ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಕ್ರೀಡಾ ವಿ.ವಿ ಬೇಕಿದೆ, ಆದರೆ...

Last Updated 30 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಮೈಸೂರು: ‘ಕ್ರೀಡಾ ಕ್ಷೇತ್ರದಲ್ಲಿ ಬಹಳ ಹಿಂದೆ ಉಳಿದಿರುವ ರಾಜ್ಯಕ್ಕೆ ಕ್ರೀಡಾ ವಿಶ್ವವಿದ್ಯಾಲಯ ಜರೂರಾಗಿ ಬೇಕಿದ್ದು, ಹಲವು ವರ್ಷಗಳಿಂದ ಆ ಕೂಗು ಹಾಗೇ ಇದೆ. ಆದರೆ, ಕ್ರೀಡೆಯ ತಲೆಬುಡವೇ ಗೊತ್ತಿಲ್ಲದ ಅಧಿಕಾರಿಗಳನ್ನು, ಶಿಫಾರಸು, ಪ್ರಭಾವ, ಹಣದಾಸೆಗೆ ಮಣಿದು ನೇಮಿಸಿದರೆ ಹತ್ತರಲ್ಲಿ ಹನ್ನೊಂದನೇ ವಿಶ್ವವಿದ್ಯಾಲಯವಾಗುತ್ತದೆ ಅಷ್ಟೇ. ಹೀಗಾಗಿ, ಯೋಚಿಸಿ ಯೋಜನೆ ರೂಪಿಸಬೇಕು’

–ಕ್ರೀಡೆಯಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಬೋಧನೆ, ತರಬೇತಿಯಲ್ಲಿ ತೊಡಗಿಸಿಕೊಂಡಿರುವ ಕ್ರೀಡಾ ತಜ್ಞ ಪ್ರೊ.ಶೇಷಣ್ಣ ಅವರ ಸ್ಪಷ್ಟ ಮಾತುಗಳಿವು. ಅವರೊಂದಿಗಿನ ಸಂದರ್ಶನ ಇಲ್ಲಿದೆ.

l→ರಾಜ್ಯಕ್ಕೆ ಕ್ರೀಡಾ ವಿಶ್ವವಿದ್ಯಾಲಯ ಅಗತ್ಯವಿದೆಯೇ?
ಕ್ರೀಡಾಪಟುಗಳನ್ನು ವೈಜ್ಞಾನಿಕವಾಗಿ ಸಜ್ಜುಗೊಳಿಸಲು ಒಂದು ವ್ಯವಸ್ಥೆ ಇರಬೇಕು. ವಿದೇಶಗಳಲ್ಲಿ ಕ್ರೀಡಾಳುಗಳ ಸಾಧನೆಗೆ ಈ ಅಂಶವೂ ಪ್ರಧಾನ ಕಾರಣ. ಕ್ರೀಡಾಳುವಿನ ಶರೀರದ ರಚನೆಯು ಕ್ರೀಡೆಗೆ ಪೂರಕವಾಗಿದೆಯೇ ಎಂಬುದನ್ನುಆರಂಭದಲ್ಲೇಗುರುತಿಸಬೇಕಿದೆ. ಕ್ರೀಡಾ ಮನೋವಿಜ್ಞಾನ, ಕ್ರೀಡಾ ಗಾಯ ನಿರ್ವಹಣೆ, ಪೋಷಕಾಂಶಕ್ಕೆ ಒತ್ತು ಕೊಡಬೇಕಿದೆ. ಕ್ರೀಡಾಪಟುವಿನ ದೇಹರಚನೆ, ಚಲನೆ ಪತ್ತೆ ಹಚ್ಚಲು ಅತ್ಯಾಧುನಿಕ ಕ್ಯಾಮೆರಾ, ಪ್ರಯೋಗಾಲಯ, ಉಪಕರಣಗಳು ಅಗತ್ಯವಿದೆ. ಇದೆಲ್ಲಾ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಈಡೇರಲಿದೆ.

l→ಈಗಿರುವ ಕ್ರೀಡಾ ವ್ಯವಸ್ಥೆ, ತರಬೇತಿ ವಿಧಾನ ಸರಿ ಇಲ್ಲವೇ?
ಈಗಿನ ವಿಧಾನವೆಲ್ಲ ಅವೈಜ್ಞಾನಿಕ. ತರಬೇತುದಾರರು ತಮ್ಮ ತಿಳಿವಳಿಕೆ, ಅನುಭವವನ್ನಷ್ಟೇ ಆಧರಿಸಿ ತರಬೇತಿ ನೀಡುತ್ತಿದ್ದಾರೆ. ಖಾಸಗಿ ಕ್ಲಬ್‌, ಸಂಘ ಸಂಸ್ಥೆಗಳು, ಸರ್ಕಾರ ಪ್ರಾಯೋಜಿಸುವ ಸಂಸ್ಥೆಗಳು ಕ್ರೀಡಾ ತರಬೇತಿಯಲ್ಲಿ ತಾಂತ್ರಿಕ ವಿಧಾನ ಅಳವಡಿಸಿಕೊಂಡಿಲ್ಲ. ಪರಿಕರಗಳೂ ಇಲ್ಲ. ಕ್ರೀಡಾಪಟುಗಳ ಸಾಮರ್ಥ್ಯವನ್ನೂ ಸರಿಯಾಗಿ ಅಳೆಯುತ್ತಿಲ್ಲ. ಹೀಗಾಗಿ, ಕ್ರೀಡಾಪಟುವಿನ ಪ್ರದರ್ಶನ ಮಟ್ಟದಲ್ಲಿ ಸುಧಾರಣೆಯೇ ಕಾಣುತ್ತಿಲ್ಲ. ಹಣ ವ್ಯರ್ಥವಾಗುತ್ತಿದೆ.

l→ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯಿಂದ ದೊಡ್ಡ ಸಾಧನೆ ಮೂಡಿಬರಲಿದೆಯೇ?
ವಿಶ್ವವಿದ್ಯಾಲಯ ಸ್ಥಾಪಿಸಿದ ಕೂಡಲೇ ಉತ್ತಮ ಫಲಿತಾಂಶಕ್ಕಾಗಿ ಒತ್ತಡ ಹೇರಬಾರದು. ವರ್ಷಾನುಗಟ್ಟಲೇ ಕಾಯುವ ತಾಳ್ಮೆ ಇರಬೇಕು. ಸೌಲಭ್ಯ, ಪರಿಕರ ಒದಗಿಸಬೇಕು. ಹಾಸ್ಟೆಲ್‌ ನಿರ್ಮಿಸಿ ಸರಿಯಾದ ಪೋಷಕಾಂಶ ಕೊಡದಿದ್ದರೆ ಕ್ರೀಡಾಪಟುಗಳಿಂದ ಏನನ್ನೂ ನಿರೀಕ್ಷಿಸಲಾಗದು. ಸಂಸ್ಕೃತ, ಸಂಗೀತ, ಜಾನಪದ ವಿಶ್ವವಿದ್ಯಾಲಯಗಳ ದುಸ್ಥಿತಿ, ಅವುಗಳ ಕೊಡುಗೆ ಏನೆಂಬುದು ನಮಗೆ ಈಗಾಗಲೇ ಗೊತ್ತಾಗಿದೆ.

l→ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಿದರೆ ಮೊದಲ ಆದ್ಯತೆ ಏನಿರಬೇಕು?
ಅಧಿಕಾರಿಗಳು, ತರಬೇತುದಾರರು, ಸಿಬ್ಬಂದಿ ಆಯ್ಕೆಯಲ್ಲಿ ಬಹಳ ಎಚ್ಚರ ವಹಿಸಬೇಕು. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟು, ಸಂಶೋಧಕರಿಗೆ ಆದ್ಯತೆ ನೀಡಬೇಕು. ಪಾಂಡಿತ್ಯವುಳ್ಳವರನ್ನು ನೇಮಿಸಬೇಕು. ಶಿಕ್ಷಣದ ಬಗ್ಗೆ ಅರಿವಿಲ್ಲದ ರಾಜಕೀಯ ವ್ಯಕ್ತಿಗಳು ಈಗ ವಿಶ್ವವಿದ್ಯಾಲಯಗಳಲ್ಲಿ ಸಿಂಡಿಕೇಟ್‌ ಸದಸ್ಯರಾಗುತ್ತಿದ್ದಾರೆ. ಕ್ರೀಡೆಗೆ ಸಂಬಂಧವಿಲ್ಲದವರನ್ನು ನೇಮಿಸಿದರೆ ಉದ್ದೇಶವೇ ಹಾಳಾಗುತ್ತದೆ. ಕ್ರೀಡಾಪಟುಗಳ ಗೋಳು ಮುಂದುವರಿಯುತ್ತದೆ. ಈ ಆತಂಕ ನನ್ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT