ಮಂಗಳವಾರ, ಜನವರಿ 18, 2022
15 °C
ಡಿ ಗ್ರೂಪ್‌ ನೌಕರರಿಗಿಂತ ಕಡಿಮೆ ವೇತನ; ಉದ್ಯೋಗ ಅಭದ್ರತೆ, ಶೋಷಣೆ ನಿರಂತರ

ಜೀತಕ್ಕಿಂತ ಕಡೆಯಾದ ಅತಿಥಿ ಉಪನ್ಯಾಸ ವೃತ್ತಿ: ಉದ್ಯೋಗ ಅಭದ್ರತೆ, ಶೋಷಣೆ ನಿರಂತರ

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಉನ್ನತ ಶಿಕ್ಷಣ ಪಡೆದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಆಗುವ ಕನಸು ಕಂಡಿದ್ದ ವಿಜಯಪುರದ ದಾನಮ್ಮ ಅವರಿಗೆ ಕೊನೆಗೂ ಸಿಕ್ಕಿದ್ದು ಕಾಲೇಜಿನಲ್ಲಿ ‘ಅತಿಥಿ ಉಪನ್ಯಾಸಕಿ’ಯ ಹುದ್ದೆ. ಅವರಿಗೆ ಸಿಗುತ್ತಿರುವ ತಿಂಗಳ ವೇತನ ₹ 13 ಸಾವಿರ. ಮನೆಯ ಬಾಡಿಗೆ, ಮಕ್ಕಳ ಶಾಲೆ, ತಮ್ಮ ಓಡಾಟದ ಖರ್ಚು ಕಳೆದು ಕೈಯಲ್ಲಿ ಏನೂ ಉಳಿಯುವುದಿಲ್ಲ. ಬದಲಿಗೆ ಮತ್ತೆ ತಿಂಗಳ ಕೊನೆಯಲ್ಲಿ ಸಾಲ ಮಾಡಬೇಕಾದ ಅನಿವಾರ್ಯತೆ.

ರಾಜ್ಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ‘ಅತಿಥಿ’ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಬೋಧಕರ ಪರಿಸ್ಥಿತಿ ದಾನಮ್ಮ ಅವರಿಗಿಂತ ಭಿನ್ನವೇನಿಲ್ಲ. ಕಾಲೇಜಿನಲ್ಲಿ ತಮ್ಮ ಕೈಕೆಳಗೆ ಕೆಲಸ ಮಾಡುವ ‘ಡಿ’ ಗ್ರೂಪ್ ನೌಕರರಿಗೆ ಇರುವಷ್ಟು ಸಂಬಳ, ಭತ್ಯೆಗಳೂ ಅವರಿಗೆ ಇಲ್ಲ!

‘ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲು ಅವಕಾಶವಿದೆ. ಆದರೆ, ವಿಶ್ವವಿದ್ಯಾಲಯದಲ್ಲಿನ ಉಪನ್ಯಾಸಕರಿಗೆ ಈ ಅವಕಾಶವೂ ಇಲ್ಲ.

ಸೆಮಿಸ್ಟರ್ ಆರಂಭದಿಂದ ಮುಕ್ತಾಯದವರೆಗೆ ಮಾತ್ರ ವೇತನ ಕೊಡುತ್ತಾರೆ. ಅದರಲ್ಲೂ ಒಂದೆರಡು ದಿನ ಗೈರಾದರೆ ವಿಭಾಗದ ಮುಖ್ಯಸ್ಥರು ಅದನ್ನೂ ಕಡಿತ ಮಾಡುತ್ತಾರೆ. ವಾರಕ್ಕೆ ಎಂಟು ತರಗತಿ ಬೋಧಿಸುವವರಿಗೆ ₹ 20 ಸಾವಿರ, 16 ತರಗತಿ ಬೋಧಿಸುವವರಿಗೆ ₹ 24 ಸಾವಿರ ಕೊಡುತ್ತಾರೆ. ಈ ತಾರತಮ್ಯ ನಿವಾರಿಸಬೇಕು’ ಎನ್ನುತ್ತಾರೆ ಗುಲಬರ್ಗಾ ವಿಶ್ವವಿದ್ಯಾಲಯ ವಿಭಾಗವೊಂದರ ಅತಿಥಿ ಉಪನ್ಯಾಸಕ.

‘ವಿಭಾಗದ ಕಾಯಂ ಪ್ರಾಧ್ಯಾಪಕರು ನಮ್ಮನ್ನು ನೋಡುವ ದೃಷ್ಟಿಕೋನವೇ ವಿಚಿತ್ರವಾಗಿದೆ. ಪ್ರತಿ ತಿಂಗಳೂ ನಾವು ತರಗತಿ ಲೆಕ್ಕದ ಜೊತೆಗೆ ‘ನೆಟ್‌’ ಪಾಸಾದ ಪ್ರಮಾಣಪತ್ರ ಸಲ್ಲಿಸಬೇಕು. ನೇಮಕ ಮಾಡುವಾಗ ಇದೆಲ್ಲ ಪರಿಶೀಲಿಸಿರುವುದಿಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ.

ಡಿ.10ರಿಂದ ನಡೆಯುತ್ತಿದೆ ಹೋರಾಟ

ಸೇವಾ ಭದ್ರತೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅತಿಥಿ ಉಪನ್ಯಾಸಕರು 2021ರ ಡಿಸೆಂಬರ್‌ 10ರಿಂದ ರಾಜ್ಯದಾದ್ಯಂತ ಕೆಲಸ ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ, ಸದ್ಯ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿಂದಷ್ಟೇ ಪಾಠ ನಡೆಯುತ್ತಿವೆ. ಪೂರ್ಣಪ್ರಮಾಣದ ಬೋಧನೆ ಇಲ್ಲದ ಕಾರಣ ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. 

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅತಿಥಿ ಉಪನ್ಯಾಸಕ ಹರ್ಷ ಶಾನಭೋಗ ಅವರು ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ನಂತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಡಿ.29ರಿಂದ ಹಲವಾರು ಉಪನ್ಯಾಸಕರು ತೀರ್ಥಹಳ್ಳಿಯಿಂದ ಬೆಂಗಳೂರು ವರೆಗೆ ಪಾದಯಾತ್ರೆ ಆರಂಭಿಸಿದ್ದರು. ಆದರೆ, ಕೋವಿಡ್‌ ನಿಯಮಾವಳಿ ಪಾಲನೆ ಕಾರಣ ನೀಡಿ ಪೊಲೀಸರು ಅವರನ್ನು ತಡೆದಿದ್ದು, ಸದ್ಯ ತೀರ್ಥಹಳ್ಳಿ ಪಟ್ಟಣದಲ್ಲೇ ಹಲವರು  ಧರಣಿ ನಡೆಸುತ್ತಿದ್ದಾರೆ. ಉಳಿದೆಡೆಯೂ ಪ್ರತಿಭಟನೆ ನಡೆಯುತ್ತಿವೆ.

***

ಯುಜಿಸಿ ನಿಯಮಾವಳಿ ಪ್ರಕಾರ, ವೇತನ ಕೊಡಲಾಗದಿದ್ದರೂ ಅತಿಥಿ ಉಪನ್ಯಾಸಕರು ಗೌರವದಿಂದ ಜೀವನ ನಡೆಸಲು ಅಗತ್ಯ ಇರುವಷ್ಟು ವೇತನವನ್ನು ಸರ್ಕಾರ ನಿಗದಿ ಮಾಡಬೇಕು. ಇದಕ್ಕಾಗಿ ವೇತನ ನಿಯಮಾವಳಿ ತಿದ್ದುಪಡಿ ಮಾಡಬೇಕು.

– ಅಲ್ಲಮಪ್ರಭು ಬೆಟ್ಟದೂರು, ರಾಜ್ಯ ಅಧ್ಯಕ್ಷ, ಶಿಕ್ಷಣ ಉಳಿಸಿ ಸಮಿತಿ

ನಮ್ಮ ಹೋರಾಟದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿರಲಿಲ್ಲ. ಇನ್ನು ಮುಂದೆ ನಮ್ಮ ಪರವಾಗಿ ಅವರೂ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ.

– ಡಾ. ಶರಣಮ್ಮ ಪಾಟೀಲ, ಅತಿಥಿ ಉಪನ್ಯಾಸಕಿ, ಕಲಬುರಗಿ

ಪಿಎಚ್‌.ಡಿ ಪದವಿ ಪಡೆದು ಕಾಯಂ ಉಪನ್ಯಾಸಕರಷ್ಟೇ ಕೆಲಸ ಮಾಡಿದರೂ ನಮಗೆ ₹18 ಸಾವಿರ, ಅವರಿಗೆ ₹1.80 ಲಕ್ಷ ವೇತನವಿದೆ. ಇಷ್ಟೊಂದು ತಾರತಮ್ಯ ಮಾಡಿದರೆ ಹೇಗೆ?

–ಡಾ.ವೆಂಕನಗೌಡ ಪಾಟೀಲ ಅತಿಥಿ ಉಪನ್ಯಾಸಕ, ಕರ್ನಾಟಕ ವಿ.ವಿ. ಧಾರವಾಡ

ಅತಿಥಿ ಉಪನ್ಯಾಸಕರ ವಿಷಯದಲ್ಲಿ ಪಶ್ಚಿಮ ಬಂಗಾಳ, ಪಂಜಾಬ್ ಸರ್ಕಾರಗಳು ಕೈಗೊಂಡ ನಿರ್ಧಾರವನ್ನು ಕರ್ನಾಟಕದಲ್ಲೂ ಅನುಷ್ಠಾನಗೊಳಿಸಬೇಕು.

–ಜಗಪ್ಪ ತಳವಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು