ಸೋಮವಾರ, ಮಾರ್ಚ್ 1, 2021
27 °C

ವಿಷವಾಗುತ್ತಿದೆ ಕಸ! ಕಸದ ರಾಶಿ ಕರಗಿಸುವ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಕನಸು ಈಡೇರಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಚಳವಳಿ ರೂಪದಲ್ಲಿ ಜಾರಿಗೆ ತಂದ ಸ್ವಚ್ಛ ಭಾರತ ಮಿಷನ್‌ ರಾಜ್ಯದಲ್ಲಿ ಇನ್ನೂ ‘ಟೇಕ್‌ ಆಫ್’‌ ಹಂತದಲ್ಲೇ ಇದೆ.   

ನಗರ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯ ನಿರ್ಮಾಣ, ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಬಗ್ಗೆ ಗ್ರಾಮೀಣರ ಮನೋಸ್ಥಿತಿ ಬದಲಾವಣೆ, ಬಹಿರ್ದೆಸೆ ಮುಕ್ತ ನಗರ ಸೇರಿದಂತೆ ಸ್ವಚ್ಛ ಭಾರತ್‌ ಯೋಜನೆಯು ಅನುಷ್ಠಾನಕ್ಕಿಂತ ಸರ್ಕಾರಿ ಕಡತದಲ್ಲಿ ಉಳಿದಿರುವುದೇ ಹೆಚ್ಚು.

ಸ್ವಚ್ಛ ಭಾರತ್‌ ಮಿಷನ್‌ ಅನುಷ್ಠಾನ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯೊಂದರಲ್ಲಿ ಪೌರಾಡಳಿತ ಸಚಿವರು ಯೋಜನೆಯು ರಾಜ್ಯದಲ್ಲಿ ಶೇ 10ರಷ್ಟೂ ಅನುಷ್ಠಾನಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇ ಈ ಮಾತಿಗೆ ಪುಷ್ಟಿ ನೀಡುತ್ತದೆ. ಆದರೆ, ನಗರ ಮತ್ತು ಗ್ರಾಮಗಳನ್ನು ಕಸ ಮುಕ್ತ, ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಹಾದಿಯಲ್ಲಿ ರಾಜ್ಯದಲ್ಲಿ ಶೇ 90ರಷ್ಟು ಪ್ರಗತಿ ಸಾಧಿಸಲಾಗಿದೆ ಎನ್ನುತ್ತವೆ ಸರ್ಕಾರ ನೀಡಿರುವ ಅಂಕಿಅಂಶಗಳು!  

ಕಸಮುಕ್ತ ಗ್ರಾಮ’ ಮತ್ತು ‘ಸ್ವಚ್ಛ ನಗರ’ ದಂತಹ ಯೋಜನೆಗಳು ಘೋಷಣೆಗೆ ಮಾತ್ರ ಸೀಮಿತವಾಗಿವೆ. ಮಹಾನಗರಗಳ ನೂರಾರು ಟನ್‌ ಕಸವನ್ನು ರಾತ್ರೋರಾತ್ರಿ ಕದ್ದುಮುಚ್ಚಿ ಸಮೀಪದ ಗ್ರಾಮಗಳ ಸುತ್ತಮುತ್ತ ಸುರಿದುಹೋಗುವ ಪರಿಪಾಟಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ.

ಬೆಂಗಳೂರು, ಮಂಗಳೂರು, ಮೈಸೂರು ಮಹಾನಗರ ಪಾಲಿಕೆಯ ಡಂಪಿಂಗ್‌ ಯಾರ್ಡ್‌ಗಳಲ್ಲಿ ಬೆಟ್ಟದ ಎತ್ತರಕ್ಕೆ ಬಿದ್ದಿರುವ ಸಾವಿರಾರು ಟನ್‌ ಕಸದ ರಾಶಿಗಳನ್ನು ಕರಗಿಸುವುದೇ ಸ್ಥಳೀಯ ಆಡಳಿತದ ಮುಂದಿರುವ ಅತಿದೊಡ್ಡ ಸವಾಲಾಗಿದೆ. ಹಲವು ವರ್ಷಗಳ ಈ ಕಸದ ರಾಶಿಗಳನ್ನು ಕರಗಿಸಲು ಅಧಿಕಾರಿಗಳು ಇನ್ನೂ ಪ್ರಸ್ತಾವನೆ, ಅನುದಾನ, ಸರ್ಕಾರದ ಒಪ್ಪಿಗೆಯ ನೆಪ ಹೇಳುತ್ತಿದ್ದಾರೆ.     

ಕಸದ ರಾಶಿಯಿಂದ ಹೊರಹೊಮ್ಮುವ ಅಸಾಧ್ಯ ದುರ್ವಾಸನೆ ಮತ್ತು ಅದರಿಂದ ಹರಡುವ ರೋಗರುಜಿನಗಳೊಂದಿಗೆ ಜನರು ಬದುಕಬೇಕಾಗಿದೆ.

ವೈಜ್ಞಾನಿಕವಾಗಿ ಕಸ ವಿಲೇವಾರಿ ಮತ್ತು ಸಂಸ್ಕರಣೆಯ ಬದಲು ಎಲ್ಲೆಂದರಲ್ಲಿ ಕಸಕ್ಕೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಇದು ಕಸ ಸಂಗ್ರಹ ಮಾಡದೆ ಇರುವುದಕ್ಕಿಂತಲೂ ಹೆಚ್ಚು ಅಪಾಯಕಾರಿ.

ಗ್ರಾಮ ಮತ್ತು ನಗರಗಳ ನೈರ್ಮಲ್ಯ ಸಮಸ್ಯೆಗೆ ಮುಕ್ತಿ ನೀಡಬೇಕಿದ್ದ ತ್ಯಾಜ್ಯ ಘಟಕಗಳು ಅವೈಜ್ಞಾನಿಕ ನಿರ್ವಹಣೆ, ಅಸಮರ್ಪಕ ಕಸ ವಿಂಗಡಣೆಯಿಂದಾಗಿ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆ. ಕಸ ವಿಷವಾಗುತ್ತಿದೆ.

ಸದಾ ಕಸದ ರಾಶಿ ಮಧ್ಯೆ ಕೆಲಸ ಮಾಡುವ ಸ್ವಚ್ಛತಾ ಸಿಬ್ಬಂದಿ ಮತ್ತು ಪೌರ ಕಾರ್ಮಿಕರಿಗೆ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆ ನಿರ್ಲಕ್ಷ್ಯವೇ ಜಾಸ್ತಿ. ಕೆಲವು ಪೌರಾಡಳಿತ ಸಂಸ್ಥೆಗಳು ಆರೋಗ್ಯ ವಿಮೆ ಮಾಡಿಸಿವೆ. ಪೌರಕಾರ್ಮಿಕರು ಮಧ್ಯಾಹ್ನದವರೆಗೆ ಉಪವಾಸವಿರುವುದನ್ನು ತಪ್ಪಿಸಲು ಕೋಲಾರ ನಗರಸಭೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಉಚಿತವಾಗಿ ಬೆಳಗಿನ ಉಪಾಹಾರ ನೀಡುವ ಸೇವೆ ಆರಂಭಿಸಿರುವುದು ಶ್ಲಾಘನೀಯ. 

ಪ್ರೇರಣಾದಾಯಕ ಮಾದರಿಗಳು

ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಕಸ ನಿರ್ವಹಣೆಯಲ್ಲಿ ರಾಜ್ಯ, ರಾಷ್ಟ್ರಕ್ಕೆ ಮಾದರಿಯಾಗಬಹುದಾದ ಅಲ್ಲೊಂದು, ಇಲ್ಲೊಂದು ಅಪರೂಪದ ಉದಾಹರಣೆ ರಾಜ್ಯದಲ್ಲಿ ಕಾಣಸಿಗುತ್ತವೆ. ಈ ವಿಷಯದಲ್ಲಿ ಮಹಾನಗರ ಪಾಲಿಕೆಗಳಿಗಿಂತ ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿರುವ ಒಂದಿಷ್ಟು ಒಳ್ಳೆಯ ಕಾರ್ಯಗಳು ಮಾದರಿಯಾಗಿ ನಿಲ್ಲುತ್ತವೆ.

ಕೊಪ್ಪಳ ತಾಲ್ಲೂಕಿನ ಹುಲಿಗಿ-ಹೊಸಳ್ಳಿ-ಹಿಟ್ನಾಳ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕ, ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ವೈಜ್ಞಾನಿಕ ಕಸ ನಿರ್ವಹಣೆ ರಾಜ್ಯಕ್ಕೆ ಮಾದರಿಯಾಗಿದೆ. ಇಲ್ಲಿ ಕಸ ವಿಲೇವಾರಿ ಮಾತ್ರವಲ್ಲ ತ್ಯಾಜ್ಯ ಘಟಕದಲ್ಲಿ ಸ್ವಚ್ಛ ಪರಿಸರ, ಗೋಶಾಲೆ, ನರ್ಸರಿ ಜತೆಗೆ ಕಸದಿಂದ ಎರೆಹುಳು ಗೊಬ್ಬರ, ಇಟ್ಟಿಗೆ, ಟಾರ್‌ ತಯಾರಿಕೆಯಂತಹ ಹಲವಾರು ಕೆಲಸಗಳು ನಡೆಯುತ್ತಿವೆ.

ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಸಂಘಟನೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ, ಪರಿಸರ ಸ್ನೇಹಿ ‘ಶೂನ್ಯ ಕಸ’ ಕಾರ್ಯಕ್ರಮದ ಮೂಲಕ ಕಸಮುಕ್ತ ಅಭಿಯಾನಕ್ಕೆ ಕೈಜೋಡಿಸಿವೆ. ಸರ್ಕಾರದ ಮೆಗಾ ಪ್ಲಾನ್‌ಗಳಿಗಿಂತ ಸ್ಥಳೀಯವಾಗಿ ಸೀಮಿತ ಪ್ರಮಾಣದಲ್ಲಿ ಸಂಘ, ಸಂಸ್ಥೆಗಳು ನಡೆಸುತ್ತಿರುವ ಕಾರ್ಯಕ್ರಮಗಳು ಜನರನ್ನು ತಲುಪುತ್ತಿವೆ. 

ಕಸ ಕರಗಿಸಲು ಬಯೋ ಮೈನಿಂಗ್

ದಾವಣಗೆರೆ ಪಾಲಿಕೆ, ಸಂಗ್ರಹವಾಗಿರುವ ಕಸದ ರಾಶಿ ಕರಗಿಸಲು ಹೊಸ ದಾರಿ ಕಂಡುಕೊಂಡಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ‘ಬಯೋ ಮೈನಿಂಗ್’ ಮೂಲಕ ಕಸ ಕರಗಿಸಲು ಮುಂದಾಗಿದೆ. ಒಂದು ತಿಂಗಳಲ್ಲಿ ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. 

ದಾವಣಗೆರೆ ನಗರದಲ್ಲಿ ಪ್ರತಿದಿನ 120 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ 30 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ. ಉಳಿದ ಅಂದಾಜು 2 ಲಕ್ಷ ಟನ್ ರಾಶಿ ಇದ್ದು, ಅದನ್ನು ಬಯೋ ಮೈನಿಂಗ್ ಮೂಲಕ ಕರಗಿಸಲಾಗುವುದು ಎನ್ನುತ್ತಾರೆ ಮಹಾನಗರ ಪಾಲಿಕೆಯ ಎಇಇ ಜಗದೀಶ್.    

ಅಡುಗೆ ಎಣ್ಣೆಯಿಂದ ‘ಜೈವಿಕ ಇಂಧನ’

ಬಾಗಲಕೋಟೆ: ನಗರದ ಮನೆ, ಹೋಟೆಲ್ ಹಾಗೂ ಅಂಗಡಿಗಳಿಂದ ಬಳಸಿದ ಅಡುಗೆ ಎಣ್ಣೆ ಸಂಗ್ರಹಿಸಿ ‘ಜೈವಿಕ ಇಂಧನ’ (ಬಯೊ ಡೀಸೆಲ್‌) ತಯಾರಿಸಲಾಗುತ್ತಿದೆ. ಸ್ವಚ್ಛತಾ ಸಿಬ್ಬಂದಿ‌ ಕಸ ಸಂಗ್ರಹದ ಜತೆ ಅಡುಗೆ ಎಣ್ಣೆಯನ್ನೂ ಪ್ರತಿ ಲೀಟರ್‌ಗೆ ₹15 ರಂತೆ ಖರೀದಿಸುತ್ತಾರೆ. ಬಯೋ ಡೀಸೆಲ್ ತಯಾರಿಸಿ ಲೀಟರ್‌ಗೆ ₹65ರಂತೆ ಮಾರುತ್ತಾರೆ.  

ವರ್ಷದ ಹಿಂದೆ ಪೌರಾಡಳಿತ ನಿರ್ದೇಶನಾಲಯ (ಡಿಎಂಎ) ನಗರಸಭೆಗೆ ಪ್ರಶಸ್ತಿ ನೀಡಿದೆ. ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ‘ಬಾಗಲಕೋಟೆ ಮಾದರಿ’ ವಿಸ್ತರಿಸಲು ತಾಂತ್ರಿಕ ಸಲಹಾ ಸಂಸ್ಥೆ ಸೀಮ್ಯಾಕ್, ಸರ್ಕಾರಕ್ಕೆ ಶಿಫಾರಸು ಮಾಡಿದೆ.  

ತ್ಯಾಜ್ಯದಿಂದಲೂ ಆದಾಯ

ಕಾರವಾರ: ಉತ್ತರ ಕನ್ನಡ ನಗರಸಭೆ ಪ್ಲಾಸ್ಟಿಕ್, ರಬ್ಬರ್, ಪಾದರಕ್ಷೆ ಮುಂತಾದ ತ್ಯಾಜ್ಯಗಳ ಮಾರಾಟದ ಮೂಲಕವೂ ಆದಾಯ ಗಳಿಸುತ್ತಿದೆ. ಗೋಕರ್ಣದ ಬೃಹತ್‌ ತ್ಯಾಜ್ಯ ವಿಲೇವಾರಿ ಘಟಕ ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳಿಗೆ ಅಧ್ಯಯನ ಕೇಂದ್ರವಾಗಿ ಹೊರಹೊಮ್ಮಿದೆ. ಕಾರವಾರದ ಶಿರವಾಡದಲ್ಲಿರುವ ತ್ಯಾಜ್ಯ ಘಟಕದಲ್ಲಿ ಹಸಿ ಕಸದಿಂದ ಉತ್ಕೃಷ್ಟ ಗೊಬ್ಬರ ತಯಾರಿಸಲಾಗುತ್ತಿದೆ. 

ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಾಂಸದ ತ್ಯಾಜ್ಯ ವಿಲೇವಾರಿಗೆ ಸಿದ್ಧತೆ ನಡೆದಿದೆ. ಸಾಕುಪ್ರಾಣಿಗಳ ಆಹಾರ ಸಿದ್ಧಪಡಿಸುವ ಮಂಗಳೂರಿನ ಕಾರ್ಖಾನೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆರಂಭದಲ್ಲಿ ಎಂಟು ದೊಡ್ಡ ಗ್ರಾಮಗಳಿಂದ ಕೋಳಿ ಮಾಂಸದ ತ್ಯಾಜ್ಯ ಸಂಗ್ರಹಿಸಿ ರವಾನಿಸಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು