ಶನಿವಾರ, ಜುಲೈ 2, 2022
24 °C

ಒಳನೋಟ | ಗಾಡ್ಗೀಳ್, ಕಸ್ತೂರಿರಂಗನ್‌ ವರದಿಗಳ ಸಾರ ಏನು?

ರವಿಪ್ರಕಾಶ್ ಎಸ್. Updated:

ಅಕ್ಷರ ಗಾತ್ರ : | |

ವಿಶ್ವದ ಜೀವವೈವಿಧ್ಯಗಳ ಕಣಜ, ನಿತ್ಯ ಹರಿದ್ವರ್ಣ ಕಾನನದ ತವರು ಎಂದೆಲ್ಲ ಗುರುತಿಸುವ ಪಶ್ಚಿಮಘಟ್ಟ ನಾಶವಾಗುತ್ತದೆ ಎನ್ನುವ ಆತಂಕದ ಮಾತುಗಳು ಎಲ್ಲೆಡೆ ಕೇಳಿಬಂದ ಪರಿಣಾಮ ಕೇಂದ್ರ ಸರ್ಕಾರವು 2009ರಲ್ಲಿ ಖ್ಯಾತ ವಿಜ್ಞಾನಿ ಮಾಧವ್‌ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯನ್ನು ರಚಿಸಿತು. ಗಾಡ್ಗೀಳ್‌ ವರದಿ ಬಂದ ನಂತರ ಸಮಾಜದ ವಿವಿಧ ಸ್ತರದ ಜನ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರಿಂದ ಪಶ್ಚಿಮಘಟ್ಟ ಕಾಪಾಡಲು ಅನುಸರಿಸಬೇಕಾದ ಕ್ರಮಗಳನ್ನು ಸೂಚಿಸಲು ಬಾಹ್ಯಾಕಾಶ ವಿಜ್ಞಾನಿ ಡಾ.ಕಸ್ತೂರಿರಂಗನ್‌ ನೇತೃತ್ವದಲ್ಲಿ ಪಶ್ಚಿಮ ಘಟ್ಟ ಉನ್ನತ ಮಟ್ಟದ ಕಾರ್ಯತಂಡವನ್ನು 17.08.2012 ರಲ್ಲಿ ಕೇಂದ್ರ ಸರ್ಕಾರ ರಚಿಸಿತು.

‘ವಿವಿಧ ರಾಜಕೀಯ ಪಕ್ಷಗಳು, ರಾಜಕಾರಣಿಗಳು, ಟಿಂಬರ್‌, ಗಣಿ ಮಾಫಿಯಾಗಳು ಮತ್ತು ವಿವಿಧ ಹಿತಾಸಕ್ತಿಗಳ ಗುಂಪುಗಳು ಎರಡೂ ವರದಿಗಳನ್ನು ವಿರೋಧಿಸುತ್ತಾ ಬಂದಿವೆ. ಕೇರಳ ಮತ್ತು ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಾಕೃತಿಕ ವಿಕೋಪದ ರೌದ್ರತೆಯನ್ನು ನೋಡಿದ ಬಳಿಕ ಗಾಡ್ಗೀಳ್ ವರದಿ ಮತ್ತೆ ಚರ್ಚೆಗೆ ಬಂದಿತು. ಆದರೆ, ರಾಜಕೀಯ ಪಕ್ಷಗಳಿಗೆ ಆ ಪ್ರದೇಶಗಳ ಮತಗಳ ಜತೆಗೆ ಜೇಬು ತುಂಬುವ ಬೃಹತ್‌ ಯೋಜನೆಗಳೂ ಬೇಕು. ವರದಿಗಳಲ್ಲಿ ಇಲ್ಲದ ಅಂಶಗಳನ್ನು ಪ್ರಸ್ತಾಪಿಸಿ ಭಯವನ್ನು ಬಿತ್ತಿ ಜನರನ್ನು ಎತ್ತಿಕಟ್ಟುವ ಕೆಲಸ ನಡೆದಿದೆ’ ಎಂಬುದು ಈ ವರದಿಗಳನ್ನು ಬೆಂಬಲಿಸುವವರ ವಾದ.

ಗಾಡ್ಗೀಳ್ ವರದಿ ಸಾರವೇನು: ಮಾಧವ್‌ ಗಾಡ್ಗೀಳ್‌ ವರದಿ ಪರಿಸರ ಮತ್ತು ಪರಿಸರವಾದಿಗಳಿಗೆ ಪೂರಕವಾಗಿದ್ದು, ಅಭಿವೃದ್ಧಿ ಪರವಾಗಿಲ್ಲ ಎಂಬುದು ವರದಿಯನ್ನು ವಿರೋಧಿಸುವವರ ಆರೋಪ. ಈ ವರದಿಯಲ್ಲಿ ಪಶ್ಚಿಮಘಟ್ಟದ ಶೇ 64ರಷ್ಟು ಪ್ರದೇಶವನ್ನು ವಿಸ್ತೃತವಾಗಿ ವರ್ಗೀಕರಿಸಿದ್ದಾರೆ. ಆರು ರಾಜ್ಯಗಳ 44 ಜಿಲ್ಲೆಗಳ 142 ತಾಲ್ಲೂಕುಗಳು ಇದರಡಿ ಬರುತ್ತವೆ. ಪರಿಸರ ಸೂಕ್ಷ್ಮ ವಲಯಗಳನ್ನು ಇಎಸ್‌ಝಡ್‌1, ಇಎಸ್‌ಝಡ್‌ 2 ಮತ್ತು ಇಎಸ್‌ಝಡ್‌ 3 ಎಂದು ಹೆಸರಿಸಿದ್ದರು.

ವಿಶ್ವ ಜೈವಿಕ ವೈವಿಧ್ಯಗಳ ಪ್ರಮುಖ ಎಂಟು ತಾಣಗಳಲ್ಲಿ ಪಶ್ಚಿಮಘಟ್ಟವೂ ಒಂದು ಎಂದು ಯುನೆಸ್ಕೋ ಗುರುತಿಸಿದೆ. ಸರಿಸೃಪ, ಉಭಯಚರ, ಮೀನುಗಳು, ಪಕ್ಷಿಗಳು ಮತ್ತು ಸಸ್ತನಿಗಳ ಪ್ರಭೇದಗಳ ಪೈಕಿ ದೇಶದ ಶೇ 30ರಷ್ಟು ಪಶ್ಚಿಮಘಟ್ಟದಲ್ಲಿವೆ. ಹೀಗಾಗಿ ಅಪರೂಪದ ಜೀವವೈವಿಧ್ಯಗಳ ಕಣಜ ಎಂದೇ ಕರೆಯಲಾಗುತ್ತದೆ. ಇಎಸ್‌ಝಡ್‌ 1 ಅಡಿ ಅಭಿವೃದ್ಧಿ ಚಟುವಟಿಕೆಗಳಾದ ಗಣಿಗಾರಿಕೆ, ಉಷ್ಣ ವಿದ್ಯುತ್‌ ಸ್ಥಾವರಗಳು, ಅಣೆಕಟ್ಟುಗಳು ಸ್ಥಾಪನೆಗೆ ನಿಷೇಧ ಮತ್ತು ಚಾಲ್ತಿಯಲ್ಲಿರುವ ಯೋಜನೆಗಳನ್ನು ನಿಲ್ಲಿಸಬೇಕು ಮತ್ತು ಅವಧಿ ಮುಗಿದ ಯೋಜನೆಗಳನ್ನು ಮುಂದುವರಿಸಬಾರದು. ಹೊಸ ಗಿರಿಧಾಮಗಳನ್ನು ಸೃಷ್ಟಿಸಬಾರದು.

ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಬಾರದು ಹಾಗೂ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಇದ್ದ ಹಾಗೆಯೇ ಸಂರಕ್ಷಿಸಲು ನದಿ ತಿರುವು ಯೋಜನೆಗಳನ್ನು ಕೈಗೊಳ್ಳಬಾರದು. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಆಡಳಿತವನ್ನು ಸ್ಥಳೀಯ ಮಟ್ಟದಲ್ಲಿ ಕೈಗೊಳ್ಳಬೇಕು ಹಾಗೂ ಹೆಚ್ಚು ಅಧಿಕಾರವನ್ನು ನೀಡಬೇಕು. ಮೇಲ್ತಸರದಿಂದ ಅಧಿಕಾರ ಚಲಾಯಿಸುವ ಬದಲು ಕೆಳ ಹಂತದಲ್ಲಿ ಅಧಿಕಾರ ನೀಡಬೇಕು. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಅಧಿಕಾರ ವಿಕೇಂದ್ರೀಕರಣಗೊಳಿಸಬೇಕು. ಪರಿಸರ (ಸಂರಕ್ಷಣೆ) ಕಾಯ್ದೆ 1986 ಕಾಯ್ದೆಯಲ್ಲಿ ದತ್ತವಾಗಿರುವ ಅಧಿಕಾರವನ್ನು ಬಳಸಿ ಪಶ್ಚಿಮಘಟ್ಟ ಪರಿಸರ ಪ್ರಾಧಿಕಾರ ಸ್ಥಾಪಿಸುವಂತೆಯೂ ವರದಿಯಲ್ಲಿ ಸಲಹೆ ನೀಡಲಾಗಿತ್ತು. 

ಆರು ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲ ರಾಜಕೀಯ ಪಕ್ಷಗಳು, ಕೇರಳದಲ್ಲಿ ವಿಶೇಷವಾಗಿ ಚರ್ಚ್‌ಗಳು ಗಾಡ್ಗೀಳ್‌ ವರದಿಯನ್ನು ವಿರೋಧಿಸಿದವು. ಗಾಡ್ಗೀಳ್ ಅವರನ್ನು ರಹಸ್ಯ ಕಾರ್ಯಸೂಚಿ ಹೊಂದಿರುವ ಪರಿಸರ ಭಯೋತ್ಪಾದಕ ಎಂದೆಲ್ಲ ಹಣೆಪಟ್ಟಿ ಕಟ್ಟಿದವು. 

ಕಸ್ತೂರಿರಂಗನ್ ವರದಿಯ ಮುಖ್ಯ ಶಿಫಾರಸುಗಳು

*ಪಶ್ಚಿಮಘಟ್ಟದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ 37 ರಷ್ಟು ಪ್ರದೇಶವನ್ನು ನೈಸರ್ಗಿಕ ಭೂ ಪ್ರದೇಶವನ್ನು ಪಾರಿಸರಿಕ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ಪ್ರದೇಶದ ಕುರಿತು ಅಧಿಸೂಚನೆ ಹೊರಡಿಸಬೇಕು. ಈ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆ ಮೇಲೆ ನಿರ್ಬಂಧ ಹೇರಬೇಕು ಎಂದು ಶಿಫಾರಸು ಮಾಡಲಾಗಿದೆ.

*ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ(ಕ್ವಾರಿ),ಮರಳು ಗಣಿಗಾರಿಕೆ ಸಂಪೂರ್ಣ ನಿಷೇಧಿಸಬೇಕು. ಚಾಲ್ತಿಯಲ್ಲಿರುವ ಗಣಿಗಾರಿಕೆಗಳನ್ನು 5 ವರ್ಷಗಳಲ್ಲಿ ನಿಲ್ಲಿಸಬೇಕು. ಅದಕ್ಕೂ ಮೊದಲು ಪರವಾನಗಿ ಮುಕ್ತಾಯವಾದರೆ, ಮತ್ತೆ ಅವಕಾಶ ನೀಡಬಾರದು.

*ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಅನುಮತಿ ನೀಡಬಾರದು. ಜಲವಿದ್ಯುತ್‌ ಯೋಜನೆಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬಹುದು. ಪರಿಸರ ಪರಿಣಾಮಗಳನ್ನು ಅಧ್ಯಯನ ಮಾಡಿ ಗಾಳಿ ವಿದ್ಯುತ್‌ ಯೋಜನೆಗೆ ಅವಕಾಶ ನೀಡಬಹುದು. 

*ಕೆಂಪು ವಲಯದ ವ್ಯಾಪ್ತಿಗೆ ಬರುವ ಕಾರ್ಖಾನೆಗಳನ್ನು ನಿಷೇಧಿಸುವುದು. ಆದರೆ, ನೇರಳೆ ವ್ಯಾಪ್ತಿಗೆ ಬರುವ ಕಾರ್ಖಾನೆಗಳು, ವಿಶೇಷವಾಗಿ ಆಹಾರ ಮತ್ತು ಹಣ್ಣುಗಳ ಸಂಸ್ಕರಣೆಯಂತಹ ಕಾರ್ಖಾನೆಗಳಿಗೆ ಸಂಪೂರ್ಣ ನಿಷೇಧವಿಲ್ಲ.

*20 ಸಾವಿರ ಮೀಟರ್‌ಗಳಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಅಥವಾ ನಿರ್ಮಾಣ ಯೋಜನೆಗಳಿಗೆ ಅವಕಾಶವಿಲ್ಲ. ಟೌನ್‌ಶಿಪ್‌ ಮತ್ತು ಪ್ರದೇಶಾಭಿವೃದ್ಧಿ ಯೋಜನೆಗಳನ್ನು ನಿರ್ಬಂಧಿಸಬೇಕು.

*ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರುವ ಗ್ರಾಮಗಳಲ್ಲಿ ಎಲ್ಲ ರೀತಿಯ ಯೋಜನೆಗಳಿಗೆ ಗ್ರಾಮದ ಗ್ರಾಮ ಸಭೆಯಿಂದ ಪೂರ್ವ ಮಾಹಿತಿಯುಕ್ತ ಒಪ್ಪಿಗೆ ಮತ್ತು ನಿರಾಕ್ಷೇಪಣೆ ಅತ್ಯಗತ್ಯ. ಅರಣ್ಯ ಹಕ್ಕುಗಳ ಕಾಯ್ದೆಯಡಿ ಪೂರ್ವ ಮಾಹಿತಿಯುಕ್ತ ಸಮ್ಮತಿ ಪಡೆಯುವುದನ್ನು ಕಡ್ಡಾಯವಾಗಿ ಜಾರಿಗೆ ತರಬೇಕು.

*ಪಶ್ಚಿಮಘಟ್ಟಗಳಲ್ಲಿನ ನೈಸರ್ಗಿಕ ಭೂಪ್ರದೇಶ ಎಂದು ಗುರುತಿಸಿರುವ ಪ್ರದೇಶಗಳಲ್ಲಿ ಜನವಸತಿ ಇರುವುದರಿಂದ,  ಪಾರಿಸರಿಕವಾಗಿ ಹೆಚ್ಚಿನ ಬೆಳವಣಿಗೆಗೆ ಸಹಕಾರಿಯಾಗುವಂತೆ ನಿಯಮಗಳನ್ನು ರೂಪಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು