ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ‘ಕಿವಿ ಇಲ್ಲದವರ ಮುಂದೆ ಬೊಬ್ಬೆ ಹಾಕುತ್ತಿದ್ದೇವೆ...’

ಕೈಗಾರಿಕಾ ವಲಯದ ಸುತ್ತಮುತ್ತಲಿನ ಕೃಷಿಕರ ಅಳಲು
Last Updated 15 ಜನವರಿ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಬಾಳಿನ ಮುಸ್ಸಂಜೆ ಯನ್ನು ನೆಮ್ಮದಿಯಿಂದ ಕಳೆಯಲು ಹಳ್ಳಿಗೆ ಬಂದೆ. ಹಸಿರು ಪರಿಸರವಾದ್ದರಿಂದ ಆರೋಗ್ಯಕ್ಕೂ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಹಾಕಿದ್ದೆ. ಬೃಹತ್‌ ಕೈಗಾರಿಕೆಗಳು ನಮ್ಮ ಹಳ್ಳಿಗೆ ಕಾಲಿಟ್ಟ ಬಳಿಕ ನೆಮ್ಮದಿಯೂ ಇಲ್ಲ, ಆರೋಗ್ಯವೂ ಹದಗೆಟ್ಟಿದೆ...’

ಇದು ಮಂಗಳೂರು ನಗರ ಹೊರವಲಯದ ಕುತ್ತೆತ್ತೂರಿನಲ್ಲಿ ಕೃಷಿಕರಾಗಿರುವ 74 ವರ್ಷದ ಗೋವಿಂದದಾಸ್‌ ಅವರ ಅಸಹಾಯಕ ನುಡಿ. ಸುತ್ತಮುತ್ತಲಿನ ಬಹುತೇಕ ಕೃಷಿಕರ ಅಳಲು ಇದೇ ಆಗಿದೆ.

‘ನನಗೆ 25 ಎಕರೆ ಜಮೀನು ಇದೆ. 10 ಎಕರೆಯಲ್ಲಿ ಭತ್ತ ಬೇಸಾಯ ಮಾಡುತ್ತೇನೆ. ಈಗ ಕೃಷಿ ಚಟುವಟಿಕೆಗೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಾರೆ. ಗದ್ದೆಗೆ ಇಳಿದರೆ ಕಾಲು ತುರಿಕೆ ಬರುತ್ತದೆ ಎಂಬುದು ಕಾರ್ಮಿಕರ ದೂರು. ಜಾನುವಾರುಗಳ ಕಾಲುಗಳಲ್ಲಿಯೂ ತುರಿಕೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ನಾನು ಗದ್ದೆಗೆ ಇಳಿಯುವುದಿಲ್ಲ. ಹೋದರೂ ತಕ್ಷಣ ಡೆಟಾಲ್‌ ಹಾಕಿ ಬಿಸಿನೀರಿನಿಂದ ತೊಳೆಯುತ್ತೇನೆ’ ಎನ್ನುತ್ತಾರೆ ಗೋವಿಂದದಾಸ್‌.

‘ಪೆರ್ಮುದೆಯಲ್ಲಿ ಹಳ್ಳವೊಂದಿದೆ. ಅದು ಕುತ್ತೆತ್ತೂರು ದಾಟಿ ಪಾವಂಜೆಯ ಬಳಿ ನದಿಯನ್ನು ಸೇರುತ್ತದೆ. ಈ ಹಳ್ಳಕ್ಕೆ ಹಲವು ಕಾರ್ಖಾನೆಗಳ ತ್ಯಾಜ್ಯ ನೀರು ಸೇರುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ನೀರಿನ ಮೇಲಿನ ಪದರದಲ್ಲಿ ಜಿಡ್ಡಿನ ಪದಾರ್ಥ ಕಾಣಿಸುತ್ತದೆ. ಹಿಂದೆಲ್ಲಾ ಫೆಬ್ರುವರಿ ವೇಳೆಗೆ ಈ ಹಳ್ಳದಲ್ಲಿ ನೀರು ಬತ್ತುತ್ತಿತ್ತು. ಆದರೆ, ಈಚಿನ ಹಲವು ವರ್ಷಗಳಿಂದ ಹಳ್ಳ ಬತ್ತಿಲ್ಲ. ಇದೇ ನೀರನ್ನು ನಂಬಿಕೊಂಡು ಬಹುತೇಕ ರೈತರು ಕೃಷಿ ಮಾಡುತ್ತಾರೆ. ಆದರೆ, ತುರಿಕೆಯ ಬಾಧೆ ತಪ್ಪಿದಲ್ಲ’ ಎನ್ನುತ್ತಾರೆ ಅವರು.

‘ಕೆಲವೊಮ್ಮೆ ಮಧ್ಯರಾತ್ರಿ ವೇಳೆ ದುರ್ವಾಸನೆ ಇಡೀ ಪರಿಸರವನ್ನು ವ್ಯಾಪಿಸುತ್ತದೆ. ಘಾಟಿನಿಂದ ಉಸಿರಾಟಕ್ಕೆ ತೊಂದರೆಯಾಗಿದ್ದೂ ಇದೆ. ಕಾರ್ಖಾನೆಯವರು ಕದ್ದುಮುಚ್ಚಿ ತ್ಯಾಜ್ಯವನ್ನು ಹೊರಗೆ ಬಿಡುವುದು ಅದಕ್ಕೆ ಕಾರಣ ಎಂದು ತಡವಾಗಿ ತಿಳಿಯಿತು. ಸರ್ಕಾರದಿಂದ ನಾವು ಏನನ್ನೂ ಕೇಳುವುದಿಲ್ಲ, ನಮ್ಮ ಪಾಡಿಗೆ ಬದುಕಲು ಬಿಡಿ ಅಷ್ಟೇ ಸಾಕು’ ಎಂಬುದು ಅವರ ಮನವಿ.

‘ಕ್ಯಾನ್ಸರ್‌ ರೋಗಿಗಳ ಹೆಚ್ಚಳ’: ‘ಹಿಂದೆಲ್ಲ ನಮ್ಮ ಪರಿಸರದಲ್ಲಿ ಹೇರಳವಾಗಿದ್ದ ಜೇನುನೊಣಗ ಸಂತತಿ ಈಗ ಮಾಯವಾಗಿದೆ. ನಮ್ಮ ಪರಿಸರ ಎಷ್ಟು ಕಲುಷಿತಗೊಂಡಿದೆ ಎಂಬುದಕ್ಕೆ ಇದೇ ಉದಾಹರಣೆ. ಕಾರ್ಖಾನೆಗಳು ಹೊರಸೂಸುವ ಕಪ್ಪುಬಣ್ಣದ ದೂಳಿನ ಕಣಗಳು ವಾತಾವರಣ ಸೇರಿ ಹಲವರ ಆರೋಗ್ಯ ಮೇಲೆ ಪರಿಣಾಮ ಬೀರಿವೆ. ಒಂದು ದಶಕದಲ್ಲಿ ಕೈಗಾರಿಕಾ ವಲಯದ ಸುತ್ತಮುತ್ತಲಿನ ಪರಿಸರದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚಳಗೊಂಡಿದೆ’ ಎನ್ನುತ್ತಾರೆ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಲಾರೆನ್ಸ್‌ ಡಿಕುನ್ಹಾ.

‘ಕೈಗಾರಿಕೀಕರಣದ ಹೆಸರಲ್ಲಿ ಹಳ್ಳಿಗಳನ್ನು ಕೊಳಚೆ ಮಾಡಲಾಗಿದೆ. ಹಿಂದೆ ನಗರದಲ್ಲಿದ್ದ ಸಂಬಂಧಿಕರು ವರ್ಷಕ್ಕೊಮ್ಮೆ ತೋಟಕ್ಕೆ ಬಂದು ಶುದ್ಧ ಪರಿಸರವನ್ನು ಆಸ್ವಾದಿಸುತ್ತಿದ್ದರು. ಈಗ ಅವರು ಬರುವುದು ಬಿಡಿ, ನಾವೇ ಅವರಲ್ಲಿ ಹೋಗಿ ಶುದ್ಧ ಗಾಳಿಯನ್ನು ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಹೋರಾಟ ಸಾಕಾಗಿದೆ. ಕಿವಿಯೇ ಇಲ್ಲದವರ ಮುಂದೆ ಬೊಬ್ಬೆ ಹಾಕಿ ಏನು ಪ್ರಯೋಜನ’ ಎಂದು ಬೇಸರದಿಂದ ಹೇಳುತ್ತಾರೆ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ, ಪೆರ್ಮುದೆಯ ವಿಲಿಯಂ ಡಿಸೋಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT