಿ ಡ್ರಗ್‌ ರೆಸಿಸ್ಟೆಂಟ್‌–ಬಹು ಔಷದ ನಿರೋಧಕ ಕ್ಷಯರೋಗಕ್ಕೆ ಪ್ರತಿ ವರ್ಷ ಭಾರತದಲ್ಲಿ ಬಲಿಯಾಗುತ್ತಿರುವವರ ಸಂಖ್ಯೆ.

(ಆಹಾರ ಮೂಲದಿಂದ ಆ್ಯಂಟಿಬಯೋಟಿಕ್‌ಗಳು ದೇಹ ಸೇರುತ್ತಿರುವುದೇ ಇದಕ್ಕೆ ಕಾರಣ)

* ಆಹಾರ ಕಲಬೆರಕೆ ಪತ್ತೆಗಾಗಿ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಸಾರ್ವಜನಿಕರಿಗೂ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನಷ್ಟು ಅನುದಾನ ಮತ್ತು ಸಿಬ್ಬಂದಿ ನೇಮಕ ಆಗಬೇಕಿದೆ. ಆಹಾರ ಪ್ರಯೋಗಾಲಯಗಳನ್ನು ಉನ್ನತೀಕರಿಸಬೇಕಾಗಿದೆ.

- ಪಂಕಜ್‌ ಕುಮಾರ್‌ ಪಾಂಡೆ, ರಾಜ್ಯ ಆಹಾರ ಸುರಕ್ಷತಾ ಆಯುಕ್ತ

* ಸರ್ಕಾರ ಗುಣಮಟ್ಟಕ್ಕಿಂತಲೂ ಆಹಾರದ ನೈಜತೆ, ವಿಶ್ವಾಸಾರ್ಹತೆಯನ್ನು ಗುರುತಿಸಬೇಕು. ಆಹಾರ ಉದ್ದಿಮೆ ಸ್ಥಾಪನೆಗೆ ಇರುವ ಲೈಸೆನ್ಸ್‌ ಪದ್ಧತಿಯನ್ನು ಸರಳೀಕರಿಸಬೇಕು. ಕಾನೂನುಗಳೂ ಬದಲಾಗಬೇಕು. ಜನರೂ ಅಷ್ಟೇ ಆಹಾರದ ಬಿಳುಪು, ಹೊಳಪಿನ ಆಸೆಗೆ ಬೀಳಬಾರದು

- ಕೆ.ಸಿ ರಘು, ಆಹಾರ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT