ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ‘ಬಾಕಿ ಪಾವತಿಸಿದರೆ ಸಾಕೆನಿಸಿತ್ತು..’

ಕಂಗಾಲಾಗಿದ್ದ ತರಕಾರಿ–ದಿನಸಿ ಪೂರೈಕೆ ವರ್ತಕರು
Last Updated 26 ಫೆಬ್ರುವರಿ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಹೋಟೆಲ್‌ಗಳನ್ನು ನಂಬಿಕೊಂಡೇ ವ್ಯಾಪಾರ ನಡೆಸುವವರು ನಾವು. ಲಾಕ್‌ಡೌನ್‌ನಿಂದ ಹೋಟೆಲ್‌ಗಳಲ್ಲಿ ಸೇವೆಗೆ ನಿರ್ಬಂಧಗಳನ್ನು ಹೇರಿದರು. ಇದು ನಮ್ಮ ವ್ಯಾಪಾರವನ್ನೇ ಮುಳುಗಿಸಿತು. ಇತ್ತೀಚೆಗೆ ಈಜಲು ಆರಂಭಿಸಿದ್ದು ದಡದ ಕಡೆ ಸಾಗುತ್ತಿದ್ದೇವೆ...’

ಹೋಟೆಲ್‌ ಉದ್ಯಮಕ್ಕೆ ತರಕಾರಿ ಮತ್ತು ದಿನಸಿ ಪೂರೈಕೆ ಮಾಡುತ್ತಿದ್ದ ವರ್ತಕರು ಲಾಕ್‌ಡೌನ್‌ ಸಮಯದಲ್ಲಿ ಅನುಭವಿಸಿದ ತಮ್ಮ ‌ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದು ಹೀಗೆ.

‘ಬೆಂಗಳೂರಿನ ಆರೇಳು ಪ್ರಮುಖ ಹೋಟೆಲ್‌ಗಳಿಗೆ ಹಲವು ವರ್ಷಗಳಿಂದ ತರಕಾರಿ ಪೂರೈಕೆ ಮಾಡುತ್ತಿದ್ದೆ. ಲಾಕ್‌ಡೌನ್‌ ಜಾರಿಯಾದರೂ ಹೋಟೆಲ್‌ಗಳಲ್ಲಿ ಸೇವೆ ಇರುತ್ತದೆ ಎಂದು ಕೇಳಿ ನಿರಾತಂಕವಾಗಿದ್ದೆ. ಆದರೆ, ತರಕಾರಿ ಖರೀದಿ ದಿಢೀರ್‌ ಕುಸಿಯಿತು. ತಿಂಗಳುಗಟ್ಟಲೆ ವ್ಯಾಪಾರವಿಲ್ಲದೆ, ಬೀದಿಗೆ ಬರುವ ಸ್ಥಿತಿ ತಲುಪಿದ್ದೆ’ ಎಂದು ಬೆಂಗಳೂರಿನ ಕಲಾಸಿಪಾಳ್ಯ ಮಾರುಕಟ್ಟೆಯ ತರಕಾರಿ ಸಗಟು ವರ್ತಕ ರಮೇಶ್‌ ಸಂಕಟ ಹೊರಹಾಕಿದರು.

ವ್ಯಾಪಾರಕ್ಕಿಂತ ಜೀವ ಮುಖ್ಯ ಎಂದು ಧೈರ್ಯ ಮಾಡಿಕೊಂಡರೂ ಜೀವನಕ್ಕಾಗಿ ವ್ಯಾಪಾರ ನಡೆಯಲೇಬೇಕಿತ್ತು. ಇದೇ ಸಮಯಕ್ಕೆ ಕೆಲ ಹೋಟೆಲ್‌ನವರು ತರಕಾರಿ ಖರೀದಿ ಯನ್ನು ದಿಢೀರ್‌ ನಿಲ್ಲಿಸಿಬಿಟ್ಟರು. ಹೋಟೆಲ್‌ಗಳೂ ನಷ್ಟದಲ್ಲಿದ್ದವು. ಅದನ್ನು ಕಂಡು ಹಣ ಕೇಳಲು ಬಾಯಿಬರಲಿಲ್ಲ’ ಎಂದು ನೆನೆದರು.

‘ನಮ್ಮಿಂದ ದಿನಸಿ ಖರೀದಿಸುವ ಹೋಟೆಲ್‌ನವರ ಪೈಕಿ ಶೇ 90ರಷ್ಟು ಮಂದಿ ಖರೀದಿಸುವಾಗಲೇ ಹಣ ಪಾವತಿಸುವುದಿಲ್ಲ. ಕಾಲಾವಕಾಶ ಕೇಳಿ ದಿನಸಿ ಖರೀದಿಸುವುದು ವಾಡಿಕೆ’ ಎಂದು ಬೆಂಗಳೂರು ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಪ್ರಸನ್ನ ಬೇಸರಿಸಿದರು.

ಗ್ರಾಹಕರಿಲ್ಲದೆ ಹೋಟೆಲ್‌ಗಳಲ್ಲಿ ಕಡಿಮೆ ಆಹಾರ ಸಿದ್ಧಪಡಿಸುತ್ತಿದ್ದರು. ಹಾಗಾಗಿ, ಹಲವು ತಿಂಗಳುಗಳವರೆಗೆ ದಿನಸಿ ಖರೀದಿ ನಿಲ್ಲಿಸಿಬಿಟ್ಟರು. ಅಂಗಡಿ ನಿರ್ವಹಣೆ, ಸಿಬ್ಬಂದಿಗೆ ಸಂಬಳ ನೀಡಲು ಆಗಲಿಲ್ಲ. ಹೋಟೆಲ್‌ ಮಾಲೀಕರು ಬಾಕಿ ಹಣ ಪಾವತಿಸಿದರೆ ಸಾಕು ಎನಿಸಿತ್ತು’ ಎಂದು ನೋವಿನ ದಿನಗಳನ್ನು ತೆರದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT