ಭಾನುವಾರ, ಮೇ 22, 2022
22 °C
ಮೂಲಸೌಕರ್ಯವಿಲ್ಲದೇ ವಿದ್ಯಾರ್ಥಿಗಳು, ಶಿಕ್ಷಕರ ಪರದಾಟ

ಒಳನೋಟ: ಬಳಕೆಗಿಲ್ಲದ ಶೌಚಾಲಯ; ವಿದ್ಯಾರ್ಥಿಗಳು, ಶಿಕ್ಷಕರ ಪರದಾಟ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ಹಳೇ ಹುಬ್ಬಳ್ಳಿಯ ವೀರಾಪುರ ಓಣಿಯ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯ ಶೌಚಾಲಯದ ಸ್ಥಿತಿ

ಮೈಸೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗದ ಹೊಸಯಳನಾಡಿನ ಹಾಗೂ ಶಿವಮೊಗ್ಗ ಜಿಲ್ಲೆಯ ಆನೆಗದ್ದೆಯ ಸರ್ಕಾರಿ ಶಾಲೆಗೆ ಭೇಟಿ ನೀಡಿದಾಗ, ‘ಇವೆಲ್ಲ ಸರ್ಕಾರಿ ಶಾಲೆಗಳೇ...?’ ಎಂದು ಬೆರಗು ಮೂಡುತ್ತದೆ. ಸ್ವಚ್ಛ ಪರಿಸರ, ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾದರಿಯಾಗಿದೆ. ಇವುಗಳಂತೆಯೇ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳೂ ಇದ್ದಿದ್ದರೆ....

ಆದರೆ, ಇಂಥ ಶಾಲೆಗಳ ಸಂಖ್ಯೆ ವಿರಳಾತಿವಿರಳ. ಸರ್ಕಾರಿ ಶಾಲೆಗಳ ಹೆಚ್ಚಿನ ವಿದ್ಯಾರ್ಥಿಗಳಿಗೆ ಇಂಥ ಸೌಲಭ್ಯವಿಲ್ಲ. ಶೌಚಾಲಯವಿದ್ದರೆ ನೀರಿಲ್ಲ; ನೀರಿನ ವ್ಯವಸ್ಥೆ ಇದ್ದರೆ ಶೌಚಾಲಯವಿಲ್ಲ. ಎರಡೂ ಇದ್ದರೆ ನಿರ್ವಹಣೆ ಇಲ್ಲ.... ಹೀಗೆ ಒಂದಿದ್ದರೆ ಮತ್ತೊಂದಿಲ್ಲ ಎನ್ನುವ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಒಮ್ಮೆ ನೋಡಿಬಂದಾಗ, ಅಲ್ಲಿನ ವಿದ್ಯಾರ್ಥಿಗಳು– ಶಿಕ್ಷಕರು ಅನುಭವಿಸುತ್ತಿರುವ ಸಂಕಟ ವೇದ್ಯವಾಗುತ್ತದೆ.

ಬಹುತೇಕ ಶಾಲೆಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಪೂರೈಕೆ ಸೌಲಭ್ಯವು ಹೆಸರಿಗಷ್ಟೇ ಇದೆ. ಬಳಕೆಗೆ ಯೋಗ್ಯವಲ್ಲದ, ಶೌಚಾಲಯದ ಸನಿಹವೇ ಹೋಗಲಾಗದಂಥ ಅಧ್ವಾನ ವಾತಾವರಣ ಕಂಡುಬರುತ್ತದೆ. ಬಹು ತೇಕ ಶಾಲೆಗಳ ಮೈದಾನದಲ್ಲಿ 2-3  ಶೌಚಾಲಯಗಳನ್ನು ನಿರ್ಮಿಸಿದ್ದರೂ, ವಿದ್ಯಾರ್ಥಿಗಳು ಮೂತ್ರ ವಿಸರ್ಜನೆಗಾಗಿ ಬಯಲಿಗೆ ಹೋಗುವುದು ತಪ್ಪಿಲ್ಲ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿರುವ ಈ ಹೊತ್ತಿನ ಲ್ಲಿಯೂ, ಶಾಲೆಗಳಲ್ಲಿ ಶುಚಿತ್ವಕ್ಕೆ ಸಿಗಬೇ ಕಾದ ಆದ್ಯತೆ ಸಿಗದೇ ಇರುವುದು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ.

‘ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಶೌಚಾ ಲಯಗಳ ಸೌಲಭ್ಯ ನಿರ್ವಹಣೆಯಲ್ಲಿ ಯಾವುದೇ ಲೋಪಕ್ಕೆ ಆಸ್ಪದ ನೀಡಬಾರದು’ ಎಂದು 2012ರ ಸೆ.5ರಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದರೂ ಇಂದಿಗೂ ಅಸಂಖ್ಯಾತ ಶೌಚಾಲಯಗಳಿಗೆ ನೀರಿನ ಪೂರೈಕೆಯೇ ಇಲ್ಲದಿರುವ ಸ್ಥಿತಿ ಇದೆ.

ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನಗಳನ್ನು ಉಲ್ಲೇಖಿಸಿ, ಶಿಕ್ಷಣ ಇಲಾಖೆಯೂ ಪ್ರತಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ, ಬಿಇಒ, ಆಯಾ ಶಾಲೆಯ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿಗೆ ಆಗಾಗ್ಗೆ ಸುತ್ತೋಲೆಗಳ ಮೂಲಕ ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯ ಸೌಲಭ್ಯ ಒದಗಿಸುವಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವಂತೆ ಸೂಚಿಸುತ್ತಿದೆ. ಆದರೆ, ಈ ಎಲ್ಲ ಪ್ರಕ್ರಿಯೆ ಕಡತ ದಾಖಲೆಗಷ್ಟೇ ಸೀಮಿತವಾಗಿದೆ ಎಂಬುದು ಶಾಲೆಗಳಲ್ಲಿರುವ ಸೌಲಭ್ಯ ವನ್ನು ಒಳಹೊಕ್ಕು ನೋಡಿದಾಗ ಗೊತ್ತಾಗಿದೆ.

ಶಾಲೆಯೊಂದರ 25 ಬಾಲಕಿಯರಿಗೆ ಎರಡು ಮೂತ್ರಿ, ಒಂದು ಶೌಚಾಲಯವನ್ನೊಳಗೊಂಡ ಘಟಕವಿರಬೇಕು. 30 ಬಾಲಕರಿಗೆ ಇದೇ ಮಾದರಿಯ ಒಂದು ಘಟಕವಿರಬೇಕು. ಆಯಾ ಶಾಲೆಯಲ್ಲಿನ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ಘಟಕಗಳಿರಬೇಕು ಎಂಬ ಮಾನದಂಡವಿದೆ. ಆದರೆ ಈ ಮಾನದಂಡದಡಿ ಶೌಚಾಲಯ ಇರುವುದು ವಿರಳ.


ಹಳೇ ಹುಬ್ಬಳ್ಳಿಯ ವೀರಾಪುರ ಓಣಿಯ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿಗಳು, ಮೂತ್ರ ವಿಸರ್ಜನೆಗಾಗಿ ಬಯಲಿಗೆ ಹೋಗುವ ಚಿತ್ರಣ. ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್

ಶೌಚಾಲಯಕ್ಕೆ ಬೀಗ

‘ಶಾಲೆಗೆ ಅಧಿಕಾರಿಗಳು ಭೇಟಿ ನೀಡಿದಾಗ, ಶೌಚಾಲಯವನ್ನು ಕಡ್ಡಾಯವಾಗಿ ಪರಿಶೀಲಿಸುತ್ತಾರೆ. ಹೀಗಾಗಿ, ಅವರು ಬಂದಾಗ ತೋರಿಸಲಿಕ್ಕಾಗಿಯೇ ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳಿಗೆ ಬೀಗ ಹಾಕುವ ರೂಢಿ ಇದೆ’ ಎನ್ನುತ್ತಾರೆ  ಸರ್ಕಾರಿ ಶಾಲೆಯೊಂದರ ಶಿಕ್ಷಕರು.

ಪಂಚ ಸೌಲಭ್ಯಗಳ (ಕುಡಿಯುವ ನೀರು, ಶೌಚಾಲಯ, ಶಾಲಾ ಕಟ್ಟಡ, ಕಾಂಪೌಂಡ್, ಡೆಸ್ಕ್) ನಿರ್ವಹಣೆಗಾಗಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ವಾರ್ಷಿಕ ₹ 6,790, ಕಿರಿಯ ಪ್ರಾಥಮಿಕ ಶಾಲೆಗಳಿಗೆ ₹ 4 ಸಾವಿರ ಅನುದಾನವನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡುತ್ತದೆ. ಆದರೆ, ಈ ಅನುದಾನವು ಸಾಕಾಗುವುದಿಲ್ಲ ಎಂಬ ಅಳಲು ಶಿಕ್ಷಕ ಸಮೂಹದ್ದು.

‘ಒಂದು ಸಲ, ಶೌಚಾಲಯ ಸ್ವಚ್ಛಗೊಳಿಸಲು ಕಾರ್ಮಿಕರೊಬ್ಬರಿಗೆ ಕನಿಷ್ಠ ₹ 500 ನೀಡಬೇಕು. ಈ ಕೆಲಸ ವಾರಕ್ಕೊಮ್ಮೆ ಆಗದಿದ್ದರೂ ಕನಿಷ್ಠ ಪಕ್ಷ 15 ದಿನಗಳಿಗೊಮ್ಮೆಯಾದರೂ ಆಗಲೇಬೇಕು. ಆದರೆ, ಸ್ವಚ್ಛಗೊಳಿಸಿದ ಮೂರ್ನಾಲ್ಕು ದಿನಕ್ಕೆ ಅತ್ತ ಹೋಗಲು ಸಾಧ್ಯವಾಗದಂತಹ ಅಸಹ್ಯಕರ ವಾತಾವರಣ ಇರುತ್ತದೆ. ಬೀಗ ಹಾಕದೇ ಇನ್ನೇನು ಮಾಡುವುದು?’ ಎಂದು ಅಸಹಾಯಕತೆ ಶಿಕ್ಷಕರದ್ದು.

ಇದೀಗ ಪ್ರತಿ ಶಾಲಾ ಶೌಚಾಲಯದಲ್ಲೂ ಸೋಪು, ಕೈ ಒರೆಸಿಕೊಳ್ಳಲು ಟವೆಲ್ ಇಡಬೇಕು ಎಂದು ಆದೇಶವಿದೆ. ಆದರೆ ಇದು ಬಹುತೇಕ ಕಡೆ ಪಾಲನೆಯಾಗುತ್ತಿಲ್ಲ. ಶಿಕ್ಷಕರನ್ನು ಕೇಳಿದರೆ, ಕದ್ದೊಯ್ಯುತ್ತಾರೆ ಎನ್ನುತ್ತಾರೆ.


ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ಪಟ್ಟಣದ ಬಾಲಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯದ ಚಿತ್ರಣ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ದೂರದಲ್ಲಿದ್ದರೆ, ಬಯಲುಸೀಮೆಯ ಸುಮಾರು 77 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ.

ಸರ್ಕಾರಿ ಶಾಲೆಗಳ ಶೌಚಾಲಯವನ್ನು ಊರಿನ ಕಿಡಿಗೇಡಿಗಳೇ ಹಾಳು ಮಾಡಿರುವುದೂ ಇದೆ. ಶೌಚಾಲಯಕ್ಕೆ ಕಲ್ಲು ಹಾಕುವುದು, ನಲ್ಲಿ ಮುರಿಯುವುದು, ಸಿಂಟೆಕ್ಸ್‌ ಟ್ಯಾಂಕ್‌ ಕಳ್ಳತನ ಮಾಡುವುದು... ಇಂಥ ಕೃತ್ಯಗಳಿಂದಲೂ ಶೌಚಾಲಯ ನಿರ್ವಹಣೆ ಎಂಬುದು ಬಹುತೇಕ ಕಡೆ ಶಾಲಾ ಸಿಬ್ಬಂದಿಗೆ ಕಗ್ಗಂಟಾಗಿದೆ.

ಶಿಕ್ಷಕರ ನಿರ್ಲಕ್ಷ್ಯದಿಂದಲೂ ಒಂದಿಷ್ಟು ಕಡೆ ಶೌಚಾಲಯಗಳು ಬರೀ ಕಟ್ಟಡಗಳಾಗಿ ಉಳಿದಿದ್ದರೆ, ಇನ್ನೊಂದಿಷ್ಟು ಕಡೆ ಬಿಲ್ ಮಾಡಿಕೊಳ್ಳಲಿಕ್ಕಾಗಿಯಷ್ಟೇ ಹೊಸ ಶೌಚಾಲಯ ನಿರ್ಮಿಸಲಾಗಿದೆ ಎಂಬ ಆಪಾದನೆಗಳೂ ಇವೆ. ಇದಕ್ಕೆ ಅಪವಾದವೆಂಬಂತೆ ಬೆರಳೆಣಿಕೆಯಷ್ಟು ಶಿಕ್ಷಕರು, ಎಸ್‌ಡಿಎಂಸಿ, ದಾನಿಗಳ ಸಹಕಾರದಿಂದ ರಾಜ್ಯದ ಕೆಲವೆಡೆ ಸ್ವಚ್ಛ ಹಾಗೂ ಹೈಟೆಕ್‌ ಶೌಚಾಲಯ ನಿರ್ಮಾಣಗೊಂಡಿದ್ದು, ವಿದ್ಯಾರ್ಥಿಸ್ನೇಹಿಯಾಗಿವೆ.

ತೋರಿಕೆಗೆ ಹೈಟೆಕ್!

ತಮ್ಮೂರಿನ ಸರ್ಕಾರಿ ಶಾಲೆಯ ಹೈಟೆಕ್‌ ಶೌಚಾಲಯದ ಬಗ್ಗೆ ವಿಜಯಪುರದ ಸಿಂದಗಿ ತಾಲ್ಲೂಕಿನ ಬಂದಾಳ ಗ್ರಾಮದ ನಿಂಗನಗೌಡ ಬಿರಾದಾರ ಹೇಳುವುದು ಹೀಗೆ: ‘ಅದು ಹೆಸರಿಗಷ್ಟ ಹೈಟೆಕ್‌. ಬಿಲ್‌ ಮಾಡ್ಕೊಳ್ಳಾಕ ಕಟ್ಟಿಸಿದ್ದು! ನೀರ... ಇಲ್ಲ ಅಂದ್‌ಮ್ಯಾಲ ಶೌಚಾಲಯ ಕಟ್ಕೊಂಡು ಏನ್‌ ಮಾಡೋದು?’

ನೀರಿನ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಜೇಸಾಬ್‌ ಅವರನ್ನು ಕೇಳಿದರೆ, ‘ಹೈಟೆಕ್‌ ಶೌಚಾಲಯ ಕಟ್ಟಿಸಿದ್ದೀವಿ. ಬೋರ್‌ ಇದೆ. ನೀರಿನ ಸಮಸ್ಯೆ ಬಗ್ಗೆ ವಿಚಾರಿಸುವೆ’ ಎಂದರು.

‘ಶಾಲೆಗೆ ಬೋರ್‌ ಇದೆ. ಶೌಚಾಲಯಕ್ಕೆ ಅಳವಡಿಸಿದ್ದ ಸಿಂಟೆಕ್ಸ್‌ ಕಳವಾಗಿದೆ. ಕೊಡ, ಬಕೆಟ್‌ಗಳಲ್ಲೇ ನೀರು ಹಾಕುತ್ತಿದ್ದೇವೆ. ಇದರಿಂದ ಕಷ್ಟವಾಗಿದೆ’ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯ ಎನ್‌.ಕೆ.ಚೌಧರಿ.

‘ಶಾಲೆಗೆ ಕೊಳವೆಬಾವಿ, ಸಂಪು ಇದೆ. ಆದರೆ ಸಂಪಿನ ಬಳಿಗೆ ಹೋಗಲಾರದಂತೆ ಹಾಳು ಮಾಡಿದ್ದಾರೆ. ಅದರಲ್ಲಿ ಮದ್ಯದ ಬಾಟಲಿ ಎಸೆದಿದ್ದಾರೆ. ಪೊಲೀಸರಿಗೆ ಹೇಳಿದರೂ ಪ್ರಯೋಜನವಿಲ್ಲ. ಇನ್ನು ಶೌಚಾಲಯದೊಳಗಿನ ನಲ್ಲಿಯನ್ನೂ ಮುರಿದಿದ್ದಾರೆ. ಹೊರಗಿನಿಂದ ಬಕೆಟ್‌ನಲ್ಲಿ ನೀರು ತಂದು, ತೆಗೆದುಕೊಂಡು ಹೋಗಬೇಕಿದೆ’ ಎಂದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯೊಬ್ಬರು ತಿಳಿಸಿದರು.

‘ಪ್ರತಿ ತರಗತಿಯಲ್ಲೂ ನಿತ್ಯವೂ ಮೂರ್ನಾಲ್ಕು ಹೆಣ್ಮಕ್ಕಳು ಗೈರಾಗುತ್ತಾರೆ. ಹೆಣ್ಮಕ್ಕಳ ಸಮಸ್ಯೆ ಹೇಳಿದರೂ ಸ್ಪಂದನೆಯೇ ಸಿಗ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿ ಗ್ರಾಮದ ಲಕ್ಷ್ಮೀಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯವೇ ಇಲ್ಲ! ಇವು ಕೆಲವಷ್ಟೇ ಉದಾಹರಣೆಗಳು.


ಚಾಮರಾಜನಗರ ಜಿಲ್ಲೆಯ ಯಳಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಶೌಚಾಲಯದ ದುಃಸ್ಥಿತಿ

ಮಹಡಿಯಲ್ಲಿ ಶೌಚಾಲಯ!

ಹಳೇ ಹುಬ್ಬಳ್ಳಿಯ ಅಂಬೇಡ್ಕರ್‌ ಕಾಲೊನಿಯ ಮಂಟೂರ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಮಹಡಿಯಲ್ಲಿ ₹ 2 ಲಕ್ಷ ವೆಚ್ಚದಲ್ಲಿ ಶೌಚಾಲಯವೊಂದನ್ನು ನಿರ್ಮಿಸಲಾಗುತ್ತಿದೆ. ಇದು ಪೋಷಕರ ಆತಂಕಕ್ಕೂ ಕಾರಣವಾಗಿದೆ.

1ರಿಂದ 7ನೇ ತರಗತಿಯವರೆಗೆ ಇಲ್ಲಿ 180 ಮಕ್ಕಳಿದ್ದಾರೆ. ಸದ್ಯಕ್ಕೆ ಶಾಲೆಯಲ್ಲಿರುವ ಒಂದೇ ಶೌಚಾಲಯವನ್ನು 4ರಿಂದ 7ನೇ ತರಗತಿಯವರೆಗಿನ ಮಕ್ಕಳು ಬಳಸಿಕೊಳ್ಳುತ್ತಿದ್ದಾರೆ. ಉಳಿದ ತರಗತಿ ಮಕ್ಕಳು ಶಾಲೆಯ ಹಿಂಭಾಗದಲ್ಲಿರುವ ಸ್ಮಶಾನದ ಬಯಲಿಗೆ, ರಸ್ತೆ ಬದಿ ಮೂತ್ರ ವಿಸರ್ಜನೆಗೆ ಹೋಗುತ್ತಾರೆ.

ಶಾಲೆಯಲ್ಲಿ ಮೂಲ ಸೌಲಭ್ಯವಿಲ್ಲ ಎಂದು ಸ್ಥಳೀಯರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ಎಚ್ಚೆತ್ತ ಇಲಾಖೆ, ಶೌಚಾಲಯ ನಿರ್ಮಾಣಕ್ಕಾಗಿ ₹ 2 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ‘ದುಡ್ಡು ಕೊಟ್ರೂ ಶೌಚಾಲಯವನ್ನು ಯಾಕ್ರೀ ಕಟ್ಟಿಸಿಕೊಂಡಿಲ್ಲ?’ ಎಂದು ಅಧಿಕಾರಿಗಳು ದಬಾಯಿಸುತ್ತಾರೆ. ಆದರೆ, ಅನುದಾನ ಬಿಡುಗಡೆಗೊಂಡ ವಿಷಯ ಗುತ್ತಿಗೆದಾರ ಬಂದು ಹೇಳಿದಾಗಷ್ಟೇ ನಮಗೆ ಗೊತ್ತಾಗಿದ್ದು!’ ಎಂದು ಶಾಲೆಯ ಶಿಕ್ಷಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಶುದ್ಧ ನೀರು ಮರೀಚಿಕೆ

ಮೈಸೂರಿನ ಗಿರಿಯಾಬೋವಿ ಪಾಳ್ಯದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಶುದ್ಧ ಕುಡಿಯುವ ನೀರಿಗಾಗಿ ಇಂದಿಗೂ ಖಾಸಗಿ ಘಟಕವೊಂದನ್ನು ಅವಲಂಬಿಸಿದ್ದಾರೆ. ಮಕ್ಕಳೇ ಸೈಕಲ್‌ನಲ್ಲಿ ಬಂದು, ನೀರು ತೆಗೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ಶಿಕ್ಷಕರು ಸಾಥ್‌ ನೀಡುತ್ತಾರೆ.

ಕೆಲವೊಂದು ಶಾಲೆಗಳಲ್ಲಿ ದಾನಿಗಳ ಸಹಕಾರದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿಕೊಳ್ಳಲಾಗಿದೆಯಾದರೂ ಆ ಸಂಖ್ಯೆ ಕಡಿಮೆ.

ಮುಂಬೈ ಹಾಗೂ ಕಲ್ಯಾಣ ಕರ್ನಾಟಕದ ವಿವಿಧೆಡೆ ಇಂದಿಗೂ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹಲವೆಡೆ, ದೊಡ್ಡ ಸಿಂಟೆಕ್ಸ್‌ ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಂಡು ಇದನ್ನೇ ಕುಡಿಯುವ ಪರಿಸ್ಥಿತಿಯಿದೆ.

ಕೋವಿಡ್‌–19 ಕಾರಣದಿಂದಾಗಿ ಮನೆಯಿಂದಲೇ ನೀರು ತರುವಂತೆ ಶಿಕ್ಷಕರು ಸೂಚಿಸಿರುವುದರಿಂದ ಹಾಗೂ ಬಿಸಿಯೂಟ ತಯಾರಿಕೆ ಸ್ಥಗಿತಗೊಂಡಿದ್ದರಿಂದ ಸದ್ಯಕ್ಕೆ ನೀರಿನ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತಿಲ್ಲ.


ಹಳೇ ಹುಬ್ಬಳ್ಳಿಯ ವೀರಾಪುರ ಓಣಿಯ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿಯರಿಗೆ ಸಿಕ್ಕ ಕುಡಿಯುವ ನೀರಿನ ಸೌಲಭ್ಯ

‘ಶೌಚಾಲಯ, ಕುಡಿಯುವ ನೀರು ಒದಗಿಸಲಾಗಿದೆ’


ಎಸ್.ಸುರೇಶ್‌ ಕುಮಾರ್

ಶಾಲೆಗಳಿಗೆ ಶೌಚಾಲಯ, ನೈರ್ಮಲೀಕರಣ, ಕುಡಿಯುವ ನೀರು ಪೂರೈಕೆ, ಬಸ್ ಸೌಲಭ್ಯ ಒದಗಿಸಲಾಗಿದೆ. ಶಾಲಾ ಶೈಕ್ಷಣಿಕ ಚಟುವಟಿಕೆ ಕುರಿತು ಅಧಿಕಾರಿಗಳಿಗೆ, ಶಿಕ್ಷಕರಿಗೆ, ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರಿಗೆ ಸಲಹೆ–ಸೂಚನೆ ನೀಡಲಾಗಿದೆ. ವಿಡಿಯೊ ಸಂವಾದದ ಮೂಲಕ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಮಾರ್ಗದರ್ಶನ ನೀಡಲಾಗುತ್ತಿದೆ.

ಸುರಕ್ಷಿತ ವಾತಾವರಣದಲ್ಲಿ ವೈಯಕ್ತಿಕ ಅಂತರ ಕಾಪಾಡಿಕೊಂಡು ಶಾಲಾ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ. ಮುಂದಿನ ಶೈಕ್ಷಣಿಕ ವರ್ಷವನ್ನು ಜುಲೈ 15ರಿಂದ ಆರಂಭಿಸಲು ನಿರ್ಧರಿಸಲಾಗಿದೆ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂದೆಯೂ ಹೆಚ್ಚಿನ ಆಸ್ಥೆ ವಹಿಸಲಾಗುವುದು.

-ಎಸ್.ಸುರೇಶ್‌ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ


ಅರುಣ ಶಹಾಪುರ

* ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅವಶ್ಯವಿರುವ ಅನುದಾನ ಯಾವುದೇ ಪಕ್ಷದ ಸರ್ಕಾರದಲ್ಲೂ ಸಿಗುತ್ತಿಲ್ಲ. ಎಸ್‌ಎಸ್‌ಎ ಮಾದರಿಯಲ್ಲಿ ನಮ್ಮಲ್ಲೂ ಅಭಿಯಾನ ನಡೆಯಲಿ.

-ಅರುಣ ಶಹಾಪುರ, ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು